ಹನೂರು, ಫೆ.10(ಸೋಮು)- ಪ್ರಾಥ ಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಸುರೇಶ್ ಕುಮಾರ್ ಸೋಮವಾರ ತಾಲೂಕಿನ ಕಾಡಂಚಿನ ಪಚ್ಚೇದೊಡ್ಡಿ ಗ್ರಾಮದಲ್ಲಿ ಶಾಲಾ ವಾಸ್ತವ್ಯ ಹೂಡಿದ್ದು, ಅವರಿಗೆ ಭರ್ಜರಿ ಸ್ವಾಗತ ನೀಡಲಾಯಿತು.
ಸಂಜೆ 7 ಗಂಟೆಗೆ ಗ್ರಾಮಕ್ಕೆ ಆಗಮಿಸಿದ ಸಚಿವರಿಗೆ ಗ್ರಾಮದ ಮಹಿಳೆಯರು ಹಾಗೂ ಮಕ್ಕಳು ಆರತಿ ಬೆಳಗುವ ಮೂಲಕ ಸ್ವಾಗತ ನೀಡಿದರು. ಗ್ರಾಮದ ಎಲ್ಲಾ ಬೀದಿ ರಸ್ತೆ ಗಳನ್ನು ಸ್ವಚ್ಛಗೊಳಿಸಿ ರಂಗೋಲಿ ಬಿಡಿಸಿ, ಹಸಿರು ತೋರಣ ಕಟ್ಟಿ ಶೃಂಗರಿಸಲಾಗಿತ್ತು.
ಗ್ರಾಮಕ್ಕೆ ಭೇಟಿ ನೀಡಿದ ಸಚಿವರು ಮೊದಲಿಗೆ ಗ್ರಾಮದ ಬಸವೇಶ್ವರ ದೇವ ಸ್ಥಾನಕ್ಕೆ ಭೇಟಿ ನೀಡಿ, ಪೂಜೆ ಸಲ್ಲಿಸಿದರು. ಈ ವೇಳೆ ಶಾಸಕ ಆರ್.ನರೇಂದ್ರ ಸಾಥ್ ನೀಡಿದರು. ನಂತರ ಗ್ರಾಮದಲ್ಲಿ ಸಾರ್ವ ಜನಿಕರ ಅಹವಾಲು ಸ್ವೀಕಾರ, ಶೈಕ್ಷಣಿಕ ಮತ್ತು ಇತರೆ ಮೂಲ ಸೌಲಭ್ಯಗಳ ಕೊರತೆ ಕುರಿತು ಆಯೋಜಿಸಿದ್ದ ಕಾರ್ಯಕ್ರಮ ವನ್ನು ಸಚಿವರು ಗಿಡಕ್ಕೆ ನೀರೆರೆಯುವ ಮೂಲಕ ಚಾಲನೆ ನೀಡಿದರು.
ಸಂಚಾರಿ ನ್ಯಾಯಬೆಲೆ ಅಂಗಡಿ ವ್ಯವಸ್ಥೆ: ಗ್ರಾಮದಲ್ಲಿ ಸಮರ್ಪಕವಾಗಿ ಪಡಿತರ ವಿತ ರಣೆ ಮಾಡುತ್ತಿಲ್ಲ. ಈ ಬಗ್ಗೆ ಕ್ರಮ ಕೈಗೊಳ್ಳ ಬೇಕು ಎಂದು ಗ್ರಾಮಸ್ಥರು ಸಚಿವರಿಗೆ ಮನವಿ ಸಲ್ಲಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾ ಧಿಕಾರಿ ಡಾ.ಎಂ.ಆರ್.ರವಿ, ತಿಂಗಳಲ್ಲಿ 2 ದಿನಗಳ ಕಾಲ ಗ್ರಾಮದಲ್ಲಿ ಸಂಚಾರಿ ನ್ಯಾಯ ಬೆಲೆ ಅಂಗಡಿ ವ್ಯವಸ್ಥೆ ಮಾಡಲಾಗುವುದು. ಇಂಟರ್‍ನೆಟ್ ಸಂಪರ್ಕ ದೊರೆತರೆ ಗ್ರಾಮ ದಲ್ಲೇ ಪಡಿತರ ವಿತರಣೆಗೆ ಅವಕಾಶ ಕಲ್ಪಿಸ ಲಾಗುವುದು ಎಂದು ಭರವಸೆ ನೀಡಿದರು. ಪಡಿತರ ವಿತರಣೆ ವೇಳೆ ಯಾರಾದರೂ ಹಣ ಕೇಳಿದರೆ ಕೂಡಲೇ ನಮಗೆ ಮಾಹಿತಿ ನೀಡಿದರೆ, ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.
