ವಿದ್ಯುತ್ ಕಂಬಗಳು ಕರೆಂಟ್‍ಗೆ ಮಾತ್ರ ಮೀಸಲಲ್ಲ! ಅದನ್ನು ಹತ್ತಾರು ಉದ್ದೇಶಕ್ಕೂ ಬಳಸುವ `ಹಾಳು’ ಐಡಿಯಾ
ಮೈಸೂರು

ವಿದ್ಯುತ್ ಕಂಬಗಳು ಕರೆಂಟ್‍ಗೆ ಮಾತ್ರ ಮೀಸಲಲ್ಲ! ಅದನ್ನು ಹತ್ತಾರು ಉದ್ದೇಶಕ್ಕೂ ಬಳಸುವ `ಹಾಳು’ ಐಡಿಯಾ

May 14, 2019

ಮೈಸೂರು: ಮೈಸೂರಿನ ಪರಂಪರೆ, ಸೌಂದರ್ಯ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಒಂದೆಡೆ ಪ್ರಯತ್ನಗಳಾಗುತ್ತಿದ್ದರೆ, ಮತ್ತೊಂದೆಡೆ ನಗರದ ಅಂದಗೆಡಿಸುವ ಕೃತ್ಯ ಎಗ್ಗಿಲ್ಲದೆ ಸಾಗಿದೆ.

ನಗರದ ಬಹುತೇಕ ಬಡಾವಣೆಯ ವಿದ್ಯುತ್ ಕಂಬಗಳಲ್ಲಿ ಹತ್ತಾರು ಕೇಬಲ್‍ಗಳನ್ನು ಅಳವಡಿಸಿ ರುವುದೇ ಇದಕ್ಕೊಂದು ಜ್ವಲಂತ ಸಾಕ್ಷಿ. ವಿದ್ಯುತ್ ತಂತಿಗಳ ಜೊತೆಗೆ ವಿವಿಧ ಟೆಲಿಕಾಂ ಕಂಪನಿಗಳ ನೆಟ್‍ವರ್ಕ್ ಕೇಬಲ್‍ಗಳು ಸೇರಿಕೊಂಡಿವೆ. ಪ್ರತಿ ಕಂಬದಲ್ಲೂ ಸುರುಳಿ ಸುತ್ತಿರುವ ಕೇಬಲ್ ಗೊಂಚಲು ಹಾಗೂ ಕನೆಕ್ಟಿಂಗ್ ಮೆಷಿನ್ ಬಾಕ್ಸ್‍ಗಳು ಜೋತು ಬಿದ್ದಿವೆ. ಹೇಳುವವರು, ಕೇಳುವವರು ಯಾರೂ ಇಲ್ಲ ಎಂಬಂತೆ ಎಲ್ಲೆಡೆ ಕೇಬಲ್ ಅಳವಡಿಸುವ ಕೆಲಸ ಬಿರುಸಿನಿಂದ ಸಾಗಿದೆ. ನಗರದ ಸಂರಕ್ಷಣೆ, ಅಭಿವೃದ್ಧಿ ಬಗ್ಗೆ ಪಾಲಿಕೆ ಕೌನ್ಸಿಲ್‍ನಲ್ಲಿ ತೆಗೆದುಕೊಳ್ಳುವ ನಿರ್ಣಯಗಳಿಗೆ ಯಾವುದೇ ಬೆಲೆ ಇಲ್ಲದಂತಾಗಿದೆ.

