ಮೈಸೂರು, ಅ.28(ಪಿಎಂ)- ಮಹಿಷ ಮಂಡಲ ಇಂಟರ್‍ನ್ಯಾಷನಲ್ ಬುದ್ಧಿಸ್ಟ್ ಕಲ್ಚರಲ್ ಟ್ರಸ್ಟ್, ದಲಿತ ವೆಲ್‍ಫೇರ್ ಟ್ರಸ್ಟ್ ವತಿಯಿಂದ ಮೈಸೂರಿನ ಚಾಮುಂಡಿಬೆಟ್ಟದ ಮಹಿಷನ ಪ್ರತಿಮೆಗೆ ಭಾನುವಾರ ಪುಷ್ಪ ನಮನ ಸಲ್ಲಿಸಲಾಯಿತು.
ಆ ಮೂಲಕ ಪ್ರತಿ ತಿಂಗಳ ಅಮಾವಾಸ್ಯೆಯ ಹಿಂದಿನ ದಿನ ಮಹಿಷನ ಪ್ರತಿಮೆಗೆ ಪುಷ್ಪಾರ್ಚನೆ ಸಲ್ಲಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಇದೇ ವೇಳೆ ಮಾತನಾಡಿದ ಪ್ರಗತಿಪರ ಚಿಂತಕ ಪ್ರೊ.ಬಿ.ಪಿ. ಮಹೇಶ್ ಚಂದ್ರಗುರು, ಮಹಿಷ ಮಂಡಲದ ಇತಿ ಹಾಸದಲ್ಲಿ ಮಾತ್ರವಲ್ಲದೆ, ಬೌದ್ಧ ಧರ್ಮದ ಇತಿಹಾಸ ಹಾಗೂ ಇಡೀ ಭರತಖಂಡದ ಇತಿಹಾಸದಲ್ಲಿ ಮಹಿಷ ಅಜರಾಮರ ಎಂದು ಸ್ಮರಿಸಿದರು.
ಮಹಿಷನ ಬಗ್ಗೆ ತಪ್ಪಾಗಿ ಅರ್ಥೈಸಲಾಗಿದ್ದು, ಮಹಿಷ ಒಬ್ಬ ರಾಜ, ಆತ ರಾಕ್ಷಸನಲ್ಲ. ಅವನು ಯಾರ ಮನೆಯನ್ನು ಹಾಳು ಮಾಡಲಿಲ್ಲ. ಯಾರ ಬದುಕುವ ಹಕ್ಕನ್ನು ಕಿತ್ತುಕೊಳ್ಳಲಿಲ್ಲ. ಆತ ಬೌದ್ಧ ದೊರೆಯಾಗಿ, ಸಮಾನತೆ, ಭ್ರಾತೃತ್ವ ಹಾಗೂ ಸಾಮರಸ್ಯ ಎತ್ತಿಹಿಡಿದು ಮಹಿಷ ಮಂಡಲ ಕಟ್ಟುತ್ತೇನೆ ಎಂದು ತಿಳಿಸಿದರು.
ಇದೇ ವೇಳೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಪ್ರಗತಿಪರ ಚಿಂತಕ ಪ್ರೊ.ಕೆ.ಎಸ್.ಭಗವಾನ್, ಸಾಮಾನ್ಯವಾಗಿ ಪ್ರಚಾರದಲ್ಲಿ ಇರುವಂತೆ ಮಹಿಷ ರಾಕ್ಷಸನಲ್ಲ. ಸುರೆ ಕುಡಿಯುತ್ತಿದ್ದವರನ್ನು ದೇವರಾಗಿ ಮಾಡಿ, ಮಹಿಷನಂತಹ ಪ್ರಜಾ ರಕ್ಷಕನನ್ನು ರಾಕ್ಷಸ ರನ್ನಾಗಿ ಬಿಂಬಿಸಲಾಗಿದೆ. ಕ್ರಿ.ಪೂ. 3ನೇ ಶತಮಾನ ದಲ್ಲಿ ಅಶೋಕ ಬೌದ್ಧ ಧರ್ಮ ಪ್ರಚಾರಕ್ಕಾಗಿ ಮಹಾ ದೇವನನ್ನು ಮೈಸೂರಿಗೆ ಕಳುಹಿಸುತ್ತಾನೆ. ಆಗ ಇಲ್ಲಿ ಮಹಿಷ ರಾಜ್ಯಭಾರ ಮಾಡುತ್ತಿರುತ್ತಾನೆ. ಮಹಿಷ ಕೆಟ್ಟವನೇ ಆಗಿದ್ದರೆ ಈ ಊರಿಗೆ ಅವನ ಹೆಸರಿಡಲು ಸಾಧ್ಯವಿತ್ತೇ? ಎಂದು ಪ್ರಶ್ನಿಸಿದರು.
