ದೇವರಾಜ ಮಾರುಕಟ್ಟೆ, ಲ್ಯಾನ್ಸ್‍ಡೌನ್ ಕಟ್ಟಡಗಳ ಅಳಿವು-ಉಳಿವು ಸದ್ಯವೇ ನಿರ್ಧಾರ 2020ರ ಜ.3ರೊಳಗೆ ಸ್ಪಷ್ಟ ಮಾಹಿತಿ ನೀಡಿ: ವಿ.ಸೋಮಣ್ಣ
ಮೈಸೂರು

ದೇವರಾಜ ಮಾರುಕಟ್ಟೆ, ಲ್ಯಾನ್ಸ್‍ಡೌನ್ ಕಟ್ಟಡಗಳ ಅಳಿವು-ಉಳಿವು ಸದ್ಯವೇ ನಿರ್ಧಾರ 2020ರ ಜ.3ರೊಳಗೆ ಸ್ಪಷ್ಟ ಮಾಹಿತಿ ನೀಡಿ: ವಿ.ಸೋಮಣ್ಣ

December 25, 2019

ಮೈಸೂರು,ಡಿ.24(ಆರ್‍ಕೆ)-ಶಿಥಿಲಾವಸ್ಥೆಯಲ್ಲಿರುವ ಪಾರಂಪರಿಕ ಕಟ್ಟಡಗಳಾದ ಮೈಸೂರಿನ ಲ್ಯಾನ್ಸ್‍ಡೌನ್ ಬಿಲ್ಡಿಂಗ್ ಮತ್ತು ದೇವರಾಜ ಮಾರುಕಟ್ಟೆ ಕಟ್ಟಡಗಳನ್ನು ಕೆಡವಿ ಅದೇ ಮಾದರಿಯಲ್ಲೇ ಹೊಸದಾಗಿ ನಿರ್ಮಿಸಬೇಕೋ ಅಥವಾ ರಿಪೇರಿ ಮಾಡಿ ಯಥಾಸ್ಥಿತಿ ಸಂರಕ್ಷಿಸಿಕೊಳ್ಳಬೇಕೋ ಎಂಬುದರ ಬಗ್ಗೆ 2020ರ ಜನವರಿ 3 ರೊಳಗೆ ಸ್ಪಷ್ಟಪಡಿಸಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ಅವರು ಇಂದಿಲ್ಲಿ ಅಧಿಕಾರಿಗಳಿಗೆ ತಿಳಿಸಿದ್ದಾರೆ.

ಈ ಎರಡೂ ಕಟ್ಟಡಗಳನ್ನು ಹಾಗೆಯೇ ಬಿಟ್ಟಿರುವುದರಿಂದ ನಗರದ ಹೃದಯ ಭಾಗದಲ್ಲಿ ಅವಲಕ್ಷಣವಾಗಿ ಕಾಣುತ್ತದೆ. ಅವುಗಳ ಬಗ್ಗೆ ಶೀಘ್ರ ನಿರ್ಧಾರ ಕೈಗೊಂಡು ಕ್ರಮ ವಹಿಸಬೇಕಾಗಿದೆ ಎಂದು ಸಚಿವರು ಹೇಳಿದಾಗ ಆ ಕಟ್ಟಡಗಳ ಸ್ಥಿತಿಗತಿಗಳ ಬಗ್ಗೆ ಜಿಲ್ಲಾಧಿಕಾರಿ ಅಭಿರಾಮ್ ಜಿ. ಶಂಕರ್ ಅವರು ವಿವರಿಸಿದರು.

ಇವು ಸುಮಾರು 100 ವರ್ಷಗಳ ಹಳೇ ಪಾರಂಪರಿಕ ಕಟ್ಟಡಗಳಾಗಿರುವುದರಿಂದ ಟಾಸ್ಕ್‍ಫೋರ್ಸ್ ಸಮಿತಿಯು ಅವುಗಳನ್ನು ಕೆಡವಿ ಹೊಸದಾಗಿ ನಿರ್ಮಿಸಬೇಕೆಂದು ಅಭಿಪ್ರಾಯಿಸಿದರೆ, ರಿಪೇರಿ ಮಾಡಿ ಯಥಾಸ್ಥಿತಿ ಸಂರಕ್ಷಿಸಬಹುದೆಂದು ಪಾರಂಪರಿಕ ಸಮಿತಿ ಸದಸ್ಯರು ವರದಿ ನೀಡಿದ್ದಾರೆ ಎಂದು ಅವರು ತಿಳಿಸಿದರು.

