ಸಂತ ಶ್ರೇಷ್ಠ ಪೇಜಾವರ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಕೃಷ್ಣನಲ್ಲಿ ಲೀನ
ಮೈಸೂರು

ಸಂತ ಶ್ರೇಷ್ಠ ಪೇಜಾವರ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಕೃಷ್ಣನಲ್ಲಿ ಲೀನ

December 30, 2019

ಬೆಂಗಳೂರು, ಡಿ.29-ತೀವ್ರ ಉಸಿರಾಟದ ಸಮಸ್ಯೆ ಹಾಗೂ ನ್ಯುಮೋನಿಯಾದಿಂದ ಬಳಲುತ್ತಿದ್ದ ಪೇಜಾವರ ಮಠದ ಹಿರಿಯ ಯತಿ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ (88) ಭಾನುವಾರ ಮುಂಜಾನೆ ಕೃಷ್ಣೈಕ್ಯರಾಗಿದ್ದು, ಇಂದು ರಾತ್ರಿ ಬೆಂಗಳೂರು ವಿದ್ಯಾಪೀಠದ ಆವರಣದ ಬೃಂದಾ ವನದಲ್ಲಿ ಹರಿಯ ದಿವ್ಯಚರಣ ಸೇರಿದರು.

ಬೆಂಗಳೂರಿನ ವಿದ್ಯಾಪೀಠದಲ್ಲಿ ಮಾಧ್ವ ಸಂಪ್ರದಾಯ ದಂತೆ ಧಾರ್ಮಿಕ ವಿಧಿ-ವಿಧಾನಗಳನ್ನು ನೆರವೇರಿಸಲಾ ಯಿತು. ಪಾರ್ಥಿವ ಶರೀರಕ್ಕೆ ಸ್ನಾನ ಮಾಡಿಸಿ ಮುದ್ರಾಧಾರಣೆ, ಗೋಪಿಚಂದನ ಲೇಪಿಸಲಾಯಿತು. ನಂತರ ಶ್ರೀಗಳಿಗೆ ಹೊಸಬಟ್ಟೆ ತೊಡಿಸಿ, ತುಳಸಿ ಮಾಲೆ ಹಾಕಿ ಅಲಂಕಾರ ಗೊಳಿಸಲಾಯಿತು. ನಂತರ ಶ್ರೀಗಳವರ ಎರಡು ಪಟ್ಟು ಅಂದರೆ 9 ಅಡಿ ಆಳದ ಬೃಂದಾವನದಲ್ಲಿ ಶ್ರೀಗಳವರನ್ನು ಜಪ ಮಾಡುವ ಭಂಗಿಯಲ್ಲಿ ಕೂರಿಸಲಾಯಿತು. ಈ ವೇಳೆ ಶ್ರೀಗಳ ವರ ಬ್ರಹ್ಮರಂಧ್ರಕ್ಕೆ ತೆಂಗಿನಕಾಯಿಯನ್ನು ಇಟ್ಟು, ಐದು ರೀತಿಯ ದ್ರವ್ಯಗಳನ್ನಿಡಲಾಯಿತು. ಶ್ರೀಗಳವರ ಪಾರ್ಥಿವ ಶರೀರದ ಜೊತೆ ರಂಧ್ರವಿರುವ ಒಂದು ಸಾಲಿಗ್ರಾಮ ಹಾಗೂ ಶ್ರೀಗಳು ಬಳಸುತ್ತಿದ್ದ ಪೂಜಾ ಸಾಮಗ್ರಿಗಳನ್ನು ಇಟ್ಟು, ಸಾಸಿವೆ, ಉಪ್ಪು, ಕಾಳು ಮೆಣಸು, ಪಚ್ಚ ಕರ್ಪೂರ, ಹತ್ತಿ ಬಳಿಕ ದೇಶದ ವಿವಿಧ ಕ್ಷೇತ್ರಗಳಿಂದ ತರಿಸಲಾಗಿದ್ದ ಮಣ್ಣಿನಿಂದ ಬೃಂದಾವನವನ್ನು ಮುಚ್ಚಲಾಯಿತು. ಇದಕ್ಕೂ ಮುನ್ನ ಪೇಜಾವರ ಶ್ರೀಗಳ ಪಾರ್ಥಿವ ಶರೀರಕ್ಕೆ ರಾಷ್ಟ್ರಧ್ವಜ ಹೊದಿಸಿ ಸರ್ಕಾರಿ ಗೌರವ ಸಲ್ಲಿಸಲಾಯಿತು. ಮೂರು ಸುತ್ತು ಕುಶಾಲತೋಪು ಸಿಡಿಸಿ ಗೌರವ ಸೂಚಿಸಿ, ರಾಷ್ಟ್ರಗೀತೆಯ ನಮನ ಸಲ್ಲಿಸಲಾಯಿತು. ನಂತರ ಛತ್ರಿ-ಚಾಮರದೊಂದಿಗೆ ಶ್ರೀಗಳ ಪಾರ್ಥಿವ ಶರೀರವನ್ನು ಮೆರವಣಿಗೆ ಮೂಲಕ ಶ್ರೀ ಕೃಷ್ಣ ದರ್ಶನ ಮಾಡಿಸಿ ಬೃಂದಾವನದ ಬಳಿಗೆ ಕೊಂಡೊಯ್ದು ಅಂತಿಮ ವಿಧಿ-ವಿಧಾನಗಳನ್ನು ನೆರವೇರಿಸಲಾಯಿತು. ಈ ವೇಳೆ ಭಕ್ತ ಸಮೂಹ ಹೂಮಳೆಗರೆದು ಅಗಲಿದ ಯತಿ ಶ್ರೇಷ್ಠರಿಗೆ ಭಕ್ತಿ ಸಮರ್ಪಿಸಿದರು.

