ರಾಜ್ಯಕ್ಕೆ ಕೊರೊನಾ ವೈರಸ್ ಸುಳಿಯದಂತೆ ಕಟ್ಟೆಚ್ಚರ ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಭರವಸೆ
ಮೈಸೂರು

ರಾಜ್ಯಕ್ಕೆ ಕೊರೊನಾ ವೈರಸ್ ಸುಳಿಯದಂತೆ ಕಟ್ಟೆಚ್ಚರ ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಭರವಸೆ

March 5, 2020

ಬೆಂಗಳೂರು, ಮಾ. 4(ಕೆಎಂಶಿ)- ಕೊರೊನಾ ವೈರಸ್ ಹರಡದಂತೆ ಮುಂಜಾಗ್ರತಾ ಕ್ರಮಗಳನ್ನು ಸರ್ಕಾರ ಕೈಗೊಂಡಿದ್ದು, ಇಂದಿನಿಂದ ರಾಜ್ಯದ ಎಲ್ಲ ವಿಮಾನ ನಿಲ್ದಾಣ ಮತ್ತು ಬಂದರುಗಳಲ್ಲಿ ವಿದೇಶಗಳಿಂದ ಬರುವವರನ್ನ ತಪಾಸಣೆಗೆ ಒಳಪಡಿಸುತ್ತೇವೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ವಿಧಾನ ಪರಿಷತ್ತಿನಲ್ಲಿಂದು ತಿಳಿಸಿದ್ದಾರೆ.

ಕೊರೊನಾ ಬಗ್ಗೆ ಪ್ರತಿಪಕ್ಷದ ನಾಯಕ ಎಸ್.ಆರ್. ಪಾಟೀಲ್ ಮಾಡಿದ ಪ್ರಸ್ತಾಪಕ್ಕೆ ಉತ್ತರಿಸಿದ ಸಚಿವರು ಕೊರೊನಾ ಚೀನಾದಲ್ಲಿ ಕಂಡುಬಂದ ವೈರಸ್, 76 ದೇಶಗಳಲ್ಲಿ ಈ ವೈರಸ್ ಹರಡಿದೆ. ಭಾರತದಲ್ಲಿ 5, ಕೇರಳದಲ್ಲಿ 3, ದೆಹಲಿ, ತೆಲಂ ಗಾಣದಲ್ಲಿ 1 ಪ್ರಕರಣ ಖಾತರಿ ಆಗಿದೆ. ಯಾವುದೇ ಸಾವು ಸಂಭವಿಸಿಲ್ಲ. ಆದರೆ, ರಾಜ್ಯದಲ್ಲಿ ಯಾವುದೇ ಪ್ರಕರಣ ಖಾತರಿ ಆಗಿಲ್ಲ ಎಂದು ಸ್ಪಷ್ಟಪಡಿಸಿದರು.

ಇದಕ್ಕೂ ಮುನ್ನ ಮಾತನಾಡಿದ ಪಾಟೀಲ್, ಮಾಧ್ಯಮಗಳಲ್ಲಿ ಬರುತ್ತಿರುವ ವರದಿ ಗಮನಿಸಿದ್ದೇವೆ. ಅದು ನಮ್ಮ ದೇಶಕ್ಕೂ ಕಾಲಿಟ್ಟಿದ್ದು, ಬೆಂಗಳೂರಿಗೆ ಬಂದು ಹೋದ ಹೈದರಾಬಾದ್ ಟೆಕ್ಕಿಗೆ ಕೊರೊನಾ ಶಂಕೆ ಪ್ರಕರಣ ನಮ್ಮನ್ನೆಲ್ಲ ಆತಂಕಕ್ಕೆ ಸಿಲುಕಿಸಿದೆ.

ಮಹಾಮಾರಿ ತಡೆಗೆ ಯಾವ ರೀತಿಯಲ್ಲಿ ಸರ್ಕಾರ ಸಜ್ಜಾಗಿದೆ ಎಂದು ಪ್ರಶ್ನಿಸಿದರು. ರಾಜ್ಯದ ಜನರಿಗೆ ಕೊರೊನಾ ಬಗ್ಗೆ ಇರುವ ಭಯ ನೀಗಬೇಕು. ಇದಕ್ಕೆ ಸಾಮಾಜಿಕ ಜಾಲತಾಣ ಗಳನ್ನು ಬಳಸಿಕೊಳ್ಳಬೇಕು. ಜೊತೆಗೆ ಬಸ್ ಆಟೋಗಳ ಹಿಂದೆ ಜಾಹೀರಾತು ಹಾಕಬೇಕು. ಸಚಿವರು ಆಸ್ಪತ್ರೆಗಳಿಗೆ ಭೇಟಿ ಕೊಟ್ಟು ಪರಿಸ್ಥಿತಿ ಪರಾಮರ್ಶೆ ಮಾಡಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಕೃಷಿ ಸಚಿವ ಬಿ.ಸಿ. ಪಾಟೀಲ್ ಮಾತನಾಡಿ, ನಾನು ಮಂತ್ರಿ ಆದ ಮೇಲೆ ನನ್ನ ಕ್ಷೇತ್ರಕ್ಕೆ ಹೋದೆ. ಜನರು ನನ್ನ ಕೈಕುಲುಕಿ ಅಭಿನಂದನೆ ಹೇಳಲು ಬಂದಿದ್ದರು. ಆದರೆ, ನನಗೆ ಕೈಕುಲುಕಲು ಭಯ, ಸುಮ್ಮನೆ ನಮಸ್ಕಾರ ಮಾಡುತ್ತಿದ್ದೆ. ಆದರೆ, ಮಂತ್ರಿ ಆದ ಮೇಲೆ ಇವನಿಗೆ ಸೊಕ್ಕು ಬಂದಿದೆ ಎಂದು ಜನ ತಿಳಿದುಕೊಳ್ತಿದ್ರು. ಆಮೇಲೆ ಅವರಿಗೆ ಕೊರೊನಾ ಕಾಯಿಲೆ ಭಯದಿಂದ ಹಾಗೆ ಮಾಡಿದೆ ಎಂದು ತಿಳಿ ಹೇಳಿದೆ ಎಂದರು.

ಸಚಿವರ ಈ ಹೇಳಿಕೆಗೆ ಸದನ ನಗೆಗಡಲಲ್ಲಿ ತೇಲಿತು. ಈ ವೇಳೆ, ಒಟ್ಟಿನಲ್ಲಿ ಜನಕ್ಕೆ ಕೈ ಕೊಡ್ಲಿಲ್ಲ ಅಲ್ವಾ ನೀವು, ನಮಗೆ ಕೈ ಕೊಟ್ಟ ಹಾಗೆ ಜನಕ್ಕೆ ಕೈ ಕೊಡಬೇಡಿ ಎಂದು ಕಾಂಗ್ರೆಸ್‍ನ ನಾರಾಯಣ ಸ್ವಾಮಿ, ಬಿ.ಸಿ. ಪಾಟೀಲ್ ಕಾಲೆಳೆದರು. ಅದಕ್ಕೆ ತೀಕ್ಷ್ಣವಾಗಿ ಉತ್ತರಿಸಿದ ಸಚಿವರು, ನಾನು ಕೈ ಕೊಡ್ಲಿಲ್ಲ, ನೀವು ಕೈ ಬಿಟ್ಟಿದ್ದಕ್ಕೆ ರಾಜೀನಾಮೆ ಕೊಟ್ಟು ಜನಾಶೀರ್ವಾದ ಪಡೆದು ಮತ್ತೆ ಬಂದಿದ್ದೇನೆ ಎಂದರು.

Translate »