ಜಿಲ್ಲಾ ಮಟ್ಟದ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆ: ಅರ್ಹರಿಗೆ ಭೂಮಿ ನೀಡಲು ಶಾಸಕರ ಸೂಚನೆ
ಹಾಸನ

ಜಿಲ್ಲಾ ಮಟ್ಟದ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆ: ಅರ್ಹರಿಗೆ ಭೂಮಿ ನೀಡಲು ಶಾಸಕರ ಸೂಚನೆ

August 3, 2018

ಹಾಸನ: ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಜಿಲ್ಲಾಧಿ ಕಾರಿ ರೋಹಿಣಿ ಸಿಂಧೂರಿ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಮಟ್ಟದ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆ ನಡೆಯಿತು.

ಈ ವೇಳೆ ಹೇಮಾವತಿ ಯಗಚಿ ವಾಟೆವಳೆ ಜಲಾಶಯ ಯೋಜನೆಗಳ ನಿರಾಶ್ರಿತರ ಸಮಸ್ಯೆಗಳು, ಪುನರ್‍ವಸತಿಗೆ ಮೀಸಲಿರಿಸಿರುವ ಜಾಗದಲ್ಲಿ ಹಲವು ದಶಕಗಳಿಂದ ಮನೆ ನಿರ್ಮಿಸಿಕೊಂಡಿರುವ ದಲಿತ ಬಡ ಕುಟುಂಬಗಳಿಗೆ ಹಕ್ಕು ಪತ್ರ ನೀಡುವ ಕುರಿತು ಪ್ರಸ್ತಾಪಿಸಲಾಯಿತು.

ಶಾಸಕರಾದ ಹೆಚ್.ಕೆ.ಕುಮಾರಸ್ವಾಮಿ ಹಾಗೂ ಕೆ.ಎಸ್.ಲಿಂಗೇಶ್ ಮಾತನಾಡಿ, ಹೆಚ್‌ಆರ್‌ಪಿ ಯೋಜನೆ ಜಾರಿಗೆ ಬಂದು ದಶಕಗಳೇ ಆದರೂ, ಈಗ ಮುಳುಗಡೆ ದಾಖಲಾತಿ, ಜಮೀನಿಗೆ ಅರ್ಜಿ ಸಲ್ಲಿಸುತ್ತಿದ್ದಾರೆ. ಈ ಬಗ್ಗೆ ಸೂಕ್ಷ್ಮವಾಗಿ ಪರಿಶೀಲಿಸಿ ಅರ್ಹರಿಗೆ ಹಾಗೂ ನಿಜವಾಗಿಯೂ ತೊಂದರೆಯಲ್ಲಿರುವವರಿಗೆ ಭೂಮಿ ನೀಡಬೇಕು ಎಂದರು.

ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಮಾ ನಾಡಿ, ದಾಖಲಾತಿಗಳು ದುರ್ಬಳಕೆಯಾಗುತ್ತಿರುವುದು ತಮ್ಮ ಗಮನಕ್ಕೆ ಬಂದಿದೆ. ಇದಕ್ಕೆ ಅರ್ಜಿ ಸಲ್ಲಿಸಲು 3 ತಿಂಗಳ ಅಂತಿಮ ಕಾಲಾವಕಾಶ ನೀಡಿದಾಗ 3,000 ಅರ್ಜಿಗಳು ಬಂದಿದೆ. ಎಲ್ಲವನ್ನು ಸೂಕ್ತವಾಗಿ ಪರಿಶೀಲಿಸಿ ತನಿಖೆಗೊಳಪಡಿಸಿದ ನಂತರವೇ ಮಂಜೂರಾತಿಗೆ ಕ್ರಮವಹಿಸಲಾಗುವುದು ಎಂದರು.

ಸಮಾಜ ಕಲ್ಯಾಣ ಇಲಾಖೆಯಲ್ಲಿನ ವಸತಿ ನಿಲಯಗಳಲ್ಲಿ ಸುರಕ್ಷತೆ, ಮೂಲ ಸೌಕರ್ಯವೃದ್ಧಿ ಬಗ್ಗೆ ಶಾಸಕರು ಹಾಗೂ ಸಮಿತಿ ಸದಸ್ಯರಾದ ನಾರಾಯಣ್ ದಾಸ್, ಮರಿ ಜೋಸೆಫ್, ಸೋಮಶೇಖರ್, ವಿಜಯ್ ಕುಮಾರ್, ಮಹಂತಪ್ಪ, ಮಹ ಲಿಂಗಪ್ಪ, ಮಂಜೇಗೌಡ ಮತ್ತಿತರರು ಪ್ರಸ್ತಾಪಿಸಿ ನಿಲಯ ಪಾಲಕರಿಗೆ ಹೆಚ್ಚಿನ ಜವಾಬ್ದಾರಿ ವಹಿಸಬೇಕು ಎಂದು ಒತ್ತಾಯಿಸಿದರು.

