ದೇಶದ ಆಡಳಿತ ಚುಕ್ಕಾಣಿ ದ್ರಾವಿಡರ ಕೈಯಲ್ಲಿರಬೇಕು: ಆದಿದ್ರಾವಿಡ ಮುಖಂಡ ವಿ.ಎನ್.ಸುಬ್ರಹ್ಮಣ್ಯ
ಮೈಸೂರು

ದೇಶದ ಆಡಳಿತ ಚುಕ್ಕಾಣಿ ದ್ರಾವಿಡರ ಕೈಯಲ್ಲಿರಬೇಕು: ಆದಿದ್ರಾವಿಡ ಮುಖಂಡ ವಿ.ಎನ್.ಸುಬ್ರಹ್ಮಣ್ಯ

July 1, 2019

ಮೈಸೂರು,ಜೂ.30(ಎಸ್‍ಪಿಎನ್)- ಭಾರತದಲ್ಲಿ ದ್ರಾವಿಡರು ಅತೀ ಹೆಚ್ಚು ಜನಸಂಖ್ಯೆಯಿದ್ದು, ದೇಶದ ಆಡಳಿತ ಚುಕ್ಕಾಣಿ ನಮ್ಮ ಕೈಯಲ್ಲಿರಬೇಕಿತ್ತು ಎಂದು ಆದಿದ್ರಾವಿಡ ಸಮಾಜದ ಹಿರಿಯ ಮುಖಂಡ ಬಿ.ಎಸ್.ಸುಬ್ರಹ್ಮಣ್ಯ ಅಭಿಪ್ರಾಯಪಟ್ಟರು.

ನಗರದ ಎಂಜಿನಿಯರ್‍ಗಳ ಸಂಸ್ಥೆ ಸಭಾಂಗಣದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್ ವಾದ) ಮೈಸೂರು ನಗರ ಶಾಖೆ ವತಿಯಿಂದ ಆಯೋಜಿಸಿದ್ದ ‘ದಲಿತರ ಸ್ಥಿತಿಗತಿಗಳ ಚಿಂತನಾ ಸಭೆ ಮತ್ತು ಅಭಿನಂದನಾ ಕಾರ್ಯಕ್ರಮ ಹಾಗೂ ಮೈಸೂರು ನಗರ ಸಮಿತಿ ಸರ್ವ ಸದಸ್ಯರ ಸಭೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಆದರೆ, ನಮ್ಮಲ್ಲಿನ ಸಂಘಟನಾ ಕೊರತೆಯಿಂದ ಅದು ಸಾಧ್ಯ ವಾಗಿಲ್ಲ ಎಂದರಲ್ಲದೆ, ಕೇಂದ್ರ ಸರ್ಕಾರದ ಅಧೀನದಲ್ಲಿರುವ ಸಿಎಫ್‍ಟಿಆರ್‍ಐ, ನಗರ ಪಾಲಿಕೆಗಳಲ್ಲಿ, ರೈಲ್ವೆ ಸೇರಿದಂತೆ ಇತರೆ ಇಲಾಖೆಗಳಲ್ಲಿ ಕೆಲಸ ಮಾಡುವವರು `ಪೌರಕಾರ್ಮಿಕ’ರೆಂದು ಗುರುತಿಸಲಾಗಿದೆ ಎಂದರು. `ಪೌರಕಾರ್ಮಿಕ’ ಎಂಬುದು ಹುದ್ದೆಯಾಗಿದ್ದು, ಈ ಹೆಸರನ್ನೇ ಒಂದು ಸಮುದಾಯವೆಂಬಂತೆ ಕೆಲವರು ಬಿಂಬಿಸುತ್ತಿ ದ್ದಾರೆ. ಇದರ ಬದಲು `ಪೌರ ಬಂಧು’ ಪದನಾಮದೊಂದಿಗೆ ಹುದ್ದೆಗಳನ್ನು ಸೃಷ್ಟಿಸಬೇಕು. ಹಿಂದೆ ಜಲಗಾರ, ಅ ನಂತರ ಸ್ವೀಪರ್ಸ್, ಸಫಾಯಿ ಕರ್ಮಚಾರಿ ಎಂಬ `ಪದನಾಮ’ದೊಂದಿಗೆ ಕರೆಯುತ್ತಿದ್ದರು. ಇಂದು `ಪೌರಕಾರ್ಮಿಕ’ ಹೆಸರಿನಲ್ಲಿ ಹುದ್ದೆ ಸೃಷ್ಟಿಸಲಾಗಿದೆ. ಇದನ್ನೇ ಜನಾಂಗವೆಂದು ಗುರುತಿಸುವುದು ಬೇಸರ ಸಂಗತಿ. ಆದ್ದರಿಂದ ಈಗಾಗಲೇ ರಾಷ್ಟ್ರಪತಿ ಗಳಿಗೆ ಪತ್ರ ಬರೆದು ಇನ್ಮುಂದೆ `ಪೌರಕಾರ್ಮಿಕ’ ಬದಲು `ಪೌರಬಂಧು’ ಪದನಾಮ ದೊಂದಿಗೆ ಕರೆಯುವಂತೆ ಒತ್ತಾಯಿಸಿ ಪತ್ರ ಬರೆದಿದ್ದೇನೆ ಎಂದು ಸಭೆಗೆ ತಿಳಿಸಿದರು.

