ಅವಹೇಳನಕಾರಿ ಹೇಳಿಕೆ: ಸಂಸದ ಹೆಗಡೆ ವಿರುದ್ಧ ಮೈಸೂರು ಡಿಸಿ, ಎಸ್‍ಪಿಗಿಂದು ಕಾಂಗ್ರೆಸ್ ದೂರು
ಮೈಸೂರು

ಅವಹೇಳನಕಾರಿ ಹೇಳಿಕೆ: ಸಂಸದ ಹೆಗಡೆ ವಿರುದ್ಧ ಮೈಸೂರು ಡಿಸಿ, ಎಸ್‍ಪಿಗಿಂದು ಕಾಂಗ್ರೆಸ್ ದೂರು

February 8, 2020

ಮೈಸೂರು: ಪದೇ ಪದೆ ಅವ ಹೇಳನಕಾರಿ ಹೇಳಿಕೆ ನೀಡುವ ಮೂಲಕ ಸಮಾಜದ ಸ್ವಾಸ್ಥ್ಯ ಕೆಡಿಸುತ್ತಿರುವ ಸಂಸದ ಅನಂತ್ ಕುಮಾರ್ ಹೆಗಡೆ ವಿರುದ್ಧ ಕ್ರಮ ಕೈಗೊಳ್ಳುವಂತೆ ಫೆ.8ರ ಬೆಳಿಗ್ಗೆ ಮೈಸೂರು ಜಿಲ್ಲಾಧಿಕಾರಿ ಹಾಗೂ ನಗರ ಪೊಲೀಸ್ ಆಯುಕ್ತರಿಗೆ ಕಾಂಗ್ರೆಸ್ ನಿಯೋಗ ದೂರು ನೀಡಲಿದೆ ಎಂದು ಮೈಸೂರು ಗ್ರಾಮಾಂತರ ಕಾಂಗ್ರೆಸ್ ಅಧ್ಯಕ್ಷ ಬಿ.ಜೆ.ವಿಜಯಕುಮಾರ್ ತಿಳಿಸಿದ್ದಾರೆ.

ಮೈಸೂರಿನ ಕಾಂಗ್ರೆಸ್ ಭವನದಲ್ಲಿ ಶುಕ್ರವಾರ ಸುದ್ದಿ ಗೋಷ್ಠಿ ನಡೆಸಿದ ಅವರು, ಸಂಸದರಾಗಿ ಜವಾಬ್ದಾರಿ ಯುತ ಸ್ಥಾನದಲ್ಲಿರುವ ಅನಂತ್‍ಕುಮಾರ್ ಹೆಗಡೆ, ಬೇಕೆಂದೇ ಸಮಾಜದಲ್ಲಿ ಗದ್ದಲ ಎಬ್ಬಿಸುವ ಹೇಳಿಕೆ ನೀಡುತ್ತಿದ್ದಾರೆ. ಈ ಹಿಂದೆ ಸಂವಿಧಾನ ಬದಲಿಸುವುದೇ ನಮ್ಮ ಗುರಿ ಎಂದಿದ್ದರು. ನಂತರ ಸಿದ್ದರಾಮಯ್ಯ ವಿರುದ್ಧ ಹೇಳಿಕೆ ನೀಡಿದ್ದರು. ಆಗ ಆ ಬಗ್ಗೆ ಮೈಸೂರಿನ ದೇವರಾಜ ಠಾಣೆಯಲ್ಲಿ ದೂರು ದಾಖಲಿಸಲು ಕಾಂಗ್ರೆಸ್ ನಿಯೋಗ ತೆರಳಿತ್ತು. ಕೇಂದ್ರ ಸಚಿವರಾದ್ದರಿಂದ ಪ್ರಭಾವ ಬಳಸಿ ದೂರು ದಾಖಲಾಗದಂತೆ ನೋಡಿಕೊಳ್ಳುವಲ್ಲಿ ಯಶಸ್ವಿ ಯಾಗಿದ್ದರು. ಆದರೆ ಕಾಂಗ್ರೆಸ್ ನ್ಯಾಯಾಲಯಕ್ಕೆ ಖಾಸಗಿ ದೂರು ಸಲ್ಲಿಸಿತ್ತು. ಬಳಿಕ, ದೂರು ದಾಖಲಿಸಿಕೊಂಡು ತನಿಖೆ ನಡೆಸುವಂತೆ ಪೊಲೀಸರಿಗೆ ನ್ಯಾಯಾಲಯ ಆದೇಶಿಸಿತ್ತು.

