ಕನ್ನಡಕ್ಕೆ ಶಾಸ್ತ್ರೀಯ ಭಾಷೆ ಸ್ಥಾನಮಾನ ಲಭಿಸುವಲ್ಲಿ  ಡಾ.ಎಂ.ಚಿದಾನಂದಮೂರ್ತಿಗಳ ಪಾತ್ರ ಹಿರಿದು ಸಚಿವ ಎಸ್.ಸುರೇಶ್‍ಕುಮಾರ್
ಮೈಸೂರು

ಕನ್ನಡಕ್ಕೆ ಶಾಸ್ತ್ರೀಯ ಭಾಷೆ ಸ್ಥಾನಮಾನ ಲಭಿಸುವಲ್ಲಿ  ಡಾ.ಎಂ.ಚಿದಾನಂದಮೂರ್ತಿಗಳ ಪಾತ್ರ ಹಿರಿದು ಸಚಿವ ಎಸ್.ಸುರೇಶ್‍ಕುಮಾರ್

January 12, 2020

ಮೈಸೂರು, ಜ.11(ಪಿಎಂ)- ಕನ್ನಡಕ್ಕೆ ಶಾಸ್ತ್ರೀಯ ಭಾಷೆ ಸ್ಥಾನಮಾನ ಲಭಿಸುವಲ್ಲಿ ಹಿರಿಯ ಸಾಹಿತಿ ಡಾ.ಎಂ. ಚಿದಾನಂದಮೂರ್ತಿ ಅವರು ಪ್ರಮುಖ ಪಾತ್ರ ವಹಿಸಿ ದ್ದರು. ಅವರ ನಿಧನ ನಾಡಿಗೆ ತುಂಬಲಾರದ ನಷ್ಟ ಎಂದು ಸಚಿವ ಎಸ್.ಸುರೇಶ್‍ಕುಮಾರ್ ಸಂತಾಪ ಸೂಚಿಸಿದರು.

ಮೈಸೂರಿನಲ್ಲಿ ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಎಂದಿಗೂ ತಮ್ಮ ನಂಬಿಕೆ ಜೊತೆಗೆ ರಾಜೀ ಮಾಡಿಕೊಳ್ಳದ ವ್ಯಕ್ತಿತ್ವ ಡಾ.ಚಿದಾನಂದಮೂರ್ತಿ ಅವರದು. ನಮ್ಮ ಭಾಷೆ, ನೆಲ, ಜಲ, ಗಡಿ ವಿಚಾರ ಬಂದಾಗ ರಕ್ಷಣೆಗೆ ಅಗ್ರಗಣ್ಯರಾಗಿ ನಿಲ್ಲುತ್ತಿದ್ದ ಧೀಮಂತರು. ನಮ್ಮ ಸಂಸ್ಕøತಿಯ ಪರಿಚಾರಕರವರು ಎಂದು ಸ್ಮರಿಸಿದರು.

ಯಾರಿಗೂ ಬೈಯ್ಯದೇ ತಮ್ಮ ಸಾತ್ವಿಕ ಆಕ್ರೋಶ ವ್ಯಕ್ತಪಡಿಸುತ್ತಿದ್ದ ಮೇರು ವ್ಯಕ್ತಿತ್ವ ಅವರದು. ಸಂಶೋಧನೆ ಮೂಲಕ ಮಹತ್ವದ ಮಾಹಿತಿ ಕಲೆ ಹಾಕಿ ನಾಡಿನ ಜನತೆಗೆ ನೀಡುತ್ತಿದ್ದರು. ಅವರ ನಿಧನ ನಾಡಿಗೆ ಭರಿಸಲಾಗದ ನಷ್ಟ. ದೇವರು ಅವರ ಆತ್ಮಕ್ಕೆ ಶಾಂತಿ ಕರುಣಿಸಲಿ ಎಂದು ಸಚಿವ ಸುರೇಶ್‍ಕುಮಾರ್ ನುಡಿದರು.

ಮೈಸೂರಿನ ವಿವಿಧ ಶಿಕ್ಷಣ ಸಂಸ್ಥೆಗಳಿಂದ  ಡಾ.ಚಿದಾನಂದಮೂರ್ತಿಯವರಿಗೆ ಶ್ರದ್ಧಾಂಜಲಿ

ಮೈಸೂರು,ಜ.11-ಹಿರಿಯ ಸಂಶೋಧಕ, ಸಾಹಿತಿ ಡಾ.ಎಂ.ಚಿದಾನಂದಮೂರ್ತಿ ಅವರಿಗೆ ಮೈಸೂರಿನ ವಿವಿಧ ಶಿಕ್ಷಣ ಕೇಂದ್ರಗಳ ವತಿಯಿಂದ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಮೈಸೂರು ವಿಶ್ವವಿದ್ಯಾನಿಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ನಡೆದ ಶ್ರದ್ಧಾಂಜಲಿ ಸಭೆಯಲ್ಲಿ ಲೇಖಕ ಡಾ.ಹಾ.ತಿ.ಕೃಷ್ಣೇಗೌಡ ಮಾತನಾಡಿ, ಡಾ.ಚಿದಾನಂದ ಮೂರ್ತಿ ಅವರು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗದೆ ಅಗಲಿದ್ದು, ಭಾಷೆಗಾದ ನಷ್ಟ ಹಾಗೂ ಅಪಮಾನ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಡಾ.ಭಾನುಮತಿ, ಡಾ.ಬಿ.ಕೆ.ರವೀಂದ್ರನಾಥ್, ಡಾ.ಎಸ್.ಡಿ.ಶಶಿಕಲಾ ಸೇರಿದಂತೆ ಅಧ್ಯಾಪಕರು, ವಿದ್ಯಾರ್ಥಿಗಳು ಹಾಗೂ ಸಂಶೋಧಕರು ಸಭೆಯಲ್ಲಿದ್ದರು.

