ಮೈಸೂರಲ್ಲಿ ಪುಷ್ಪಗುಚ್ಛ ನೀಡಿ ಮಕ್ಕಳನ್ನು ಶಾಲೆಗೆ  ಬರಮಾಡಿಕೊಂಡ ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್
ಮೈಸೂರು

ಮೈಸೂರಲ್ಲಿ ಪುಷ್ಪಗುಚ್ಛ ನೀಡಿ ಮಕ್ಕಳನ್ನು ಶಾಲೆಗೆ ಬರಮಾಡಿಕೊಂಡ ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್

May 30, 2018

ಮೈಸೂರು:  ಬೇಸಿಗೆ ರಜೆ ಮುಗಿಸಿ ಮಕ್ಕಳು ಇಂದು ಶಾಲೆಗಳಿಗೆ ಮರಳಿದ್ದಾರೆ. ತುಂಬು ಉತ್ಸಾಹ ದಿಂದ ಬ್ಯಾಗ್ ನೇತು ಹಾಕಿಕೊಂಡು ಶಾಲೆಗಳಿಗೆ ಮರಳಿದ ವಿದ್ಯಾರ್ಥಿಗಳಿಗೆ ಮೈಸೂರು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಸೋಮವಾರ ಮೈಸೂರಿನ ಕನಕಗಿರಿಯ ಶಾರದಾ ವಿಲಾಸ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಮಕ್ಕಳಿಗೆ ಪುಷ್ಪಗುಚ್ಛ ನೀಡಿ ಪ್ರೀತಿಯಿಂದ ಬರಮಾಡಿಕೊಂಡರು. ಈ ವೇಳೆ ಪಠ್ಯ ಪುಸ್ತಕಗಳನ್ನು ವಿತರಿಸಿದರು.

ಮೈಸೂರು ಜಿಲ್ಲಾಡಳಿತ, ಜಿಲ್ಲಾ ಪಂಚಾ ಯತ್, ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಅಯೋಜಿಸಿದ್ದ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ, ಪ್ರಥಮ ಬಾರಿಗೆ ಶಾಲೆಯ ಮೆಟ್ಟಿಲು ತುಳಿಯುತ್ತಿರುವ ಒಂದನೇ ತರಗತಿ ಮಕ್ಕಳು ಹಾಗೂ 8ನೇ ತರಗತಿಗೆ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ಪುಷ್ಪ ಗುಚ್ಛ ನೀಡಿ ಶಾಲೆಗೆ ಸ್ವಾಗತಿಸಿದರು.
ಬಳಿಕ ಮಾತನಾಡಿದ ಅವರು, ಮಕ್ಕಳು ಶಾಲೆಗೆ ಬರುವುದು ಕೇವಲ ಅಂಕ ಗಳಿ ಸುವುದಷ್ಟೇ ಮುಖ್ಯವಲ್ಲ. ಮಕ್ಕಳು ಅಂಕ ಗಳಿಸುವ ಯಂತ್ರಗಳಲ್ಲ. ಅವರಿಗೆ ಶಾಲೆ ಯಲ್ಲಿ ಹೆಚ್ಚು ನಿರ್ಬಂಧ ವಿಧಿಸದೇ ಸಮಾಜಕ್ಕೆ ಮಾದರಿಯಾಗುವ ಉತ್ತಮ ವ್ಯಕ್ತಿಗಳನ್ನಾಗಿ ರೂಪಿಸಬೇಕು. ಆ ಹೊಣೆ ಯನ್ನು ಶಿಕ್ಷಕರು ಜವಾಬ್ದಾರಿಯಿಂದ ನಿರ್ವ ಹಿಸಬೇಕು ಎಂದರು. ಯಾವುದೇ ಶಾಲೆ ಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿ ಗಳು ಮುಂದೆ ಏನಾಗುತ್ತಾರೆ ಎಂದು ಯಾರು ಅಳೆಯಲು ಸಾಧ್ಯವಿಲ್ಲ. ಅವರನ್ನು ಮುಕ್ತವಾಗಿ ಬಿಡಿ. ಅವರನ್ನು ಶಿಸ್ತು ಮತ್ತು ಪಠ್ಯಕ್ರಮದ ಬಂಧನದಲ್ಲಿ ಇರಿಸಬೇಡಿ. ಶಿಸ್ತು, ಕಟ್ಟುನಿಟ್ಟಾದ ಕ್ರಮಗಳಿಂದ ಅವ ರನ್ನು ಕಟ್ಟಿ ಹಾಕಬೇಡಿ. ಹಾಗೆ ಮಾಡು ವುದರಿಂದ ವಿದ್ಯಾರ್ಥಿಗಳ ಬೌದ್ಧಿಕ ವಿಕಾಸಕ್ಕೆ, ಸೃಜನಶೀಲತೆಗೆ ಪೆಟ್ಟು ಬೀಳುತ್ತದೆ. ಅವರನ್ನು ಸ್ವತಂತ್ರವಾಗಿ ಬೆಳೆಯಲು ಬಿಡಬೇಕು. ವಿದ್ಯಾರ್ಥಿಗಳು ಸ್ವತಂತ್ರ ಹಕ್ಕಿಗಳಾಗಿ ಹಾರಾಡಬೇಕು ಎಂದು ಶಿಕ್ಷಕ ವರ್ಗಕ್ಕೆ ಸಲಹೆ ನೀಡಿದರು.

