ಮೈಸೂರು ಪಾಲಿಕೆ ವಾಹನಗಳಿಂದ ಡೀಸೆಲ್ ಕದ್ದು ಮಾರಾಟ
ಮೈಸೂರು

ಮೈಸೂರು ಪಾಲಿಕೆ ವಾಹನಗಳಿಂದ ಡೀಸೆಲ್ ಕದ್ದು ಮಾರಾಟ

December 28, 2018

ಮೈಸೂರು: ಮೈಸೂರು ನಗರಪಾಲಿಕೆ ವಾಹನಗಳ ಡೀಸೆಲ್ ಕಳ್ಳತನ ಮಾಡಿ ಮಾರಾಟ ಮಾಡ ಲಾಗುತ್ತಿದೆ ಎಂದು ನಗರಪಾಲಿಕೆ ವಿರೋಧ ಪಕ್ಷ(ಬಿಜೆಪಿ)ದ ನಾಯಕ ಬಿ.ವಿ.ಮಂಜುನಾಥ್, ಕೌನ್ಸಿಲ್ ಸಭೆಯಲ್ಲಿ ಗಂಭೀರ ಆರೋಪ ಮಾಡಿದ್ದಾರೆ.

ನಗರಪಾಲಿಕೆ ನಾಲ್ವಡಿ ಕೃಷ್ಣರಾಜ ಒಡೆಯರ್ ಸಭಾಂಗಣದಲ್ಲಿ ಗುರುವಾರ ಮೇಯರ್ ಪುಷ್ಪಲತಾ ಜಗನ್ನಾಥ್ ಅಧ್ಯಕ್ಷತೆಯಲ್ಲಿ ನಡೆದ ಸಭೆ ಯಲ್ಲಿ ಮಾತನಾಡಿದ ಅವರು, ಪಾಲಿಕೆ ವಾಹನಗಳಿಂದ ಡೀಸೆಲ್ ಕಳ್ಳತನವಾಗುತ್ತಿದೆ ಎಂದು ಹಲವು ವರ್ಷಗಳಿಂದ ದೂರು ಕೇಳಿಬರುತ್ತಿತ್ತು. ಇದಕ್ಕೆ ಪೂರಕವಾಗಿ ನಂಜನಗೂಡು ರಸ್ತೆಯಿಂದ ಹೆಚ್.ಡಿ.ಕೋಟೆ ರಸ್ತೆಯನ್ನು ಜೆ.ಪಿ.ನಗರದ ಮಾರ್ಗವಾಗಿ ಸಂಪರ್ಕಿಸುವ ರಸ್ತೆಯಲ್ಲಿ ಡಿ.14ರಂದು ಡೀಸೆಲ್ ಕಳ್ಳತನ ಮಾಡುತ್ತಿರುವುದು ಪತ್ತೆಯಾಗಿದೆ. ಆ ರಸ್ತೆಯಲ್ಲಿ ಹೆಚ್ಚು ವಾಹನ ಸಂಚಾರವಿಲ್ಲ. ಹಾಗಾಗಿ ಅಲ್ಲಿ ಪಾಲಿಕೆಯ ಕೆಎ-09, ಸಿ.9915 ನೋಂದಣಿ ಟಿಪ್ಪರ್‍ನಿಂದ ಪೈಪ್ ಮೂಲಕ ಡೀಸೆಲ್ ತೆಗೆದು, ಕ್ಯಾನ್‍ಗೆ ತುಂಬಿ, ಬೇರೊಂದು ಖಾಸಗಿ ವಾಹನದಲ್ಲಿದ್ದವರಿಗೆ ನೀಡುತ್ತಾರೆ. ಗುತ್ತಿಗೆ ಆಧಾರದಲ್ಲಿ ಚಾಲಕನಾಗಿರುವ ಮಹದೇವ ಡೀಸೆಲ್ ತುಂಬಿದ ಕ್ಯಾನ್ ನೀಡುತ್ತಾರೆ. ಅವರೊಂದಿಗೆ ಮತ್ತೋರ್ವ ಸಹಾಯಕನೂ ಇದ್ದ. ಇದನ್ನು ವೀಡಿಯೋ ಮಾಡಿ, ಮೇಯರ್ ಹಾಗೂ ಪಾಲಿಕೆ ಆಯುಕ್ತರಿಗೆ ಕಳುಹಿಸಿದ್ದೇನೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಟಿಪ್ಪರ್ ಚಾಲಕ ಹಾಗೂ ಸಹಾಯಕನ ವಿರುದ್ಧ ಕ್ರಿಮಿನಲ್ ಮೊಕ ದ್ದಮೆ ದಾಖಲಿಸಿ, ಇಂಧನ ಕಳ್ಳತನದ ಬಗ್ಗೆ ತನಿಖೆ ನಡೆಸಿ, ಪಾಲಿಕೆಗಾಗಿರುವ ನಷ್ಟವನ್ನು ಗುತ್ತಿಗೆದಾರನಿಂದ ವಸೂಲಿ ಮಾಡಬೇಕೆಂದು ಆಗ್ರಹಿಸಿದರು.