8 ದಿನಗಳ ಹಿಂದಷ್ಟೇ ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಪೇಜಾವರ ಶ್ರೀಗಳು ಡಿ.20ರಂದು ಮುಂಜಾನೆ 5ಕ್ಕೆ ಮಣಿಪಾಲ ಆಸ್ಪತ್ರೆಗೆ ಪ್ರಜ್ಞಾಹೀನ ಸ್ಥಿತಿಯಲ್ಲಿ ದಾಖಲಾಗಿದ್ದರು. ಅಂದಿನಿಂದ ಪ್ರಜ್ಞೆ ಮರಳಿ ಬಂದಿರಲಿಲ್ಲ. ನ್ಯೂಮೋನಿಯಾ ನಿಯಂತ್ರಣಕ್ಕೆ ಬಂದರೂ, ದಿನದಿಂದ ದಿನಕ್ಕೆ ಅವರ ಆರೋಗ್ಯ ಸ್ಥಿತಿ ಹದಗೆಟ್ಟು, ಅವರನ್ನು ಪ್ರಜ್ಞೆಗೆ ಮರಳಿಸುವ ಪ್ರಯತ್ನಗಳೆಲ್ಲವೂ ವಿಫಲಗೊಂಡಿತ್ತು. ಆರೋಗ್ಯ ತೀವ್ರ ಕುಸಿದು, ಮೆದುಳಿನ ಕಾರ್ಯ ಕುಂಠಿತಗೊಂಡಿತ್ತು. ಶ್ರೀಗಳ ಆರೋಗ್ಯದಲ್ಲಿ ಚೇತರಿಕೆ ಕಂಡು ಬರದ ಹಿನ್ನೆಲೆಯಲ್ಲಿ ಇಂದು ಬೆಳಿಗ್ಗೆ 6.55ರ ಸುಮಾರಿಗೆ ಶ್ರೀಗಳನ್ನು ಪೇಜಾವರ ಮಠಕ್ಕೆ ಆಂಬುಲೆನ್ಸ್ ಮೂಲಕ ಸ್ಥಳಾಂತರ ಮಾಡಲಾಗಿತ್ತು. ಅಲ್ಲದೆ, ಮಠದ ಕೊಠಡಿಯಲ್ಲಿಯೇ ಐಸಿಯುನಂತಹ ವಾತಾವರಣದಲ್ಲಿ ಚಿಕಿತ್ಸೆ ನೀಡಲು ಆರಂಭಿಸಲಾಗಿತ್ತು. ಆದರೂ, ಚಿಕಿತ್ಸೆ ಫಲಕಾರಿಯಾಗದೆ ಶ್ರೀಗಳು ಇಂದು ಬೆಳಿಗ್ಗೆ 9.20ಕ್ಕೆ ಕೊನೆಯುಸಿರೆಳೆದರು. ನಂತರ ಉಡುಪಿ ಮಠದ ಸಂಪ್ರದಾಯದಂತೆ ನಗಾರಿ ಬಾರಿಸಿ ವಿಶ್ವೇಶ ತೀರ್ಥ ಶ್ರೀಗಳು ಇನ್ನಿಲ್ಲ ಎಂದು ಘೋಷಿಸಲಾಯಿತು.

