ಪತ್ರಿಕೋದ್ಯಮ ವಿಭಾಗದ ಡಾ.ಮಮತಾ ಪ್ರೊಬೆಷನರಿ ಘೋಷಣಾ ಆದೇಶ ಪತ್ರಕ್ಕೆ ಅರ್ಜಿಯನ್ನೇ ಸಲ್ಲಿಸಿಲ್ಲ
ಮೈಸೂರು

ಪತ್ರಿಕೋದ್ಯಮ ವಿಭಾಗದ ಡಾ.ಮಮತಾ ಪ್ರೊಬೆಷನರಿ ಘೋಷಣಾ ಆದೇಶ ಪತ್ರಕ್ಕೆ ಅರ್ಜಿಯನ್ನೇ ಸಲ್ಲಿಸಿಲ್ಲ

February 6, 2019

ಮೈಸೂರು: ವಿನಾ ಕಾರಣ ಪ್ರೊಬೆಷನರಿ ಘೋಷಣಾ ಆದೇಶ ಪತ್ರ ನೀಡಿಲ್ಲ ಎಂದು ಸಹಾಯಕ ಪ್ರಾಧ್ಯಾ ಪಕಿಯೊಬ್ಬರು ಆರೋಪಿಸಿ ತಮ್ಮ ವಿರುದ್ಧ ಪ್ರತಿಭಟನೆ ನಡೆಸಿದ್ದ ಬಗ್ಗೆ ಪ್ರತಿಕ್ರಿಯಿಸಿರುವ ಮೈಸೂರು ವಿವಿ ಕುಲಸಚಿವ ಪ್ರೊ.ಆರ್. ರಾಜಣ್ಣ, ಇದು ನನ್ನ ವಿರುದ್ಧ ನಡೆಯುತ್ತಿ ರುವ ಷಡ್ಯಂತ್ರ ಎಂದು ಹೇಳಿದ್ದಾರೆ.

ಮೈಸೂರು ವಿವಿ ಪತ್ರಿಕೋದ್ಯಮ ಮತ್ತು ಸಂವಹನ ವಿಭಾಗದ ಸಹಾಯಕ ಪ್ರಾಧ್ಯಾ ಪಕಿ ಡಾ.ಎನ್.ಮಮತಾ ತಮಗೆ ಪ್ರೊ. ಆರ್.ರಾಜಣ್ಣ ಪ್ರೊಬೆಷನರಿ ಘೋಷಣಾ ಆದೇಶ ಪತ್ರ ನೀಡುತ್ತಿಲ್ಲ ಎಂದು ಆರೋ ಪಿಸಿ ಸೋಮವಾರ ಕುಲಪತಿಗಳ ಕೊಠಡಿ ಬಳಿ ಪ್ರತಿಭಟನೆ ನಡೆಸಿದ್ದರು. ಈ ಸಂಬಂಧ ಮೈಸೂರು ಮಾನಸ ಗಂಗೋತ್ರಿಯ ಬಿಎಂಶ್ರೀ ಸಭಾಂಗಣದ ಬಳಿ ಮಂಗಳ ವಾರ ಮಾಧ್ಯಮದವರೊಂದಿಗೆ ಮಾತನಾಡಿದ ಪ್ರೊ.ರಾಜಣ್ಣ, ಕಾನೂನಿನ ಪ್ರಕಾರ ಪ್ರೊಬೆಷನರಿ ಘೋಷಣಾ ಪತ್ರ ಕೋರಿ ಅವರು ಅರ್ಜಿ ಸಲ್ಲಿಸಬೇಕು. ಆದರೆ ಅವರು ಯಾವುದೇ ಅರ್ಜಿ ಸಲ್ಲಿಸಿಲ್ಲ ಎಂದು ದೂರಿದರು. ಈ ಹಿಂದೆ ಪ್ರಾಧ್ಯಾಪಕ ಉಮೇಶ್ ಅವರು ಹಂಗಾಮಿ ಕುಲಪತಿಯಾಗಿದ್ದ ವೇಳೆ ಪ್ರೊಬೆಷನರಿ ಘೋಷಣೆಗೆ ಸಂಬಂಧಿಸಿದಂತೆ ಕಡತ ಅಂಗೀಕರಿಸಲಾಗಿದೆ. ಬಳಿಕ ಸಂಬಂಧಿಸಿದ ಪ್ರಾಧ್ಯಾಪ ಕರು ಅರ್ಜಿ ಸಲ್ಲಿಸಿದ ಹಿನ್ನೆಲೆಯಲ್ಲಿ ಅವರೆಲ್ಲರಿಗೂ ಪ್ರೊಬೆಷನರಿ ಘೋಷಣೆಯ ಆದೇಶ ಪತ್ರ ನೀಡಲಾಗಿದೆ. ಆದರೆ ಇವರು ಅರ್ಜಿ ಯನ್ನೇ ನೀಡಿಲ್ಲ. ಜೊತೆಗೆ ಪ್ರೊಬೆಷನರಿ ಘೋಷಣೆ ಆಗುತ್ತಿದ್ದಂತೆ ಕರ್ತವ್ಯಕ್ಕೂ ಸರಿಯಾಗಿ ಹಾಜರಾಗುತ್ತಿಲ್ಲ ಎಂದರು.

