ನ.2, `ಡಾ.ಮತ್ತೂರು ಕೃಷ್ಣಮೂರ್ತಿ ಸಮಾಜ ಸೇವಾ, `ಶ್ರೀ ವನಮಾಲಿ ಸಂಸ್ಕøತಿ ಸೇವಾ’ ಪ್ರಶಸ್ತಿ ಪ್ರದಾನ 
ಮೈಸೂರು

ನ.2, `ಡಾ.ಮತ್ತೂರು ಕೃಷ್ಣಮೂರ್ತಿ ಸಮಾಜ ಸೇವಾ, `ಶ್ರೀ ವನಮಾಲಿ ಸಂಸ್ಕøತಿ ಸೇವಾ’ ಪ್ರಶಸ್ತಿ ಪ್ರದಾನ 

October 29, 2019

ಮೈಸೂರು, ಅ.28-ಮೈಸೂರಿನ ಶ್ರೀ ವನಮಾಲಿ ಚಾರಿಟಬಲ್ ಟ್ರಸ್ಟ್ ತನ್ನ ಪ್ರತಿಷ್ಠಾನದ 2019ನೇ ಸಾಲಿನ `ಶ್ರೀ ವನಮಾಲಿ ಸಂಸ್ಕøತಿ ಸೇವಾ ಪ್ರಶಸ್ತಿ’ ಹಾಗೂ ಪದ್ಮಶ್ರೀ ಡಾ. ಮತ್ತೂರು ಕೃಷ್ಣಮೂರ್ತಿ ಸಮಾಜ ಸೇವಾ ಪ್ರಶಸ್ತಿ ಪ್ರದಾನ ಸಮಾರಂಭವನ್ನು ನವೆಂಬರ್ 2ರಂದು ಸಂಜೆ 5 ಗಂಟೆಗೆ ಕುವೆಂಪು ನಗರದ ಆದಿಚುಂಚನಗಿರಿ ರಸ್ತೆಯಲ್ಲಿರುವ ಗಾನ ಭಾರತಿ ವೀಣೆ ಶೇಷಣ್ಣ ಭವನದಲ್ಲಿ ಏರ್ಪಡಿಸಲಾಗಿದೆ.

ಶ್ರೀ ವನಮಾಲಿ ಸಂಸ್ಕøತಿ ಸೇವಾ ಪ್ರಶಸ್ತಿಯನ್ನು ಖ್ಯಾತ ಆಂಗ್ಲ ಭಾಷಾ ತಜ್ಞ, ವಾಕ್ಯಾರ್ಥ ವಿಶೇಷಜ್ಞ ಡಾ.ಟಿ.ಆರ್.ಎಸ್. ಶರ್ಮಾ ಅವರಿಗೆ ಮತ್ತು ಪದ್ಮಶ್ರೀ ಡಾ.ಮತ್ತೂರು ಕೃಷ್ಣಮೂರ್ತಿ ಸಮಾಜ ಸೇವಾ ಪ್ರಶಸ್ತಿ ಯನ್ನು ಜನಸೇವಾ ಟ್ರಸ್ಟ್-ಚಿಗುರು ಆಶ್ರಮದ ಸ್ಥಾಪಕಿ ಶ್ರೀಮತಿ ಎಂ.ಎಸ್.ಸುಷ್ಮಾ ಅವರಿಗೆ ನೀಡಿ ಗೌರವಿಸ ಲಾಗುವುದು. ಪ್ರಶಸ್ತಿಗಳು ತಲಾ 25,000 ರೂ. ನಗದು, ಶ್ರೀವನಮಾಲಿ ಕಂಚಿನ ಪ್ರತಿಮೆ, ಬಿನ್ನವತ್ತಳೆ ಹಾಗೂ ಇತರ ಸನ್ಮಾನ ಪರಿಕರಗಳನ್ನೊಳಗೊಂಡಿದೆ.

ಸಮಾರಂಭದ ಅಧ್ಯಕ್ಷತೆಯನ್ನು ಹಿರಿಯ ವಿದ್ವಾಂಸ ಡಾ.ಟಿ.ವಿ.ವೆಂಕಟಾಚಲಶಾಸ್ತ್ರಿ ವಹಿಸಲಿದ್ದಾರೆ. ಪ್ರಶಸ್ತಿ ಪುರಸ್ಕøತರನ್ನು ಕುರಿತು ಡಾ.ಸಿ.ನಾಗಣ್ಣ ಮತ್ತು ಎಸ್.ಜಿ. ಸೀತಾರಾಮ್ ಅಭಿನಂದನಾ ಭಾಷಣ ಮಾಡಲಿದ್ದಾರೆ.