7ನೇ ಮಗ್ಗಿ ಕೇಳಿದ ಸಚಿವರು: ಗ್ರಾಮದಲ್ಲಿ ಮಕ್ಕಳೊಂದಿಗೆ ಸಮಯ ಕಳೆದ ಸಚಿವ ಎಸ್.ಸುರೇಶ್‍ಕುಮಾರ್ ಮಕ್ಕಳನ್ನು ನೀವು ಮುಂದೆ ಏನಾಗುತ್ತೀರಾ? ನಿಮ್ಮ ಗ್ರಾಮದ ಅಭಿವೃದ್ಧಿಗೆ ಏನೆಲ್ಲಾ ಕೆಲಸಗಳನ್ನು ಮಾಡಬೇಕು? ಎಂದು ಪ್ರಶ್ನಿಸಿದರಲ್ಲದೇ ವಿದ್ಯಾರ್ಥಿಯೊಬ್ಬನನ್ನು 7ನೇ ಮಗ್ಗಿ ಹೇಳುವಂತೆ ಹೇಳಿದರು. ಸಚಿವರ ಪ್ರಶ್ನೆಗೆ ಉತ್ತರಿಸಿದ ವಿದ್ಯಾರ್ಥಿ 7ನೇ ಮಗ್ಗಿಯನ್ನು ನಿರರ್ಗಳವಾಗಿ ಹೇಳಿ ಸಚಿವರಿಂದ ಬೇಷ್ ಗಿರಿ ಪಡೆದನು. ಬಳಿಕ ಮಕ್ಕಳು ನಾವು ಮುಂದೆ ಜಿಲ್ಲಾ ಮಟ್ಟದ ಅಧಿಕಾರಿಗಳಾಗುತ್ತೇವೆ ಎಂದರಲ್ಲದೇ ಗ್ರಾಮದ ಸಮಸ್ಯೆಗಳನ್ನು ಸಚಿವರ ಗಮನಕ್ಕೆ ತಂದರು.
ಭರ್ಜರಿ ಊಟದ ವ್ಯವಸ್ಥೆ: ಸಭೆಯ ಬಳಿಕ ಸಚಿವರು ಗ್ರಾಮಸ್ಥರು ಮಾಡಿದ್ದ ಪುಳಿಯೊಗರೆ, ಚಿತ್ರಾನ್ನ, ಅನ್ನ ಸಾಂಬಾರ್, ರಂಸಂ, ಪಲ್ಯ ಹಪ್ಪಳ, ಉಪ್ಪಿನಕಾಯಿ ಸವಿದರು. ನಂತರ ವಾಸ್ತವ್ಯಕ್ಕೆ ಜಿಲ್ಲಾಡಳಿತದಿಂದ ವ್ಯವಸ್ಥೆ ಮಾಡಿದ್ದ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಮಲಗಿದರು. ಈ ಸಂದರ್ಭ ಜಿಪಂ ಸದಸ್ಯರಾದ ಬಸವರಾಜು, ಬಾಲರಾಜು, ಮರಗದ ಮಣಿ, ಮಂಜುಳ, ತಾಪಂ ಅಧ್ಯಕ್ಷ ರಾಜೇಂದ್ರ, ಸದಸ್ಯರಾದ ಜವಾದ್ ಅಹಮದ್, ನಟರಾಜು, ಗ್ರಾಪಂ ಅಧ್ಯಕ್ಷೆ ಸುಧಾಮಣಿ, ಸದಸ್ಯ ನಾರಾಯಣಗೌಡ, ಜಿಪಂ ಸಿಇಓ ಬಿ.ಹೆಚ್.ನಾರಾಯಣ್‍ರಾವ್, ಎಎಸ್‍ಪಿ ಅನಿತಾ ಹದ್ದಣ್ಣ, ಸಚಿವರ ಆಪ್ತ ಕಾರ್ಯದರ್ಶಿಗಳಾದ ಚಿದಂಬರಂ, ರಮೇಶ್, ಶಿಕ್ಷಣ ಇಲಾಖೆ ಅಧಿಕಾರಿಗಳಾದ ಜವರೇಗೌಡ, ಮಂಜುನಾಥ್, ಡಿಹೆಚ್‍ಓ ಡಾ.ರವಿ, ಡಿಎಫ್‍ಓ ಏಳುಕುಂಡಲು, ಎಸಿ ನಿಖಿತಾ ಚಿನ್ನಸ್ವಾಮಿ, ತಹಶೀಲ್ದಾರ್ ಕುನಾಲ್, ಡಿವೈಎಸ್‍ಪಿ ನವೀನ್‍ಕುಮಾರ್, ಬಿಇಓ ಟಿ.ಆರ್.ಸ್ವಾಮಿ, ವಿದ್ಯಾರ್ಥಿಗಳು, ಅಜ್ಜೀಪುರ, ಕಾಂಚಳ್ಳಿ, ಪಚ್ಚೆದೊಡ್ಡಿ ಗ್ರಾಮಸ್ಥರು ಇದ್ದರು.