ಉದ್ಘಾಟನೆ ಮುನ್ನವೇ ಕುಸಿದ ಹಳೇಕೋಟೆ ಬಳಿಯ ಮೈಸೂರು-ಹಾಸನ ಹೆದ್ದಾರಿ ರೈಲ್ವೆ ಮೇಲ್ಸೇತುವೆ ತಡೆಗೋಡೆ
ಹಾಸನ

ಉದ್ಘಾಟನೆ ಮುನ್ನವೇ ಕುಸಿದ ಹಳೇಕೋಟೆ ಬಳಿಯ ಮೈಸೂರು-ಹಾಸನ ಹೆದ್ದಾರಿ ರೈಲ್ವೆ ಮೇಲ್ಸೇತುವೆ ತಡೆಗೋಡೆ

July 22, 2018

ಹೊಳೆನರಸೀಪುರ: ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು, ಹಾಲಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹಾಗೂ ರಾಜ್ಯ ಸರ್ಕಾರದ ಪ್ರಭಾವಿ ಸಚಿವರೂ ಆದ ಹೆಚ್.ಡಿ.ರೇವಣ್ಣನವರ ತವರು ಜಿಲ್ಲೆಯಲ್ಲಿ ನಡೆಯುತ್ತಿರುವ ಭಾರೀ ಕಾಮಗಾರಿಗಳು ಕಳಪೆಯಿಂದ ಕೂಡಿವೆಯೇ ಎಂಬ ಅನುಮಾನ ಸ್ಥಳೀಯರಲ್ಲಿ ಮೂಡಲಾರಂಭಿಸಿದೆ.

ಹಳೇಕೋಟೆಯ ಹಂಗರಹಳ್ಳಿ ಬಳಿಯ ಮೈಸೂರು-ಹಾಸನ ಹೆದ್ದಾರಿಯಲ್ಲಿ ನಿರ್ಮಾಣವಾಗುತ್ತಿರುವ ರೈಲ್ವೆ ಮೇಲ್ಸೇತುವೆ ಕಾಮಗಾರಿ ಇದಕ್ಕೆ ಸಾಕ್ಷಿಯಾಗಿದ್ದು, ಸುತ್ತಮುತ್ತಲ ಗ್ರಾಮಸ್ಥರೇ ಈ ಬಗ್ಗೆ ಕಿಡಿಕಾರಿದ್ದಾರೆ.

ನಿರ್ಮಾಣ ಹಂತದಲ್ಲಿರುವ ರೈಲ್ವೆ ಮೇಲ್ಸೇತುವೆ ಉದ್ಘಾಟನೆಗೆ ಇನ್ನೇನು ಕೆಲವೇ ದಿನಗಳಲ್ಲಿ ಸಿದ್ಧತೆ ಮಾಡಿಕೊಳ್ಳುತ್ತಿರುವಾಗಲೇ ಮೇಲ್ಸೇತುವೆಯ ತಡೆಗೋಡೆ ಕುಸಿಯುತ್ತಿದ್ದು, ಕಾಮಗಾರಿಯ ಗುಣಮಟ್ಟ ದಿಟ ಸಂಗತಿ ಅನಾವರಣಗೊಳ್ಳುತ್ತಿದೆ.

ಹೊಳೆನರಸೀಪುರ ತಾಲೂಕಿನ ಹಳೆಕೋಟೆ ಸಮೀಪ ಹಂಗರಹಳ್ಳಿಯಲ್ಲಿ ಹಲವು ವರ್ಷದಿಂದ ನಿರ್ಮಾಣಗೊಳ್ಳುತ್ತಿದ್ದ ಈ ರೈಲ್ವೆ ಮೇಲ್ಸೇತುವೆ ಸಂಪೂರ್ಣ ಕುಸಿಯುವ ಮೂನ್ಸೂಚನೆ ನೀಡುತ್ತಿದ್ದು, ಅಧಿಕಾರಿಗಳು ಇದನ್ನು ಮರೆಮಾಚಲು ಹೆಣಗಾಡುತ್ತಿದ್ದು, ಟಾರ್ಪಾಲನ್ನು ಮುಚ್ಚಿರುವುದನ್ನು ಕಂಡು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಾರದ ಹಿಂದೆ ಮೇಲ್ಸೇತುವೆಯ ಒಂದು ಭಾಗ ಕುಸಿದಿತ್ತು. ಇಂದು ಬೆಳಿಗ್ಗೆ ಕೂಡ ಅದರ ಸಮೀಪವಿರುವ ಮತ್ತೊಂದು ಭಾಗದಲ್ಲಿನ ತಡೆಗೋಡೆ ಕುಸಿದಿದ್ದು, ಸೇತುವೆಯೇ ಸಂಪೂರ್ಣ ಕುಸಿಯುವ ಲಕ್ಷಣಗಳು ಗೋಚರಿಸುತ್ತಿರುವುದು ಸ್ಥಳೀಯರು ಹಾಗೂ ಈ ಭಾಗದಲ್ಲಿ ಸಂಚರಿಸುತ್ತಿರುವ ವಾಹನ ಚಾಲಕರಿಗೆ ಅತಂಕ ಉಂಟು ಮಾಡಿದೆ.