ಪ್ರಶಸ್ತಿ ಪುರಸ್ಕøತರ ಪರಿಚಯ

ಡಾ.ಟಿ.ಆರ್.ಎಸ್.ಶರ್ಮಾ: ಮೈಸೂರು ಮೂಲದವರೇ ಆದ 87 ವರ್ಷ ವಯೋ ಮಾನದ ಹಿರಿಯ ವಿದ್ವಾಂಸ ಟಿ.ಆರ್.ಎಸ್.ಶರ್ಮಾ ಅವರು ಇಂಗ್ಲಿಷ್ ಸಾಹಿತ್ಯದಲ್ಲಿ ಮೈಸೂರಿನಲ್ಲಿ ಎಂ.ಎ. ಪದವಿ ಪಡೆದು, ಅಮೆರಿಕಾ ಮತ್ತು ಕೆನಡಾ ದೇಶದಲ್ಲಿ ಎಂ.ಎ. ಹಾಗೂ ಪಿಎಚ್.ಡಿ ಪದವಿ ಪಡೆದಿದ್ದಾರೆ. ಭಾರತದ ಹಲವಾರು ಪ್ರತಿಷ್ಠಿತ ವಿಶ್ವವಿದ್ಯಾಲಯ ಗಳಲ್ಲಿ ಬೋಧಕರಾಗಿ ಸೇವೆ ಸಲ್ಲಿಸಿದ್ದಲ್ಲದೆ, ವಿದೇಶಗಳಲ್ಲಿಯೂ ಬೋಧಕ ವೃತ್ತಿಯನ್ನು ಮಾಡಿದ್ದಾರೆ. ದೇಶ-ವಿದೇಶಗಳಲ್ಲಿ ಹರಡಿರುವ ಇವರ ಶಿಷ್ಯವರ್ಗದ ಅಪಾರ ಪ್ರೀತಿ-ಗೌರವಗಳಿಗೆ ಪಾತ್ರರಾಗಿದ್ದಾರೆ. ಮೈಸೂರಿನ ಪ್ರೊ.ಸಿಡಿಎನ್ ಶಿಷ್ಯರಾದ ಇವರು ಎ.ಕೆ.ರಾಮಾನುಜನ್, ಯು.ಆರ್.ಅನಂತಮೂರ್ತಿ ಅವರ ಸಹಪಾಠಿಗಳೂ ಆಗಿದ್ದರು. ಪ್ರೊ.ಸಿಡಿಎನ್’ರ `ಧ್ವನ್ಯಾಲೋಕ’ ವೇದಿಕೆಯು ಸಿಡಿಎನ್ ಮೆಮೋರಿಯಲ್ ಅವಾರ್ಡ್ ನೀಡಿ ಸನ್ಮಾನಿಸಿದೆ.

ಶ್ರೀಮತಿ ಎಂ.ಎಸ್.ಸುಷ್ಮಾ: ಸುಷ್ಮಾ ಅವರು ಮೂಲತಃ ಕೃಷಿಕ ಕುಟುಂಬದಿಂದ ಬಂದವರು. ಸುಷ್ಮಾರಿಗೆ ಸೇವೆಯ ಹಾಗೂ ಪರೋಪಕಾರಿ ಮೌಲ್ಯಗಳು ಅವರ ಅಜ್ಜಿ ಶ್ರೀಮತಿ ಸಾವಿತ್ರಮ್ಮ ಹಾಗೂ ಶಿಕ್ಷಕರಿಂದ ಬಂದ ಬಳುವಳಿ. ಹೆಚ್ಚಿನ ವಿದ್ಯಾಭ್ಯಾಸಕ್ಕೆ ಮೈಸೂರಿಗೆ ಬಂದ ಸುಷ್ಮಾ ಕಾಲೇಜಿನಲ್ಲಿ ಎನ್‍ಎಸ್‍ಎಸ್‍ಗೆ ಸೇರಿ ಮೈಸೂರು ವಿಶ್ವವಿದ್ಯಾ ನಿಲಯದ `ಅತ್ಯುತ್ತಮ ಸ್ವಯಂ ಸೇವಕಿ’ ವಾರ್ಷಿಕ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಮೈಸೂರಿನ ರಂಗಾಯಣದ ಜನಮನ ತಂಡ ಸೇರಿ ನಟನೆ, ನಿರ್ದೇಶನ, ನಿರೂಪಣೆ ಹೀಗೆ ಬಹುವಿಧ ಸಾಂಸ್ಕøತಿಕ ಕಾರ್ಯಗಳಲ್ಲಿ ಕ್ರಿಯಾಶೀಲರಾಗಿದ್ದಾರೆ. 2014ರಲ್ಲಿ ಮೈಸೂರನ್ನು ಸೇವಾ ಕ್ಷೇತ್ರವನ್ನಾಗಿಸಿಕೊಂಡು ಜನಸೇವಾ ಟ್ರಸ್ಟ್ ಹೆಸರಿನಡಿಯಲ್ಲಿ ಚಿಗುರು ಆಶ್ರಮ ಸ್ಥಾಪಿಸಿ, ನಿರ್ಗತಿಕರಾದ, ಮಾನಸಿಕ-ದೈಹಿಕ ದೌರ್ಬಲ್ಯತೆಗಳಿಂದ ಬೀದಿಗೆ ಬಿದ್ದ ಸ್ತ್ರೀಯರನ್ನು ಕಾಪಾಡುತ್ತಿದ್ದಾರೆ. ಸುಷ್ಮಾರ ಬಳಿ ಸುಮಾರು 27 ಮಂದಿ ಸ್ತ್ರೀಯರು ನೆಲೆ ಕಂಡುಕೊಂಡಿದ್ದಾರೆ.

 

Translate »