ಸೌಂದರ್ಯಕ್ಕೆ ದಕ್ಕೆ: ವಿದ್ಯುತ್ ಕಂಬಗಳಲ್ಲಿ ಕೇಬಲ್ ಅಳವಡಿಸಿದರೆ ಸಮಸ್ಯೆ ಏನು? ಎಂದು ನಿರ್ಲಕ್ಷ ವಹಿಸಿದರೆ ಮುಂದಾಗುವ ಅವಘಡ ಗಳಿಗೆ ಪ್ರತಿಯೊಬ್ಬರೂ ಕಾರಣರಾಗುತ್ತೀವಿ. ವಿದ್ಯುತ್ ತಂತಿಗಳ ಕೆಳಗೆ ಹಾದು ಹೋಗಿರುವ ಹತ್ತಾರು ಕೇಬಲ್‍ಗಳು, ಕಂಬಕ್ಕೆ ಕಟ್ಟಿರುವ ಕೇಬಲ್ ಗೊಂಚಲು, ಕನೆಕ್ಟಿಂಗ್ ಬಾಕ್ಸ್‍ಗಳು ಜೋತಾಡು ತ್ತಿವೆ. ಗಾಳಿ ಬೀಸಿದಾಗ ಒಂದಕ್ಕೊಂದು ತಾಕಿ, ಅತ್ತಿಂದಿತ್ತ ಇತ್ತಿಂದತ್ತ ತೂರುತ್ತವೆ. ಹೀಗಿರುವಾಗ ಮೈಸೂರನ್ನು ಸುಂದರ ನಗರಿ ಎಂದು ಅಂದು ಕೊಳ್ಳುವುದಾದರೂ ಹೇಗೆ?. ವಿದ್ಯುತ್ ಕಂಬಗಳಿಗೆ ಇತರೆ ಕೇಬಲ್‍ಗಳನ್ನು ಅಳವಡಿಸುವುದರಿಂದ ನಗರದ ಸೌಂದರ್ಯ ಹಾಳಾಗುತ್ತದೆ. ಇದಕ್ಕೆ ಅವಕಾಶ ನೀಡಬಾರದೆಂದು ಈ ಹಿಂದೆಯೇ ನಗರ ಪಾಲಿಕೆಯಲ್ಲಿ ತೀರ್ಮಾನಿಸಲಾಗಿತ್ತು. ಆದರೆ ಇದೀಗ ನಗರದ ಅಂದಗೆಡಿಸುವ ಕೃತ್ಯ ಅವಿರತ ವಾಗಿದ್ದರೂ ಪಾಲಿಕೆ ಕಣ್ಮುಚ್ಚಿ ಕುಳಿತಿದೆ.

ಅನಾಹುತ ಸಾಧ್ಯತೆ: ಸೌಂದರ್ಯದ ಪ್ರಶ್ನೆ ಮಾತ್ರವಲ್ಲ. ಹೀಗೆ ಹತ್ತಾರು ಕೇಬಲ್ ಅಳವಡಿಸು ವುದರಿಂದ ಅನಾಹುತ ಸಂಭವಿಸುವ ಸಾಧ್ಯತೆಯೂ ಹೆಚ್ಚಿದೆ. ಯಾವುದೋ ಕಾರಣದಿಂದ ಕೇಬಲ್ ತುಂಡಾಗಿ, ವಾಹನಗಳ ಮೇಲೋ, ಸಾರ್ವಜನಿಕರ ಮೇಲೋ ಬಿದ್ದು, ಅಪಘಾತ ಸಂಭವಿಸಬಹುದು. ಪ್ರಾಣ ಹಾನಿಯಾದರೂ ಆಗಬಹುದು. ಅಂತಹ ದುರ್ಘಟನೆ ನಡೆದರೆ ಹೊಣೆಗಾರರಾಗುವುದು ಯಾರು?. ಸಂಬಂಧಪಟ್ಟ ಟೆಲಿಕಾಂ ಸಂಸ್ಥೆ ಮಾತ್ರ ವಲ್ಲ ಅವೈಜ್ಞಾನಿಕ ಕೇಬಲ್ ಅಳವಡಿಕೆಗೆ ಅವಕಾಶ ನೀಡಿರುವ ಚೆಸ್ಕಾಂ, ಕಣ್ಮುಂದೆ ನಡೆಯುತ್ತಿದ್ದರೂ ಮೌನವಹಿಸಿರುವ ನಗರ ಪಾಲಿಕೆ, ಯಾವ ಕೇಬಲ್ ಹಾಕಿದರೆ ನಮಗೇನು ಎಂದು ಅಸಡ್ಡೆ ತೋರುವ ಸಾರ್ವಜನಿಕರು ಹೀಗೆ ಎಲ್ಲರೂ ಪಾಲುದಾರಾಗುತ್ತಾರೆ.