ತದನಂತರ ಪಾಲಿಕೆ ಕೌನ್ಸಿಲ್ ಸಭೆಯಲ್ಲಿ ಕಟ್ಟಡಗಳನ್ನು ಕೆಡವಬೇಕೆಂದು ನಿರ್ಣಯ ಕೈಗೊಂಡು ಸರ್ಕಾರಕ್ಕೆ ಕಳುಹಿಸಲಾಗಿತ್ತು. ಈ ನಡುವೆ ಬಾಟಾ ಷೋ ರೂಂನವರು ನ್ಯಾಯಾಲಯದ ಮೊರೆ ಹೋಗಿದ್ದರಿಂದ ತಜ್ಞರ ಅಭಿಪ್ರಾಯ ಪಡೆದು ನಿರ್ಧಾರ ಮಾಡಿ ಎಂದು ರಾಜ್ಯ ಉಚ್ಛ ನ್ಯಾಯಾಲಯವು ಆದೇಶ ನೀಡಿದೆ ಎಂದು ಜಿಲ್ಲಾಧಿ ಕಾರಿಗಳು ತಿಳಿಸಿದರು.

ಅದರಂತೆ ಮುಡಾ ನಗರ ಯೋಜಕ ಸದಸ್ಯ ಬಿ.ಎನ್. ಗಿರೀಶ್ ನೇತೃತ್ವದಲ್ಲಿ ಪ್ರತ್ಯೇಕ ತಜ್ಞರ ಸಮಿತಿ ರಚಿಸಲಾಗಿದ್ದು, ಕೆಆರ್‍ಎಸ್‍ನ ಕರ್ನಾಟಕ ಇಂಜಿನಿ ಯರಿಂಗ್ ಸಂಶೋಧನಾ ಕೇಂದ್ರದಿಂದ ಪರಿಶೀಲಿಸಿ ವರದಿ ಪಡೆಯಲಾಗಿದೆ. ಕಟ್ಟಡಗಳ ಗೋಡೆ ಭದ್ರವಿದೆಯಾದರೂ ತಾರಸಿ ಸಂಪೂರ್ಣ ಶಿಥಿಲವಾಗಿದೆ ಹಾಗೂ ಗೋಡೆ ಒಳಗೆ ಅಳವಡಿಸಿರುವ ಮರಗಳು ನೀರು ಇಳಿದಿರುವೆಡೆ ಕೊಳೆತು ಬೆಂಡಾಗಿ ಹೋಗಿರುವುದರಿಂದ ಗೋಡೆಗಳು ಭಾರ ತಡೆಯುವ ಸಾಮಥ್ರ್ಯ ಕಳೆದುಕೊಂಡಿವೆ. ಹಾಗಾಗಿ ವಾಣಿಜ್ಯ ವಹಿವಾಟಿಗೆ ಯೋಗ್ಯವಲ್ಲ. ಕಟ್ಟಡಗಳನ್ನು ಕೆಡವಲೇಬೇಕೆಂದು ತಜ್ಞರು ಅಭಿಪ್ರಾಯಪಟ್ಟಿರುವುದರಿಂದ ಸಮಿತಿಯ ಎಲ್ಲಾ ಬಹುತೇಕ ಸದಸ್ಯರು ಒಪ್ಪಿದ್ದಾರೆ. ಆ ವರದಿಯನ್ವಯ ತಮ್ಮ ಕಚೇರಿಯಿಂದ ಪಾಲಿಕೆಗೆ ವರದಿಯನ್ನು ರವಾನಿಸಲಾಗಿದೆ ಎಂದೂ ಅಭಿರಾಮ್ ಜಿ.ಶಂಕರ್ ಸಚಿವರಿಗೆ ತಿಳಿಸಿದರು.

ಈ ಮಧ್ಯೆ ಮೈಸೂರು ಗ್ರಾಹಕರ ಪರಿಷತ್ (ಎಂಜಿಪಿ)ನ ಡಾ. ಭಾಮಿ ವಿ.ಶೆಣೈ, ಕಟ್ಟಡಗಳು ಗಟ್ಟಿಮುಟ್ಟಾಗಿವೆ. ದುರಸ್ತಿ ಮಾಡಿ ಹಾಗೆಯೇ ಉಳಿಸಿಕೊಳ್ಳ ಬೇಕೆಂದು ಪ್ರತಿಪಾದಿಸಿದರು. ನಂತರ ಪ್ರತಿಕ್ರಿಯಿಸಿದ ಸಚಿವ ಸೋಮಣ್ಣ, ಪಾರಂಪರಿಕ ಕಟ್ಟಡಗಳನ್ನು ಸಂರಕ್ಷಿಸಿಕೊಳ್ಳಬೇಕು. ಆದರೆ, ಜೀವ ರಕ್ಷಣೆಯೂ ಅಷ್ಟೇ ಮುಖ್ಯವಾಗಿದೆ. ಮತ್ತೊಮ್ಮೆ ಪರಿಶೀಲಿಸಿ 2020ರ ಜನವರಿ 3ರೊಳಗಾಗಿ ಸ್ಪಷ್ಟ ಅಭಿಪ್ರಾಯ ತಿಳಿಸಿ. ನಂತರ ಆ ಬಗ್ಗೆ ಒಂದು ನಿರ್ಧಾರಕ್ಕೆ ಬರೋಣ ಎಂದರು.