ಜಿಲ್ಲಾ ಪಂಚಾಯತ್ ಉಪ ಕಾರ್ಯ ದರ್ಶಿ ಶಿವಕುಮಾರಸ್ವಾಮಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕಿ ಎಸ್.ಮಮತಾ, ಬಿಇಓಗಳಾದ ಉದಯ ಕುಮಾರ್, ಶಿವಕುಮಾರ್, ಶಾಲಾ ಶಿಕ್ಷಣಾಧಿ ಕಾರಿ ರಾಜಶೇಖರ್, ಜಿಪಂ ಅಕ್ಷರ ದಾಸೋಹ ಅಧಿಕಾರಿ ಕೃಷ್ಣ, ಜಿಲ್ಲಾ ಯೋಜನಾ ಉಪ ಅಧಿಕಾರಿ ನಾಗರಾಜು, ಜಿಲ್ಲಾ ಶಿಕ್ಷಕರ ಸಂಘದ ಕಾರ್ಯದರ್ಶಿ ಕೆ.ಬಿ.ಸೋಮೇ ಗೌಡ, ಪ್ರಾಥಮಿಕ ಶಾಲೆಯ ಮುಖ್ಯಸ್ಥ ಮಲ್ಲಿಕಾರ್ಜುನ, ರವಿಕುಮಾರ್ ಇನ್ನಿತರರು ಉಪಸ್ಥಿತರಿದ್ದರು.

ಡಿಸಿಗಾಗಿ ಕಾಯುವಂತಾದ ಮಕ್ಕಳು: ಬೇಸಿಗೆ ರಜೆ ಕಳೆದು ತುಂಬು ಉತ್ಸಾಹ ದಿಂದ ಶಾಲೆಗೆ ಬಂದಿದ್ದ ಮಕ್ಕಳಿಗೆ ಜಿಲ್ಲಾಧಿ ಕಾರಿ ವಿಳಂಬವಾಗಿ ಆಗಮಿಸಿದ್ದರಿಂದ ಮೊದಲ ದಿನವೇ ಮಕ್ಕಳ ಉತ್ಸಾಹ ಕುಗ್ಗುವಂತಾಯಿತು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಕನಕಗಿರಿಯ ಶಾರದಾ ವಿಲಾಸ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ `ಶಾಲಾ ಆರಂಭೋತ್ಸವ’ಕ್ಕೆ ಜಿಲ್ಲಾಧಿಕಾರಿಗಳು ಉದ್ಘಾಟನೆಗೆ ಬೆಳಿಗ್ಗೆ 10.30ಕ್ಕೆ ನಿಗದಿ ಯಾಗಿತ್ತು. ಆದರೆ ಜಿಲ್ಲಾಧಿಕಾರಿ ಆಗಮನ ವಿಳಂಬವಾಯಿತು. ಜಿಲ್ಲಾಧಿಕಾರಿಗಳು ತಮ್ಮನ್ನು ಶಾಲೆಗೆ ಬರಮಾಡಿಕೊಳ್ಳಲಿದ್ದಾರೆ ಎಂಬ ಉತ್ಸಾಹದಿಂದ ಕಾದಿದ್ದ ವಿದ್ಯಾರ್ಥಿ ಗಳನ್ನು ಕಾಯಿಸಲಾಯಿತು. ಕೊನೆಗೂ ಜಿಲ್ಲಾಧಿಕಾರಿ ಮಧ್ಯಾಹ್ನ 12 ಗಂಟೆ ವೇಳೆಗೆ ಆಗಮಿಸಿದರು. ಶಾಲಾ ಆರಂಭೋತ್ಸವಕ್ಕೆ ಉದ್ಘಾಟನೆ ನೆರವೇರಿಸಿದರು.

