ವೃದ್ಧೆಗೆ ನಕಲಿ ಚಿನ್ನಾಭರಣ ನೀಡಿ,  ಅಸಲಿ ಆಭರಣ ದೋಚಿ ಪರಾರಿ ತಡವಾಗಿ ಬೆಳಕಿಗೆ ಬಂದ ವಂಚನೆ ಪ್ರಕರಣ
ಮೈಸೂರು

ವೃದ್ಧೆಗೆ ನಕಲಿ ಚಿನ್ನಾಭರಣ ನೀಡಿ,  ಅಸಲಿ ಆಭರಣ ದೋಚಿ ಪರಾರಿ ತಡವಾಗಿ ಬೆಳಕಿಗೆ ಬಂದ ವಂಚನೆ ಪ್ರಕರಣ

July 6, 2018

ಮೈಸೂರು:  ಅಪರಿಚಿತರಿಬ್ಬರು ಹಾಡಹಗಲೇ ವೃದ್ಧೆಯೊಬ್ಬರಿಗೆ ವಂಚಿಸಿ, ಸುಮಾರು ಒಂದು ಲಕ್ಷ ಮೌಲ್ಯದ ಚಿನ್ನಾಭರಣವನ್ನು ದೋಚಿರುವ ಘಟನೆ ಮೈಸೂರಿನ ದೇವರಾಜ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಮೈಸೂರಿನ ಜೆ.ಪಿ.ನಗರದ ನಿವಾಸಿ ಪುಟ್ಟಮ್ಮ(55), ನಕಲಿ ಚಿನ್ನಾಭರಣಕ್ಕೆ ಆಸೆ ಬಿದ್ದು, ವಂಚನೆಗೊಳಗಾಗಿ ಸುಮಾರು 38 ಗ್ರಾಂ ತೂಕದ ತಮ್ಮ ಅಸಲಿ ಚಿನ್ನಾಭರಣವನ್ನು ಕಳೆದುಕೊಂಡಿದ್ದಾರೆ.

ಪುಟ್ಟಮ್ಮ ಅವರು ಜೂ.26ರಂದು ಕಣ್ಣಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು, ಗಾಂಧೀ ವೃತ್ತದ ಸಮೀಪ ಸುಮಂಗಲಿ ಸಿಲ್ಕ್ಸ್ ಬಳಿ ನಡೆದುಕೊಂಡು ಬರುತ್ತಿದ್ದರು. ಆಗ ಎದುರಾದ ಅಪರಿಚಿತ ಮಹಿಳೆ, ನನ್ನ ಮಗನನ್ನು ಕೆ.ಆರ್.ಆಸ್ಪತ್ರೆಗೆ ದಾಖಲಿಸಿದ್ದೇವೆ. ಚಿಕಿತ್ಸೆಗೆ ಹಣ ಬೇಕು. ನನ್ನ ಬಳಿಯಿರುವ ಚಿನ್ನಾಭರಣವನ್ನು ಮಾರಬೇಕಿದೆ ಎಂದು ಭಾವನಾತ್ಮಕವಾಗಿ ನಿವೇದಿಸಿಕೊಂಡಿದ್ದಾಳೆ. ತನ್ನ ಬಳಿ ಇದ್ದ ಲಕ್ಷ್ಮೀ ಕಾಸಿನ ಸರ ಸೇರಿದಂತೆ ನಕಲಿ ಚಿನ್ನಾಭರಣ ತೋರಿಸಿದ್ದಾಳೆ.

ಅಲ್ಲದೆ ಸಯ್ಯಾಜಿರಾವ್ ರಸ್ತೆ ಕಡೆಗೆ ಬರುತ್ತಿದ್ದ ಪುಟ್ಟಮ್ಮ ಅವರೊಂದಿಗೆ ಸಹಾಯ ಕೇಳುವ ನೆಪದಲ್ಲಿ ಹೆಜ್ಜೆ ಹಾಕಿದ ವಂಚಕಿ, ಪಕ್ಕದ ಗಲ್ಲಿಯೊಂದಕ್ಕೆ ಕರೆದೊಯ್ದು, ನೀವೇ ಈ ಚಿನ್ನಾಭರಣ ತೆಗೆದುಕೊಂಡು ಹಣ ನೀಡಿ ಎಂದು ಕೇಳಿಕೊಂಡಿದ್ದಾಳೆ. ಪೂರ್ವ ಯೋಜನೆಯಂತೆ ಈ ಇಬ್ಬರನ್ನೂ ಹಿಂಬಾಲಿಸಿಕೊಂಡು ಬಂದಿದ್ದ ವ್ಯಕ್ತಿಯೋರ್ವ, ನನಗೇ ಚಿನ್ನಾಭರಣ ನೀಡು, ಹಣ ಕೊಡುತ್ತೇನೆಂದು ಕೇಳಿದರೂ ಈಕೆ ಕೇಳುತ್ತಿಲ್ಲ ಎಂದು ಗಂಭೀರವಾಗಿ ಹೇಳಿದ್ದಾನೆ. ಹಾಗೆಯೇ ಆ ಮಹಿಳೆಯ ಬಳಿಯಿದ್ದ ಚಿನ್ನಾಭರಣವನ್ನು ತೆಗೆದುಕೊಂಡು ಕೈಯ್ಯಲ್ಲಿ ಉಜ್ಜಿ, ಪರೀಕ್ಷಿಸಿದಂತೆ ನಾಟಕವಾಡಿ, ಇದೆಲ್ಲಾ ಅಸಲಿ ಚಿನ್ನಾಭರಣವಾಗಿದ್ದು, ಸುಮಾರು 5 ಲಕ್ಷ ಬೆಲೆ ಬಾಳಬಹುದು ಎಂದು ಪುಟ್ಟಮ್ಮ ಅವರಿಗೆ ಮೆಲುದನಿಯಲ್ಲಿ ಹೇಳಿ, ನಾನು ಬ್ಯಾಂಕ್‍ನಲ್ಲಿ ಹಣ ತೆಗೆದುಕೊಂಡು ಬರುತ್ತೇನೆ. ಅಲ್ಲಿಯವರೆಗೆ ಇಲ್ಲಿಯೇ ಇರು ಎಂದು ಹೇಳಿ ಅಲ್ಲಿಂದ ಮರೆಯಾಗಿದ್ದಾನೆ.

