ಸಂಕೇತ್ ರಾಜೀನಾಮೆ ಹಿಂಪಡೆಯಲು ಆಗ್ರಹ
ಕೊಡಗು

ಸಂಕೇತ್ ರಾಜೀನಾಮೆ ಹಿಂಪಡೆಯಲು ಆಗ್ರಹ

July 22, 2018

ಗೋಣಿಕೊಪ್ಪಲು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಕೊಡಗು ಜಿಲ್ಲೆಯ ಸಮಸ್ಯೆ ತಿಳಿಯಲು ಆಗಮಿಸಿದ ಸಂದರ್ಭ ಪಕ್ಷಕ್ಕೆ ಹಾಗೂ ಮುಖ್ಯಮಂತ್ರಿಗಳಿಗೆ ಮುಜುಗರ ತರುವ ರೀತಿಯಲ್ಲಿ ಪಕ್ಷದ ಕೆಲವರು ನಡೆದುಕೊಂಡ ರೀತಿಯನ್ನು ಖಂಡಿಸುವುದಾಗಿ ಜೆಡಿಎಸ್ ಪಕ್ಷದ ಯುವ ಅಧ್ಯಕ್ಷ ಅಮ್ಮಂಡ ವಿವೇಕ್ ತಿಳಿಸಿದ್ದಾರೆ. ಈ ಘಟನೆಯಿಂದ ನೊಂದಿರುವ ಜಿಲ್ಲಾಧ್ಯಕ್ಷರಾದ ಸಂಕೇತ್ ಪೂವಯ್ಯ ರಾಜೀನಾಮೆ ನೀಡಿರುವುದು ಸರಿಯಲ್ಲ. ಇವರ ರಾಜೀನಾಮೆ ಹಿಂಪಡೆಯಬೇಕೆಂದು ಆಗ್ರಹಿಸಿದ್ದಾರೆ.

ಸಂಕೇತ್ ರಾಜೀನಾಮೆ ಸಲ್ಲಿಸುವ ವಿಚಾರ ತಿಳಿದು ವಿರಾಜಪೇಟೆಯ ಪಂಜಾರ್‍ಪೇಟೆಯಲ್ಲಿ ಜೆಡಿಎಸ್ ಯುವ ಅಧ್ಯಕ್ಷ ಅಮ್ಮಂಡ ವಿವೇಕ್ ಅಧ್ಯಕ್ಷತೆಯಲ್ಲಿ ತುರ್ತು ಸಭೆ ನಡೆಸಿದ ಪಕ್ಷದ ಮುಖಂಡರು ಯಾವುದೇ ಕಾರಣಕ್ಕೂ ಸಂಕೇತ್ ರಾಜೀನಾಮೆ ಸ್ವೀಕರಿಸದಂತೆ ಪಕ್ಷದ ವರಿಷ್ಟರಿಗೆ ಒತ್ತಾಯ ಮಾಡಿದ್ದಾರೆ.

ಸಂಕೇತ್ ಪೂವಯ್ಯನವರ ಮೇಲೆ ಆರೋಪಗಳಿದ್ದಲ್ಲಿ ಪಕ್ಷದ ವೇದಿಕೆಯಲ್ಲಿ, ಚರ್ಚಿಸಬಹುದಿತ್ತು. ಆದರೆ ಮುಖ್ಯಮಂತ್ರಿಗಳು ಜಿಲ್ಲೆಗೆ ಆಗಮಿಸಿದ ಸಂದರ್ಭ ವಿವಿಧ ರಾಜಕೀಯ ಪಕ್ಷದ ಮುಖಂಡರ ಸಮ್ಮುಖದಲ್ಲಿ ಕೆಲವರು ದಿಕ್ಕಾರ ಕೂಗಿರುವುದು ಎಷ್ಟು ಸರಿ ಎಂದು ವಿರಾಜಪೇಟೆ ನಗರ ಅಧ್ಯಕ್ಷ ಟಿ.ಎ.ಮಂಜುನಾಥ್ ಪ್ರಶ್ನಿಸಿದ್ದಾರೆ.

