ಮೈಸೂರಲ್ಲಿ ವಿವಿಧೆಡೆ ಸೂರ್ಯಗ್ರಹಣ ವೀಕ್ಷಣೆ
ಮೈಸೂರು

ಮೈಸೂರಲ್ಲಿ ವಿವಿಧೆಡೆ ಸೂರ್ಯಗ್ರಹಣ ವೀಕ್ಷಣೆ

December 27, 2019

ಮೈಸೂರು, ಡಿ.26(ಎಂಟಿವೈ)-ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಕಂಕಣ ಸೂರ್ಯ ಗ್ರಹಣದ ವಿಸ್ಮಯ ದೃಶ್ಯಗಳನ್ನು ವೀಕ್ಷಿಸಲು ಮೈಸೂರು ಸೈನ್ಸ್ ಫೌಂಡೇಷನ್, ಜಿಪಂ, ಜಿಲ್ಲಾಡಳಿತ ಹಾಗೂ ಮೈಸೂರು ವಿವಿ ಸಂಯುಕ್ತಾಶ್ರಯದಲ್ಲಿ ಡಿಸಿ ಕಚೇರಿ ಬಳಿ ಇರುವ ಓವೆಲ್ ಮೈದಾನದಲ್ಲಿ ಅಚ್ಚುಕಟ್ಟಾದ ವ್ಯವಸ್ಥೆ ಮಾಡಲಾಗಿತ್ತು.

ಮೈದಾನಕ್ಕೆ ಆಗಮಿಸಿದ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಸೈನ್ಸ್ ಫೌಂಡೇ ಷನ್ ವತಿಯಿಂದ ಸೌರ ಕನ್ನಡಕ ವಿತರಿಸಿ ಗ್ರಹಣ ವೀಕ್ಷಣೆಗೆ ಅವಕಾಶ ಮಾಡಿಕೊಡ ಲಾಯಿತು. 2200 ವಿದ್ಯಾರ್ಥಿಗಳು ಹಾಗೂ 1500 ಸಾರ್ವಜನಿಕರೂ ಸೇರಿದಂತೆ 3700 ಮಂದಿ ಒಂದೇ ಸ್ಥಳದಲ್ಲಿ ಜಮಾಯಿಸಿ ಗ್ರಹಣ ವೀಕ್ಷಿಸಿದ್ದು ವಿಶೇಷವಾಗಿದೆ.

ಮೈಸೂರಿನಲ್ಲಿ ಬೆಳಿಗ್ಗೆ 8.06 ಗಂಟೆಗೆ ಗ್ರಹಣ ಆರಂಭವಾಗುತ್ತದೆ ಎಂದು ವೈಜ್ಞಾನಿಕ ವಾಗಿ ಪ್ರಕಟಿಸಲಾಗಿತ್ತು. ಗ್ರಹಣದ ಕೌತುಕ ದೃಶ್ಯಗಳನ್ನು ವೀಕ್ಷಿಸುವುದಕ್ಕಾಗಿ ಬೆಳಿಗ್ಗೆ 7 ಗಂಟೆಯಿಂದಲೇ ಶಾಲಾ-ಕಾಲೇಜು ವಿದ್ಯಾರ್ಥಿ ಗಳು ಉತ್ಸಾಹದಿಂದ ತಂಡೋಪತಂಡ ವಾಗಿ ಓವೆಲ್ ಮೈದಾನಕ್ಕೆ ಆಗಮಿಸಿದರು. ಪ್ರತೀ ಶಾಲಾ-ಕಾಲೇಜಿನ ಶಿಕ್ಷಕರು ಹಾಗೂ ಬೋಧಕ ವರ್ಗದವರು ಕೂಡ ವಿದ್ಯಾರ್ಥಿ ಗಳ ಜೊತೆ ಆಗಮಿಸಿದ್ದರು.