ಪಾಲಿಕೆ ಆವರಣದಲ್ಲಿರುವ ಬಂಕ್‍ನಲ್ಲಿ ಡೀಸೆಲ್ ಹಾಗೂ ಪೆಟ್ರೋಲ್ ನಿರ್ವಹಣೆ ಸಂಬಂಧ ಮಾಹಿತಿ ನೀಡುವಾಗಬೇಸಿಗೆಯಲ್ಲಿ ಆವಿಯಾಗುವ ಇಂಧನ ಪ್ರಮಾಣವನ್ನು ಹೆಚ್ಚಾಗಿ ತೋರಿಸಲಾಗುತ್ತಿದೆ. ಈ ಬಗ್ಗೆ ಅನೇಕ ಕೌನ್ಸಿಲ್ ಸಭೆಯಲ್ಲಿ ಚರ್ಚೆಯಾಗಿದ್ದಲ್ಲದೆ, ಕಳ್ಳತನವಾಗುತ್ತಿರಬಹುದು ಎಂದು ಅನೇಕ ಸದಸ್ಯರು ಅನುಮಾನ ವ್ಯಕ್ತಪಡಿಸುತ್ತಿದ್ದರು. ಇದೀಗ ಸಾಕ್ಷಿ ಸಮೇತ ಕೌನ್ಸಿಲ್ ಗಮನಕ್ಕೆ ತಂದಿದ್ದೇನೆ. ಗುತ್ತಿಗೆ ನೌಕರರು ಹೀಗೆ ಕಳವು ಮಾಡಿದ ಇಂಧನವನ್ನು ಅಪೇರಾ ಚಿತ್ರಮಂದಿರವಿದ್ದ ಸ್ಥಳದ ಹಿಂಭಾಗದಲ್ಲಿ ಮಾರಾಟ ಮಾಡುತ್ತಾರೆ ಎಂಬ ಮಾಹಿತಿ ಬಂದಿದೆ. ಪಾಲಿಕೆಯ ವಾಹನ ವಿಭಾಗದಲ್ಲಿ ಸಾಕಷ್ಟು ಅವ್ಯವಹಾರ ನಡೆಯುತ್ತಿದೆ. ವಾಹನಗಳ ಇಂಧನ ಟ್ಯಾಂಕ್‍ಗಳಿಗೆ ಬಯೋಮೆಟ್ರಿಕ್ ಲಾಕ್, ಡಬಲ್ ಲಾಕ್ ಇನ್ನಿತರ ಅತ್ಯಾಧುನಿಕ ಲಾಕ್ ವ್ಯವಸ್ಥೆಯನ್ನು ಅಳವಡಿಸಬೇಕು. ಈ ಬಗ್ಗೆ ಶೀಘ್ರ ತನಿಖೆ ನಡೆಸಬೇಕೆಂದು ಒತ್ತಾಯಿಸಿದರು.