ಇದೆಲ್ಲವನ್ನೂ ಗಮನಿಸಿದ ಪುಟ್ಟಮ್ಮ ಅವರಿಗೆ ಆ ಮಹಿಳೆಯ ಮೇಲೆ ನಂಬಿಕೆ ಹುಟ್ಟಿದೆ. ಆಕೆಯ ಬಳಿಯಿರುವುದು ಅಸಲಿ ಚಿನ್ನಾಭರಣವೇ ಎಂದುಕೊಂಡಿದ್ದಾರೆ. ಆದರೆ ನನ್ನ ಬಳಿ ಹಣವಿಲ್ಲ, ನಾನೇಗೆ ಕೊಳ್ಳಲು ಸಾಧ್ಯ? ಎಂದು ಆ ಮಹಿಳೆಗೆ ತಿಳಿಸಿದ್ದಾರೆ. ನನಗೆ ತುರ್ತಾಗಿ ಹಣ ಬೇಕಿದ್ದರಿಂದ ಇದನ್ನು ಮಾರುತ್ತಿದ್ದೇನೆ. ಈಗ ಬಂದು ಹೋದ ವ್ಯಕ್ತಿ ಯಾರೆಂದು ನನಗೆ ತಿಳಿದಿಲ್ಲ. ಆತನಿಗೆ ಕೊಡುವುದಕ್ಕೂ ನನಗೆ ಇಷ್ಟವಿಲ್ಲ. ನೀವು ನಮ್ಮಂತೆ ಬಡವರು, ನೀವೇ ತೆಗೆದುಕೊಳ್ಳಿ. ಕಡಿಮೆ ಬೆಲೆಗೆ ಮಾರುವುದಕ್ಕಿಂತ ನಿಮಗಾದರೂ ಪ್ರಯೋಜನವಾಗಲಿ. ಬದಲಾಗಿ ನಿಮ್ಮ ಬಳಿಯಿರುವ ಸಣ್ಣ ಪುಟ್ಟ ಒಡವೆಗಳು ಹಾಗೂ 5 ಸಾವಿರ ರೂ. ಹಣ ನೀಡಿ ಸಾಕು ಎಂದು ಹೇಳಿದ್ದಾಳೆ.

ಅಪರಿಚಿತಳ ನಾಟಕವನ್ನು ನಿಜವೆಂದು ನಂಬಿದ್ದ ಪುಟ್ಟಮ್ಮ, 27 ಗ್ರಾಂ ತೂಕದ ಸರ, 4 ಗ್ರಾಂ ತೂಕದ ಮಾಟಿ ಹಾಗೂ 7 ಗ್ರಾಂ ತೂಕದ ಓಲೆಗಳನ್ನು ಬಿಚ್ಚಿ, ಆ ಮಹಿಳೆಯ ಕೈಗಿತ್ತು, ಆಕೆಯ ಬಳಿಯಿದ್ದ ಅಪಾರ ಪ್ರಮಾಣದ ನಕಲಿ ಚಿನ್ನಾಭರಣವನ್ನು ಪಡೆದುಕೊಂಡಿದ್ದಾರೆ. ಇಷ್ಟಕ್ಕೂ ಬಿಡದ ವಂಚಕಿ, 5 ಸಾವಿರ ರೂ. ಹಣಕ್ಕೂ ಪಟ್ಟು ಹಿಡಿದಿದ್ದಾಳೆ. ಅಷ್ಟು ಹಣವಿಲ್ಲದ ಕಾರಣ ಪುಟ್ಟಮ್ಮ ಅವರು ತಮ್ಮ ಸಹೋದರಿಗೆ ಕರೆ ಮಾಡಿ, ಕಡಿಮೆ ಬೆಲೆಗೆ ಒಡವೆ ಮಾರುತ್ತಿದ್ದಾರೆ, ನನಗೆ ತುರ್ತಾಗಿ 5 ಸಾವಿರ ರೂ. ಹಣ ಬೇಕು ತೆಗೆದುಕೊಂಡು ಬಾ ಎಂದು ಹೇಳಿದ್ದಾರೆ. ಇದರಿಂದ ಅನುಮಾನಗೊಂಡ ಪುಟ್ಟಮ್ಮ ಅವರ ಸಹೋದರಿ, ಅದೆಲ್ಲಾ ಸುಳ್ಳು. ನಾನು ಈಗಲೇ ಬರುತ್ತೇನೆ. ಅದನ್ನೆಲ್ಲಾ ಕೊಳ್ಳಬೇಡ ಎಂದು ಹೇಳುವಷ್ಟರಲ್ಲಿ ಕರೆ ಕಡಿತವಾಗಿತ್ತು.