ಪಾಲಿಕೆ ಕಂದಾಯ ಉಪ ಆಯುಕ್ತರ ವಿರುದ್ಧ ಸಚಿವ ಸೋಮಣ್ಣ ಗರಂ
ಮೈಸೂರು,ಡಿ.24(ಆರ್‍ಕೆ)-ಸಭೆಗೆ ಗೈರು ಹಾಜರಾಗಿದ್ದ ಮೈಸೂರು ಮಹಾ ನಗರ ಪಾಲಿಕೆ ಕಂದಾಯ ಉಪ ಆಯುಕ್ತ ಕುಮಾರ್ ನಾಯಕ್ ಅವರನ್ನು ತರಾಟೆಗೆ ತೆಗೆದುಕೊಂಡ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ, ಒಂದು ಹಂತ ದಲ್ಲಿ ಅಧಿಕಾರಿಯನ್ನು ಇಂದೇ ರಿಲೀವ್ ಮಾಡಿ, ಮಾತೃ ಇಲಾಖೆಗೆ ಕಳಿಸಿ ಎಂದು ಸೂಚಿಸಿದರು.

ಮೈಸೂರಿನ ಜಿಲ್ಲಾ ಪಂಚಾಯ್ತಿ ಕಚೇರಿ ಸಭಾಂಗಣದಲ್ಲಿ ಸೂಯೇಜ್ ಫಾರಂ ಕಸ ವಿಲೇವಾರಿ ಸಂಬಂಧ ಕರೆದಿದ್ದ ಸಭೆಯ ಆರಂಭದಲ್ಲಿ ಗೈರು ಹಾಜ ರಾಗಿದ್ದ ಕುಮಾರ್ ನಾಯಕ್ ವಿರುದ್ಧ ಗರಂ ಆದ ಸಚಿವರು, ಅವರನ್ನು ಇಂದೇ ಬಿಡುಗಡೆ ಮಾಡಿ, ನನಗೆ ಕಾಪಿ ಕಳು ಹಿಸಿ ಎಂದು ಪಾಲಿಕೆ ಆಯುಕ್ತ ಗುರು ದತ್ ಹೆಗ್ಡೆ ಅವರಿಗೆ ಸೂಚಿಸಿದರು.

ಈ ವಿಷಯ ತಿಳಿದ ಕುಮಾರ್ ನಾಯಕ್ ಸಭೆಯ ಅರ್ಧಕ್ಕೆ ಬಂದು ಸಚಿವರ ಬಳಿಗೆ ಹೋಗಿ ‘ಸಾರ್ ನಾನು ವಾರಂಟ್ ಇದ್ದ ಕಾರಣ ನ್ಯಾಯಾಲ ಯಕ್ಕೆ ಹೋಗಿದ್ದೆ’ ಎಂದು ಅದರ ಕಾಪಿ ತೋರಿಸಿದರು. ಆದರೂ ಸಚಿವರು ‘ನಿಮ್ಮಂಥ ಅಧಿಕಾರಿ ನಮಗೆ ಬೇಡ, ನೀವು ಈವತ್ತೇ ರಿಲೀವ್ ಆಗಿ ಹೋಗಿ’ ಎಂದು ಸಚಿವರು ಹೌಹಾರಿದರು.

ನೀವು ಕಂದಾಯ ಸಂಗ್ರಹಿಸುವಲ್ಲಿ ಪ್ರಗತಿ ಸಾಧಿಸಿದ್ದೀರಾ ಎಂದು ಕೇಳಿ ದಾಗ ‘ಈ ಮೂರು ವರ್ಷಗಳಲ್ಲಿ ಕಂದಾಯ ವಸೂಲಾತಿಯಲ್ಲಿ ಗರಿಷ್ಠ ಗುರಿ ಸಾಧಿಸಿದ್ದೇನೆ. ಒಳ್ಳೆ ಕೆಲಸ ಮಾಡು ತ್ತಿದ್ದೇವೆ’ ಎಂದು ಕುಮಾರ್ ನಾಯಕ್ ಹೇಳಿ ದಾಗ, ಸೋಮಣ್ಣ ಅವರು ‘ಸರಿ, ಹೋಗಿ ಕೆಲಸ ಮಾಡಿ’ ಎಂದು ಹೇಳಿದರು.

Translate »