ದಲಿತ ಮುಖಂಡ ನಿಂಗರಾಜ್ ಮಲ್ಲಾಡಿ ಮಾತನಾಡಿ, ದಲಿತರಲ್ಲಿ ಎಡ, ಬಲ, ಪೌರಕಾರ್ಮಿಕರು,ಅಲೆಮಾರಿ ಸಮುದಾಯ, ಬೋವಿ ಹೀಗೆ ಜಾತಿಗೊಂದು ಸಂಘವನ್ನು ಕಟ್ಟಿಕೊಳ್ಳುವ ಕಾರ್ಯವಾಗುತ್ತಿದ್ದು, ಇದಕ್ಕೆ ದಸಂಸದ ನಾಯಕರು ಈ ಸಮುದಾಯದ ನೋವುಗಳಿಗೆ ಸ್ಪಂದಿಸದಿರುವುದೇ ದಲಿತರಲ್ಲಿ ಒಗ್ಗಟ್ಟು ವಿಘಟನೆ ಕಾರಣವೆನಿಸುತ್ತದೆ. ಸಮಾಜದಲ್ಲಿ ನಾವು ಬೇರೆ ಸಮುದಾಯದವರನ್ನು ಗೌರವಿಸದಿದ್ದರೆ, ಒಳಗೊಳ್ಳದಿದ್ದರೆ ಸಹಜವಾಗಿ ನಮ್ಮಿಂದ ದೂರಾಗುತ್ತಾರೆ. ಇದರಿಂದ ನಷ್ಟ ನಮಗೆ ಹೊರತು ಬೇರೆಯವರಿಗಲ್ಲ ಎಂದು ಸಮುದಾಯದ ಒಳ ನೋವುಗಳನ್ನು ಬಿಚ್ಚಿಟ್ಟರು.

ದಸಂಸ ಸಂಘಟನೆ ಮುನ್ನಡೆಸಲು ಎಲ್ಲರ ಬೆಂಬಲ ಅಗತ್ಯವಾಗಿದ್ದು, ಪ್ರಸ್ತುತ ಮೈಸೂರಿನಲ್ಲಿ ಒಗ್ಗಟ್ಟಿನ ಕೊರತೆ ಎದುರಾಗಿದೆ. ಧರಣಿ, ಪ್ರತಿಭಟನೆ ಮಾಡುವ ಮನಸ್ಸುಳ್ಳವರ ಸಂಖ್ಯೆ ಕಡಿಮೆಯಾಗಿದ್ದು, ಹೋರಾಟ ಮಾಡುವ ಮನೋಭಾವ ನಮ್ಮಲ್ಲಿ ಇಲ್ಲದಂತಾಗಿದೆ. ಪೌರಕಾರ್ಮಿಕರ ಸಂಘ, ಬಲಗೈ-ಎಡಗೈ ಅಂಗವಿಕಲರಂತಾಗಿದ್ದು, ಎಲ್ಲರೂ ಒಗ್ಗೂಡಬೇಕಿದೆ. ನಮ್ಮ ಸಮುದಾಯದ ರಾಜಕಾರಣಿಗಳು, ಅಧಿಕಾರಿಗಳು ಭ್ರಷ್ಟರಾಗಿದ್ದು, ನಮ್ಮ ಸಮಸ್ಯೆಗಳಿಗೆ ನಾವೇ ಉತ್ತರ ಕಂಡುಕೊಳ್ಳಬೇಕಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ನಂಜನಗೂಡು ನಗರಸಭಾ ಸದಸ್ಯ ಪಿ.ದೇವ, ಕೆ.ಆರ್.ನಗರ ಪುರಸಭಾ ಸದಸ್ಯ ಶಂಕರ್, ಜಿಲ್ಲಾ ಪ.ಜಾತಿ,ಪಂಗಡಗಳ ಜಾಗೃತಿ ಸದಸ್ಯೆ ಪುಟ್ಟಲಕ್ಷ್ಮಮ್ಮ, ಕೆ.ಆರ್.ನಗರ ಹೆಬ್ಬಾಳು ಸದಸ್ಯ ಎಚ್.ಬಿ.ದಿವಾಕರ್, ಜ್ಯೋತಿನಗರ ಸಿ.ಆರ್.ರಾಚಯ್ಯ, ಹೆಬ್ಬಾಳ್ ಕಾಲೋನಿ ಕೆ.ನಂಜಪ್ಪ ಬಸವನಗುಡಿ ಇತರೆ ಚುನಾಯಿತ ಪ್ರತಿನಿಧಿಗಳನ್ನು ಸನ್ಮಾನಿಸಲಾಯಿತು.

Translate »