ಪತ್ರಿಕೋದ್ಯಮ ವಿಭಾಗಕ್ಕೆ ಮೂರು ಬಾರಿ ಭೇಟಿ ನೀಡಿದ್ದಾಗಲೂ ಅವರು ವಿಭಾಗ ದಲ್ಲಿ ಇರಲಿಲ್ಲ. ಈ ಸಂಬಂಧ ಅವರಿಗೆ ಕಾರಣ ಕೇಳಿ ನೋಟೀಸ್ ಜಾರಿ ಮಾಡ ಲಾಗಿತ್ತು. ಈ ನೋಟೀಸ್‍ಗೂ ಅವರು ಸಮರ್ಪಕ ಉತ್ತರ ನೀಡಿಲ್ಲ. ಬದಲಿಗೆ ಗ್ರಂಥಾಲಯದಲ್ಲಿದ್ದೆ ಎಂದು ತಿಳಿಸಿದ್ದಾರೆ. ಆದರೆ ಅದು ಸುಳ್ಳು ಎಂಬುದು ಸಾಬೀತಾಗಿದೆ. ಬೆಂಗಳೂರಿ ನಲ್ಲಿ ನೆಲೆಸಿರುವ ಮಮತಾ, ವಾರದಲ್ಲಿ ಒಮ್ಮೆ ಮಾತ್ರ ಕರ್ತವ್ಯಕ್ಕೆ ಹಾಜರಾಗಿ ಒಮ್ಮೆಲೇ ಒಂದು ವಾರದ ಸಹಿಯನ್ನು ಮಾಡುತ್ತಾರೆ. ಇದಕ್ಕೆ ನನ್ನ ಬಳಿ ಸಾಕ್ಷ್ಯಗಳಿವೆ ಎಂದು ಪ್ರೊ.ಆರ್.ರಾಜಣ್ಣ ಸ್ಪಷ್ಟಪಡಿಸಿದರು.

ನನ್ನ ವಿರುದ್ಧ ಮಮತಾ ಅವರು ಏಕವಚನ ಪದ ಬಳಕೆ ಮಾಡಿ ಮಾತನಾಡಿದ್ದಾರೆ. ಮಮತಾರ ಪತಿ ಸಂಗೀತ ವಿವಿ ಹಂಗಾಮಿ ಕುಲಪತಿ ಪ್ರೊ.ನಾಗೇಶ್‍ಬೆಟ್ಟಕೋಟೆ ಅವರು ಈ ಹಿಂದೆ ನನ್ನ ಬಳಿ ಬಂದಿದ್ದರು. ಈ ವೇಳೆ ತಮ್ಮ ಪತ್ನಿಗೆ ಪ್ರೊಬೆಷನರಿ ಘೋಷಣಾ ಆದೇಶ ಪತ್ರ ನೀಡುವಂತೆ ಕೇಳಿದ್ದರು. ಆದರೆ ನಾನು ಕಾನೂನಿನಂತೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿ, ನಿಮ್ಮ ಪತ್ನಿ ಅರ್ಜಿ ಸಲ್ಲಿಸಬೇಕಿರುತ್ತದೆಯೆಂದು ಸಲಹೆ ನೀಡಿ ಕಳುಹಿಸಿದ್ದೆ ಎಂದು ಪ್ರೊ.ರಾಜಣ್ಣ ತಿಳಿಸಿದರು.

Translate »