ಮೈಸೂರು ರಫ್ತು ಕೇಂದ್ರ ಕಟ್ಟಡ ಕಾಮಗಾರಿಗೆ ಚಾಲನೆ
ಮೈಸೂರು

ಮೈಸೂರು ರಫ್ತು ಕೇಂದ್ರ ಕಟ್ಟಡ ಕಾಮಗಾರಿಗೆ ಚಾಲನೆ

July 1, 2019

ಮೈಸೂರು,ಜೂ.30(ವೈಡಿಎಸ್)-ಹೆಬ್ಬಾಳು ಕೈಗಾರಿಕಾ ಪ್ರದೇಶದಲ್ಲಿ 2014ರಲ್ಲಿ ಶಂಕು ಸ್ಥಾಪನೆಗೊಂಡು ನೆನೆಗುದಿಗೆ ಬಿದ್ದಿದ್ದ 8 ಕೋಟಿ ರೂ. ವೆಚ್ಚದ ಮೈಸೂರು ರಫ್ತು ಕೇಂದ್ರದ ಕಟ್ಟಡ ಕಾಮಗಾರಿಗೆ ಶಾಸಕ ಎಲ್.ನಾಗೇಂದ್ರ ಭಾನುವಾರ ಚಾಲನೆ ನೀಡಿದರು.

ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಸಚಿವ ಹೆಚ್.ಎಸ್. ಮಹದೇವ ಪ್ರಸಾದ್‍ರವರು ಕಟ್ಟಡ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದ್ದರು. ಆದರೆ, ಕಳೆದ 5 ವರ್ಷದಿಂದ ಕಾಮಗಾರಿ ನಡೆಯದೆ ನೆನೆಗುದಿಗೆ ಬಿದ್ದಿತ್ತು. ಇಂದು ಶಾಸಕ ಎಲ್.ನಾಗೇಂದ್ರ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದರು.

ಈ ವೇಳೆ ಮಾಜಿ ಶಾಸಕರು ಹಾಗೂ ಮೈಸೂರು ಕೈಗಾರಿಕೆಗಳ ಸಂಘದ ಅಧ್ಯಕ್ಷ ವಾಸು, ಮಾಜಿ ಮೇಯರ್ ಪಿ.ವಿಶ್ವನಾಥ್, ರಂಗರಾವ್ ಸಮೂಹದ ಅಧ್ಯಕ್ಷ ಆರ್ ಗುರು, ದಕ್ಷಿಣ ವಲಯ ಸಿಐಐ ಅಧ್ಯಕ್ಷ ಡಾ, ಮುತ್ತುಕುಮಾರ್, ಸಿಐಐ ಮೈಸೂರು ಅಧ್ಯಕ್ಷ ಭಾಸ್ಕರ್ ಕಳಲೆ, ಮಾಜಿ ಅಧ್ಯಕ್ಷ ಜಗದೀಶ್, ಮೈಸೂರು ಕೈಗಾರಿಕೆಗಳ ಸಂಘದ ಪ್ರಧಾನ ಕಾರ್ಯದರ್ಶಿ ಸತ್ಯೇಂದ್ರ ಓಡಿ, ಕಾರ್ಯದರ್ಶಿ ಸುರೇಶ್ ಕುಮಾರ್ ಜೈನ್, ಸದಸ್ಯರಾದ ಕೆ.ಎಸ್.ಮಲ್ಲೇಶ್, ರಘುರಾಮ್, ಪ್ರಕಾಶ್, ಪಾಲಿಕೆ ಸದಸ್ಯರಾದ ಶಿವಣ್ಣ, ಶ್ರೀಧರ್, ಕೆಐಎಎಡಿಬಿ ಅಭಿವೃದ್ಧಿ ಅಧಿಕಾರಿ ಕೆ.ಸಿ. ಶಿವಕುಮಾರ್, ವಿಟಿಪಿಸಿ ವಲಯ ಅಧಿಕಾರಿ ಸರಸ್ವತಿ, ಗುತ್ತಿಗೆದಾರ ಅಭಿವೃದ್ಧಿಗೌಡ ಮತ್ತಿತರರು ಉಪಸ್ಥಿತರಿದ್ದರು.

2008ರಲ್ಲಿ ಮಣಿವಣ್ಣನ್ ಅವರು ಜಿಲ್ಲಾಧಿಕಾರಿಯಾಗಿದ್ದ ವೇಳೆ ಮೈಸೂರು ಕೈಗಾರಿಕೆಗಳ ಸಂಘವು ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಅದಾದ 11 ವರ್ಷಗಳ ನಂತರ ಕಟ್ಟಡ ನಿರ್ಮಾಣ ಕಾಮಗಾರಿ ಆರಂಭ ವಾಗುತ್ತಿದ್ದು, ಇದು 8 ಕೋಟಿ ಯೋಜನೆಯಾಗಿದೆ. ಇದು ಪ್ರಾರಂಭವಾದರೆ ರಾಜ್ಯದಲ್ಲಿ ಮೊದಲ ಸುಸಜ್ಜಿತ ಮೈಸೂರು ರಫ್ತು ಕೇಂದ್ರವಾಗಲಿದೆ. ಜತೆಗೆ ಒಂದೇ ಸೂರಿನಲ್ಲಿ ರಫ್ತು ಉದ್ಯಮಿಗಳಿಗೆ ಎಲ್ಲ ವಿಧವಾದ ಸೌಲಭ್ಯಗಳು ದೊರೆಯಲಿದೆ.

Translate »