ಗುತ್ತಿಗೆ ಪೌರ ಕಾರ್ಮಿಕರಿಗೆ ಅನ್ಯಾಯ: ಗುತ್ತಿಗೆ ಪೌರಕಾರ್ಮಿಕರು ವಾರದಲ್ಲಿ ಒಂದೆರಡು ದಿನ ಕೆಲಸಕ್ಕೆ ಬರುವುದಿಲ್ಲ. ಅಂತಹವರಿಗೆ ಗುತ್ತಿಗೆದಾರ ಗೈರಾದ ದಿನಗಳ ವೇತನವನ್ನು ನೀಡುವುದಿಲ್ಲ. ಆದರೆ ಗುತ್ತಿಗೆದಾರನಿಗೆ ಪಾಲಿಕೆಯಿಂದ ವೇತನದ ಪೂರ್ಣ ಹಣವನ್ನು ನೀಡಲಾಗುತ್ತಿದೆ. ಹೀಗೆ ಪಾಲಿಕೆಗಾಗುತ್ತಿರುವ ನಷ್ಟವನ್ನು ತಡೆಯಲು ಕ್ರಮ ಕೈಗೊಳ್ಳಬೇಕು. ಟ್ರೇಡ್ ಲೈಸೆನ್ಸ್ ನೀಡುವ ವ್ಯವಸ್ಥೆಯ ಸರಳೀಕರಣಗೊಳಿಸಬೇಕು. ಪಾಲಿಕೆ ಹಿಂಭಾಗದ ಕಟ್ಟಡದ ಸೆಲ್ಲಾರ್‍ನಲ್ಲಿ ತುಂಬಿರುವ ವಸ್ತುಗಳನ್ನು ತೆರವು ಮಾಡಿ, ವಾಹನ ನಿಲುಗಡೆಗೆ ಅವಕಾಶ ಮಾಡಿಕೊಡಬೇಕೆಂದು ಬಿ.ವಿ.ಮಂಜುನಾಥ್ ಆಗ್ರಹಿಸಿದರು.

ಶಾಮಿಯಾನಕ್ಕೆ ರಸ್ತೆ ಹಾನಿ: ಶಾಮಿಯಾನ ಹಾಕಲು ರಸ್ತೆಗೆ ಹಾನಿ ಮಾಡುವ ಪರಿಪಾಠಕ್ಕೆ ಕಡಿವಾಣ ಹಾಕಬೇಕೆಂದು ಹಿರಿಯ ಸದಸ್ಯ ಆರಿಫ್ ಹುಸೇನ್ ಸಭೆಯಲ್ಲಿ ಆಗ್ರಹಿಸಿದರು. ಸಭೆ-ಸಮಾರಂಭ ನಿಮಿತ್ತ ರಸ್ತೆಗಳಲ್ಲೇ ಶಾಮಿಯಾನ ಅಳವಡಿಸುತ್ತಾರೆ. ಅಲ್ಲದೆ ಕೆಲವು ಛತ್ರಗಳ ಮುಂದೆಯೂ ಶಾಮಿಯಾನ ಹಾಕಲಾಗುತ್ತದೆ. ಇದಕ್ಕಾಗಿ ಕಬ್ಬಿಣದ ಗೂಟ ನೆಡುವುದರಿಂದ ರಸ್ತೆ ಹಾಳಾಗುತ್ತಿದೆ. ಹೀಗೆ ಸಾರ್ವಜನಿಕ ಸ್ಥಳದಲ್ಲಿ ಶಾಮಿಯಾನ ಹಾಕಲು, ಪಾಲಿಕೆಯಿಂದ ಅನುಮತಿ ಪಡೆದು, ನಿಗಧಿತ ಶುಲ್ಕ ಪಾವತಿಸಬೇಕೆಂಬ ನಿಯಮ ಜಾರಿಗೆ ತರಬೇಕು. ಶುಲ್ಕದ ಹಣದಲ್ಲಿ ರಸ್ತೆ ದುರಸ್ತಿ ಮಾಡಿಸಬಹುದು. ಈ ಬಗ್ಗೆ ನಗರ ಪಾಲಿಕೆ ಎಚ್ಚೆತ್ತು, ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ಫುಟ್‍ಪಾತ್ ದಂಧೆ: ಸದಸ್ಯ ಲೋಕೇಶ್ ಪಿಯಾ ಮಾತನಾಡಿ, ಪ್ರವಾಸಿ ತಾಣಗಳಾದ ಅರಮನೆ, ಮೃಗಾಲಯದ ಬಳಿ ಸೇರಿದಂತೆ ಮೈಸೂರು ನಗರದ ಎಲ್ಲೆಡೆ ನಗರ ಪಾಲಿಕೆ ಖಾಲಿ ಜಾಗವೂ ಸೇರಿದಂತೆ ಫುಟ್‍ಪಾತ್ ವ್ಯಾಪಾರದ ದಂಧೆ ನಡೆಯುತ್ತಿದೆ.

