ಕೊಳ್ಳೇಗಾಲದಲ್ಲಿ ಡಿಜಿಟಲ್ ಗ್ರಂಥಗಳ ಲೋಕಾರ್ಪಣೆ
ಚಾಮರಾಜನಗರ

ಕೊಳ್ಳೇಗಾಲದಲ್ಲಿ ಡಿಜಿಟಲ್ ಗ್ರಂಥಗಳ ಲೋಕಾರ್ಪಣೆ

October 3, 2018

ಕೊಳ್ಳೇಗಾಲ:  ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳಿಗೆ ನೆರವಾಗುವ ಡಿಜಿಟಲ್ ಗ್ರಂಥಗಳ ಲೋಕಾರ್ಪಣೆಯು ಕೊಳ್ಳೇಗಾಲ ಪಟ್ಟಣದ ಶಾಖಾ ಗ್ರಂಥಾಲಯದಲ್ಲಿ ಇಂದು ನೆರವೇರಿತು.

ಜಿಲ್ಲಾಡಳಿತ, ಜಿಲ್ಲಾ ಕೇಂದ್ರ ಗ್ರಂಥಾ ಲಯ ಹಾಗೂ ಕೇರಳದ ಸಾಯಿ ಸಂಜೀವಿನಿ ಚಾರಿಟಬಲ್ ಟ್ರಸ್ಟ್ ಸಂಯುಕ್ತಾಶ್ರಯದಲ್ಲಿ 1ರಿಂದ 12ನೇ ತರಗತಿವರೆಗಿನ ಶಾಲಾ- ಕಾಲೇಜು ವಿದ್ಯಾರ್ಥಿಗಳಿಗಾಗಿ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಧ್ಯಯನ ಮಾಡುವ ಅಭ್ಯರ್ಥಿಗಳಿಗೆ ಅನುಕೂಲ ಕಲ್ಪಿಸುವ ದಿಸೆಯಲ್ಲಿ ಆರಂಭಿಸಲಾಗಿರುವ ಡಿಜಿಟಲ್ ಗ್ರಂಥಗಳ ಬಳಕೆಗೆ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಎನ್. ಮಹೇಶ್ ಚಾಲನೆ ನೀಡಿದರು.

ಸಚಿವರು ಸಮಾರಂಭವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಗಾಂಧಿ ಜಯಂತಿಯನ್ನು ಸಮಾರಂಭದೊಂದಿಗೆ ಹಮ್ಮಿಕೊಳ್ಳಲಾಗಿತ್ತು. ಸಚಿವರು ಮಹಾತ್ಮ ಗಾಂಧಿಜೀಯವರ ಭಾವ ಚಿತ್ರಕ್ಕೆ ಪುಷ್ಪ ಗೌರವ ಸಲ್ಲಿಸಿದರು.

ಇದೇ ವೇಳೆ ಮಾತನಾಡಿದ ಸಚಿವ ಎನ್.ಮಹೇಶ್ ಅವರು, ಗ್ರಂಥಾಲಯ ಗಳು ಜ್ಞಾನವೃದ್ಧಿಗೆ ಅಗತ್ಯವಾಗಿದೆ. ಪೋಷಕರು, ಶಿಕ್ಷಕರು ಮಕ್ಕಳಿಗೆ ಗ್ರಂಥಾಲಯ ಸದುಪಯೋಗ ಮಾಡಿಕೊಳ್ಳಲು ಸಲಹೆ ನೀಡಬೇಕು. ರಾಜ್ಯದಲ್ಲೇ ಅಪೂರ್ವ ಎನಿಸಿರುವ ಡಿಜಿಟಲ್ ಗ್ರಂಥಗಳ ವ್ಯವಸ್ಥೆಯನ್ನು ಸಾಯಿ ಸಂಜೀವಿನಿ ಚಾರಿಟಬಲ್ ಟ್ರಸ್ಟ್‍ನೊಂದಿಗೆ ಆರಂಭಿಸಲಾಗಿದೆ. ಇದರ ಸದ್ಭಳಕೆಯಾಗಬೇಕು ಎಂದರು.

ಡಿಜಿಟಲ್ ಗ್ರಂಥಾಲಯದಲ್ಲಿ ಎನ್.ಸಿ.ಇ. ಆರ್.ಟಿ. ಡಿ.ಎಸ್.ಇ.ಆರ್.ಟಿ ಮತ್ತು ಅಂತ ರಾಷ್ಟ್ರೀಯ ಜರ್ನಲ್ ಹಾಗೂ ನೀಟ್, ಪಿ.ಎಸ್.ಇ. ಹಳೆಯ ಪ್ರಶ್ನೆ ಪತ್ರಿಕೆಗಳು ಲಭ್ಯವಿದೆ. ಪಿ.ಯು.ಸಿ ನಂತರದ ವಿದ್ಯಾ ರ್ಥಿಗಳಿಗೆ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗೆ ಸಜ್ಜಾಗಲಿರುವ ಅಭ್ಯರ್ಥಿಗಳ ವ್ಯಾಸಂಗಕ್ಕೆ ಡಿಜಿಟಲ್ ಗ್ರಂಥಗಳು ಅನುಕೂಲವಾಗಲಿವೆ. ಇಂತಹ ವ್ಯವಸ್ಥೆಗೆ ಅವಕಾಶ ಪಡೆದಿರುವ ಕೊಳ್ಳೇಗಾಲ ಪಟ್ಟಣ ಹೆಮ್ಮೆ ಪಡಬೇಕಿದೆ ಎಂದು ಸಚಿವರು ಹೇಳಿದರು.