ಯಾರೋ ಸ್ಥಳಕ್ಕೆ ಬರುತ್ತಾರೆಂದು ತಿಳಿದ ವಂಚಕಿ, ಹಣವಿಲ್ಲದಿದ್ದರೆ ಪರವಾಗಿಲ್ಲ ಬಿಡಿ. ಇದನ್ನೆಲ್ಲಾ ಜೋಪಾನವಾಗಿ ತೆಗೆದುಕೊಂಡು ಹೋಗಿ ಎಂದು ಹೇಳಿ ವಂಚಕಿ ಕಾಲ್ಕಿತ್ತಿದ್ದಾಳೆ. ಕೆಲ ಹೊತ್ತಿನ ಬಳಿಕ ಪುಟ್ಟಮ್ಮ ಅವರ ಸಹೋದರಿ ಸ್ಥಳಕ್ಕೆ ಬಂದು, ಅವರ ಬಳಿಯಿದ್ದ ಚಿನ್ನಾಭರಣ ನೋಡಿದ್ದಾರೆ. ಅದನ್ನೆಲ್ಲಾ ಚಿನ್ನದ ಅಂಗಡಿಯೊಂದರಲ್ಲಿ ಪರೀಕ್ಷಿಸಿದಾಗ ನಕಲಿ ಎಂಬುದು ಗೊತ್ತಾಗಿದೆ. ಘಟನೆಯ ಬಗ್ಗೆ ವಿಚಾರಿಸಿಕೊಂಡ ಪುಟ್ಟಮ್ಮ ಅವರ ಸಹೋದರಿ, ವಂಚಿಸಿದವರಿಗೆ ಹುಡುಕಾಟ ನಡೆಸಿದ್ದಾರೆ. ಆದರೆ ಎಲ್ಲಿಯೂ ಕಾಣ ಸಲಿಲ್ಲ.

ಮೋಸಹೋಗಿ ಚಿನ್ನಾಭರಣ ಕಳೆದುಕೊಂಡ ಪುಟ್ಟಮ್ಮ, ಸ್ವಲ್ಪ ಆಘಾತಕ್ಕೆ ಒಳಗಾಗಿದ್ದ ಕಾರಣ ತಡವಾಗಿ ದೂರು ನೀಡಿದ್ದಾರೆ ಎಂದು ಪ್ರಕರಣ ದಾಖಲಿಸಿಕೊಂಡಿರುವ ದೇವರಾಜ ಠಾಣೆಯ ಪೊಲೀಸರು ತಿಳಿಸಿದ್ದಾರೆ. ವೃದ್ಧ ಮಹಿಳೆಯರನ್ನೇ ವಂಚಕರು ಗುರಿಯಾಗಿಸಿಕೊಂಡು ದುಷ್ಕøತ್ಯ ಮೆರೆಯುತ್ತಿದ್ದಾರೆ. ಏನಾದರೂ ಹೇಳಿ ಅಮಾಯಕರನ್ನು ನಂಬಿಸಿ, ಚಿನ್ನಾಭರಣ, ಹಣವನ್ನು ದೋಚುತ್ತಿದ್ದಾರೆ. ಕೆ.ಆರ್.ಆಸ್ಪತ್ರೆ ಆವರಣ ಸೇರಿದಂತೆ ಅನೇಕ ಕಡೆಗಳಲ್ಲಿ ಈ ರೀತಿಯ ಘಟನೆಗಳು ನಡೆದಿವೆ. ಅಪರಿಚಿತರ ಬಗ್ಗೆ ಎಚ್ಚರದಿಂದಿರುವಂತೆ ಹೇಳಿದರೂ ಜನ ಮೋಸ ಹೋಗುತ್ತಿದ್ದಾರೆ. ಹೀಗೆ ವಂಚಿಸುವ ದುಷ್ಕರ್ಮಿಗಳ ಪತ್ತೆಗೆ ಜಾಲ ಬೀಸಿದ್ದೇವೆ. ಕೆಲ ದಿನಗಳಲ್ಲೇ ಅವರನ್ನು ಪತ್ತೆ ಹಚ್ಚಿ, ಬಂಧಿಸುತ್ತೇವೆಂದು ಪೊಲೀಸರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Translate »