8 ಗಂಟೆಯಾಗುತ್ತಲೇ ಖಗೋಳ ಶಾಸ್ತ್ರಜ್ಞರು ಹಾಗೂ ಸೈನ್ಸ್ ಫೌಂಡೇಷನ್ ಸಿಬ್ಬಂದಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿ ಸೌರ ಕನ್ನಡಕದಲ್ಲಿ ಗ್ರಹಣ ವೀಕ್ಷಣೆ ಕುರಿತು ವಿವರಿಸಿದರು. ಶಿಕ್ಷಕರು ಹಾಗೂ ಬೋಧಕ ವರ್ಗದವರು ತಮ್ಮ ತಮ್ಮ ಶಾಲಾ ವಿದ್ಯಾರ್ಥಿಗಳಿಗೆ ಗ್ರಹಣ ವೀಕ್ಷಣೆಯ ಕುರಿತು ಮಾರ್ಗದರ್ಶನ ನೀಡಿದರು. ಗ್ರಹಣ ಆರಂಭವಾದ ದೃಶ್ಯಗಳನ್ನು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಕುತೂಹಲದಿಂದ ವೀಕ್ಷಿಸಲಾರಂಭಿಸಿದರು. ಸುಮಾರು 15 ನಿಮಿಷ ಸ್ಪಷ್ಟವಾಗಿ ಗ್ರಹಣ ಗೋಚರಿಸಿತು. ನಂತರ ಮೋಡ ಕವಿದ ವಾತಾವರಣ ಸೃಷ್ಟಿಯಾದ ಕಾರಣ ಗ್ರಹಣ ವೀಕ್ಷಣೆಗೆ ತೊಡಕುಂಟಾಯಿತು. 11 ಗಂಟೆಯಾದರೂ ಮೋಡದ ವಾತಾವರಣ ಮುಂದುವರೆದಿದ್ದ ರಿಂದ ಸೈನ್ಸ್ ಫೌಂಡೇಷನ್ ವತಿಯಿಂದ ಗ್ರಹಣದ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಲಾಯಿತು.

ಗ್ರಹಣ ವೀಕ್ಷಣೆಗೆ ಮೋಡಗಳಿಂದ ಅಡ್ಡಿ ಯುಂಟಾದ ಕಾರಣ ಬಹುತೇಕ ವಿದ್ಯಾರ್ಥಿಗಳು `ಇಂಡಿಯನ್ ಸ್ಕೈ ಮ್ಯಾಪ್’ ಆ್ಯಪ್ ಮೂಲಕ ಗ್ರಹಣ ವೀಕ್ಷಣೆಗೆ ಮುಂದಾದರು. ಗುಂಪು- ಗುಂಪಾಗಿ ವಿದ್ಯಾರ್ಥಿಗಳು ಮೊಬೈಲ್ ಮೂಲಕ ಗ್ರಹಣ ವೀಕ್ಷಣೆ ಮಾಡುತ್ತಿದ್ದುದು ಕಂಡು ಬಂತು. ಕೆಲವು ವಿದ್ಯಾರ್ಥಿಗಳು ಮೊಬೈಲ್‍ನಲ್ಲಿ ಸುದ್ದಿ ವಾಹಿನಿಗಳಲ್ಲಿ ಪ್ರಸಾರ ವಾದ ವಿವಿಧೆಡೆ ಗೋಚರಿಸಿದ ಸೂರ್ಯ ಗ್ರಹಣವನ್ನು ವೀಕ್ಷಿಸಿ ಸಂಭ್ರಮಿಸಿದರು.

