ಏ.13ರಂದು ಕೆ.ಆರ್.ನಗರದಲ್ಲಿ ರಾಹುಲ್ ಪ್ರಚಾರ
ಮೈಸೂರು

ಏ.13ರಂದು ಕೆ.ಆರ್.ನಗರದಲ್ಲಿ ರಾಹುಲ್ ಪ್ರಚಾರ

April 8, 2019

ಮೈಸೂರು: ಮಂಡ್ಯ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಪರ ಮತ ಯಾಚಿಸಲು ಏ.13ರಂದು ಸಂಜೆ 5ಕ್ಕೆ ಕೆ.ಆರ್.ನಗರದ ರೇಡಿಯೋ ಮೈದಾನದಲ್ಲಿ ಬೃಹತ್ ಸಮಾವೇಶ ದಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಸೇರಿದಂತೆ ಎರಡೂ ಪಕ್ಷಗಳ ರಾಷ್ಟ್ರೀಯ ನಾಯಕರು ಪಾಲ್ಗೊಳ್ಳಲಿದ್ದಾರೆಂದು ಸಚಿವ ಸಾ.ರಾ. ಮಹೇಶ್ ತಿಳಿಸಿದ್ದಾರೆ.

ಮೈಸೂರಿನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಕೆ.ಆರ್. ನಗರದ ರೇಡಿಯೋ ಮೈದಾನದಲ್ಲಿ ಏ.13ರಂದು ಸಂಜೆ 5ಕ್ಕೆ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ಜಂಟಿ ಕಾರ್ಯಕರ್ತರ ಸಭೆ ಆಯೋಜಿಸಲಾಗಿದೆ. ಮಂಡ್ಯ ಲೋಕಸಭಾ ಕ್ಷೇತ್ರ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಪರ ಪ್ರಚಾರ ಮಾಡಲು ಎಐ ಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ, ಸಮನ್ವಯ ಸಮಿತಿ ಅಧ್ಯಕ್ಷರು, ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯ, ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಸಚಿವ ಸಂಪುಟದ ಸಚಿವರು, ಎರಡೂ ಪಕ್ಷಗಳ ರಾಷ್ಟ್ರೀಯ ನಾಯಕರು ಪಾಲ್ಗೊಳ್ಳಲಿ ದ್ದಾರೆ ಎಂದರು.

ಮಂಡ್ಯ ಲೋಕಸಭಾ ಕ್ಷೇತ್ರ ಜೆಡಿಎಸ್ ಮತ್ತು ಮೈಸೂರು-ಕೊಡಗು ಲೋಕಸಭಾ ಕ್ಷೇತ್ರ ಕಾಂಗ್ರೆಸ್ ಪಕ್ಷಗಳ ಅಸ್ತಿತ್ವದ ಪ್ರಶ್ನೆಯಾಗಿದೆ. ಭಿನ್ನಾಭಿಪ್ರಾಯ ಬಿಟ್ಟು ಒಟ್ಟಾಗಿ ಕೆಲಸ ಮಾಡುತ್ತೇವೆ. ಹಿಂದಿನ ಸರ್ಕಾರದ ಎಲ್ಲ ಕಾರ್ಯಕ್ರಮಗಳನ್ನು ಮುಖ್ಯಮಂತ್ರಿ ಕುಮಾರಸ್ವಾಮಿ ಮುಂದುವರಿಸಿದ್ದಾರೆ. 42 ಸಾವಿರ ಕೋಟಿ ರೈತರ ಸಾಲಮನ್ನಾ ಮಾಡುವ ದಿಟ್ಟ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಇದು ಸಮ್ಮಿಶ್ರ ಸರ್ಕಾರದ ಸಾಧನೆ. ಮಂಡ್ಯದಲ್ಲಿ ಆರಂಭದ ದಿನದಲ್ಲಿ ಕಂಡು ಬರುತ್ತಿದ್ದ ದೃಶ್ಯ ತಿಳಿಯಾಗಿದೆ. ಎರಡು ಪಕ್ಷಗಳ ಕಾರ್ಯಕರ್ತರು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದಾರೆ. ಎರಡೂ ಪಕ್ಷಗಳ ಕಾರ್ಯಕರ್ತರು ಅಭ್ಯರ್ಥಿ ವಿರುದ್ದವಾಗಿ ಕೆಲಸ ಮಾಡಿದರೆ, ಶಿಸ್ತುಕ್ರಮ ಕೈಗೊಳ್ಳಲು ಎರಡೂ ಪಕ್ಷದ ನಾಯಕರು ನಿರ್ಧರಿಸಿದ್ದಾರೆ ಎಂದರು.

