ಹಾಸ್ಟೆಲ್‍ಗಳ ಸುಧಾರಣೆಗೆ ಕ್ರಮ ವಹಿಸಲು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಸೂಚನೆ
ಚಾಮರಾಜನಗರ

ಹಾಸ್ಟೆಲ್‍ಗಳ ಸುಧಾರಣೆಗೆ ಕ್ರಮ ವಹಿಸಲು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಸೂಚನೆ

October 30, 2018

ಚಾಮರಾಜನಗರ:  ವಿದ್ಯಾರ್ಥಿ ನಿಲಯಗಳಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳಿಗೆ ಗುಣಮಟ್ಟದ ಆಹಾರ ಮತ್ತು ಶಿಕ್ಷಣ ನೀಡುವ ಮೂಲಕ ಹಾಸ್ಟಲ್‍ಗಳ ಸುಧಾರಣೆಗೆ ಕ್ರಮ ವಹಿಸುವಂತೆ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಾಜೇಂದರ್ ಕುಮಾರ್ ಕಠಾರಿಯಾ ಸೂಚನೆ ನೀಡಿದ್ದಾರೆ.
ನಗರದ ಜಿಲ್ಲಾ ಪಂಚಾಯತ್ ಸಭಾಂಗಣ ದಲ್ಲಿಂದು ನಡೆದ ಜಿಲ್ಲಾಮಟ್ಟದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಪೂರಕ ವಾತಾ ವರಣ ಕಲ್ಪಿಸಲು ಸರ್ಕಾರ ಸಾಕಷ್ಟು ಅನುದಾನ ಒದಗಿಸಿದೆ. ಹಾಸ್ಟಲ್‍ಗಳಲ್ಲಿ ಮಕ್ಕಳಿಗೆ ನೀಡುವ ಆಹಾರ, ಶಿಕ್ಷಣ ಗುಣ ಮಟ್ಟದಿಂದ ಕೂಡಿರಬೇಕು. ಉತ್ತಮ ಕಲಿಕಾ ಪರಿಸರವಿರಬೇಕು. ಆದರೆ ಜಿಲ್ಲೆಯ ಕೆಲ ಹಾಸ್ಟಲ್‍ಗಳು ಅವ್ಯವಸ್ಥೆಯಿಂದ ಕೂಡಿದ್ದು, ಅನೈರ್ಮಲ್ಯದ ತಾಣವಾಗಿವೆ. ಮಕ್ಕಳಿಗೆ ನೀಡುವ ತಿಂಡಿ, ಊಟದ ಮೆನು ಫಲಕವನ್ನು ಪ್ರಕಟಿಸಬೇಕು ಎಂದರು.

ಹಾಸ್ಟಲ್‍ಗಳ ವ್ಯವಸ್ಥಿತ ನಿರ್ವಹಣೆಗಾಗಿ ನೋಡೆಲ್ ಅಧಿಕಾರಿಯನ್ನು ನೇಮಿಸಲಾಗಿದೆ. ಸಂಬಂಧಪಟ್ಟ ಇಲಾಖೆಯ ಅಧಿಕಾರಿ ಗಳು ಕ್ಷೇತ್ರ ಪ್ರವಾಸ ಕೈಗೊಂಡು ನೋಡೆಲ್ ಅಧಿಕಾರಿಯೊಂದಿಗೆ ಸಮನ್ವಯ ಸಾಧಿಸಿ ಹಾಸ್ಟಲ್‍ಗಳ ಸುಧಾರಣೆಗೆ ಮುಂದಾಗ ಬೇಕು ಎಂದು ಸಲಹೆ ಮಾಡಿದರು.

ಅದೇ ರೀತಿ ಅಂಗನವಾಡಿ ಕೇಂದ್ರಗ ಳಿಗೂ ಅಧಿಕಾರಿಗಳು ಭೇಟಿ ನೀಡಬೇಕು. ಅಂಗನವಾಡಿ ಕಟ್ಟಡಗಳು ಸಮರ್ಪಕ ವಾಗಿದೆಯೆ?, ಮಕ್ಕಳ ಹಾಜರಾತಿ ಕ್ರಮ ಬದ್ಧವಾಗಿದೆಯೆ ಹಾಗೂ ಮಕ್ಕಳಿಗೆ ಗುಣ ಮಟ್ಟದ ಆಹಾರ ಪೂರೈಸಲಾಗುತ್ತಿದೆಯೆ ಎಂಬುದನ್ನು ವರದಿ ಮಾಡಬೇಕು ಎಂದು ಉಸ್ತುವಾರಿ ಕಾರ್ಯದರ್ಶಿ ತಿಳಿಸಿದರು.

ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಸಂಬಂಧಿಸಿದಂತೆ ಜಿಲ್ಲಾಮಟ್ಟದಲ್ಲಿ ತನಿಖಾ ತಂಡಗಳನ್ನು ರಚಿಸಬೇಕು. ಪ್ರತಿ ತಿಂಗಳು ಟಾಸ್ಕ್‍ಫೋರ್ಸ್ ಸಭೆ ನಡೆಸಬೇಕು. ನಿಯಮಬಾಹಿರವಾಗಿ ಮರಳು ಹಾಗೂ ಕಲ್ಲು ಗಣಿಗಾರಿಕೆ ನಡೆದರೆ ಅದನ್ನು ಮುಟ್ಟುಗೋಲು ಹಾಕಿಕೊಂಡು ಪ್ರಕರಣ ದಾಖಲಿಸಬೇಕು. ಇದಕ್ಕೆ ತಹಶೀಲ್ದಾರ್, ಪೊಲೀಸ್ ಇಲಾಖೆಗಳು ಜಂಟಿ ಕಾರ್ಯಾ ಚರಣೆ ನಡೆಸಲು ಸಹಕಾರ ನೀಡಬೇಕು ಎಂದು ಉಸ್ತುವಾರಿ ಕಾರ್ಯದರ್ಶಿ ಕಟಾರಿಯಾ ತಾಕೀತು ಮಾಡಿದರು.

ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಮಾತ ನಾಡಿ, ಉಸ್ತುವಾರಿ ಕಾರ್ಯದರ್ಶಿಯ ವರು ಸೂಚಿಸಿದ ಕೆಲಸಗಳನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಿ ಗುರಿ ಸಾಧಿಸಬೇಕು. ಇಲಾಖೆಗಳಲ್ಲಿ ಬಾಕಿ ಇರುವ ಮತ್ತು ಆಗಬೇಕಿರುವ ಕಾರ್ಯಕ್ರಮಗಳ ಕುರಿತು ವಿಳಂಬ ಮಾಡದೇ ಟಿಪ್ಪಣಿ ತಯಾರಿಸಿ ಶೀಘ್ರವಾಗಿ ಜಿಲ್ಲಾಡಳಿತಕ್ಕೆ ಸಲ್ಲಿಸಬೇಕು ಎಂದರು.

ನಂತರ ಜಿಲ್ಲಾ ಉಸ್ತುವಾರಿ ಕಾರ್ಯ ದರ್ಶಿಯವರು ಕಂದಾಯ, ಸಾಮಾಜಿಕ ಭದ್ರತಾ ಯೋಜನೆ, ಅರಣ್ಯ ಹಕ್ಕು ಕಾಯ್ದೆ, ಕೃಷಿ, ಶಿಕ್ಷಣ, ಆರೋಗ್ಯ, ಕೈಗಾರಿಕೆ, ನಗರಾಭಿವೃದ್ಧಿ, ಗ್ರಾಮೀಣ ಕುಡಿಯುವ ನೀರು, ಸಮಾಜ ಕಲ್ಯಾಣ, ಪಶುಪಾಲನೆ, ತೋಟಗಾರಿಕೆ, ರೇಷ್ಮೆ, ಸ್ವಚ್ಚ ಭಾರತ್ ಮಿಷನ್ ಸೇರಿದಂತೆ ವಿವಿಧ ಅಭಿವೃದ್ಧಿ ನಿಗಮ ಗಳ ಪ್ರಗತಿ ಪರಿಶೀಲನೆ ನಡೆಸಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎಂ.ಗಾಯತ್ರಿ, ಜಿಲ್ಲಾ ಪಂಚಾಯತ್ ಉಪ ಕಾರ್ಯ ದರ್ಶಿ ಪದ್ಮಾಶೇಖರ್ ಪಾಂಡೆ, ಜಿಲ್ಲಾಮಟ್ಟದ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

Translate »