ಮಹಾಜನ ಕಾಲೇಜು: ಮಹಾಜನ ಪ್ರಥಮ ದರ್ಜೆ ಕಾಲೇಜಿನಲ್ಲಿ ಡಾ.ಚಿದಾ ನಂದಮೂರ್ತಿ ಅವರಿಗೆ ಶ್ರದ್ಧಾಂಜಲಿಯನ್ನು ಸಲ್ಲಿಸಲಾಯಿತು. ಕನ್ನಡ ವಿಭಾಗದ ಪ್ರಾಧ್ಯಾಪಕ ಪ್ರಕಾಶ್ ಮಾತನಾಡಿ, ಚಿದಾನಂದಮೂರ್ತಿ ಅವರು ನಾಡು ಕಂಡ ಅಪ್ರತಿಮ ಸಂಶೋಧಕರು, ಸಾಹಿತಿಗಳು, ಇತಿಹಾಸಜ್ಞರು. ಕನ್ನಡಭಾಷೆ ಹಾಗೂ ಕರ್ನಾಟಕ ಇತಿಹಾಸ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಇವರು, ಕನ್ನಡ ಚಳುವಳಿಯ ನೇತಾರರು ಹಾಗೂ ಹೋರಾಟಗಾರರೂ ಹೌದು ಎಂದು ಸ್ಮರಿಸಿಕೊಂಡರು.

ಕುವೆಂಪು, ಪು.ತಿ.ನ., ರಾಘವಾಚಾರ್ ಇವರಂತಹ ಮಹಾಸಾಹಿತಿಗಳಿಂದ ಪ್ರಭಾವಿತರಾಗಿದ್ದ ಚಿದಾನಂದಮೂರ್ತಿ ಅವರು, ಪ್ರೊ.ಡಿ.ಎಲ್.ನರಸಿಂಹ ಚಾರ್ಯರ ಸೂಚನೆ ಮೇರೆಗೆ ಕನ್ನಡ ಶಾಸನಗಳ ಅಧ್ಯಯನ ಆರಂಭಿಸಿದರು. ಪ್ರೊ.ತಿ.ನಂ. ಶ್ರೀಕಂಠಯ್ಯ ನವರ ಮಾರ್ಗದರ್ಶನದಲ್ಲಿ ಪಿಹೆಚ್.ಡಿ ಪಡೆದು, ಮೈಸೂರು ಮತ್ತು ಬೆಂಗಳೂರು ವಿಶ್ವವಿದ್ಯಾನಿಲಯಗಳಲ್ಲಿ ಸ್ಮರಣೀಯ ಸೇವೆ ಸಲ್ಲಿಸಿದರು. ಕನ್ನಡ ಶಕ್ತಿ ಕೇಂದ್ರದ ನಿರ್ದೇಶಕರಾಗಿ ಕನ್ನಡತನ ಹಾಗೂ ಭಾಷಾವಿಜ್ಞಾನವನ್ನು ಪ್ರಚುರಪಡಿಸಿದರು. ಕನ್ನಡದ ಹೆಮ್ಮೆಯಾಗಿದ್ದ ಚಿದಾನಂದಮೂರ್ತಿ ಅವರ ಅಗಲಿಕೆ ನಾಡಿಗೆ ತುಂಬಲಾರದ ನಷ್ಟ ಎಂದು ನುಡಿದರು. ಕಾಲೇಜು ಪ್ರಾಂಶುಪಾಲರಾದ ಡಾ.ಎಸ್.ವೆಂಕಟರಾಮು, ಕನ್ನಡ ವಿಭಾಗದ ಮುಖ್ಯಸ್ಥ ಡಾ.ಎಚ್.ಆರ್.ತಿಮ್ಮೇಗೌಡ, ಉಪನ್ಯಾಸಕರು, ವಿದ್ಯಾರ್ಥಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.

ಸಂತಾಪ: ಹಿರಿಯ ಸಾಹಿತಿ ಡಾ.ಚಿದಾನಂದ ಮೂರ್ತಿ ಅವರ ನಿಧನಕ್ಕೆ ಕನ್ನಡ ಹೋರಾಟಗಾರ ತಾಯೂರು ವಿಠಲಮೂರ್ತಿ ಸಂತಾಪ ಸೂಚಿಸಿದ್ದಾರೆ.

Translate »