ಫೆ.1ರಿಂದ 10ರವರೆಗೆ ಕುಡಿಯುವ ನೀರಿನ ಟ್ಯಾಂಕ್, ಕಿರು ನೀರು ಸರಬರಾಜು ಟ್ಯಾಂಕ್ ಸ್ವಚ್ಛತಾ ಅಭಿಯಾನ
ಮೈಸೂರು

ಫೆ.1ರಿಂದ 10ರವರೆಗೆ ಕುಡಿಯುವ ನೀರಿನ ಟ್ಯಾಂಕ್, ಕಿರು ನೀರು ಸರಬರಾಜು ಟ್ಯಾಂಕ್ ಸ್ವಚ್ಛತಾ ಅಭಿಯಾನ

January 25, 2020

ಮೈಸೂರು: ಕಡಕೊಳ ಗ್ರಾಮದಲ್ಲಿ ಕಲುಷಿತ ನೀರಿನಿಂದ ನೂರಕ್ಕೂ ಹೆಚ್ಚು ಮಂದಿ ಅಸ್ವಸ್ಥಗೊಂಡ ಪ್ರಕರಣದ ಬಳಿಕ ಎಚ್ಚೆತ್ತಿರುವ ತಾಲೂಕು ಪಂಚಾಯಿತಿ ಆಡಳಿತ ಮೈಸೂರು ತಾಲೂಕಿನ ಎಲ್ಲಾ ಗ್ರಾಮಗಳ ನೀರಿನ ಟ್ಯಾಂಕ್ ಮತ್ತು ಕಿರು ನೀರು ಸರಬರಾಜು ಟ್ಯಾಂಕ್‍ಗಳ ಸ್ವಚ್ಛತಾ ಅಭಿಯಾನಕ್ಕೆ ಮುಂದಾಗಿದೆ.

ಫೆ.1ರಿಂದ 10ರವರೆಗೆ ತಾಲೂಕಿನ 37 ಗ್ರಾಮ ಪಂಚಾ ಯಿತಿಗಳ ವ್ಯಾಪ್ತಿಯ 186 ಗ್ರಾಮಗಳ ಎಲ್ಲಾ ನೀರಿನ ಟ್ಯಾಂಕ್‍ಗಳು ಹಾಗೂ ಕಿರು ನೀರು ಸರಬರಾಜು ವ್ಯವ ಸ್ಥೆಯ ಟ್ಯಾಂಕ್‍ಗಳನ್ನು ಸ್ವಚ್ಛಗೊಳಿಸಲು ಗ್ರಾಮ ಪಂಚಾ ಯಿತಿಗಳಿಗೆ ಸೂಚನೆ ನೀಡಲಾಗಿದೆ ಎಂದು ಮೈಸೂ ರಿನ ಮಿನಿ ವಿಧಾನಸೌಧದಲ್ಲಿ ಶುಕ್ರವಾರ ನಡೆದ ತಾಲೂಕು ಪಂಚಾಯಿತಿಯ ಕೆಡಿಪಿ ಸಭೆಯಲ್ಲಿ ತಾಪಂ ಕಾರ್ಯ ನಿರ್ವಹಣಾಧಿಕಾರಿ ಸಿ.ಆರ್.ಕೃಷ್ಣಕುಮಾರ್ ತಿಳಿಸಿದರು.

ಹತ್ತು ದಿನಗಳ ಕಾಲ ಕಡ್ಡಾಯವಾಗಿ ನೀರಿನ ಟ್ಯಾಂಕ್ ಗಳ ಸ್ವಚ್ಛತಾ ಅಭಿಯಾನ ಕೈಗೊಂಡು, ಫೆ.10ರಂದು ಈ ಕುರಿತು ತಾಲೂಕು ಪಂಚಾಯಿತಿಗೆ ಮಾಹಿತಿ ನೀಡು ವಂತೆ ಪಿಡಿಓಗಳಿಗೆ ಸೂಚನೆ ನೀಡಲಾಗಿದೆ ಎಂದರು.