ಉಭಯ ಪಕ್ಷಗಳ ನಡುವೆ ಸಾಮರಸ್ಯ ಮೂಡಲು ಎರಡೂ ಪಕ್ಷಗಳ ಗುರಿ ಕೋಮುವಾದಿ ಶಕ್ತಿಯನ್ನು ಹತ್ತಿಕ್ಕುವುದೇ ಕಾರಣವಾಗಿದೆ. ಅಲ್ಲದೇ ಜೆಡಿಎಸ್ ಪಾಳೆಯದಲ್ಲಿದ್ದ ಹಲವು ನಾಯಕರು ಕಾಂಗ್ರೆಸ್‍ನಲ್ಲಿರುವುದರಿಂದ ಎರಡೂ ಪಕ್ಷಗಳ ನಡುವೆ ಸಾಮರಸ್ಯ ಗಟ್ಟಿಗೊಳ್ಳಲು ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಪರಸ್ಪರ ವಿಶ್ವಾಸ, ನಂಬಿಕೆಯ ಆಧಾರದ ಮೇಲೆ ಮೈತ್ರಿ ಅಭ್ಯರ್ಥಿಗಳನ್ನು ಗೆಲ್ಲಿಸುವ ಹೊಣೆ ಗಾರಿಕೆ ನಮ್ಮದಾಗಿದೆ. ಯಾವುದೇ ಭಿನ್ನಾಭಿಪ್ರಾಯಗಳಿಗೆ ಆಸ್ಪದ ನೀಡದೆ, ಕಿವಿಮಾತಿಗೆ ಮನ್ನಣೆ ಕೊಡದೇ ಕೆಲಸ ಮಾಡಬೇಕು. ಕೆಲವರು ಯಾವುದೇ ಪದಾಧಿಕಾರಿ ಗಳಲ್ಲದಿದ್ದವರು ಪಕ್ಷದ ನಿಲುವಿಗೆ ವ್ಯತಿರಿಕ್ತವಾಗಿ ಕೆಲಸ ಮಾಡುವಂತೆ ಸೂಚಿಸಿದ್ದಾ ರೆಂದು ತಪ್ಪು ಮಾಹಿತಿ ನೀಡಿದರೆ ಮತದಾರರು ಹಾಗೂ ಪಕ್ಷದ ಕಾರ್ಯಕರ್ತರು ನಂಬಬಾರದು. ವ್ಯತಿರಿಕ್ತವಾಗಿ ಕೆಲಸ ಮಾಡುವವರ ಜೆಡಿಎಸ್ ಕಾರ್ಯಕರ್ತರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಪಕ್ಷದ ಹೈಕಮಾಂಡ್ ನಿರ್ಧರಿಸಿದೆ. ಅದೇ ಮಾದರಿಯಲ್ಲಿ ಕಾಂಗ್ರೆಸ್ ಮುಖಂಡರು ತಮ್ಮ ಪಕ್ಷದ ಕಾರ್ಯಕರ್ತರು ಮೈತ್ರಿ ವಿರುದ್ಧವಾಗಿ ಕೆಲಸ ಮಾಡಿದರೆ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.

Translate »