ವಿವಿಧೆಡೆ ಅಪಘಾತ, ಅನಾಹುತ ಇಬ್ಬರು ಮಹಿಳೆಯರು ಸೇರಿ 8 ಮಂದಿ ದುರ್ಮರಣ
ಮೈಸೂರು

ವಿವಿಧೆಡೆ ಅಪಘಾತ, ಅನಾಹುತ ಇಬ್ಬರು ಮಹಿಳೆಯರು ಸೇರಿ 8 ಮಂದಿ ದುರ್ಮರಣ

May 13, 2019

ಮೈಸೂರು: ವಿವಿಧೆಡೆ ಇಂದು ನಡೆದ ಅಪಘಾತ ಮತ್ತು ಅನಾಹುತಗಳಲ್ಲಿ ಇಬ್ಬರು ಮಹಿಳೆಯರು ಸೇರಿ 8 ಮಂದಿ ದುರ್ಮರಣ ಹೊಂದಿದ್ದು, ಇಂದು ಕರಾಳ ಭಾನುವಾರವಾಗಿ ಪರಿಣಮಿಸಿದೆ.

ಕೆ.ಆರ್.ಪೇಟೆಯಲ್ಲಿ ಬೈಕ್‍ಗೆ ಕೆಎಸ್ ಆರ್‍ಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಮಹಿಳೆಯರು ಸೇರಿದಂತೆ ಒಂದೇ ಕುಟುಂಬದ ಮೂವರು ಬಲಿಯಾಗಿದ್ದಾರೆ. ಶ್ರೀರಂಗಪಟ್ಟಣ ತಾಲೂಕು ಬಲಮುರಿ ಯಲ್ಲಿ ಮೈಸೂರಿನ ಇಬ್ಬರು ಯುವಕರು ನೀರು ಪಾಲಾಗಿದ್ದಾರೆ. ಕೊಡಗಿನ ಚಿಕ್ಲಿ ಹೊಳೆ ಜಲಾಶಯದಲ್ಲಿ ಮುಳುಗಿ ಇಬ್ಬರು ಯುವಕರು ಸಾವನ್ನಪ್ಪಿದರೆ, ಚಾಮರಾಜ ನಗರದ ಸುವರ್ಣಾವತಿ ಜಲಾಶಯದಲ್ಲಿ ಯುವಕನೋರ್ವ ಮುಳುಗಿ ಸಾವನ್ನಪ್ಪಿದ್ದಾರೆ.

ಕೆ.ಆರ್.ಪೇಟೆ: ಕೆಎಸ್‍ಆರ್‍ಟಿಸಿ ಬಸ್ ಮತ್ತು ಹೀರೋ ಹೋಂಡಾ ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಒಂದೇ ಕುಟುಂಬದ ಮೂವರು ಸಾವನ್ನಪ್ಪಿ ದ್ದಾರೆ. ಕೆ.ಆರ್.ಪೇಟೆಯ ಅಂಬೇಡ್ಕರ್ ನಗರ ನಿವಾಸಿ ಕೃಷ್ಣಯ್ಯ ಬಳ್ಳೇಕೆರೆ(40), ಅವರ ಪತ್ನಿ ಗೌರಿ (35) ಅತ್ತೆ ಜಯಮ್ಮ (55) ಅಪಘಾತದಲ್ಲಿ ಸಾವನ್ನಪ್ಪಿದವರು. ಇವರು ಮೂವರೂ ಒಂದೇ ಬೈಕ್‍ನಲ್ಲಿ ನಾಡನಹಳ್ಳಿಯಲ್ಲಿ ಅನಾರೋಗ್ಯದಿಂದಿದ್ದ ತಮ್ಮ ಸಂಬಂಧಿಕರನ್ನು ನೋಡಿಕೊಂಡು ಬರಲು ಹೋಗುತ್ತಿದ್ದರು. ಈ ವೇಳೆ ಪಟ್ಟ ಣದ ಹೊರಲಯದಲ್ಲಿ ಸಾದುಗೋನಹಳ್ಳಿ ಗ್ರಾಮದ ಬಳಿ ಇವರ ಬೈಕ್‍ಗೆ ಕೆಎಸ್‍ಆರ್ ಟಿಸಿ ಬಸ್ ಮುಖಾಮುಖಿ ಡಿಕ್ಕಿ ಹೊಡೆ ದಿದೆ. ಇದರ ಪರಿಣಾಮವಾಗಿ ಬೈಕ್‍ನಲ್ಲಿ ಪ್ರಯಾಣಿಸುತ್ತಿದ್ದ ಮೂವರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅಪಘಾತದ ನಂತರ ಚಾಲಕ ಬಸ್‍ಅನ್ನು ಅಲ್ಲೇ ಬಿಟ್ಟು ಪರಾರಿ ಯಾಗಿದ್ದಾನೆ. ಘಟನಾ ಸ್ಥಳಕ್ಕೆ ಕೆ.ಆರ್. ಪೇಟೆ, ಗ್ರಾಮಾಂತರ ಪೊಲೀಸ್ ಠಾಣೆಯ ಸಬ್ ಇನ್ಸ್‍ಪೆಕ್ಟರ್ ಆನಂದೇಗೌಡ ಮತ್ತು ಸಿಬ್ಬಂದಿ ಭೇಟಿ ನೀಡಿ, ಪ್ರಕರಣದ ದಾಖಲಿಸಿ ಕೊಂಡು ತನಿಖೆ ನಡೆಸುತ್ತಿದ್ದಾರೆ.