ಅನಂತಕುಮಾರ ಹೆಗಡೆ ಅವರು ಹೇಳಿಕೆ ನೀಡಿದ್ದ ಪ್ರದೇಶ ಬೆಳಗಾವಿ ಜಿಲ್ಲೆಯ ಕಿತ್ತೂರು ಠಾಣೆ ವ್ಯಾಪ್ತಿಗೆ ಒಳಪಡುತ್ತದೆ ಎಂದು ತಿಳಿದ ದೇವರಾಜ ಪೊಲೀಸರು ದೂರು ಪಡೆದು, ಪ್ರಕರಣವನ್ನು ಅಲ್ಲಿಗೆ ವರ್ಗಾಯಿಸಿ ದ್ದರು. ಅನಂತ್‍ಕುಮಾರ್ ಹೆಗಡೆ ವಿರುದ್ದ ಐಪಿಸಿ 153ಎ, 504 ಅನ್ವಯ ದೂರು ದಾಖಲಾಗಿತ್ತು. ಆದರೆ ಈವರೆಗೂ ಪೊಲೀಸರು ವಿಚಾರಣೆ ನಡೆಸಿಲ್ಲ. ಇದರಿಂದಾಗಿ ಅನಂತ್ ಕುಮಾರ್ ಹೆಗಡೆ ಇನ್ನಷ್ಟು ಪ್ರಚೋದನಾತ್ಮಕ ಹೇಳಿಕೆ ಗಳನ್ನು ನೀಡುವುದನ್ನು ಮುಂದುವರಿಸಿದ್ದಾರೆ. ಮಹಾತ್ಮ ಗಾಂಧಿ ವಿರುದ್ಧವೂ ಹೇಳಿಕೆ ನೀಡಿದ್ದಾರೆ. ಸಂಸದರ ವಿರುದ್ಧ ವಿವಿಧ ಠಾಣೆಗಳಲ್ಲಿ 4 ಪ್ರಕರಣ ದಾಖಲಾಗಿವೆ. ಗೂಂಡಾ ಪ್ರತಿಬಂಧಕ ಕಾಯ್ದೆಯಡಿ ಅನಂತ್ ಕುಮಾರ್ ಹೆಗಡೆ ಅವರನ್ನು ಗೂಂಡಾ ಪಟ್ಟಿಗೆ ಸೇರಿಸುವಂತೆ ಒತ್ತಾ ಯಿಸಿ, ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಹಾಗೂ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ಅವರಿಗೆ ದೂರು ನೀಡುವುದಾಗಿ ವಿವರಿಸಿದರು. ರಾಜ್ಯ ಮಹಿಳಾ ಆಯೋ ಗದ ಮಾಜಿ ಅಧ್ಯಕ್ಷೆ ಮಂಜುಳಾ ಮಾನಸ ಮಾತನಾಡಿ, ಹಿಂದೆ ಮುಂದೆ ನೋಡದೆ ಹೇಳಿಕೆ ನೀಡುವ ಸಂಸದ ರನ್ನು ನಿಮ್ಹಾನ್ಸ್‍ಗೆ ಸೇರಿಸಬೇಕು. ಚಿಕಿತ್ಸಾ ವೆಚ್ಚ ಕಾಂಗ್ರೆಸ್ ಭರಿಸುತ್ತದೆ ಎಂದು ವಾಗ್ದಾಳಿ ನಡೆಸಿದರು.

ಸುದ್ದಿಗೋಷ್ಠಿಯಲ್ಲಿ ನಗರ ಕಾಂಗ್ರೆಸ್ ಅಧ್ಯಕ್ಷ ಆರ್. ಮೂರ್ತಿ, ವಕ್ತಾರ ಎಂ.ಲಕ್ಷ್ಮಣ್, ಭಾಸ್ಕರ್ ಇದ್ದರು.

Translate »