ಕಡಕೊಳ ಗ್ರಾಮದಲ್ಲಿ ತೆರೆದ ಬಾವಿಯಿಂದ ಸಂಗ್ರ ಹಿಸಿದ ಕಲುಷಿತ ನೀರನ್ನು ಕುಡಿಯುತ್ತಿದ್ದುದರಿಂದಲೇ ಅಲ್ಲಿನ ಜನ ಅಸ್ವಸ್ಥಗೊಳ್ಳಲು ಕಾರಣವಾಗಿತ್ತು. ಶುದ್ಧ ನೀರು ಪೂರೈಸುವಲ್ಲಿ ಗ್ರಾಮ ಪಂಚಾಯಿತಿ ತೋರಿದ ನಿರ್ಲಕ್ಷವೇ ಇದಕ್ಕೆ ಕಾರಣ. ಹೀಗಾಗಿ ಟ್ಯಾಂಕ್‍ಗಳನ್ನು ಸ್ವಚ್ಛಗೊಳಿಸಿ, ಶುದ್ಧ ನೀರು ಪೂರೈಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಕೆಡಿಪಿ ಸಭೆಯಲ್ಲಿ ತಾಲೂಕು ಆರೋಗ್ಯ ಶಿಕ್ಷಣಾಧಿ ಕಾರಿ ಮುನೀಂದ್ರಮ್ಮ, ಕಡಕೊಳ ಗ್ರಾಮದಲ್ಲಿನ ವಾಂತಿ ಭೇದಿ ಪ್ರಕರಣಗಳ ಬಗ್ಗೆ ಮಾಹಿತಿ ನೀಡಿ, ಗ್ರಾಮ ದಲ್ಲಿ ಮೂವರು ವೈದ್ಯರು, ನರ್ಸ್‍ಗಳು ಮೊಕ್ಕಾಂ ಇದ್ದು, ಆರೋಗ್ಯ ಪರಿಸ್ಥಿತಿ ನೋಡಿಕೊಳ್ಳುತ್ತಿದ್ದಾರೆ. ಆರೋಗ್ಯ ಕಾರ್ಯಕರ್ತರ ತಂಡ ಮನೆ ಮನೆಗೂ ಭೇಟಿ ನೀಡಿ ಪರಿಶೀಲಿಸಿ, ಅಗತ್ಯವಿದ್ದ ಕಡೆ ತಕ್ಷಣ ಚಿಕಿತ್ಸಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಅಲ್ಲೊಂದು ಇಲ್ಲೊಂದು ವಾಂತಿ ಭೇದಿ ಪ್ರಕರಣ ಬಿಟ್ಟರೆ ಗ್ರಾಮದಲ್ಲೀಗ ಆರೋಗ್ಯ ಪರಿಸ್ಥಿತಿ ನಿಯಂ ತ್ರಣದಲ್ಲಿದೆ ಎಂದು ಹೇಳಿದರು.

ಸ್ವಕ್ಷೇತ್ರದ ಶಾಲೆ ಪರಿಸ್ಥಿತಿ ಬಗ್ಗೆ ಗಮನ ಸೆಳೆದ ಅಧ್ಯಕ್ಷೆ: ತಮ್ಮ ಸ್ವಕ್ಷೇತ್ರ ದೂರ ಗ್ರಾಮದ ಸರ್ಕಾರಿ ಶಾಲೆಯ ಅಭಿವೃದ್ಧಿ ಕೈಗೊಳ್ಳದ ಕ್ಷೇತ್ರ ಶಿಕ್ಷಣಾಧಿಕಾರಿ ವಿರುದ್ಧ ತಾಪಂ ಅಧ್ಯಕ್ಷೆ ಕಾಳಮ್ಮ ಕೆಂಪರಾಮಯ್ಯ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಬೇಸರ ವ್ಯಕ್ತಪಡಿಸಿದರು. ನಾನು ಅಧ್ಯಕ್ಷೆಯಾದಾಗಿನಿಂದಲೂ ಸೋರುತ್ತಿರುವ ಶಿಥಿಲ ಶಾಲೆಯ ದುರಸ್ತಿ ಕೈಗೊಳ್ಳಲು ಹೇಳುತ್ತಲೇ ಬಂದಿ ದ್ದೇನೆ. ಅಲ್ಲದೆ ಈವರೆಗೆ 7 ಲಕ್ಷ ರೂ. ಅನುದಾನ ನೀಡಿ, ಕುಡಿಯುವ ನೀರಿನ ವ್ಯವಸ್ಥೆ, ಶೌಚಾಲಯ ನಿರ್ಮಿಸಿ ಕೊಟ್ಟಿದ್ದೇನೆ. ಹಾಗಿದ್ದೂ ಸೋರುತ್ತಿರುವ ಶಾಲೆಯ ಬಗ್ಗೆ ದೂರುಗಳು ಬರುತ್ತಲೇ ಇದೆ. ಆದರೂ ಬಿಇಓ ನಿರ್ಲಕ್ಷಿಸಿರುವ ಬಗ್ಗೆ ಪ್ರಶ್ನಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ತಾಲೂಕು ಶಿಕ್ಷಣಾಧಿಕಾರಿ ಕೃಷ್ಣ, ಶಾಲಾ ಕಟ್ಟಡ ಪುನರ್ ನಿರ್ಮಾಣವಾಗಬೇಕಿದೆ. ರಿಪೇರಿಗೆ ಮುಂದಾದರೆ ಮತ್ತೊಂದು ಕಡೆ ಹಾನಿ ಯಾಗುವುದರಿಂದ ಹೊಸದಾಗಿಯೇ ಕಟ್ಟಡ ನಿರ್ಮಿ ಸುವ ಅವಶ್ಯವಿದೆ. ಹೀಗಾಗಿ ಶಾಸಕರ ಅನುದಾನ ಕ್ಕಾಗಿ ಶೀಘ್ರವೇ ಶಾಸಕರ ಗಮನಕ್ಕೆ ತರುವುದಾಗಿ ತಿಳಿಸಿದರು. ತಾಪಂ ಉಪಾಧ್ಯಕ್ಷ ಎನ್.ಬಿ.ಮಂಜು, ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಎಂ.ಶಂಕರ್, ಇಓ ಕೃಷ್ಣಕುಮಾರ್ ಇನ್ನಿತರರು ಹಾಜರಿದ್ದರು.

Translate »