ಎಂಸಿಡಿಸಿಸಿ ಬ್ಯಾಂಕ್‍ಗೆ ನ.12ರಂದು ಚುನಾವಣೆ
ಮೈಸೂರು

ಎಂಸಿಡಿಸಿಸಿ ಬ್ಯಾಂಕ್‍ಗೆ ನ.12ರಂದು ಚುನಾವಣೆ

October 31, 2018

ಮೈಸೂರು: ಮೈಸೂರು ಮತ್ತು ಚಾಮರಾಜನಗರ ಜಿಲ್ಲೆ ಸಹಕಾರ ಕೇಂದ್ರ (ಎಂಸಿಡಿಸಿಸಿ) ಬ್ಯಾಂಕ್‍ನ ಮುಂದಿನ 5 ವರ್ಷಗಳ ಆಡಳಿತ ಮಂಡಳಿ ನಿರ್ದೇಶಕರ ಆಯ್ಕೆಗೆ ನ.12ರಂದು ಚುನಾವಣೆ ನಿಗದಿ ಯಾಗಿದ್ದು, ಕೇವಲ 241 ಮಂದಿ ಮಾತ್ರ ಮತದಾನಕ್ಕೆ ಅರ್ಹರಾಗಿದ್ದಾರೆ. ಚುನಾವಣೆ ಹಿನ್ನೆಲೆಯಲ್ಲಿ ಬ್ಯಾಂಕ್ ವ್ಯಾಪ್ತಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು, ಗೃಹ ನಿರ್ಮಾಣ ಸಹಕಾರ ಸಂಘಗಳು, ಪಟ್ಟಣ ಸಹಕಾರ ಬ್ಯಾಂಕ್‍ಗಳು, ಪತ್ತಿನ ಸಹಕಾರ ಸಂಘಗಳು, ಬಳಕೆದಾರರ ಸಹಕಾರ ಸಂಘಗಳು, ಹಾಲು ಉತ್ಪಾದಕರ ಸಹಕಾರ ಸಂಘ ಗಳು ಹಾಗೂ ಇತರೆ ಸಹಕಾರಿ ಸಂಘಗಳು ಸೇರಿದಂತೆ ಎಲ್ಲಾ 7 ಕ್ಷೇತ್ರಗಳಿಂದ ಸಭಾ ನಡಾವಳಿ ಮೂಲಕ ಸಂಘ ಗಳಿಂದ ಮತದಾನದಲ್ಲಿ ಭಾಗವಹಿಸುವ ಪ್ರತಿನಿಧಿಗಳನ್ನು ಆಯ್ಕೆ ಮಾಡಿ ಕಳುಹಿಸಲಾಗಿತ್ತು. ಒಟ್ಟು 1628 ಸೊಸೈಟಿ ಗಳಿಂದ 1086 ಪ್ರತಿನಿಧಿಗಳ ಅರ್ಜಿ ಸಲ್ಲಿಕೆಯಾಗಿದ್ದವು.

ಬಳಿಕ ಜಿಲ್ಲಾ ಚುನಾವಣಾಧಿಕಾರಿಯೂ ಆದ ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಸೂಚನೆ ಮೇರೆಗೆ ಎಲ್ಲಾ ಅರ್ಜಿಗಳನ್ನು ಪರಿಶೀಲನೆಗೆ ಒಳಪಡಿಸಲಾಗಿತ್ತು. ಅಲ್ಲದೆ ಜಿಲ್ಲಾಧಿಕಾರಿಗಳು ಇದರ ಜವಾಬ್ದಾರಿಯನ್ನು ಸಹಕಾರ ಸಂಘಗಳ ಜಂಟಿ ನಿಬಂಧಕರಿಗೆ ವಹಿಸಿ, ಸಹಕಾರ ನಿಯಮ ಹಾಗೂ ಕಾಯ್ದೆಗಳ ಅನ್ವಯ ಪರಿಶೀಲನೆ ನಡೆಸಿ, ಅರ್ಹ ಹಾಗೂ ಅನರ್ಹ ಮತ ದಾರರ ಪಟ್ಟಿ ಮಾಡುವಂತೆ ನಿರ್ದೇಶನ ನೀಡಿದ್ದರು. ಅದ ರಂತೆ ನಡೆಸಲಾದ ಪರಿಶೀಲನೆಯಲ್ಲಿ ಕೇವಲ 241 ಅರ್ಹ ಹಾಗೂ 845 ಅನರ್ಹ ಮತದಾರರೆಂದು ವಿಂಗಡಿಸಲಾಗಿದೆ. ಜಿಲ್ಲಾಧಿಕಾರಿ ಹಾಗೂ ಪರಿಶೀಲನೆ ನಡೆಸಿದ ಅಧಿಕಾರಿಯ ಸಹಿಯನ್ನೊಳಗೊಂಡ ಪಟ್ಟಿಯನ್ನು ಬ್ಯಾಂಕ್‍ನ ಪ್ರಧಾನ ಕಚೇರಿ ಸೂಚನಾ ಫಲಕದಲ್ಲಿ ಪ್ರಕಟಿಸಲಾಗಿದೆ.