ಜನಪರ ದೊರೆಯಾದ ಮಹಿಷನ ಬಗ್ಗೆ ಚಾತುರ್ವರ್ಣ ಪರಿಪಾಲಕರು ಕೆಟ್ಟದಾಗಿ ಬಿಂಬಿಸಿದ್ದಾರೆ. ಇದನ್ನು ನಮ್ಮ ಜನ ತಿರಸ್ಕರಿಸಬೇಕು. ಮಹಿಷ ದಸರಾಗೆ ಅಡ್ಡಿ ಪಡಿಸಿದರು. ಇದರಿಂದ ಮೈಸೂರಿಗೆ ಸೀಮಿತವಾಗಿದ್ದ ಮಹಿಷ ದಸರಾ ಇಡೀ ದೇಶಕ್ಕೆ ಹರಡುವಂತಾಯಿತು ಎಂದು ಹರ್ಷ ವ್ಯಕ್ತಪಡಿಸಿದ ಅವರು, ಚಾಮುಂಡೇ ಶ್ವರಿಗೆ ಅಪಮಾನ ಮಾಡುವ ಉದ್ದೇಶದಿಂದ ಮಹಿಷ ದಸರಾ ಆಚರಣೆ ಮಾಡಲಾಗುತ್ತಿದೆ ಎಂದು ಆರೋ ಪಿಸಲಾಗಿದೆ ಎಂಬ ಮಾಧ್ಯಮದವರ ಪ್ರಶ್ನೆಗೆ, ಚಾಮುಂಡೇ ಶ್ವರಿಗೆ ಅಪಮಾನ ಮಾಡಿ ನಮಗೆ ಬರುವ ಲಾಭ ವಾದರೂ ಏನು? ಎಂದು ಪ್ರಶ್ನಿಸಿದರು.
ದಲಿತ ವೆಲ್‍ಫೇರ್ ಟ್ರಸ್ಟ್ ಅಧ್ಯಕ್ಷ ಶಾಂತರಾಜು ಮಾತನಾಡಿ, ಈ ಬಾರಿ ಮಹಿಷ ದಸರಾಗೆ ಅಡ್ಡಿಪಡಿ ಸಿದ್ದು ಒಳ್ಳೆಯದೇ ಆಗಿದ್ದು, ಇದರಿಂದ ಇಡೀ ರಾಜ್ಯ ಮಾತ್ರವಲ್ಲದೆ, ದೇಶದ ವಿವಿಧ ಭಾಗಗಳಲ್ಲೂ ಮಹಿಷ ದಸರಾ ಆಚರಣೆ ಮಾಡಲು ನಾಂದಿ ಆಯಿತು. ಇನ್ನು ಮುಂದೆ ಪ್ರತಿ ತಿಂಗಳ ಅಮಾವಾಸ್ಯೆ ಹಿಂದಿನ ದಿನ ಮಹಿಷ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಲಾಗುವುದು. ಮುಂದಿನ ಬಾರಿ ಮಹಿಷ ದಸರಾಗೆ ಅಡ್ಡಿಪಡಿಸಲು ಅವಕಾಶ ನೀಡದೇ ಅದ್ಧೂರಿಯಾಗಿ ಆಚರಿಸಲಾಗು ವುದು ಎಂದು ತಿಳಿಸಿದರು. ಲೇಖಕ ಸಿದ್ದಸ್ವಾಮಿ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.
ಸ್ವತಃ ಚಾಮುಂಡೇಶ್ವರಿಯೇ ಬೌದ್ಧ ಬಿಕ್ಕುಣಿ; ಪ್ರೊ. ಭಗವಾನ್
ಮೈಸೂರು, ಅ.28(ಪಿಎಂ)- ಸ್ವತಃ ಚಾಮುಂ ಡೇಶ್ವರಿಯೇ ಬೌದ್ಧ ಬಿಕ್ಕುಣಿಯಾಗಿದ್ದಳು. ಆದರೆ ಆಕೆಯನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ದೇವಿ ಯಾಗಿ ಬಿಂಬಿಸಲಾಗಿದೆ ಎಂದು ಪ್ರಗತಿಪರ ಚಿಂತಕ ಪ್ರೊ. ಕೆ.ಎಸ್.ಭಗವಾನ್ ತಿಳಿಸಿದರು.