ಸಂಪರ್ಕ ಸಮಸ್ಯೆ: ಟೆಲಿಕಾಂ ನೆಟ್‍ವರ್ಕ್ ಕೇಬಲ್‍ಗಳನ್ನು ಹೀಗೆ ಅವೈಜ್ಞಾನಿಕವಾಗಿ ವಿದ್ಯುತ್ ಕಂಬಗಳಿಗೆ ಅಳವಡಿಸುವುದರಿಂದ ನೆಟ್‍ವರ್ಕ್ ಸಮಸ್ಯೆ ಹೆಚ್ಚಾಗುತ್ತದೆ. ಗಾಳಿ-ಮಳೆ ಸಂದರ್ಭ ದಲ್ಲಿ ಎಲ್ಲಿಯೋ ಮರ ಅಥವಾ ಕೊಂಬೆ ಮುರಿದು ವಿದ್ಯುತ್ ಕಂಬದ ಮೇಲೆ ಬಿದ್ದರೆ, ಕೇಬಲ್‍ಗಳೂ ತುಂಡಾಗುತ್ತವೆ. ಪರಿಣಾಮ ವಿದ್ಯುತ್ ಮಾತ್ರವಲ್ಲ ಮೊಬೈಲ್, ಇಂಟರ್‍ನೆಟ್ ಸಂಪರ್ಕವೂ ವ್ಯತ್ಯಯವಾಗಬಹುದು. ಸರಿಪಡಿ ಸಲು ಸಮಯಾವಕಾಶ ಬೇಕಾಗುವುದರಿಂದ ಗ್ರಾಹಕರು ತೊಂದರೆ ಅನುಭವಿಸುವುದು ಅನಿವಾರ್ಯವಾಗುತ್ತದೆ.

ನಿರ್ವಹಣೆಗೂ ಅಡ್ಡಿ: ವಿದ್ಯುತ್ ತಂತಿಗಳ ಕೆಳಗೆ ಕೇಬಲ್‍ಗಳನ್ನು ಅಳವಡಿಸುವುದು ಸುರಕ್ಷಿತವಲ್ಲ. ವಿದ್ಯುತ್ ತಂತಿ ತುಂಡಾದರೆ, ಕಂಬ ಬದಲಿಸಬೇಕಾದರೆ, ಇನ್ನಿತರ ನಿರ್ವಹಣೆ ಸಂದರ್ಭದಲ್ಲಿ ಹರಸಾಹಸ ಪಡಬೇಕಾಗುತ್ತದೆ. ಹತ್ತಾರು ಕೇಬಲ್‍ಗಳ ನಡುವೆ ನುಸುಳಿ ದುರಸ್ತಿ ಕಾರ್ಯ ಮಾಡಲು ಚೆಸ್ಕಾಂ ಸಿಬ್ಬಂದಿಗೂ ಕಷ್ಟವಾಗುತ್ತದೆ. ಇಂತಹ ಸಂದರ್ಭದಲ್ಲಿ ಟೆಲಿಕಾಂ ಸಂಸ್ಥೆಯವರನ್ನು ಸಂಪರ್ಕಿಸಿ, ಅಲ್ಲಿಯ ಸಿಬ್ಬಂದಿಗಳನ್ನೂ ಕರೆಸಿಕೊಂಡು ಕೆಲಸ ಮಾಡಬೇಕಾಗುತ್ತದೆ. ಇಲ್ಲವೇ ವಿದ್ಯುತ್ ಲೈನ್ ದುರಸ್ತಿ ಸಂದರ್ಭದಲ್ಲಿ ಟೆಲಿಕಾಂ ಕೇಬಲ್‍ಗಳು ತುಂಡಾಗಬಹುದು. ಹಾಗೆಯೇ ಕೇಬಲ್ ನಿರ್ವ ಹಣೆ ಅಥವಾ ದುರಸ್ತಿ ಸಂದರ್ಭದಲ್ಲಿ ಆ ಮಾರ್ಗದ ವಿದ್ಯುತ್ ಸಂಪರ್ಕವನ್ನು ಸ್ಥಗಿತಗೊಳಿ ಸಬೇಕು. ಇಲ್ಲವಾದರೆ ಕೆಲಸ ಮಾಡುವವರು ವಿದ್ಯುತ್ ಅವಘಡಕ್ಕೆ ತುತ್ತಾಗಬೇಕಾಗುತ್ತದೆ. ಹೀಗೆ ಯಾವುದೇ ಸಣ್ಣ ಸಮಸ್ಯೆಯಾದರೂ ವಿದ್ಯುತ್ ಹಾಗೂ ಟೆಲಿಕಾಂ ಸಂಪರ್ಕದಲ್ಲಿ ವ್ಯತ್ಯಯವಾಗುವುದು ಖಚಿತ.

