ಜನನ-ಮರಣ ಪತ್ರ ಇನ್ನು `ಇ-ಜನ್ಮ’ದಲ್ಲಿ ಸುಲಭ ಲಭ್ಯ
ಮೈಸೂರು

ಜನನ-ಮರಣ ಪತ್ರ ಇನ್ನು `ಇ-ಜನ್ಮ’ದಲ್ಲಿ ಸುಲಭ ಲಭ್ಯ

December 28, 2018

ಮೈಸೂರು: ಮೈಸೂರಿನಲ್ಲಿ ಜನನ ಮತ್ತು ಮರಣ ಪ್ರಮಾಣ ಪತ್ರವನ್ನು ಸುಲಭ ವಾಗಿ ಪಡೆಯುವ ಕಾಲ ಸನ್ನಿಹಿತವಾಗಿದೆ. ರಾಜ್ಯ ಸರ್ಕಾರದ `ಇ-ಜನ್ಮ’ ಆನ್‍ಲೈನ್ ಸೇವೆ ಇನ್ನು 15 ದಿನಗಳಲ್ಲಿ ಆರಂಭವಾಗಲಿದ್ದು, ಯಾವ ವಲಯ ಕಚೇರಿಯಲ್ಲಾದರೂ ಪ್ರಮಾಣ ಪತ್ರ ಪಡೆಯಬಹುದಾಗಿದೆ.

ಜನನ ಮತ್ತು ಮರಣ ಪ್ರಮಾಣ ಪತ್ರ ಪಡೆಯು ವವರು ಅನುಭವಿಸುವ ಯಾತನೆಯನ್ನು ಸದಸ್ಯ ಮ.ವಿ.ರಾಂಪ್ರಸಾದ್, ಕೌನ್ಸಿಲ್ ಸಭೆ ಮುಂದಿಟ್ಟರು. ಜನನ ಮತ್ತು ಮರಣ ನೋಂದಣಿ ವಿಭಾಗದ ಬಳಿ ನೂರಾರು ಮಂದಿ ಕಾದು ನಿಲ್ಲುತ್ತಾರೆ. ಕೆಲಸಗಾರರ ಸಂಖ್ಯೆಯೂ ಕಡಿಮೆಯಿದೆ. ಆಗಾಗ್ಗೆ ಸರ್ವರ್ ಸಮಸ್ಯೆ ಯಿದೆ ಎನ್ನುತ್ತಾರೆ. ವಲಯ ಕಚೇರಿಗಳಲ್ಲಿ ವಿತರಣೆಯನ್ನು ಸ್ಥಗಿತಗೊಳಿಸಲು ಕಾರಣವೇನು?. ಇದರಿಂದಲೇ ನಗರ ಪಾಲಿಕೆ ಪ್ರಧಾನ ಕಚೇರಿಯಲ್ಲಿ ಒತ್ತಡ ಹೆಚ್ಚಾಗಿದೆ. ಈ ಅವ್ಯವಸ್ಥೆ ಸರಿಯಾಗುವುದು ಯಾವಾಗ? ಎಂದು ಪ್ರಶ್ನಿಸಿದರು. ಮಾಜಿ ಮೇಯರ್ ಅಯೂಬ್‍ಖಾನ್ ಮಾತ ನಾಡಿ, ಜನನ ಮತ್ತು ಮರಣ ಪ್ರಮಾಣ ಪತ್ರಕ್ಕಾಗಿ ವಲಯ ಕಚೇರಿಯಿಂದ ಪಾಲಿಕೆಗೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರಮಾಣ ಪತ್ರಕ್ಕಾಗಿ ಮಹಿಳೆಯರೂ ಸಾಲಿನಲ್ಲಿ ನಿಂತಿರುತ್ತಾರೆ. ಈ ಆವರಣದಲ್ಲಿ ಕಾಲಿಡುವುದಕ್ಕೂ ಸ್ಥಳವಿಲ್ಲದಂತೆ ಜಮಾಯಿಸಿರುತ್ತಾರೆ. ಕೆಲವರು ನಿಲ್ಲಲಾಗದೆ ಕಾರಿಡಾರ್‍ನಲ್ಲೇ ಕುಳಿತಿರುತ್ತಾರೆ. ಈ ಜನರ ನಡುವೆಯೇ ಹಾದು ಹೋಗುವ ಅಧಿಕಾರಿಗಳು ಒಮ್ಮೆಯೂ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿಲ್ಲ.

