ಮೈಸೂರು: ಮೈಸೂರಿಗರ ನೆಚ್ಚಿನ ವಾಯು ವಿಹಾರ ತಾಣವೂ ಆಗಿರುವ ಪ್ರೇಕ್ಷಣಿಯ ಕುಕ್ಕರಹಳ್ಳಿ ಕೆರೆ ಏರಿಯಲ್ಲಿ ನೀರು ಸೋರಿಕೆಯಾಗುತ್ತಿರುವುದರಿಂದ ಆತಂಕ ಸೃಷ್ಟಿಯಾಗಿದೆ.
ಬೋಗಾದಿ ರಸ್ತೆಯಲ್ಲಿರುವ ಮಾಚೀದೇವರ ದೇವಸ್ಥಾನದ ಎದುರಿಗೆ ಕೆರೆಯ ಏರಿ ಮಧ್ಯಭಾಗದಿಂದ ಮೂರ್ನಾಲ್ಕು ದಿನಗಳಿಂದ ನೀರು ಹರಿಯುತ್ತಿದ್ದು, ಇದರ ಪ್ರಮಾಣ ದಿನೇ ದಿನೆ ಹೆಚ್ಚಾಗುತ್ತಿದೆ. ಇದರಿಂದ ಏರಿಯಲ್ಲಿ ಬಿರುಕು ಕಾಣಿಸಿಕೊಂಡಿರಬಹುದೆಂಬ ಆತಂಕ ಸಾರ್ವಜನಿಕರಿಂದ ವ್ಯಕ್ತವಾಗಿದೆ. ಆದರೆ ಏರಿಗೆ ಹೊಂದಿಕೊಂಡಂತಿರುವ ನೀರಿನ ಪೈಪ್ ಒಡೆದು ಹೀಗೆ ನೀರು ಸೋರಿಕೆಯಾಗುತ್ತಿದೆ ಎಂದು ನಿತ್ಯ ಇಲ್ಲಿಗೆ ವಾಯು ವಿಹಾರಕ್ಕೆ ಬರುವವರು ತಿಳಿಸಿದ್ದಾರೆ.
ಈ ಸಂಬಂಧ `ಮೈಸೂರು ಮಿತ್ರ’ ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಅವರನ್ನು ದೂರವಾಣಿಯಲ್ಲಿ ಸಂಪರ್ಕಿಸಿದಾಗ ಕೂಡಲೇ ಇಂಜಿನಿಯರ್ ಎಸ್.ವೈ.ಹೊಂಬಾಳ್ ಅವರನ್ನು ಸ್ಥಳಕ್ಕೆ ಕಳಹಿಸಿಕೊಟ್ಟರು. ಪರಿಶೀಲನೆ ನಡೆಸಿದ ಅವರು, ವಿವಿಯ ವಸತಿ ನಿಲಯದಿಂದ ಕ್ರಾಫರ್ಡ್ ಭವನಕ್ಕೆ ಸಂಪರ್ಕಿಸಿರುವ ನೀರಿನ ಪೈಪ್ ಒಡೆದಿರುವುದರಿಂದ ನೀರು ಸೋರುತ್ತಿದೆ. ಏರಿಯ ಪಕ್ಕದಲ್ಲೇ ಹರಿಯುತ್ತಿರುವುದರಿಂದ ಕೆರೆಯ ನೀರು ಎಂದು ಸಾರ್ವಜನಿಕರು ಭಾವಿಸಿರಬಹುದು. ಏರಿ ಸುಭದ್ರವಾಗಿದೆ. ಯಾವುದೇ ಆತಂಕಪಡುವ ಅಗತ್ಯವಿಲ್ಲ. ಈ ಹಿಂದೆಯೂ ಪೈಪ್ ಒಡೆದಿತ್ತು. ಇದೀಗ ಇದೇ ಸ್ಥಳದಲ್ಲಿ ಮತ್ತೆ ಒಡೆದಿದೆ. ನಾಳೆಯೇ ಇದನ್ನು ದುರಸ್ತಿ ಮಾಡಿಸುತ್ತೇವೆ ಎಂದು ತಿಳಿಸಿದರು. ಈ ವೇಳೆ ವಿವಿಯ ತೋಟಗಾರಿಕೆ ವಿಭಾಗದ ಸಹಾಯಕ ನಿರ್ದೇಶಕ ಮುಜಾವರ್ ಇದ್ದರು.