ದೇವೇಗೌಡರಿಂದ ಮತ್ತೆ ಪ್ರಧಾನಿ ಹಗಲುಗನಸು!
ಮೈಸೂರು

ದೇವೇಗೌಡರಿಂದ ಮತ್ತೆ ಪ್ರಧಾನಿ ಹಗಲುಗನಸು!

April 4, 2019

ಮೈಸೂರು: ಅರ್ಥವಿಲ್ಲದೆ ರಚನೆಯಾಗಿರುವ ಮಹಾಘಟ ಬಂಧನ್‍ನಲ್ಲಿ ನಾನು ಸಹ ಪ್ರಧಾನಿಯಾಗುತ್ತೇನೆ ಎಂದು ಐದಾರು ಮಂದಿ ಹಗಲು ಕನಸು ಕಾಣುತ್ತಿದ್ದಾರೆ. ಅವರಲ್ಲಿ ರಾಜ್ಯದ ಹೆಚ್.ಡಿ.ದೇವೇಗೌಡರು ಒಬ್ಬರು ಎಂದು ಶಾಸಕ ಎಲ್.ನಾಗೇಂದ್ರ ವ್ಯಂಗ್ಯವಾಡಿದರು.

ಮೈಸೂರಿನ ವಿವಿ ಮೊಹಲ್ಲಾದಲ್ಲಿರುವ ತಮ್ಮ ಕಚೇರಿಯಲ್ಲಿ ನಡೆದ ಚಾಮರಾಜ ವಿಧಾನಸಭಾ ಕ್ಷೇತ್ರದ ಮಹಿಳಾ ಮೋರ್ಚಾ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಬಿಜೆಪಿ ಗೆದ್ದರೆ ನರೇಂದ್ರ ಮೋದಿಯವರು ಮತ್ತೆ ಪ್ರಧಾನಿಯಾಗುತ್ತಾರೆ. ಆದರೆ, ಮಹಾಘಟಬಂಧನ್ ಗೆದ್ದರೆ ಯಾರು ಪ್ರಧಾನಿಯಾಗುತ್ತಾರೆ? ಎಂದು ಪ್ರಶ್ನಿಸಿದರು.
ದೇಶದ ರಕ್ಷಣೆಗಾಗಿ ಹೊಸ ಹೊಸ ಆವಿಷ್ಕಾರಗಳಿಗೆ ಮೋದಿಯವರೇ ಬರಬೇಕಾ ಯಿತು. ಕಳೆದ ಐದು ವರ್ಷದಲ್ಲಿ ದೇಶ ವಿಶ್ವದ ಗಮನ ಸೆಳೆದಿದೆ. ಮತ್ತೆ ಮೋದಿ ಯವರು ಪ್ರಧಾನಿಯಾದರೆ ದೇಶ ಅಭಿವೃದ್ಧಿಯಲ್ಲಿ ನಂ.1 ಸ್ಥಾನ ಅಲಂಕರಿಸುತ್ತದೆ. ಈ ನಿಟ್ಟಿನಲ್ಲಿ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಪ್ರತಾಪ ಸಿಂಹ ಅವರ ಪರ ಚಾಮರಾಜ ಕ್ಷೇತ್ರದ 19 ವಾರ್ಡಿನಲ್ಲಿರುವ ಪ್ರತಿ ಬೂತ್ ಹಂತದ ಕಾರ್ಯ ಕರ್ತರು ಮನೆ ಮನೆಗೆ ತೆರಳಿ ಮತಯಾಚನೆ ಮಾಡಬೇಕು ಎಂದು ಹೇಳಿದರು.

ಕಳೆದ ಲೋಕಸಭಾ ಚುನಾವಣೆಯಲ್ಲಿ ಚಾಮರಾಜ ಕ್ಷೇತ್ರದಿಂದ ಬಿಜೆಪಿ ಪರ ಸುಮಾರು 70 ಸಾವಿರ ಮತ ಬಂದಿತ್ತು. ಈ ಬಾರಿ ಲಕ್ಷಕ್ಕಿಂತ ಹೆಚ್ಚು ಮತಬರಬೇಕು. ಪ್ರತಾಪ್ ಸಿಂಹ ಅವರು ನಿಮ್ಮ ಮನೆಯ ಸಿಬ್ಬಂದಿ ಅಥವಾ ಅಣ್ಣ-ತಮ್ಮನೆಂದು ಭಾವಿಸಿ, ಉತ್ಸಾಹದಿಂದ ಮತಯಾಚನೆ ಕಾರ್ಯದಲ್ಲಿ ಭಾಗವಹಿಸಿ ಎಂದರು.

ಕಾರ್ಯಕರ್ತರು ಸಂಘಟಿತರಾಗಿ ಪ್ರಚಾರದಲ್ಲಿ ಭಾಗವಹಿಸಬೇಕು. ಹಾಗೆಯೇ ಏ.4 ರಂದು ಗೋವಿಂದರಾವ್ ಮೆಮೊರಿಯಲ್ ಹಾಲ್‍ನಲ್ಲಿ ನಡೆಯುವ ಚಾಮ ರಾಜ ಕ್ಷೇತ್ರ ಬಿಜೆಪಿ ಮಹಿಳಾ ಸಮಾವೇಶಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ನಿಮ್ಮೊಂದಿಗೆ ಇತರೆ ಮಹಿಳೆಯರನ್ನು ಕರೆತರಬೇಕು. ಕಾರ್ಯಕ್ರಮದಲ್ಲಿ ಅರ್ಪಿತಾ ಪ್ರತಾಪ್ ಸಿಂಹ ಹಾಗೂ ರಾಜ್ಯ ಮಹಿಳಾ ಮೋರ್ಚಾ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ ಎಂದರು.

ನಗರಪಾಲಿಕೆ ಸದಸ್ಯರಾದ ಪ್ರಮೀಳಾ ಭರತ್, ಸಿ.ವೇದಾವತಿ, ಮಹಿಳಾ ಮೋರ್ಚಾ ನಗರಾಧ್ಯಕ್ಷೆ ಚಿಕ್ಕಮ್ಮ ಬಸವರಾಜ್, ಕಾರ್ಯದರ್ಶಿಯರಾದ ಲಕ್ಷ್ಮಿದೇವಿ, ಹೇಮಾ ನಂದೀಶ್, ಪದ್ಮಶ್ರೀ ಮತ್ತಿತರರು ಉಪಸ್ಥಿತರಿದ್ದರು.

Translate »