ಸಂಕೇತ್ ಪೂವಯ್ಯನವರು ಜಿಲ್ಲೆಯಲ್ಲಿ ಶಕ್ತಿ ಮೀರಿ ಕೆಲಸ ಮಾಡಿದ ಹಿನ್ನಲೆಯಲ್ಲಿ ಇಂದು ಪಕ್ಷಕ್ಕೆ ಸಾರ್ವ ಜನಿಕವಾಗಿ ಉತ್ತಮ ಪ್ರಶಂಸೆ ವ್ಯಕ್ತವಾಗಿದೆ ಎಂದು ಸಾಮಾಜಿಕ ಜಾಲತಾಣದ ತಾಲೂಕು ಅಧ್ಯಕ್ಷ ಕುಯ್ಯ ಮಂಡ ರಾಕೇಶ್ ಬಿದ್ದಪ್ಪ ಅಭಿಪ್ರಾಯಪಟ್ಟರು.ವಿರಾಜಪೇಟೆ ಕ್ಷೇತ್ರದಲ್ಲಿ 5 ಸಾವಿರ ಮತ ಪಡೆಯುತ್ತಿದ್ದ ಜೆಡಿಎಸ್ ಪಕ್ಷ ಇಂದು 12 ಸಾವಿರ ಮತ ಪಡೆಯುವ ಮಟ್ಟಿಗೆ ಬೆಳವಣ ಗೆ ಕಂಡಿದೆ. ಇದು ಪಕ್ಷದ ಮುನ್ನಡೆಯಲ್ಲವೇ? ಎಂದು ಮುಖಂಡರಾದ ಮಂಡೇಪಂಡ ಮುತ್ತಪ್ಪ ಪ್ರಶ್ನಿಸಿದ್ದಾರೆ.
ಬಡ ಜನತೆಯ ಕಷ್ಟದಲ್ಲಿ ತಲುಪುವ ನಾಯಕನಾಗಿ ಬಡವರ ಕಣ್ಣೀರು ಒರೆಸುವ ಕೆಲಸ ಮಾಡಿರುವ ಸಂಕೇತ್ ಪೂವಯ್ಯ ಜಿಲ್ಲೆಯಲ್ಲಿ ಪಕ್ಷವನ್ನು ಬೇರು ಮಟ್ಟದಿಂದ ತನ್ನ ವೈಯುಕ್ತಿಕ ಹಣ ಖರ್ಚು ಮಾಡಿ ಪಕ್ಷವನ್ನು ಕಟ್ಟಿದ್ದಾರೆ. ನೂರಾರು ಉತ್ಸಾಹಿ ಯುವಕರು ಇವರನ್ನು ಮೆಚ್ಚಿ ಪಕ್ಷದ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಯಾವುದೇ ಕಾರಣಕ್ಕೂ ಜಿಲ್ಲಾಧ್ಯಕ್ಷರಾದ ಸಂಕೇತ್ ಪೂವಯ್ಯನವರ ರಾಜೀನಾಮೆ ವರಿಷ್ಠರು ಅಂಗೀಕರಿಸದಂತೆ ಕಾರ್ಮಿಕ ಘಟಕದ ಜಿಲ್ಲಾಧ್ಯಕ್ಷ ಪರ್ಮಾಲೆ ಗಣೇಶ್ ಒತ್ತಾಯಿಸಿದರು. ತನ್ನ ವೈಯುಕ್ತಿಕ ಹಣವನ್ನು ಕಷ್ಟದಲ್ಲಿರುವ, ನೊಂದವರಿಗೆ ನೀಡುವ ಮೂಲಕ ಬಡ ಜನತೆಯ ಕಷ್ಟದಲ್ಲಿ ಭಾಗವಹಿಸುತ್ತಿದ್ದ ಸಂಕೇತ್ ಪೂವಯ್ಯನವರ ಮೇಲೆ ಮಾಡಿದ ಆರೋಪ ಸರಿಯಲ್ಲ ಎಂದು ಪರಿಶಿಷ್ಟ ಜಾತಿ ನಗರ ಅಧ್ಯಕ್ಷ ಆರ್ಮುಗಂ ತಿಳಿಸಿದರು.

ಇದೀಗ ಪಕ್ಷದ ಜಿಲ್ಲಾದ್ಯಕ್ಷ ಸ್ಥಾನಕ್ಕೆ ಪೈಪೋಟಿ ನೀಡುತ್ತಿರುವ ಮುಖಂಡರು ಗಣಪತಿ ಆತ್ಮಹತ್ಯೆ ಅಂತಹ ಪ್ರಕರಣ ನಡೆದಾಗ ಇವರುಗಳು ಎಲ್ಲಿ ಹೋಗಿದ್ದರು.? ಇವರಿಂದ ಪಕ್ಷಕ್ಕೆ ಏನು ಪ್ರಯೋಜನವಾಗಿದೆ ಎಂದು ಆತ್ಮ ವಿಮರ್ಶೆ ಮಾಡಿಕೊಳ್ಳಬೇಕೆಂದು ನಗರ ಯುವ ಅಧ್ಯಕ್ಷ ಚಿಲವಂಡ ಗಣಪತಿ ಪ್ರಶ್ನಿಸಿದರು.

Translate »