ಪ್ರಶ್ನೆಗಳ ಸುರಿಮಳೆ: ಮೋಡ ಕವಿದ ವಾತಾವರಣದಿಂದ ಗ್ರಹಣ ವೀಕ್ಷಣೆಗೆ ಅಡ್ಡಿ ಯುಂಟಾದ ವೇಳೆಯಲ್ಲಿ ಸೈನ್ಸ್ ಫೌಂಡೇಷನ್ ಹಾಗೂ ವಿವಿಧ ಕಾಲೇಜುಗಳ ವತಿಯಿಂದ ಗ್ರಹಗಳ ಚಲನೆ ಹಾಗೂ ಗ್ರಹಣ ಉಂಟಾಗುವ ಕುರಿತು ಪ್ರಾತ್ಯಕ್ಷಿಕೆ ನೀಡಲಾಯಿತು. ಇದನ್ನು ಸದುಪಯೋಗಪಡಿಸಿಕೊಂಡ ವಿಜ್ಞಾನ ವಿದ್ಯಾರ್ಥಿಗಳು, ಸೈನ್ಸ್ ಫೌಂಡೇಷನ್ ಸದಸ್ಯರಿಗೆ ಪ್ರಶ್ನೆಗಳ ಸುರಿಮಳೆಗೈದು, ತಮ್ಮಲ್ಲಿ ರುವ ಗೊಂದಲಗಳನ್ನು ನಿವಾರಿಸಿಕೊಂಡರು. `ಗ್ರಹಣದ ಸಮಯದಲ್ಲಿ ವಿಮಾನ ಪ್ರಯಾಣ ಸುರಕ್ಷಿತವೇ?’. `ಚಂದ್ರನ ಬದಲು ಬುಧ, ಶುಕ್ರ ಗ್ರಹಗಳು ಭೂಮಿ ಮತ್ತು ಸೂರ್ಯನ ನಡುವೆ ಬಂದರೆ ಅದನ್ನು ಏನೆಂದು ಕರೆಯ ಲಾಗುತ್ತದೆ’?, `ಸೌರ ಕನ್ನಡಕ ಧರಿಸಿಯೇ ಏಕೆ ಗ್ರಹಣ ವೀಕ್ಷಿಸಬೇಕು?’ ಮುಂತಾದ ಪ್ರಶ್ನೆ ಗಳು ವಿದ್ಯಾರ್ಥಿಗಳಿಂದ ಹರಿದು ಬಂದವು.

ಸತತ ಮೂರು ಗಂಟೆಗಳ ಕಾಲ ಕಂಕಣ ಸೂರ್ಯ ಗ್ರಹಣ ವೀಕ್ಷಣೆಯಲ್ಲಿ ಮೈಸೂರು ಸೈನ್ಸ್ ಫೌಂಡೇಷನ್ ಪ್ರಧಾನ ಕಾರ್ಯದರ್ಶಿ ಜಿ.ಬಿ.ಸಂತೋಷ್ ಕುಮಾರ್, ಖಜಾಂಚಿ ಎಂ.ಜಿ.ಎನ್. ಪ್ರಸಾದ್, ಸದಸ್ಯ ರಾದ ಮಂಜುಳಾ, ಹೆಚ್.ವಿ.ಮುರುಳೀಧರ್, ಶ್ರೀಕಂಠಯ್ಯ, ಕೃಷ್ಣಮೂರ್ತಿ, ಹರೀಶ್, ಕರುಣಾ ಕರ್, ಗೀತಾ, ಬಿಇಓ ವಿಜಯ ಕುಮಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾ ಯಕ ನಿರ್ದೇಶಕ ಚೆನ್ನಪ್ಪ, ಡಾ. ಲೀಲಾಪ್ರಕಾಶ್, ಮಂಡ್ಯ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾ ಪಕ ಡಾ. ಶಿವಲಿಂಗಸ್ವಾಮಿ ಮುಂತಾದವರು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಮಾರ್ಗದರ್ಶನ ನೀಡಿದರು.