ಸ್ವಚ್ಛತೆಯಲ್ಲಿ ಮೈಸೂರು ಪ್ರಥಮ ಸ್ಥಾನವನ್ನು ಕಳೆದುಕೊಂಡಿರುವುದಕ್ಕೆ ಇದೂ ಒಂದು ಕಾರಣ. ಕೋಟ್ಯಾಂತರ ರೂ. ವೆಚ್ಚ ಮಾಡಿ ಅರಮನೆ ಸಮೀಪ ಅಭಿವೃದ್ಧಿಗೊಳಿಸಿರುವ ಫುಟ್‍ಪಾತ್ ಉದ್ದಕ್ಕೂ ತಳ್ಳುಗಾಡಿಗಳಲ್ಲಿ ವ್ಯಾಪಾರ ಮಾಡುತ್ತಿದ್ದಾರೆ. ಮೂರ್ನಾಲ್ಕು ಮಂದಿ, ಈ ವ್ಯಾಪಾರಿಗಳಿಂದ ನಿತ್ಯ ಹಣ ವಸೂಲಿ ಮಾಡುತ್ತಾರೆಂಬ ದೂರುಗಳು ಕೇಳಿಬಂದಿವೆ. ಫುಟ್‍ಪಾತ್ ತುಂಬಾ ತಳ್ಳುಗಾಡಿಗಳು ಇರುವುದರಿಂದ ಪ್ರವಾಸಿಗರಿಗೂ ತೊಂದರೆಯಾಗುತ್ತಿದೆ. ಹೀಗೆ ಪ್ರವಾಸಿ ಸ್ಥಳದಲ್ಲೇ ಟಾರ್ಪಲ್ ಕಟ್ಟಿ, ವ್ಯಾಪಾರ ಮಾಡುವುದು, ಕಸವನ್ನು ಎಲ್ಲೆಂದರಲ್ಲಿ ಬಿಸಾಡಿದರೆ ಸ್ವಚ್ಛ ಸರ್ವೇಕ್ಷಣಾ ಸಮೀಕ್ಷೆಯಲ್ಲಿ ಯಾವ ಸ್ಥಾನ ಸಿಗಬಹುದು?. ಅರಮನೆ, ಮೃಗಾಲಯ, ಚಾಮುಂಡಿಬೆಟ್ಟ ಸೇರಿದಂತೆ ಎಲ್ಲಾ ಪ್ರವಾಸಿ ಸ್ಥಳಗಳು, ಬಡಾವಣೆಗಳು, ಖಾಲಿ ನಿವೇಶನಗಳಲ್ಲಿ ಫುಟ್‍ಪಾತ್ ವ್ಯಾಪಾರ ದಂಧೆಯಾಗಿದೆ. ಸ್ವಚ್ಛತೆಯಲ್ಲಿ ಮೈಸೂರು ಮತ್ತೆ ಪ್ರಥಮ ಸ್ಥಾನಕ್ಕೇರಬೇಕೆಂಬುದು ನಮ್ಮೆಲ್ಲರ ಆಶಯ. ಈ ನಿಟ್ಟಿನಲ್ಲಿ ಪಾಲಿಕೆ ಪರಿಣಾಮಕಾರಿ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಮೇಯರ್ ಪುಷ್ಪಲತಾ ಜಗನ್ನಾಥ್, ಈಗಾಗಲೇ ಫುಟ್‍ಪಾತ್ ತೆರವು ಕಾರ್ಯಾಚರಣೆ ನಡೆಸಲಾಗುತ್ತಿದೆ. ಅರಮನೆ, ಮೃಗಾಲಯ, ಸೇಂಟ್ ಫಿಲೋಮಿನಾ ಚರ್ಚ್ ಸೇರಿದಂತೆ ಪ್ರವಾಸಿ ತಾಣಗಳು, ಪಾರಂಪರಿಕ ಕಟ್ಟಡಗಳು, ಖಾಲಿ ಜಾಗಗಳಲ್ಲಿ ತಲೆ ಎತ್ತಿರುವ ಅಕ್ರಮ ವ್ಯಾಪಾರಿಗಳ ತೆರವಿಗೆ ಕಟ್ಟುನಿಟ್ಟಿನ ಆದೇಶ ನೀಡಲಾಗಿದೆ. ಕಾರ್ಯಾಚರಣೆ ತೀವ್ರಗೊಳಿಸುವಂತೆ ಅಧಿಕಾರಿಗಳಿಗೂ ಸೂಚಿಸಿದ್ದೇನೆ. ಆಯುಕ್ತ ರೊಂದಿಗೆ ನಾನೂ ಪರಿಶೀಲನೆ ನಡೆಸುತ್ತೇನೆ ಎಂದು ತಿಳಿಸಿದರು.