ಈ ವಿಚಾರ ಯಾರ ಗಮನಕ್ಕೂ ಬಾರದಂತೆ ಮರೆಮಾಚಲು ಗುತ್ತಿಗೆದಾರರು ಸಂಪೂರ್ಣವಾಗಿ ಟಾರ್ಪಾಲ್‍ನಿಂದ ಮುಚ್ಚಿದ್ದಾರೆ ಎಂದು ಸ್ಥಳೀಯರು ದೂರಿದ್ದಾರೆ.

ಈ ಕಾಮಗಾರಿಯು ಕಳಪೆ ಗುಣಮಟ್ಟದಿಂದ ಕೂಡಿದ್ದು, ಇದರ ಬಗ್ಗೆ ಸಂಪೂರ್ಣ ತನಿಖೆಗೆ ಆದೇಶಿಸಬೇಕು ಮತ್ತು ರೈಲ್ವೆ ಇಲಾಖೆ ಇಂಜಿನಿಯರ್‍ಗಳು ಪರಿಶೀಲನೆ ನಡೆಸಬೇಕು ಎಂದು ಸುತ್ತಮುತ್ತಲ ಗ್ರಾಮಸ್ಥರು ಒತ್ತಾಯಿಸಿದ್ದು, ಹಿರಿಯ ರೈಲ್ವೆ ಅಧಿಕಾರಿಗಳು ಗುತ್ತಿಗೆದಾರರೊಂದಿಗೆ ಶಾಮೀಲಾಗಿದ್ದಾರೆಯೇ ಎಂಬ ಅನುಮಾನ ವ್ಯಕ್ತಪಡಿಸಿದ್ದಾರೆ.

ರೈಲ್ವೇ ಇಲಾಖೆ ಕಾಮಗಾರಿಯೇ ಈ ಮಟ್ಟದಲ್ಲಿ ನಡೆಯುತ್ತಿದ್ದರೆ ಇನ್ನು ನಮ್ಮ ರಾಜ್ಯ ಸರ್ಕಾರದ ಕಾಮಗಾರಿ ಗುಣಮಟ್ಟ ಹೇಗಿರಬಹುದು? ರೈಲ್ವೆ ಇಲಾಖೆಯ ಕಾಮಗಾರಿ ಇಡೀ ದೇಶದಲ್ಲೇ ಹೆಸರು ವಾಸಿಯಾಗಿದೆ. ಆದರೆ ಈ ಕಾಮಗಾರಿ ಗುಣಮಟ್ಟ ಇನ್ನಿತರೆ ಕಾಮಗಾರಿಗಳ ಬಗ್ಗೆ ಅನುಮಾನ ಮೂಡಿಸುತ್ತಿದೆ. – ರಂಗೇಗೌಡ, ರೈಲ್ವೆ ಮೇಲ್ಸೇತುವೆ ಸಮೀಪದ ಜಮೀನಿನ ರೈತ.

 

ಕಾಮಗಾರಿಯ ಗುಣಮಟ್ಟ ಪರೀಕ್ಷಿಸಲು ಮೇಲ್ಸೇತುವೆ ತಡೆಗೋಡೆಯನ್ನು ನಾವು ಮತ್ತು ಗುತ್ತಿಗೆದಾರರು ಸೇರಿ ತೆಗೆಸಿದ್ದೆವು. ಆದರೆ ಯಾರೋ ಕಿಡಿಗೇಡಿಗಳು ಇದನ್ನು ತಪ್ಪಾಗಿ ಸಾರ್ವಜನಿಕರಲ್ಲಿ ಅರ್ಥೈಸುತ್ತಿದ್ದಾರೆ. -ಮೋಹನ್, ರೈಲ್ವೇ ಇಲಾಖೆ ಇಂಜಿನಿಯರ್.

Translate »