ಅನರ್ಹತೆಗೆ ಕಾರಣವೇನು?: ಮತದಾನಕ್ಕೆ
ಸಲ್ಲಿಕೆಯಾಗಿದ್ದ ಒಟ್ಟು ಪ್ರತಿನಿಧಿಗಳ ಅರ್ಜಿಗಳಲ್ಲಿ ಶೇ.22ರಷ್ಟು ಮಾತ್ರ ಅರ್ಹವಾಗಿದ್ದು, ಶೇ.78ರಷ್ಟು ಅನರ್ಹ ಪ್ರತಿನಿಧಿಗಳಿಗೆ ಮತದಾನದ ಅವಕಾಶ ತಪ್ಪಿದಂತಾಗಿದೆ. ಇದು ಸಹಕಾರ ಸಂಘಗಳಲ್ಲಿ ಗೊಂದಲ ಸೃಷ್ಟಿಸಿದೆ. ಸಹಕಾರ ಕಾಯ್ದೆ ಹಾಗೂ ನಿಯಮಗಳನ್ವಯ ಪರಿಶೀಲನೆ ನಡೆಸಿ, ಅರ್ಹ ಹಾಗೂ ಅನರ್ಹ ಪ್ರತಿನಿಧಿಗಳ ಪಟ್ಟಿ ಸಿದ್ಧಪಡಿಸಲಾಗಿದ್ದು, ಅನರ್ಹ ಗೊಳಿಸಲು ನಿಖರ ಕಾರಣಗಳನ್ನು ಸದ್ಯ ಪ್ರಕಟಿಸಿಲ್ಲ. ಆದರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ನೀಡಿರುವ ಸಾಲದಲ್ಲಿ ಶೇ.50ರಷ್ಟನ್ನು ವಸೂಲಿ ಮಾಡಿ, ಕೇಂದ್ರ ಬ್ಯಾಂಕ್‍ಗೆ ಸಂದಾಯ ಮಾಡಿರಬೇಕು. ಇತರೆ ಸಹಕಾರ ಸಂಘಗಳು ಹಾಗೂ ಬ್ಯಾಂಕ್‍ಗಳ ಪ್ರತಿನಿಧಿಗಳು 5 ವರ್ಷಗಳಲ್ಲಿ ಕನಿಷ್ಟ 3 ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಪಾಲ್ಗೊಂಡಿರಬೇಕು. 2013ರ ಸಹಕಾರ ಕಾಯ್ದೆಯನ್ವಯ ಕೇಂದ್ರ ಬ್ಯಾಂಕ್‍ನಲ್ಲಿ ಷೇರು ಹೊಂದಿದ್ದರಷ್ಟೇ ಸಾಲದು, ನಿಗಧಿತ ಖಾತೆಯಲ್ಲಿ ಹಣಕಾಸು ವಹಿವಾಟು ನಡೆಸಿರಬೇಕು. ಇದರಲ್ಲಿ ವ್ಯತ್ಯಯವಾಗಿರುವ ಕ್ಷೇತ್ರಗಳ ಪ್ರತಿನಿಧಿಗಳನ್ನು ಅನರ್ಹಗೊಳಿಸಬಹುದು. ಹಾಗೆಯೇ ಸುಸ್ಥಿದಾರರಾದ ಅಥವಾ ಬೇರೆ ಯಾವುದೇ ಅನರ್ಹತಾ ಅಂಶಗಳಿದ್ದರೆ ಅಂತಹ ಪ್ರತಿನಿಧಿಗಳು ಮತದಾನಕ್ಕೆ ಅರ್ಹರಾಗುವುದಿಲ್ಲ.
ಮತ್ತೊಂದು ಅವಕಾಶವಿದೆಯೇ?: ಮೈಸೂರಿನ ಅಶೋಕ ರಸ್ತೆಯಲ್ಲಿರುವ ಎಂಸಿಡಿಸಿಸಿ ಬ್ಯಾಂಕ್‍ನ ಸೂಚನಾ ಫಲಕದಲ್ಲಿ ಅರ್ಹ ಹಾಗೂ ಅನರ್ಹ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿದೆ. ಒಂದು ವೇಳೆ ಸಹಕಾರ ಕಾಯ್ದೆ ಹಾಗೂ ನಿಯಮದನ್ವಯ ನಾನು ಮತದಾನಕ್ಕೆ ಅರ್ಹ ಎಂಬ ಪ್ರತಿನಿಧಿಗೆ ನ್ಯಾಯಾಲಯದ ಮೂಲಕ ಮತ್ತೊಂದು ಅವಕಾಶ ದೊರಕಬಹುದು ಎನ್ನಲಾಗಿದೆ. ಇದಕ್ಕೆ ಪೂರಕವಾದ ದಾಖಲೆಗಳೊಂದಿಗೆ ಹೈಕೋರ್ಟ್‍ನಲ್ಲಿ ಅರ್ಜಿ ಸಲ್ಲಿಸಿ, ಅವಕಾಶ ಕೋರಬಹುದು. ನ್ಯಾಯಾಲಯ ಅರ್ಜಿಯನ್ನು ಪುರಸ್ಕರಿಸಿ, ಅರ್ಜಿದಾರರ ಅನರ್ಹತೆಯನ್ನು ರದ್ದುಪಡಿಸಿ, ಮತದಾನಕ್ಕೆ ಅವಕಾಶ ನೀಡುವಂತೆ ಆದೇಶಿಸಿದರೆ ಮಾತ್ರ ಮತದಾನದಲ್ಲಿ ಪಾಲ್ಗೊಳ್ಳಬಹುದು. ಹೀಗೆ ನ್ಯಾಯಾಲಯದಿಂದ ಅವಕಾಶ ಬಯಸುವವರಿಗೂ ಅರ್ಹ ಮತದಾರರ ಪಟ್ಟಿ ಸೇರುವುದಕ್ಕೆ ನ.4 ಕಡೇ ದಿನವಾಗಿದೆ.

