ಐಸಿಎಲ್ ಕಾರ್ಖಾನೆಯಲ್ಲಿ ಕಬ್ಬು ಅರೆಯುವಿಕೆಗೆ ಚಾಲನೆ
ಮಂಡ್ಯ

ಐಸಿಎಲ್ ಕಾರ್ಖಾನೆಯಲ್ಲಿ ಕಬ್ಬು ಅರೆಯುವಿಕೆಗೆ ಚಾಲನೆ

July 7, 2018

ಕೆ.ಆರ್.ಪೇಟೆ: ತಾಲೂಕಿನ ರೈತರ ಜೀವನಾಡಿ ಮಾಕವಳ್ಳಿ ಕೋರಮಂಡಲ್ ಸಕ್ಕರೆ ಕಾರ್ಖಾನೆಯಲ್ಲಿ ಪ್ರಸಕ್ತ ಸಾಲಿನ ಕಬ್ಬು ಅರೆಯುವ ಕಾರ್ಯಕ್ಕೆ ಚಾಲನೆ ನೀಡಲಾಯಿತು.

ಕಾರ್ಖಾನೆ ನೂತನ ಉಪಾಧ್ಯಕ್ಷ ಜಿ.ವಿ.ರವಿ ಕಬ್ಬು ಅರೆಯುವ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿ, ಪ್ರಸಕ್ತ ಸಾಲಿನಲ್ಲಿ ಸುಮಾರು 7ರಿಂದ 8ಲಕ್ಷ ಟನ್ ಕಬ್ಬು ಅರೆಯುವ ಗುರಿ ಹೊಂದಲಾಗಿದೆ. ಕಳೆದ ಸಾಲಿನಲ್ಲಿ 6ಲಕ್ಷ ಟನ್ ಕಬ್ಬು ಅರೆಯಲಾಗಿತ್ತು. ಕಾರ್ಖಾನೆಗೆ ಕಬ್ಬು ಸರಬರಾಜು ಮಾಡಿದ ಎಲ್ಲಾ ರೈತರಿಗೂ ಪ್ರತಿ ಟನ್ ಕಬ್ಬಿಗೆ 2550 ರೂ. ನಂತೆ ಹಣ ಪಾವತಿಸಲಾಗಿದೆ. ಅದರಂತೆ ಈ ವರ್ಷವೂ ರೈತರಿಗೆ ಹಣ ಪಾವತಿಸಲಾಗುವುದು. ಹಾಗಾಗಿ ರೈತರು ಕಬ್ಬಿನ ದರದಲ್ಲಿ ಯಾವುದೇ ಗೊಂದಲಕ್ಕೆ ಒಳಗಾಗದೇ ಕಬ್ಬು ಸರಬರಾಜು ಮಾಡಬೇಕು ಎಂದರು.

ತಾಲೂಕಿನಲ್ಲಿ ರೈತರು ಬೆಳೆದಿರುವ ಕಬ್ಬನ್ನು ಮೊದಲು ಕಟಾವು ಮಾಡಿಕೊಂಡು ನಂತರ ಬೇರೆ ತಾಲೂಕಿನ ರೈತರ ಕಬ್ಬನ್ನು ಕಟಾವು ಮಾಡಿಕೊಳ್ಳಲಾಗುವುದು. ಜೊತೆಗೆ ಸರ್ಕಾರ ನಿಗದಿಪಡಿಸುವ ಕಬ್ಬಿನ ದರ ನೀಡಲು ಕಾರ್ಖಾನೆ ಸಿದ್ಧವಿದೆ. ಕಾರ್ಖಾನೆ ರೈತ ಮತ್ತು ಪರಿಸರ ಸ್ನೇಹಿಯಾಗಿ ಕಾರ್ಯ ನಿರ್ವಹಿಸುತ್ತಿದೆ. ಹೈಟೆಕ್ ಯಂತ್ರೋಪಕರಣ ಬಳಸಿಕೊಂಡು ಪರಿಸರಕ್ಕೆ ಧಕ್ಕೆಯಾಗದಂತೆ ಕಾರ್ಖಾನೆ ನಡೆಸಲಾಗುತ್ತಿದೆ ಎಂದರು.

ಈ ವೇಳೆ ಕಾರ್ಖಾನೆ ಸಹಾಯಕ ಪ್ರಧಾನ ವ್ಯವಸ್ಥಾಪಕ ಕೆ.ಬಾಬುರಾಜ್, ಧರ್ಮಲಿಂಗಂ, ಹಿರಿಯ ಆಡಳಿತ ವ್ಯವಸ್ಥಾಪಕ ಉತ್ತಪ್ಪ, ಇಂಜಿನಿಯರಿಂಗ್ ಮುಖ್ಯಸ್ಥ ಮೇಯನ್, ಶಿವರಾಂ, ಕೋಜನ್ ವಿಭಾಗದ ಎಜಿಎಂ ಸಂದೀಪ್‍ಕೋಟ್, ಸಾರ್ವಜನಿಕ ಸಂಪರ್ಕ ವ್ಯವಸ್ಥಾಪಕರು ಬಿ.ನಾಗೇಶ್, ಹಿರಿಯ ವಕೀಲ ಎನ್.ಆರ್.ರವಿಶಂಕರ್, ಮಾಕವಳ್ಳಿ ಗ್ರಾಪಂ ಅಧ್ಯಕ್ಷ ಬಲರಾಮೇಗೌಡ, ತಾಲೂಕು ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುಮಾರ್, ಗೌರವಾಧ್ಯಕ್ಷ ಕೆ.ಜಿ. ಅಣ್ಣಯ್ಯ, ಉಪಾಧ್ಯಕ್ಷ ಮಂಜೇಗೌಡ, ಕಾರ್ಯ ದರ್ಶಿ ಮಂಜುನಾಥ್, ಗ್ರಾಪಂ ಸದಸ್ಯರಾದ ಸುಕಂದರಾಜ್, ಕಬ್ಬು ಬೆಳೆ ಗಾರರ ಸಂಘದ ಉಪಾಧ್ಯಕ್ಷ ಸಣ್ಣನಿಂಗೇ ಗೌಡ, ಪದಾಧಿಕಾರಿಗಳಾದ ಜಯರಾಮೇ ಗೌಡ, ಎ.ಜೆ.ದಿವಾಕರ್, ರಾಮಕೃಷ್ಣ, ದೇವರಾಜೇ ಗೌಡ, ಕೃಷ್ಣೇಗೌಡ ಮತ್ತಿತರರಿದ್ದರು.

Translate »