ರಾಜ್ಯದಲ್ಲಿ ಆರೂವರೆ ಕೋಟಿ ಜನ ಸಂಖ್ಯೆಗೆ 6773 ಗ್ರಂಥಾಲಯಗಳು ಇವೆ. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಗ್ರಂಥಾಲಯಗಳನ್ನು ಉನ್ನತಿ ಹಾಗೂ ಆಧು ನೀಕರಣಗೊಳಿಸಿದರೆ ಇನ್ನೂ ಉಪ ಯೋಗವಾಗಲಿದೆ. ಗ್ರಂಥಾಲಯಗಳನ್ನು ಶಾಲೆಯ ಅವರಣದಲ್ಲೆ ತರುವ ಮೂಲಕ ಇನ್ನಷ್ಟು ಸುಧಾರಿಸುವ ಸಾಧ್ಯತೆಗಳ ಪ್ರಕ್ರಿಯೆಗೆ ಇಲಾಖೆ ಮುಂದಾಗಿದೆ ಎಂದು ಸಚಿವರು ತಿಳಿಸಿದರು.

ಕೊಳ್ಳೇಗಾಲ ಪಟ್ಟಣದಲ್ಲಿ 3 ಕೋಟಿ ರೂ. ವೆಚ್ಚದಲ್ಲಿ ಅತ್ಯಾಧುನಿಕ ಗ್ರಂಥಾಲಯವನ್ನು ಅಭಿವೃದ್ಧಿಪಡಿಸಲು ತಾವು ಚಿಂತನೆ ನಡೆಸಿದ್ದು, ಇದರ ಕಾರ್ಯರೂಪಕ್ಕೆ ಮುಂದಾಗುವುದಾಗಿ ಸಚಿವರು ತಿಳಿಸಿದರು.

ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಅವರು ಮಾತನಾಡಿ, ಮಾನವ ಅಭಿವೃದ್ಧಿ ಸೂಚ್ಯಂಕವನ್ನು ಶಿಕ್ಷಣ ಹಾಗೂ ಆರೋಗ್ಯದ ವ್ಯಸ್ಥೆಯ ಮಾನದಂಡಗಳ ಮೇಲೆ ಅಳೆಯಲಾಗುತ್ತದೆ. ಈ ನಿಟ್ಟಿನಲ್ಲಿ ಗ್ರಂಥಾಲಯ ಗಳನ್ನು ಸಹ ಪರಿಗಣಿಸಬೇಕಾಗುತ್ತದೆ. ಡಿಜಿಟಲ್ ಯುಗವಾಗಿರುವ ಇಂದಿನ ಸಂದರ್ಭಕ್ಕೆ ಅನುಗುಣವಾಗಿ ಜಿಲ್ಲೆಯಲ್ಲೂ ಡಿಜಿಟಲ್ ಗ್ರಂಥಗಳ ಅಧ್ಯಯನಕ್ಕೆ ಸಚಿವರು ಅವಕಾಶ ಕಲ್ಪಿಸಿರುವುದಕ್ಕೆ ಅಭಿನಂದನೆ ಸಲ್ಲಿಸುವುದಾಗಿ ನುಡಿದರು.

ಕೊಳ್ಳೇಗಾಲ ತಾಲೂಕು ಪಂಚಾಯತ್ ಅಧ್ಯಕ್ಷ ಅರ್.ರಾಜು ಅಧ್ಯಕ್ಷತೆ ವಹಿಸಿ ದ್ದರು. ಉಪಾಧ್ಯಕ್ಷರಾದ ಲತಾ, ಜಿಪಂ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷರಾದ ಮರಗದಮಣಿ, ಸದಸ್ಯರಾದ ನಾಗರಾಜು, ನಗರಸಭೆ ಸದಸ್ಯರಾದ ನಾಸೀರ್ ಷರೀಫ್, ಸಾಯಿ ಸಂಜೀವಿನಿ ಚಾರಿ ಟಬಲ್ ಟ್ರಸ್ಟ್ ಅಧ್ಯಕ್ಷ ಡಾ.ಎ.ಹರಿ ನಾರಾಯಣ್, ರಾಜ್ಯ ಗ್ರಂಥಾಲಯ ಪ್ರಾಧಿಕಾರದ ಸದಸ್ಯರು ಹಾಗೂ ಸಾಹಿತಿ ಶೂದ್ರ ಶ್ರೀನಿವಾಸ್, ಉಪವಿಭಾಗಾಧಿಕಾರಿ ಫೌಜಿಯಾ ತರನ್ನುಮ್, ಸಾರ್ವಜನಿಕ ಗ್ರಂಥಾಲಯ ಇಲಾಖೆ ನಿರ್ದೆಶಕರಾದ ಡಾ.ಸತೀಸ್ ಕುಮಾರ ಎಸ್. ಹೊಸಮನಿ ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Translate »