ಕೊನೆಯ ಆಸೆ: ಕೃತಕ ಉಸಿರಾಟದಲ್ಲಿದ್ದ ಅವರ ಆರೋಗ್ಯದಲ್ಲಿ ಯಾವುದೇ ಚೇತರಿಕೆ ಕಂಡುಬಾರದ ಹಿನ್ನೆಲೆಯಲ್ಲಿ ಅವರ ಕೊನೆಯ ಆಸೆಯಂತೆ ಉಡುಪಿ ಮಠಕ್ಕೆ ಕರೆದೊಯ್ಯ ಲಾಗಿತ್ತು. ಅಲ್ಲಿ ಅವರ ನಿಧನ ಸುದ್ದಿಯನ್ನು ಅಧಿಕೃತವಾಗಿ ಪ್ರಕಟಿಸಲಾಯಿತು. ಪೇಜಾವರ ಶ್ರೀಗಳು ಆರೋಗ್ಯವಂತರಾಗಿ ಆಸ್ಪತ್ರೆಯಿಂದ ಹೊರಬರಲಿ ಎಂದು ಅವರ ಅಸಂಖ್ಯೆ ಅಭಿಮಾನಿಗಳು, ಉಡುಪಿ ಮಠದ ಭಕ್ತರು ಪೂಜೆ, ಪ್ರಾರ್ಥನೆಗಳನ್ನು ಸಲ್ಲಿಸಿದ್ದರು. ಆದರೆ ಅವರುಗಳ ಪ್ರಾರ್ಥನೆ ಕೈಗೂಡಲಿಲ್ಲ. ಪೇಜಾವರ ಶ್ರೀಗಳ ಆರೋಗ್ಯದಲ್ಲಿ ತೀವ್ರ ಏರುಪೇರು ಕಂಡುಬಂದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಸಂಪುಟ ಸಹೊದ್ಯೋಗಿಗಳು ಸೇರಿದಂತೆ ಅನೇಕ ಗಣ್ಯರು ಆಸ್ಪತ್ರೆಗೆ ಭೇಟಿ ನೀಡಿದ್ದರು. ಇದರಿಂದ ಅವರ ಚಿಕಿತ್ಸೆಗೆ ತೊಂದರೆಯಾಗುತ್ತಿದೆ ಎಂದು ಆಸ್ಪತ್ರೆಯ ಆಡಳಿತ ಅವರನ್ನು ನೋಡಲು ಬರುವವರಿಗೆ ನಿರ್ಬಂಧ ವಿಧಿಸಿತ್ತು. ಉಡುಪಿಯ ಎಂಟು ಮಠಗಳ ಮಠಾಧೀಶರಲ್ಲಿಯೇ ಅತ್ಯಂತ ಪ್ರಭಾವಶಾಲಿಯಾಗಿದ್ದ ಶ್ರೀ ವಿಶ್ವೇಶತೀರ್ಥರು, ಜಾಗತಿಕ ಮನ್ನಣೆ ಗಳಿಸಿದ್ದರು. ರಾಜಕೀಯ, ಸಾಮಾಜಿಕ ವಿಚಾರಗಳಲ್ಲಿಯೂ ಅವರು ತೊಡಗಿಸಿಕೊಂಡಿದ್ದರು.