ಓವೆಲ್ ಮೈದಾನ ಮಾತ್ರವಲ್ಲದೆ, ಮಾನಸ ಗಂಗೋತ್ರಿ ಆವರಣ, ಬೋಗಾದಿಯ ಹರಿ ವಿದ್ಯಾಲಯ ಸೇರಿದಂತೆ ಮೈಸೂರಿನ ಹಲವು ಶಿಕ್ಷಣ ಸಂಸ್ಥೆಗಳಲ್ಲಿ ಕಂಕಣ ಸೂರ್ಯ ಗ್ರಹಣ ವೀಕ್ಷಣೆಗೆ ವ್ಯವಸ್ಥೆ ಕಲ್ಪಿಸಲಾಗಿತ್ತು.

ಓವೆಲ್ ಮೈದಾನಕ್ಕೆ ಆಗಮಿಸಿದ್ದ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಸೈನ್ಸ್ ಫೌಂಡೇಷನ್ ವತಿಯಿಂದ ಬಿಸ್ಕೆಟ್ ಮತ್ತು ನೀರು ವಿತರಿಸುವ ಮೂಲಕ ಗ್ರಹಣದ ವೇಳೆ ಆಹಾರ ಸೇವಿಸಬಾರದು ಎಂಬ ಮೂಢನಂಬಿಕೆ ತೊಡೆದು ಹಾಕಲು ಪ್ರಯತ್ನಿಸಲಾಯಿತು.

ಮೌಢ್ಯಕ್ಕೆ ಸವಾಲೆಸೆದ ಬಾಣಂತಿ: ಗ್ರಹಣದ ವೇಳೆ ಗರ್ಭಿಣಿಯರು ಹಾಗೂ ಬಾಣಂತಿಯರು ಮನೆ ಬಿಟ್ಟು ಹೊರ ಬರಬಾರದು, ಗ್ರಹಣ ವೀಕ್ಷಿಸಬಾರದು ಎಂದು ಹೇಳಲಾಗುತ್ತದೆ. ಆದರೆ ಬಾಣಂತಿ ಯೋರ್ವರು ತನ್ನ ಪತಿ ಮತ್ತು ಹಸುಗೂಸಿ ನೊಂದಿಗೆ ಓವೆಲ್ ಮೈದಾನಕ್ಕೆ ಆಗಮಿಸಿ ಗ್ರಹಣ ವೀಕ್ಷಿಸುವ ಮೂಲಕ ಮೌಢ್ಯಕ್ಕೆ ಸವಾಲೆಸೆದರು. ಮೈಸೂರಿನ ಹೆಬ್ಬಾಳು ಭೈರವೇಶ್ವರ ನಗರದ ಗೃಹಿಣಿ ಸುಷ್ಮಾ ಅವರು ತಮ್ಮ ಪತಿ ಚೇತನ್, ನಾಲ್ಕು ವರ್ಷದ ಪುತ್ರಿ ಹಾಗೂ ಏಳು ತಿಂಗಳ ಹೆಣ್ಣು ಮಗು ವಿನ ಜೊತೆ ಕಂಕಣ ಸೂರ್ಯಗ್ರಹಣ ವೀಕ್ಷಿಸಿದರು. ಸುಷ್ಮಾ ಅವರ ತಾಯಿ ಗ್ರಹಣದ ವೇಳೆ ಹೊರಗೆ ಹೋದರೆ ಸಮಸ್ಯೆಯಾಗಬಹುದು ಎಂಬ ಆತಂಕ ವ್ಯಕ್ತಪಡಿಸಿದ್ದರು ಎಂದು ಹೇಳಲಾಗಿತ್ತು.ಅಪರೂಪಕ್ಕೆ ಸಿಗುವ ಇಂತಹ ಅವಕಾಶ ವನ್ನು ಕಳೆದುಕೊಳ್ಳಬಾರದು ಎಂಬ ಉದ್ದೇಶದಿಂದ ಗ್ರಹಣ ವೀಕ್ಷಿಸಿದ್ದಾಗಿ ಸುಷ್ಮಾ ತಮ್ಮ ಸಂತಸ ಹಂಚಿಕೊಂಡರು.

Translate »