ಜೂ ಪಕ್ಕ ಬಾರ್ ಬೇಡ: ಮೈಸೂರಿನ ಯಾವುದೇ ಪ್ರವಾಸಿ ತಾಣಗಳ ಆಸುಪಾಸಿನಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ನೀಡಿಲ್ಲ. ಮೃಗಾಲಯದ ಸಮೀಪ ಲೋಕರಂಜನ್ ರಸ್ತೆಯಲ್ಲಿರುವ ಹೋಟೆಲ್‍ವೊಂದರಲ್ಲಿ ಬಾರ್ ಅಂಡ್ ರೆಸ್ಟೋರೆಂಟ್ ನಡೆಸಲು ಅನುಮತಿ ನೀಡಲಾಗಿದೆ ಎಂದು 52ನೇ ವಾರ್ಡ್ ಸದಸ್ಯೆ ಛಾಯಾದೇವಿ ವಿಷಾಧ ವ್ಯಕ್ತಪಡಿಸಿದರು. ಮೃಗಾಲಯಕ್ಕೆ ನಿತ್ಯ ಮಕ್ಕಳು, ಮಹಿಳೆಯರು ಸೇರಿದಂತೆ ಸಾವಿರಾರು ಮಂದಿ ಪ್ರವಾಸಿಗರು ಬರುತ್ತಾರೆ. ಇಂತಹ ಸ್ಥಳದಲ್ಲಿ ಬಾರ್ ಅಂಡ್ ರೆಸ್ಟೋರೆಂಟ್‍ಗೆ ಅವಕಾಶ ನೀಡಿರುವುದು ಸರಿಯಲ್ಲ. ಪ್ರವಾಸಿಗರ ಹಿತದೃಷ್ಟಿಯಿಂದ ಕೂಡಲೇ ಬಾರ್‍ಗೆ ನೀಡಿರುವ ಅನುಮತಿಯನ್ನು ರದ್ದುಗೊಳಿಸಲು ಪಾಲಿಕೆ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು. ದೊಡ್ಡಕೆರೆ ಮೈದಾನದಲ್ಲಿ ಗಿಡಗಂಟಿಗಳು ಆಳೆತ್ತರಕ್ಕೆ ಬೆಳೆದು ನಿಂತಿವೆ. ಇದರಿಂದ ಕಳ್ಳತನ ಹೆಚ್ಚಾಗಿದೆ. ಅನೈತಿಕ ಚಟುವಟಿಕೆಗಳ ತಾಣವಾಗಿದೆ. ಇಲ್ಲಿ ಸಾರ್ವಜನಿಕರು ಓಡಾಡುವುದಕ್ಕೂ ಭಯಪಡುವಂತಾಗಿದೆ. ಹಾಗಾಗಿ ಈ ಪ್ರದೇಶವನ್ನು ಸ್ವಚ್ಛಗೊಳಿಸಬೇಕು. ಅರುಣಾಚಲಂ ರಸ್ತೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಹೂಳುವ ರುದ್ರಭೂಮಿಯಲ್ಲಿ ನೀರಿನ ವ್ಯವಸ್ಥೆಯಿಲ್ಲ. ತುರ್ತಾಗಿ ಈ ಸಮಸ್ಯೆಗಳನ್ನು ಬಗೆಹರಿಸುವಂತೆ ಒತ್ತಾಯಿಸಿದರು.

Translate »