ಜನರ ಕಷ್ಟವನ್ನು ಕಂಡು ಸುಮ್ಮನೇ ಇರುವ ನಮಗೆಲ್ಲಾ ನಾಚಿಕೆಯಾಗಬೇಕು ಎಂದು ಬೇಸರ ವ್ಯಕ್ತಪಡಿಸಿದರು. ಸದಸ್ಯ ಎಸ್‍ಬಿಎಂ ಮಂಜು ಮಾತನಾಡಿ, ಜನನ ಮತ್ತು ಪ್ರಮಾಣ ಪತ್ರ ಪಡೆಯಲು ಹರ ಸಾಹಸ ಪಡಬೇಕು. ಮಹಿಳೆಯರು, ವಯೋವೃದ್ಧರು ಅಲೆದಾಡಲು ಸಾಧ್ಯವಾಗದೆ ವ್ಯವಸ್ಥೆ ಬಗ್ಗೆ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಎಲ್ಲಾ ವಲಯ ಕಚೇರಿಗಳಲ್ಲಿ ಪ್ರಮಾಣ ಪತ್ರ ವಿತರಿಸುವುದ ರೊಂದಿಗೆ ಅಲ್ಲಿಯೇ ತಿದ್ದುಪಡಿಗೂ ಅವಕಾಶ ನೀಡಬೇಕೆಂದು ಆಗ್ರಹಿಸಿದರು.

ಈ ಬಗ್ಗೆ ಸ್ಪಷ್ಟನೆ ನೀಡಿದ ಜನನ ಮತ್ತು ಮರಣ ನೋಂದಣಿ ವಿಭಾಗದ ಮುಖ್ಯಾಧಿ ಕಾರಿಯೂ ಆದ ಆರೋಗ್ಯಾಧಿಕಾರಿ ಡಾ.ಡಿ.ಜಿ.ನಾಗರಾಜ್, ರಾಜ್ಯ ಸರ್ಕಾರದ ನೂತನ `ಇ ಜನ್ಮ’ ಸಾಫ್ಟ್‍ವೇರ್ ಸೇವೆಯನ್ನು ಬೆಂಗಳೂರು ಹಾಗೂ ಮೈಸೂರು ನಗರಗಳಲ್ಲಿ ಪ್ರಾಯೋಗಿಕವಾಗಿ ಜಾರಿಗೆ ತರಲಾಗುತ್ತಿದೆ. ಈಗಾಗಲೇ ಮ್ಯಾಪಿಂಗ್ ಕಾರ್ಯ ಪೂರ್ಣಗೊಂಡಿದ್ದು, ಇನ್ನು 15 ದಿನಗಳಲ್ಲಿ ದೊರೆಯುವ ನಿರೀಕ್ಷೆಯಿದೆ. ನಂತರದಲ್ಲಿ ನಗರ ಪಾಲಿಕೆ ವ್ಯಾಪ್ತಿಯ ನಿವಾಸಿಗಳು ಯಾವ ವಲಯ ಕಚೇರಿಯಲ್ಲಾ ದರೂ ಪ್ರಮಾಣ ಪತ್ರಗಳನ್ನು ಸುಲಭವಾಗಿ ಪಡೆಯಬಹುದು. ಚೆಲುವಾಂಬ ಆಸ್ಪತ್ರೆ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲೂ ಪಡೆಯಲು ಅವಕಾಶವಿದೆ. ತಿದ್ದುಪಡಿಯಿದ್ದಲ್ಲಿ ಪಾಲಿಕೆ ಪ್ರಧಾನ ಕಚೇರಿಗೆ ಬರಬೇಕಾಗುತ್ತದೆ ಎಂದು ತಿಳಿಸಿದರು.