ಮಕ್ಕಳಿಗೆ ಆರತಿ ಎತ್ತಿ ಶಾಲೆಗೆ ಬರ ಮಾಡಿಕೊಂಡರು…

ಮೈಸೂರಿನ ತ್ಯಾಗರಾಜ ರಸ್ತೆ ಅಕ್ಕನ ಬಳಗ ಸರ್ಕಾರಿ ಶಾಲೆಯಲ್ಲಿ ಶಾಲಾ ಆರಂಭದ ಮೊದಲ ದಿನವಾದ ಸೋಮವಾರ ಶಾಲಾವರಣದಲ್ಲಿ ಮಕ್ಕಳಿಗೆ ಆರತಿ ಎತ್ತಿ, ಗುಲಾಬಿ ಹೂವು, ಸಿಹಿ ಮತ್ತು ನೋಟ್‍ಬುಕ್, ಲೇಖನ ಸಾಮಗ್ರಿ ಗಳನ್ನು ನೀಡಿ ಪ್ರೀತಿಯಿಂದ ಬರಮಾಡಿಕೊಳ್ಳಲಾಯಿತು.

ಕೆಎಂಪಿಕೆ ಟ್ರಸ್ಟ್‍ನ ಪದಾಧಿಕಾರಿಗಳು ಪ್ರತಿ ವರ್ಷವೂ ಈ ಕಾರ್ಯಕ್ರಮ ಆಯೋಜಿಸಿಕೊಂಡು ಬಂದಿದ್ದಾರೆ. ಈ ಬಾರಿಯೂ ಆತ್ಮೀಯವಾಗಿ ಶಾಲೆಗೆ ಬರಮಾಡಿಕೊಳ್ಳುವ ಮೂಲಕ ಮಕ್ಕಳಲ್ಲಿ ಕಲಿಯುವ ಉತ್ಸಾಹ ತುಂಬಿದರು.

ಈ ಸಂದರ್ಭದಲ್ಲಿ ಹಾಜರಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಶಿವಕುಮಾರ್, ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದರು. ರಾಜ್ಯ ಸರ್ಕಾರ ಮಕ್ಕಳಿಗೆ ಉತ್ತಮ ಶಿಕ್ಷಣ, ಹೆಚ್ಚಿನ ಸವಲತ್ತುಗಳನ್ನು ನೀಡಿ ಮಕ್ಕಳಲ್ಲಿ ಕಲಿಕೆಯ ಉತ್ಸಾಹ ತುಂಬುತ್ತಿದೆ. ಇದಕ್ಕೆ ಸಂಘ ಸಂಸ್ಥೆಗಳು ತಮ್ಮ ಸುತ್ತಮುತ್ತಲಿನ ವ್ಯಾಪ್ತಿಯ ಶಾಲೆಗಳಿಗೆ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಸೇರಿಸಲು ಪ್ರೇರೇಪಿಸುವಂತಹ ಕೆಲಸ ಮಾಡಬೇಕು ಎಂದರು. ಟ್ರಸ್ಟ್ ಅಧ್ಯಕ್ಷ ವಿಕ್ರಂ ಅಯ್ಯಂಗಾರ್ ಮಾತನಾಡಿ, ನಮ್ಮ ಸಂಸ್ಥೆಯು ಪ್ರತಿವರ್ಷ ಸರ್ಕಾರಿ ಶಾಲೆಯಲ್ಲಿ ಓದುವ ಮ್ಕಕಳಿಗೆ ಉಚಿತ ಪುಸ್ತಕ, ಲೇಖನ ಸಾಮಗ್ರಿಗಳನ್ನು ನೀಡಿ ಪ್ರೋತ್ಸಾಹಿಸುತ್ತಿದ್ದು, ಸರ್ಕಾರಿ ನೌಕರರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೇ ಸೇರಿಸಿ ಓದಿಸುವಂತೆ ಕಡ್ಡಾಯಗೊಳಿಸಬೇಕು ಎಂದು ಸರ್ಕಾರಕ್ಕೆ ಸಲಹೆ ನೀಡಿದರು. ಸಾಹಿತಿ ಬನ್ನೂರು ಕೆ.ರಾಜು, ಶಾಲೆಯ ಮುಖ್ಯ ಶಿಕ್ಷಕಿ ಸುಗುಣಾವತಿ, ಪ್ರೌಢಶಾಲೆ ಮುಖ್ಯ ಶಿಕ್ಷಕ ಶಿವಯ್ಯ, ಮುಖಂಡರಾದ ಬಸವರಾಜು, ಶ್ರೀಕಾಂತ್ ಕಶ್ಯಪ್, ಸಿಆರ್‍ಸಿ ನಾಗೇಶ್, ಬಿಜೆಪಿಯ ಲಕ್ಷ್ಮೀದೇವಿ ಇನ್ನಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Translate »