ಬಲಮುರಿ: ಶ್ರೀರಂಗಪಟ್ಟಣ ತಾಲೂಕು ಬೆಳಗೊಳ ಸಮೀಪದ ಬಲಮುರಿ ಕಾವೇರಿ ನದಿಯಲ್ಲಿ ಮೈಸೂರಿನ ಇಬ್ಬರು ಯುವಕರು ನೀರು ಪಾಲಾಗಿದ್ದಾರೆ.
ಮೈಸೂರಿನ ಗಾಂಧಿನಗರ ನಿವಾಸಿಗಳಾದ ಅಜಿತ್(19) ಮತ್ತು ಶಿವು (19) ಮೃತಪಟ್ಟ ಯುವಕರು. ಇವರು ತಮ್ಮ 6 ಜನ ಸ್ನೇಹಿತರೊಂದಿಗೆ ಬಲಮುರಿಗೆ ಬಂದಿದ್ದು, ಕಾವೇರಿ ನದಿಯಲ್ಲಿ ಈಜಾಡುವಾಗ ಇವರಿಬ್ಬರು ಮುಳುಗಿ ಸಾವನ್ನಪ್ಪಿದ್ದಾರೆ. ಈ ಸಂಬಂಧ ಕೆ.ಆರ್.ಎಸ್ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಚಿಕ್ಲಿಹೊಳೆ: ಕೊಡಗಿನ ಸುಂಟಿಕೊಪ್ಪ ಬಳಿ ಇರುವ ಚಿಕ್ಲಿ ಹೊಳೆ ಜಲಾಶಯದ ಹಿನ್ನೀರಿನಲ್ಲಿ ಈಜಲು ಹೋದ ಇಬ್ಬರು ಬಾಲಕರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿ ದ್ದಾರೆ. ಕಂಬಿಬಾಣೆ ಗ್ರಾಮದ ಸುಬ್ರಮಣಿ ಎಂಬುವರ ಪುತ್ರ ನಂದೀಶ್(16) ಮತ್ತು ಕೊಡಗರ ಹಳ್ಳಿಯ ಮಹದೇವು ಎಂಬವರ ಪುತ್ರ ಪವನ್(19) ಸಾವನ್ನಪ್ಪಿದವರು.
ಸಾವಿಗೀಡಾದ ನಂದೀಶ್ ಭಾಗಮಂಡಲದ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆಯಲ್ಲಿ 10ನೇ ತರಗತಿ ವ್ಯಾಸಂಗ ಮಾಡುತ್ತಿದ್ದ. ರಜೆ ಹಿನ್ನೆಲೆಯಲ್ಲಿ ಊರಿಗೆ ಬಂದಿದ್ದ ಆತ ತನ್ನ ನಾಲ್ವರು ಸ್ನೇಹಿತರೊಂದಿಗೆ ಚಿಕ್ಲಿ ಹೊಳೆ ಜಲಾಶಯಕ್ಕೆ ತೆರಳಿದ್ದಾನೆ. ಸಂಜೆ 4.30ರ ವೇಳೆಯಲ್ಲಿ ಸ್ನೇಹಿತರೆಲ್ಲರೂ ಈಜಾಡುತ್ತಿದ್ದಾಗ ನಂದೀಶ್ ಮತ್ತು ಪವನ್ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಈ ಸಂಬಂಧ ಸುಂಟಿಕೊಪ್ಪ ಠಾಣೆ ಪೊಲೀಸರು ಪ್ರಕರಣದ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಸುವರ್ಣಾವತಿ ಜಲಾಶಯ: ಚಾಮರಾಜನಗರ ಜಿಲ್ಲೆಯ ಸುವರ್ಣಾವತಿ ಜಲಾಶಯ ದಲ್ಲಿ ಮುಳುಗಿ ಯುವಕನೋರ್ವ ಸಾವನ್ನಪ್ಪಿದ್ದಾನೆ. ಮೂಲತಃ ಮಲ್ಲಯ್ಯನಪುರ ಗ್ರಾಮ ದವನಾಗಿದ್ದು, ಹಾಲಿ ರಾಮಸಮುದ್ರ ಬಡಾವಣೆಯಲ್ಲಿ ವಾಸವಿರುವ ಮಹದೇವಯ್ಯ ಎಂಬುವರ ಪುತ್ರ ಸಚಿನ್(20) ಸಾವನ್ನಪ್ಪಿದವನು. ಚಾಮರಾಜನಗರದ ಜಾಲಹಳ್ಳಿ ಹುಂಡಿ ಬಳಿಯ ದ್ವಿಚಕ್ರ ವಾಹನದ ಶೋರೂಂನಲ್ಲಿ ನೌಕರನಾಗಿದ್ದ ಈತ, ಸ್ನೇಹಿತನ ಹುಟ್ಟುಹಬ್ಬ ಆಚರಣೆಗಾಗಿ ಸ್ನೇಹಿತರ ಜೊತೆ ಸುವರ್ಣಾವತಿ ಜಲಾಶಯಕ್ಕೆ ತೆರಳಿದ್ದಾನೆ. ಮಧ್ಯಾಹ್ನ ಊಟದ ನಂತರ ಸ್ನೇಹಿತರು ಸ್ನಾನ ಮಾಡಲು ನೀರಿಗೆ ಇಳಿದಾಗ ಸಚಿನ್ ಮುಳುಗಿ ಸಾವನ್ನ ಪ್ಪಿದ್ದಾನೆ. ರಾಮಸಮುದ್ರ ಪೊಲೀಸ್ ಠಾಣೆ ಸಬ್ ಇನ್ಸ್‍ಪೆಕ್ಟರ್ ಪುಟ್ಟಸ್ವಾಮಿ ಮತ್ತು ಸಿಬ್ಬಂದಿ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Translate »