ಭಾಗಮಂಡಲ ಜಿಪಂ ಕ್ಷೇತ್ರದ ಬಿಜೆಪಿ ಸದಸ್ಯ ಆಯ್ಕೆ ಅಸಿಂಧು
ಕೊಡಗು

ಭಾಗಮಂಡಲ ಜಿಪಂ ಕ್ಷೇತ್ರದ ಬಿಜೆಪಿ ಸದಸ್ಯ ಆಯ್ಕೆ ಅಸಿಂಧು

December 5, 2018

ಪರಾಜಿತ ದೇವಂಗೋಡಿ ತಿಲಕ ಸುಬ್ರಾಯಗೆ ಗೆಲುವಿನ ಹೂರಣ
ಮಡಿಕೇರಿ:  ಕೊಡಗು ಜಿಲ್ಲಾ ಪಂಚಾಯಿ ತಿಯ ಭಾಗಮಂಡಲದ ಕ್ಷೇತ್ರದ ಚುನಾಯಿತ ಪ್ರತಿನಿಧಿ ಬಿಜೆಪಿಯ ಕವಿತಾ ಪ್ರಭಾಕರ್ ಅವರ ಗೆಲುವನ್ನು ಅಸಿಂಧು ಎಂದು ಘೋಷಿಸಿ ಮಡಿಕೇರಿ ಹಿರಿಯ ಸಿವಿಲ್ ನ್ಯಾಯಾಲಯ ಆದೇಶ ಹೊರಡಿಸಿದೆ. ಮಾತ್ರವಲ್ಲದೆ, ಕವಿತಾ ಪ್ರಭಾಕರ್ ಅವರ ಎದುರಾಳಿಯಾಗಿ ಸ್ಪರ್ಧಿಸಿ ಪರಾಭವಗೊಂಡಿದ್ದ ದೇವಂಗೋಡಿ ತಿಲಕ ಸುಬ್ರಾಯ ಅವರನ್ನು ವಿಜೇತ ಅಭ್ಯರ್ಥಿಯಾಗಿ ಘೋಷಿಸಿ ನ್ಯಾಯಾಲಯ ಅಪರೂಪದ ತೀರ್ಪು ನೀಡಿದೆ.

ಪ್ರಕರಣ ಹಿನ್ನಲೆ: ಭಾಗಮಂಡಲ ಜಿಲ್ಲಾ ಪಂಚಾ ಯಿತಿನ ಮಹಿಳಾ ಮೀಸಲಾತಿ ಕ್ಷೇತ್ರಕ್ಕೆ ಅಭ್ಯರ್ಥಿಗಳಾಗಿ ಬಿಜೆಪಿಯಿಂದ ಕವಿತಾ ಪ್ರಭಾಕರ್ ಮತ್ತು ಕಾಂಗ್ರೆಸ್ ನಿಂದ ದೇವಂಗೋಡಿ ತಿಲಕ ಸುಬ್ರಾಯ ಅವರುಗಳು ಸ್ಪರ್ಧಿಸಿದ್ದರು. 2016ರ ಫೆಬ್ರವರಿ 20ರಂದು ನಡೆದ ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಬಿಜೆಪಿಯ ಕವಿತಾ ಪ್ರಭಾಕರ್ ಗೆಲುವು ಸಾಧಿಸಿದ್ದರು. ಚುನಾವಣೆಯಲ್ಲಿ ಪರಾಭವಗೊಂಡ ಕಾಂಗ್ರೇಸ್ ಅಭ್ಯರ್ಥಿ ದೇವಂಗೋಡಿ ತಿಲಕ ಸುಬ್ರಾಯ, ಕವಿತಾ ಪ್ರಭಾಕರ್ ಅವರ ಗೆಲುವನ್ನು ಪ್ರಶ್ನಿಸಿ ವಕೀಲ ಎಂ.ಎನ್.ನಿರಂಜನ್ ಅವರ ಮೂಲಕ ಮಡಿಕೇರಿಯ ಹಿರಿಯ ಸಿವಿಲ್ ನ್ಯಾಯಾಲಯದಲ್ಲಿ ಚುನಾವಣಾ ತಕರಾರು ಅರ್ಜಿ ಸಲ್ಲಿಸಿದ್ದರು.

ಕರ್ನಾಟಕ ಗ್ರಾಮ ಸ್ವರಾಜ್ಯ ಮತ್ತು ಪಂಚಾಯತ್ ರಾಜ್ ಕಾಯಿದೆಯ ಕಲಂ 167(ಹೆಚ್)ನ ಅನ್ವಯ ಯಾವುದೇ ಪಂಚಾಯತ್ ಸದಸ್ಯರಿಗೆ ಪಂಚಾಯಿತಿ ಕಾಮಗಾರಿಗಳಲ್ಲಿ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಯಾವುದೇ ಹಿತಾಸಕ್ತಿಗಳಿರ ಬಾರದು. ಆದರೆ, ಕವಿತಾ ಪ್ರಭಾಕರ್ ಅವರ ಪತಿ ಪ್ರಭಾಕರ್ ಎಂಬುವರು ಜಿಪಂ ಗುತ್ತಿಗೆದಾರರಾಗಿದ್ದು, ಪಂಚಾಯಿತಿ ಕಾಮ ಗಾರಿಗಳನ್ನು ನಡೆಸಿದ್ದರು. ಮಾತ್ರವಲ್ಲದೇ, ಚುನಾವಣೆ ನಡೆದ ಬಳಿಕ ಪ್ರಭಾಕರ್ ಅವರಿಗೆ ಪಂಚಾಯಿತಿಯಿಂದ ಹಣ ಬಿಡುಗಡೆಯಾಗಿರುವ ಬಗ್ಗೆ ವಕೀಲ ನಿರಂಜನ್ ನ್ಯಾಯಾಲಯದ ಗಮನ ಸೆಳೆದಿದ್ದರು. ಕರ್ನಾಟಕ ಗ್ರಾಮ ಸ್ವರಾಜ್ಯ ಮತ್ತು ಪಂಚಾಯತ್ ರಾಜ್ ಕಾಯಿದೆ ಉಲ್ಲಂಘಿಸಿರುವುದನ್ನು ಪ್ರಮುಖ ಸಾಕ್ಷಿಯನ್ನಾಗಿಸಿ ಅರ್ಜಿದಾರರ ಪರ ವಕೀಲ ನಿರಂಜನ್ ನ್ಯಾಯಾಲ ಯದಲ್ಲಿ ವಾದ ಮಂಡಿಸಿದ್ದರು. ವಾದ ಪ್ರತಿವಾದ ಮತ್ತು ಸಾಕ್ಷಿಗಳನ್ನು ಪರಿಗಣಿಸಿದ ಹಿರಿಯ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶರಾದ ವಿಜಯ್ ಕುಮಾರ್ ಬಿಜೆಪಿಯ ಕವಿತಾ ಪ್ರಭಾಕರ್ ಅವರ ಗೆಲುವನ್ನು ಅಸಿಂಧು ಎಂದು ಘೋಷಿಸಿ ತೀರ್ಪು ನೀಡಿದ್ದಲ್ಲದೇ, ಚುನಾವಣೆಯಲ್ಲಿ ಪರಾಭವಗೊಂಡಿದ್ದ ತಿಲಕ ಸುಬ್ರಾಯ ಅವರನ್ನು ವಿಜೇತ ಅಭ್ಯರ್ಥಿ ಎಂದು ಘೋಷಿಸಿ ಆದೇಶ ಹೊರಡಿಸಿದರು.

Translate »