ಪ್ರಯತ್ನ, ದೇವರ ಅನುಗ್ರಹ ಶಿಕ್ಷಣದಲ್ಲಿ ಪ್ರಗತಿಗೆ ಅಗತ್ಯ
ಮೈಸೂರು

ಪ್ರಯತ್ನ, ದೇವರ ಅನುಗ್ರಹ ಶಿಕ್ಷಣದಲ್ಲಿ ಪ್ರಗತಿಗೆ ಅಗತ್ಯ

December 17, 2018

ಮೈಸೂರು: ಮಕ್ಕಳು ಶಿಕ್ಷಣದಲ್ಲಿ ಪ್ರಗತಿ ಸಾಧಿಸಬೇಕಾದರೆ ಪ್ರಯತ್ನ ಮತ್ತು ದೇವರ ಅನುಗ್ರಹ ಅಗತ್ಯ ಎಂದು ಪೇಜಾ ವರ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಹೇಳಿದರು.

ಸರಸ್ವತಿಪುರಂನ ವಿಜಯವಿಠಲ ವಿದ್ಯಾಶಾಲಾ ಆವರಣದಲ್ಲಿ ಶನಿವಾರ ಆಯೋಜಿಸಿದ್ದ ಶಾಲಾ ವಾರ್ಷಿಕೋತ್ಸವದಲ್ಲಿ ಮಾತನಾಡಿದ ಅವರು, ಮಕ್ಕಳು ಪ್ರತಿದಿನ ಒಳ್ಳೆಯ ಜ್ಞಾನ ನೀಡುವಂತೆ ದೇವರಲ್ಲಿ ಪ್ರಾರ್ಥಿಸಬೇಕು. ಜತೆಗೆ ಶ್ರಮಪಟ್ಟು ಓದಬೇಕು. ಆಗ ಮಾತ್ರ ಯಾವುದೇ ಕ್ಷೇತ್ರದಲ್ಲಾದರೂ ಯಶಸ್ಸು ಗಳಿಸಲು ಸಾಧ್ಯ. ಜೀವನದ ಉನ್ನತಿಗೆ ಲೌಕಿಕ ಶಿಕ್ಷಣ ಅವಶ್ಯ ಎಂದರು.

ಸೂರ್ಯನ ಪ್ರಕಾಶವಿಲ್ಲದೆ ಕಮಲ ಹೇಗೆ ಅರಳುವುದಿಲ್ಲವೋ ಹಾಗೆ ಧರ್ಮ, ಅಧ್ಯಾತ್ಮನ ಸೂರ್ಯನ ಪ್ರಕಾಶವಿಲ್ಲದೆ ಹೋದರೆ ಮಕ್ಕಳ ಹೃದಯ ಕಮಲವೂ ಅರಳುವುದಿಲ್ಲ. ಹಾಗಾಗಿ ಮುಂದಿನ ವರ್ಷದಿಂದ ಆಪೇಕ್ಷೆ ಇರುವವರಿಗೆ ಪ್ರತ್ಯೇಕವಾಗಿ ಧಾರ್ಮಿಕ ಶಿಕ್ಷಣವನ್ನು ನೀಡುವ ಕಾರ್ಯಕ್ರಮ ನಡೆಸಬೇಕೆಂಬ ಉದ್ದೇಶವಿದೆ. ಭಾರತೀಯ ಧರ್ಮ, ಸಂಸ್ಕøತಿ ಶಿಕ್ಷಣವನ್ನು ವಿಶೇಷವಾದ ರೀತಿಯಲ್ಲಿ ಮಕ್ಕಳಿಗೆ ದೊರಕಿಸಿ ಕೊಡಬೇಕೆಂಬುದು ನಮ್ಮ ಹಂಬಲ. ಹಾಗಾಗಿ ಪೋಷಕರು ಮನೆಯಲ್ಲಿ ಮಕ್ಕಳಿಗೆ ಭಾರತೀಯ ಧರ್ಮ, ಸಂಸ್ಕøತಿಯ ಬಗ್ಗೆ ಹೇಳಿಕೊಡಬೇಕು ಎಂದು ಹೇಳಿದರು. ವಿಜಯ ವಿಠಲ ಶಿಕ್ಷಣ ಸಂಸ್ಥೆ ಸಾವಿರಾರು ಮಕ್ಕಳಿಗೆ ವಿದ್ಯಾದಾನ ಮಾಡುವ ಮೂಲಕ ಮೈಸೂರಲ್ಲಿ ಶೈಕ್ಷಣಿಕ ಸೇವೆಯನ್ನು ಉತ್ತಮ ರೀತಿಯಲ್ಲಿ ಸಲ್ಲಿಸಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಅವಧೂತ ದತ್ತ ಪೀಠದ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಮಾತನಾಡಿ, ವಿದ್ಯೆ ಇಲ್ಲದವನು ಬಾಳು ವುದು ಕಷ್ಟ. ವಿದ್ಯೆ ಕಲಿತಿದ್ದರೆ ಸುಳ್ಳು ಹೇಳುವುದು, ತಪ್ಪು ಕೆಲಸಗಳನ್ನು ಮಾಡಲು ಅವಕಾಶ ಇರುವುದಿಲ್ಲ. ವಿದ್ಯೆ ವಿನಯ ಹೇಳಿಕೊಡುತ್ತದೆ. ಇಂದು ಶಾಲೆಗಳಲ್ಲಿ ಧಾರ್ಮಿಕ ವಿದ್ಯೆ ಹೇಳಿಕೊಡುವುದು ಕಡಿಮೆಯಾಗುತ್ತಿದೆ. ಆದರೆ, ವಿಜಯ ವಿಠಲ ಶಾಲೆಯಲ್ಲಿ ಆಧ್ಯಾತ್ಮಿಕ ವಿದ್ಯೆಯನ್ನು ಹೇಳಿಕೊಡುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಪೋಷಕರು ಮಕ್ಕಳಿಗೆ ಲೌಕಿಕದ ಜತೆಗೆ ಸನಾತನ ಧಾರ್ಮಿಕ ವಿಚಾರಗಳ ಬಗ್ಗೆಯೂ ಹೇಳಿಕೊಡಬೇಕು. ಸನಾತನ ಧರ್ಮವನ್ನು ಪ್ರತಿಯೊಬ್ಬರು ಅನುಸರಿಸಬೇಕು ಎಂದರು.

ಇದೇ ಸಂದರ್ಭದಲ್ಲಿ ಎಸ್‍ಎಸ್‍ಎಲ್‍ಸಿ, ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿ ಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ನಂತರ ವಿವಿಧ ಸಾಂಸ್ಕøತಿಕ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ವಿಜಯ ವಿಠಲ ಶಿಕ್ಷಣಸಂಸ್ಥೆ ಅಧ್ಯಕ್ಷ ಆರ್.ಗುರು, ಉದ್ಯಮಿ, ಟ್ರಸ್ಟಿ ಜಗನ್ನಾಥ ಶೆಣೈ, ಗೌರವ ಕಾರ್ಯದರ್ಶಿ ಆರ್.ವಾಸುದೇವ್ ಭಟ್, ಪ್ರಾಂಶುಪಾಲರಾದ ಎಸ್.ಪಿ.ಆಶಾ, ಸತ್ಯಪ್ರಸಾದ್ ಮತ್ತಿತರರು ಉಪಸ್ಥಿತರಿದ್ದರು.

Translate »