ನಾಪೋಕ್ಲು: ಇಲ್ಲಿಗೆ ಸಮೀಪದ ಚೇರಂಬಾಣೆ ಪ್ರೌಢಶಾಲಾ ಆವರಣದಲ್ಲಿ ಕಳೆದ ಒಂಬತ್ತು ದಿನಗಳಿಂದ ಪರಿಹಾರ ಕೇಂದ್ರದಲ್ಲಿ ತಂಗಿದ್ದ ಸಂತ್ರಸ್ತರನ್ನು ಭಾನುವಾರ ದಿಢೀರಾಗಿ ತಾಳತ್ತಮನೆ ಸರ್ಕಾರಿ ಶಾಲೆಗೆ ಸ್ಥಳಾಂತರಿಸಿದ್ದರಿಂದ ತೊಂದರೆ ಉಂಟಾಗಿದೆ ಎಂದು ಎರಡನೇ ಮೊಣ್ಣಂಗೇರಿ ಗ್ರಾಮದ ನಿವಾಸಿ ದಿನೇಶ್ ಹಾಗೂ ಕಾರ್ತಿಕ್ ಆರೋಪಿಸಿದ್ದಾರೆ.
ಜಿಲ್ಲಾಧಿಕಾರಿಗಳ ಆದೇಶದಂತೆ ಚೇರಂಬಾಣೆ ಪ್ರೌಢಶಾಲೆಯಿಂದ ಸಂತ್ರಸ್ತರನ್ನು ಸ್ಥಳಾಂತರಿಸಲು ಕ್ರಮಕೈಗೊಳ್ಳಲಾಗಿದ್ದು, ತಾಳತ್ತಮನೆಯ ಸರ್ಕಾರಿ ಶಾಲೆಗೆ ತೆರಳಿದ ಸಂತ್ರಸ್ತರು ಯಾವೊಂದು ವ್ಯವಸ್ಥೆಯು ಇಲ್ಲದೆ ಸಮಸ್ಯೆಯಲ್ಲಿ ಸಿಲುಕಿರುವ ಬಗ್ಗೆ ಮದೆನಾಡು ಗ್ರಾಮಪಂಚಾಯಿತಿ ಅಧ್ಯಕ್ಷರ ಹಾಗೂ ರೆವಿನ್ಯೂ ಅಧಿಕಾರಿಗಳ ಗಮನಕ್ಕೆ ತಂದರು. ಮಕ್ಕಳು, ಮಹಿಳೆಯರು, ಹಿರಿಯರು ಸೇರಿದಂತೆ ಸುಮಾರು 80ಕ್ಕೂ ಅಧಿಕ ಸಂತ್ರಸ್ತರು ಭಾನುವಾರ ಮಧ್ಯಾಹ್ನ 2ಗಂಟೆಯಿಂದ ಸಂಜೆ 5 ಗಂಟೆಯವರೆಗೆ ತಾಳತ್ತಮನೆ ಸರ್ಕಾರಿ ಶಾಲೆಯಲ್ಲಿ ವಸತಿಗಾಗಿ ಪರದಾಡುತ್ತಿದ್ದರೂ ಯಾವ ಅಧಿಕಾರಿಗಳೂ ಭೇಟಿ ನೀಡಿಲ್ಲ. ಸಂತ್ರಸ್ತರ ಸಂಕಷ್ಟಕ್ಕೆ ಸ್ಪಂದಿಸಿಲ್ಲ ಎಂದರು. ಇಲ್ಲಿನ ಕಟ್ಟಡಗಳು ದುರಸ್ತಿಗೊಳಗಾಗಿವೆ. ಗೋಡೆಗಳು ಬಿರುಕು ಬಿಟ್ಟಿವೆ. ಶೌಚಾಲಯ ವ್ಯವಸ್ಥೆ ಇಲ್ಲ. ಮಳೆಯಲ್ಲಿ ಸಂತ್ರಸ್ತರು ಪರದಾಡುವಂತಾಗಿದೆ ಎಂದು ಆರೋಪಿಸಿದರು. ವಾಸಸ್ಥಳ ಮನೆ ತೋಟಗಳನ್ನು ಕಳೆದುಕೊಂಡು ನಿರ್ಗತಿಕರಾಗಿದ್ದೇವೆ. ಕನಿಷ್ಟ ವಸತಿ ವ್ಯವಸ್ಥೆಯನ್ನಾದರೂ ಕಲ್ಪಿಸಿಕೊಡಿ. ಪರಿಹಾರ ಕೇಂದ್ರಕ್ಕೆ ಅಗತ್ಯ ಆಹಾರ ಸಾಮಗ್ರಿಯನ್ನು ಕಳುಹಿಸಿಕೊಡಿ ಎಂದು ಅವರು ಮನವಿ ಮಾಡಿದ್ದಾರೆ.