ಪ್ರವಾಸೋದ್ಯಮ ಇಲಾಖೆಯಲ್ಲಿ ಟ್ಯಾಕ್ಸಿ ಖರೀದಿಸಲು ಸರ್ಕಾರವು ಎಸ್‍ಸಿಪಿ ಹಾಗೂ ಟಿಎಸ್‍ಪಿ ಯೋಜನೆಯಡಿ ಎಸ್‍ಸಿ ಹಾಗೂ ಎಸ್‍ಟಿ ನಿರುದ್ಯೋಗಿ ಯುವಕರಿಗೆ ಸಹಾಯಧನ ನೀಡುತ್ತಿದ್ದು, ಎಲ್ಲೋ ಬೋರ್ಡ್ ಆಗಿ ನೋಂದಣಿಯಾಗುವ ವಾಹನಗಳಿಗೆ ರೂ. 10,000 ವರೆಗೆ ತೆರಿಗೆಯಲ್ಲಿ ವಿನಾಯಿತಿ ನೀಡಿ ಆಯಾ ಶೋರೂಂನವರು ತೆರಿಗೆ ಹಣವನ್ನು ಹಿಂಪಡೆಯುತ್ತಿದ್ದು, ಆ ಹಣವನ್ನು ಅರ್ಹ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮಾ ಮಾಡ ಬೇಕು ಎಂದು ಮನವಿ ಮಾಡಿದರು.

ಕಾವೇರಿ ನೀರಾವರಿ ನಿಗಮದಿಂದ ಎಸ್‍ಸಿಪಿ ಹಾಗೂ ಟಿಎಸ್‍ಪಿ ಯೋಜನೆ ಯಡಿ ಪರಿಶಿಷ್ಟ ಜಾತಿ ಹಾಗೂ ಪಂಗಡಕ್ಕೆ ಸೇರಿದ ರೈತರುಗಳ ಜಮೀನಿನಲ್ಲಿ ಕೊಳವೆ ಬಾವಿ ಕೊರೆಯಲಾಗುತ್ತಿದ್ದು, 2017ನೇ ಸಾಲಿನಲ್ಲಿ ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದ್ದು ಇದುವರೆವಿಗೂ ಕೊಳವೆ ಬಾವಿಗಳನ್ನು ಕೊರೆದಿರುವುದಿಲ್ಲ ಎಂದು ಸಭೆ ಗಮನಕ್ಕೆ ತಂದರು.
ಸಭೆಯಲ್ಲಿ ಬಾಬುಜಗಜೀವನ್‍ರಾಮ್ ಭವನ ಹಾಗೂ ವಾಲ್ಮೀಕಿ ಭವನ ನಿರ್ಮಾಣಕ್ಕೆ ನಿವೇಶನಗಳನ್ನು ಒದಗಿಸುವ ಕುರಿತು ಮನವಿ ಮಾಡಲಾಯಿತು.

ಸಭೆಯಲ್ಲಿ ಉಪ ವಿಭಾಗಾಧಿಕಾರಿ ಲಕ್ಷ್ಮಿ ಕಾಂತ್ ರೆಡ್ಡಿ, ಡಾ.ಹೆಚ್.ಎಲ್.ನಾಗರಾಜು, ಪ್ರೊಬೆಷನರಿ ಐಎಎಸ್ ಅಧಿಕಾರಿ ಪ್ರಿಯಾಂಕ, ಪೌರಾಯುಕ್ತ ಪರಮೇಶ್, ಸಮಾಜ ಕಲ್ಯಾಣಾಧಿಕಾರಿ ಶ್ರೀಧರ್ ಹಾಜರಿದ್ದರು.

ತಳ ಸಮುದಾಯದ ಜನರ ಮಕ್ಕಳ ವಿದ್ಯಾಭ್ಯಾಸಕ್ಕೆ ಸೂಕ್ತ ಸೌಕರ್ಯ ಕಲ್ಪಿಸುವುದು ತಮ್ಮ ಮೊದಲ ಆದ್ಯತೆ ಹಾಗೂ ಮೊದಲು ಹಾಸ್ಟೆಲ್‍ಗಳಿಗೆ ನಿವೇಶನಗಳನ್ನು ಒದಗಿಸಿ ಹೆಚ್ಚಿನ ಕಲಿಕೆಗೆ ಹಾಗೂ ವಸತಿ ನಿಲಯಗಳಲ್ಲಿ ಸ್ವಚ್ಚತೆ, ಸುರಕ್ಷತೆಗೆ ಗಮನ ಹರಿಸಲಾಗುವುದು. ಜೊತೆಗೆ ಸಮುದಾಯ ಭವನಗಳ ನಿರ್ಮಾಣಕ್ಕೆ ನಿವೇಶನ ಒದಗಿಸಲು ಕ್ರಮವಹಿಸಲಾಗುವುದು. – ರೋಹಿಣಿ ಸಿಂಧೂರಿ, ಜಿಲ್ಲಾಧಿಕಾರಿ

Translate »