ಭಾನುವಾರ ಮಧ್ಯಾಹ್ನ ಒಂದು ಗಂಟೆವರೆಗೆ ಉಡುಪಿಯ ಅಜ್ಜರಕಾಡು ಮೈದಾನದಲ್ಲಿ ಶ್ರೀಗಳ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಬಳಿಕ ಶ್ರೀಗಳ ಪಾರ್ಥಿವ ಶರೀರವನ್ನು ಸೇನೆಯ ಹೆಲಿಕಾಪ್ಟರ್‍ನಲ್ಲಿ ಬೆಂಗಳೂರಿಗೆ ಸ್ಥಳಾಂತರಿಸಿ, ನ್ಯಾಷನಲ್ ಕಾಲೇಜು ಮೈದಾನದಲ್ಲಿ ಅಂತಿಮ ದರ್ಶನಕ್ಕೆ ಸಂಜೆ 5 ಗಂಟೆವರೆಗೆ ಅವಕಾಶ ಕಲ್ಪಿಸಲಾಗಿತ್ತು. ನಂತರ ಅವರ ಅಂತಿಮ ಕಾರ್ಯದ ವಿಧಿವಿಧಾನಗಳು ನೆರವೇರಿದವು.

ರಾಜ್ಯಾದ್ಯಂತ 3 ದಿನ ಶೋಕಾಚರಣೆ
ಬೆಂಗಳೂರು,ಡಿ.29-ಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ ಅವರ ನಿಧನ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ 3 ದಿನಗಳ ಶೋಕಾಚರಣೆ ಘೋಷಿಸಲಾಗಿದೆ. ಮಣಿಪಾಲ ದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಿಎಂ ಯಡಿಯೂರಪ್ಪ, ಸ್ವಾಮೀಜಿ ಆಶಯದಂತೆ ಬೆಂಗಳೂರಿನ ವಿದ್ಯಾಪೀಠದಲ್ಲಿ ಬೃಂದಾವನ ನಿರ್ಮಿಸಲಾಗಿದೆ ಎಂದರು.

ತಮ್ಮ ಮತ್ತು ಸ್ವಾಮೀಜಿ ಒಡನಾಟ ನೆನಪಿಸಿಕೊಂಡು ಭಾವುಕ ರಾದ ಯಡಿಯೂರಪ್ಪ, `ನಾನು ಸ್ವಾಮೀಜಿ ಜೊತೆಗೆ ಕಳೆದ 50 ವರ್ಷಗಳಿಂದ ನಿರಂತರ ಸಂಪರ್ಕದಲ್ಲಿದ್ದೆ. ಅವರು ಅಯೋಧ್ಯೆಯಲ್ಲಿ ರಾಮನ ವಿಗ್ರಹ ಪ್ರತಿಷ್ಠಾಪನೆಗೆ ಹೋದಾಗ ಅವರ ಜೊತೆಗೆ ನಾನೂ ಇದ್ದೆ. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಆಗಬೇಕು ಎಂಬ ಕನಸು ಅವರ ದ್ದಾಗಿತ್ತು. ಈಗ ಸುಪ್ರೀಂಕೋರ್ಟ್ ಸಹ ಅದೇ ತೀರ್ಪು ನೀಡಿದೆ. ಆದರೆ ರಾಮಮಂದಿರ ನೋಡಲು ಅವರಿಗೆ ಆಗಲಿಲ್ಲ’ ಎಂದರು. `ನಮ್ಮ ದೇಶದ ಇತಿಹಾಸದಲ್ಲಿ ಯಾವುದೇ ಸ್ವಾಮೀಜಿ ಹೀಗೆ ದೇಶದ ಉದ್ದಗಲಕ್ಕೆ ಪ್ರವಾಸ ಮಾಡಿದ್ದು ನಾನು ನೋಡಿಲ್ಲ. ಆಸ್ಪತ್ರೆ ಸೇರುವ ಎರಡು ದಿನ ಹಿಂದೆಯೂ ಪ್ರವಾಸ ಮಾಡಿದ್ದರು. ಇಂಥ ಅಪರೂಪದ ಯತಿವರೇಣ್ಯ ಸಿಗುವುದು ಕಷ್ಟ. ಅಂಥ ಮಹಾನ್ ಪೂಜ್ಯರನ್ನು ಕಳೆದು ಕೊಂಡು ದೇಶ ಬಡವಾಗಿದೆ’ ಎಂದು ವಿಷಾದಿಸಿದರು.

Translate »