ಪಾಲಿಕೆ ಆದಾಯಕ್ಕೂ ಕುತ್ತು: ವಿದ್ಯುತ್ ಕಂಬಗಳ ಬದಲಾಗಿ ಎಲ್ಲಾ ಕೇಬಲ್‍ಗಳನ್ನೂ ವೈಜ್ಞಾನಿಕವಾಗಿ ನೆಲದಲ್ಲಿ ಅಳವಡಿಸಬೇಕು. ಇದರಿಂದ ನಗರದ ಸೌಂದರ್ಯವನ್ನು ರಕ್ಷಣೆಯ ಜೊತೆಗೆ ಸಂಪರ್ಕದಲ್ಲೂ ಯಾವುದೇ ಅಡ್ಡಿ ಉಂಟಾಗುವುದಿಲ್ಲ. ಈ ಕಾರ್ಯಕ್ಕೆ ನಗರ ಪಾಲಿಕೆಗೆ ನಿಗಧಿತ ಶುಲ್ಕ ಭರಿಸಿ, ಅನುಮತಿ ಪಡೆಯಬೇಕು.
ಈ ಹಿಂದೆ ಕನಿಷ್ಟ ದರದಲ್ಲಿ ಕೇಬಲ್ ಅಳವಡಿಕೆಗೆ ಅವಕಾಶ ನೀಡಿ, ನಷ್ಟ ಅನುಭವಿಸಿ ರುವ ಪಾಲಿಕೆ, ಇದೀಗ ಕೌನ್ಸಿಲ್ ನಿರ್ಣಯ ದಂತೆ ಒಂದು ಮೀಟರ್‍ಗೆ 688 ರೂ. ನಿಗಧಿ ಗೊಳಿಸಿದೆ. ಆದರೆ ಟೆಲಿಕಾಂ ಸಂಸ್ಥೆಗಳು ಉಳಿತಾಯದ ಮಾರ್ಗ ಹುಡುಕಿಕೊಂಡಿವೆ. ನಗರ ಪಾಲಿಕೆಯ ಕೈಬಿಟ್ಟು, ಚೆಸ್ಕಾಂನತ್ತ ಮುಖ ಮಾಡಿವೆ. ವಿದ್ಯುತ್ ಕಂಬದಲ್ಲಿ ಕೇಬಲ್ ಅಳವಡಿಸುವುದರಿಂದ ಆಗಬಹುದಾದ ಸಮಸ್ಯೆ, ಅವಘಡಗಳ ಬಗ್ಗೆ ಕಿಂಚಿತ್ತೂ ಯೋಚಿಸದೆ ಚೆಸ್ಕಾಂ ಅಧಿಕಾರಿಗಳು ಅನುಮತಿ ನೀಡುತ್ತಿ ದ್ದಾರೆಂದು ವಿಷಾಧಿಸಿರುವ ಸಾರ್ವಜನಿಕರು, ಈ ಗಂಭೀರ ಸಮಸ್ಯೆ ಬಗ್ಗೆ ಜಿಲ್ಲಾಡಳಿತ ಗಮನಹರಿಸಬೇಕೆಂದು ಒತ್ತಾಯಿಸಿದ್ದಾರೆ.

Translate »