17 ನಿರ್ದೇಶಕರ ಆಯ್ಕೆಗೆ ಚುನಾವಣೆ: ಎಂಸಿಡಿಸಿಸಿ ಬ್ಯಾಂಕ್‍ಗೆ 2018ರಿಂದ ಮುಂದಿನ 5 ವರ್ಷದವರೆಗಿನ ಆಡಳಿತ ಮಂಡಳಿಗೆ 7 ಕ್ಷೇತ್ರಗಳಿಂದ 17 ನಿರ್ದೇಶಕರ ಆಯ್ಕೆಯಾಗಲಿದೆ. ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಗಳ 11 ತಾಲೂಕುಗಳಿಂದ 11 ಮಂದಿ ಆಯ್ಕೆಯಾಗಲಿದ್ದಾರೆ. ತಾಲೂಕು ವ್ಯವಸಾ ಯೋತ್ಪನ್ನ ಮಾರಾಟ ಸಹಕಾರ ಸಂಘಗಳಿಂದ 2 ಜಿಲ್ಲೆಗಳಿಂದ ಒಬ್ಬರು, ಪಟ್ಟಣ ಸಹಕಾರ ಬ್ಯಾಂಕುಗಳು ಹಾಗೂ ಗೃಹ ನಿರ್ಮಾಣ ಸಹಕಾರ ಸಂಘಗಳಿಂದ 2 ಜಿಲ್ಲೆಗಳಿಂದ ಒಬ್ಬರು, ಬಳಕೆದಾರರ ಸಹಕಾರ ಸಂಘ ಹಾಗೂ ಪತ್ತಿನ ಸಹಕಾರ ಸಂಘಗಳಿಂದ 2 ಜಿಲ್ಲೆಗಳಿಂದ ಒಬ್ಬರು, ತಾಲೂಕು ಮತ್ತು ಜಿಲ್ಲಾ ವ್ಯಾಪ್ತಿ ಹಾಗೂ ಅದಕ್ಕೂ ಮೇಲ್ಪಟ್ಟ ವ್ಯಾಪ್ತಿಯ ಕ್ಷೇತ್ರದಿಂದ 2 ಜಿಲ್ಲೆಗಳಿಂದ ಒಬ್ಬರು, ಹಾಲು ಉತ್ಪಾದಕರ ಸಹಕಾರ ಸಂಘಗಳು ಹಾಗೂ ಇತರೆ ಸಹಕಾರ ಸಂಘಗಳಿಂದ ಮೈಸೂರು ಹಾಗೂ ನಂಜನಗೂಡು ತಾಲೂಕು ಹೊರತುಪಡಿಸಿದಂತೆ ಒಬ್ಬರು, ಚಾಮರಾಜನಗರ 4 ಹಾಗೂ ಮೈಸೂರಿನ ನಂಜನ ಗೂಡು ತಾಲೂಕಿನಿಂದ ಒಬ್ಬರು ಸೇರಿದಂತೆ 17 ಮಂದಿ ಚುನಾವಣೆಯಲ್ಲಿ ಆಯ್ಕೆಯಾಗಲಿದ್ದಾರೆ.

Translate »