ಚಾಮುಂಡಿಬೆಟ್ಟದ ಮಹಿಷನ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸುವ ಕಾರ್ಯಕ್ರಮದಲ್ಲಿ ಮಾಧ್ಯಮ ದವರೊಂದಿಗೆ ಮಾತನಾಡಿದ ಅವರು, ಚಾಮುಂಡಿ ಬೌದ್ಧ ಬಿಕ್ಕುಣಿಯಾಗಿದ್ದಳು ಎಂಬ ಬಗ್ಗೆ ವಿದ್ವಾಂಸ ಭೈರಪ್ಪ ಎಂಬುವವರು ಐತಿಹಾಸಿಕ ದಾಖಲೆ ಗಳೊಂದಿಗೆ ವಿವರ ನೀಡಿದ್ದಾರೆ. ಮಹಿಷನ ನೈಜ ಇತಿಹಾಸ ತಿಳಿಯಬೇಕಿದ್ದರೆ, ಬೌದ್ಧ ಧರ್ಮದ `ದೀಪವಂಶ’ ಗ್ರಂಥ ಓದಿ ಎಂದು ಹೇಳಿದರು.
ಸಾವಿರಾರು ವರ್ಷಗಳಿಂದ ಪ್ರಚಾರ ಮಾಡಿದ ಸುಳ್ಳು ಇನ್ನು ಮುಂದೆ ನಡೆಯುವುದಿಲ್ಲ. ದೇಶದ ಪ್ರಾಚೀನ ಇತಿಹಾಸವನ್ನು ತಿರುಚಿ ದಂತ ಕಥೆ ಮಾಡ ಲಾಗಿದೆ. ಈಗ ಶಾಲಾ-ಕಾಲೇಜುಗಳಲ್ಲಿ ಓದುತ್ತಿರುವ ಬಹುತೇಕ ಇತಿಹಾಸ ಸುಳ್ಳಿನಿಂದ ಕೂಡಿದೆ. ಇಂತಹ ವಿಚಾರಗಳಲ್ಲಿ ನಮ್ಮೊಂದಿಗೆ ಚರ್ಚೆ ಮಾಡಬೇಕು ಎನ್ನುವವರು ಯಾವಾಗ ಬಂದರೂ ಸ್ವಾಗತ ಎಂದರು.
ನಾನು `ಹಿಂದೂ ಸಾಮ್ರಾಜ್ಯಶಾಹಿ ಇತಿಹಾಸ’ ಕೃತಿ ಬರೆದಿದ್ದು, ಅದರಲ್ಲಿ ಬೌದ್ಧ ಧರ್ಮ ಪಾಲಿಸು ತ್ತಿದ್ದ ರಾಜರು ಹಾಗೂ ಸಾಮಾನ್ಯ ಜನತೆಯನ್ನು ಹೇಗೆಲ್ಲಾ ನಾಶ ಮಾಡಲಾಯಿತು ಎಂದು ವಿವರಿ ಸಿದ್ದೇನೆ. `ನಾನು ಬೌದ್ಧನಲ್ಲ, ಆದರೆ ನಾನೊಬ್ಬ ಬೌದ್ಧ’ ಎಂದು 1893ರಲ್ಲಿ ಸ್ವಾಮಿ ವಿವೇಕಾನಂದರು ಹೆಮ್ಮೆಯಿಂದ ಹೇಳಿದ್ದಾರೆ. ಬುದ್ಧ ಧರ್ಮ ಅತ್ಯಂತ ಶ್ರೇಷ್ಠ, ವೈಜ್ಞಾನಿಕ ಮತ್ತು ಮಾನವೀಯ ಧರ್ಮ ಎಂದು ಸ್ವಾಮಿ ವಿವೇಕಾನಂದರ ಆದಿಯಾಗಿ ಅನೇಕ ಮಹನೀಯರು ಕೊಂಡಾಡಿದ್ದಾರೆ ಎಂದರು.