ಮೈಸೂರು, ಫೆ. 10(ಆರ್‍ಕೆ)- ಭಾನುವಾರ ನಡೆದ ಮೈಸೂರು ಮಹಾನಗರಪಾಲಿಕೆ 18ನೇ ವಾರ್ಡ್ ಉಪ ಚುನಾವಣೆ ಮತ್ತು ಹುಣಸೂರು ನಗರಸಭೆಯ 31 ವಾರ್ಡ್‍ಗಳ ಮತ ಎಣಿಕೆ ಕಾರ್ಯ ಮಂಗಳವಾರ ನಡೆಯಲಿದೆ.
ಪಾಲಿಕೆ ಉಪಚುನಾವಣೆಯ ಮತ ಎಣಿಕೆಯು ಮೈಸೂರಿನ ಸಯ್ಯಾಜಿರಾವ್ ರಸ್ತೆಯಲ್ಲಿರುವ ಸರ್ಕಾರಿ ಸಂಸ್ಕøತ ಪಾಠಶಾಲೆಯಲ್ಲಿ ನಾಳೆ (ಫೆ. 11) ನಡೆದರೆ, ಹುಣ ಸೂರು ನಗರಸಭೆ ಚುನಾವಣೆಯ ಮತ ಎಣಿಕೆ ಅಲ್ಲಿನ ನಗರಸಭಾ ಕಾರ್ಯಾಲಯ ದಲ್ಲಿ ನಡೆಯಲಿದೆ. ಬೆಳಿಗ್ಗೆ 8 ಗಂಟೆಗೆ ಸ್ಟ್ರಾಂಗ್ ರೂಂ ತೆರೆದು ಇವಿಎಂಗಳಲ್ಲಿ ದಾಖ ಲಾಗಿರುವ ಮತಗಳ ಎಣಿಕೆ ಆರಂಭವಾಗಲಿದ್ದು, ಬೆಳಿಗ್ಗೆ 9 ಗಂಟೆ ವೇಳೆಗೆ ಫಲಿತಾಂಶ ಹೊರಬೀಳಲಿದೆ ಎಂದು ಚುನಾವಣಾಧಿಕಾರಿ ಹೆಚ್.ಎನ್.ಶಿವೇಗೌಡ ತಿಳಿಸಿದ್ದಾರೆ. ಸಂಸ್ಕøತ ಪಾಠಶಾಲೆಯಲ್ಲಿ ಒಂದೇ ಎಣಿಕಾ ಟೇಬಲ್ ಅಳವಡಿಸಿದ್ದು, 20 ಮಂದಿ ಎಣಿಕೆ ನಡೆಸುವುದರಿಂದ ಹಾಗೂ ಕಡಿಮೆ ಮತದಾನದ ಜೊತೆಗೆ ಕೇವಲ 3 ಮಂದಿ ಕಣದಲ್ಲಿರುವ ಕಾರಣ ಒಂದೇ ತಾಸಿನಲ್ಲಿ ಫಲಿತಾಂಶ ಪ್ರಕಟಗೊಳ್ಳುವ ನಿರೀಕ್ಷೆ ಇದೆ ಎಂದರು. ಮತ ಎಣಿಕಾ ಪ್ರಕ್ರಿಯೆಗೆ 150 ಪೊಲೀಸ್ ಸಿಬ್ಬಂದಿ ಬಳಸಿಕೊಳ್ಳಲಾಗುತ್ತಿದ್ದು, ಅಗತ್ಯ ಸಿದ್ಧತಾ ಕಾರ್ಯಪೂರ್ಣಗೊಂಡಿದೆ. ಮುಕ್ತ ಹಾಗೂ ಪಾರದರ್ಶಕವಾಗಿ ಮತಗಳ ಎಣಿಕೆ ಪ್ರಕ್ರಿಯೆ ನಡೆಸುವ ಸಲುವಾಗಿ ಅಭ್ಯರ್ಥಿಗಳ ಏಜೆಂಟರುಗಳೂ ಉಪಸ್ಥಿತರಿರಲು ಗುರುತಿನ ಚೀಟಿಗಳನ್ನು ವಿತರಿಸಲಾಗಿದೆ. ಪಾಲಿಕೆ 18ನೇ ವಾರ್ಡಿನ ಉಪಚುನಾವಣೆಯಲ್ಲಿ 11,877 ಮತದಾರರ ಪೈಕಿ 2,671 ಮಹಿಳೆಯರು ಸೇರಿ ಒಟ್ಟು ಕೇವಲ 5,265 ಮಂದಿ ಮಾತ್ರ (ಶೇ. 44.33) ತಮ್ಮ ಹಕ್ಕು ಚಲಾಯಿಸಿದ್ದಾರೆ. ಕಣದಲ್ಲಿ ಬಿಜೆಪಿಯ ಬಿ.ವಿ.ರವೀಂದ್ರ, ಕಾಂಗ್ರೆಸ್ಸಿನ ಆರ್. ರವೀಂದ್ರಕುಮಾರ್ ಹಾಗೂ ಜೆಡಿಎಸ್‍ನ ಸ್ವಾಮಿ ಇದ್ದು, ವಿಜಯಲಕ್ಷ್ಮಿ ಯಾರಿಗೆ ಒಲಿಯಲಿದ್ದಾಳೆ ಕಾದು ನೋಡಬೇಕು.