ಪಾಲಿಕೆ ಆಯುಕ್ತರಾದ ಕೆ.ಹೆಚ್.ಜಗದೀಶ್ ಮಾತನಾಡಿ, ಯಾವುದೇ ಹೊಸ ಯೋಜನೆ ಜಾರಿಯಲ್ಲಿ ಕೆಲವೊಂದು ತಾಂತ್ರಿಕ ದೋಷಗಳು ಎದುರಾಗುತ್ತವೆ. ಜನನ ಮತ್ತು ಮರಣ ಪ್ರಮಾಣ ಪತ್ರ ನೀಡುವ ವ್ಯವಸ್ಥೆಯನ್ನು ಸರಳೀಕರಣ ಮಾಡುವ ಉದ್ದೇಶದಿಂದಲೇ ಸರ್ಕಾರ `ಇ ಜನ್ಮ’ ಸಾಫ್ಟ್‍ವೇರ್ ಜಾರಿಗೆ ತರುತ್ತಿದ್ದು, ಇದರಿಂದ ಸಾರ್ವಜನಿಕರಿಗೆ ಅನುಕೂಲವಾಗಲಿದೆ. 15-20 ದಿನಗಳಲ್ಲಿ ಸೇವೆ ಆರಂಭವಾಗುವ ನಿರೀಕ್ಷೆಯಿದೆ ಎಂದು ಸ್ಪಷ್ಟಪಡಿಸಿದರು. ಸದಸ್ಯೆ ಪ್ರೇಮಾ ಶಂಕರೇಗೌಡ ಮಾತನಾಡಿ, ಮರಣ ಪ್ರಮಾಣ ನೀಡಲು ದಾಖಲೆ ಕೇಳುತ್ತೀರಿ. ಆದರೆ ನಮ್ಮ ಮಂಚೇಗೌಡನ ಕೊಪ್ಪಲಿನ ರುದ್ರಭೂಮಿಯಲ್ಲಿ ನೋಂದಣಿ ಮಾಡಿಕೊಳ್ಳುವವರೇ ಇಲ್ಲ. ಈ ರೀತಿಯ ಸಮಸ್ಯೆ ಅನೇಕ ಕಡೆಯಿದೆ. ಹೀಗಾದರೆ ದಾಖಲೆ ನೀಡುವು ದಾದರೂ ಹೇಗೆ? ಎಂದು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಜನನ ಮತ್ತು ಮರಣ ನೋಂದಣಿ ವಿಭಾಗದ ಅಧಿಕಾರಿ ಅನಿಲ್, ಮೈಸೂರು ನಗರ ಪಾಲಿಕೆ ವ್ಯಾಪ್ತಿಯಲ್ಲಿ 38 ಸ್ಮಶಾನಗಳಿದ್ದು, 16ರಲ್ಲಿ ಕಾವಲುಗಾರರಿದ್ದಾರೆ. ಒಬ್ಬರಿಗೆ ಎರಡು-ಮೂರು ಸ್ಮಶಾನಗಳ ಜವಾಬ್ದಾರಿ ನೀಡಲಾಗಿದೆ. ಆದರೆ ನೋಂದಣಿ ಮಾಡಿಕೊಳ್ಳು ವುದರಲ್ಲಿ ವ್ಯತ್ಯಯವಾಗುತ್ತಿಲ್ಲ ಎಂದರು. ಪಾಲಿಕೆ ಆಯುಕ್ತ ಜಗದೀಶ್ ಮಾತನಾಡಿ, ಎಲ್ಲಾ ಸ್ಮಶಾನಗಳಲ್ಲಿ ನೋಂದಣಿ ಮಾಡಿಕೊಳ್ಳಲು ಸಿಬ್ಬಂದಿ ನಿಯೋಜಿಸಲು ಕೂಡಲೇ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ತೀರುವಳಿ ಬಾಕಿಗೆ ಬೇಸರ: ಪಾಲಿಕೆ ಲೆಕ್ಕಪರಿಶೋಧನೆಯಲ್ಲಿ 2009-10ನೇ ಸಾಲಿನಿಂದ 2010-11ನೇ ಸಾಲಿನವರಗೆ ಒಟ್ಟು 97.41 ಕೋಟಿ ರೂ. ತೀರುವಳಿ ಉಳಿದಿರುವ ಬಗ್ಗೆ ಶಿವಕುಮಾರ್, ಎಸ್‍ಬಿಎಂ ಮಂಜು, ಕೆ.ವಿ.ಶ್ರೀಧರ್ ಇನ್ನಿತರ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದ್ದಲ್ಲದೆ, ತೀರುವಳಿಗೆ ಕಾರಣರಾದ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಂಡು, ನಷ್ಟ ವಸೂಲಿ ಮಾಡುವಂತೆ ಆಗ್ರಹಿಸಿದರು.

Translate »