ಸಲಗ ದಾಳಿ: ಹಸುವಿಗೆ ತೀವ್ರ ಗಾಯ
ಮೈಸೂರು ಗ್ರಾಮಾಂತರ

ಸಲಗ ದಾಳಿ: ಹಸುವಿಗೆ ತೀವ್ರ ಗಾಯ

January 19, 2020

ಹುಣಸೂರು, ಜ.18(ಹೆಚ್‍ಎಸ್‍ಎಂ)-ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ದಂಚಿನ ಗ್ರಾಮಗಳಲ್ಲಿ ಕಾಡಾನೆಗಳ ಹಾವಳಿ ಮಿತಿ ಮೀರಿದ್ದು, ಕಿಕ್ಕೇರಿಕಟ್ಟೆ ಗ್ರಾಮದಲ್ಲಿ ಒಂಟಿ ಸಲಗ ಹಸುವೊಂದರ ಮೇಲೆ ದಾಳಿ ನಡೆಸಿದೆ.

ಗ್ರಾಮದ ಪ್ರಕಾಶ್ ಅವರಿಗೆ ಸೇರಿದ ಹಸು ಸಲಗ ದಾಳಿಯಿಂದ ಗಂಭೀರವಾಗಿ ಗಾಯ ಗೊಂಡಿದೆ. ಶುಕ್ರವಾರ ರಾತ್ರಿ ಉದ್ಯಾನದ ಹುಣ ಸೂರು ವಲಯದ ಅರಣ್ಯ ಪ್ರದೇಶದಿಂದ ನಾಡಿನತ್ತ ಬಂದಿರುವ ಶಂಕೆ ಇದ್ದು, ತಡರಾತ್ರಿ  ಪ್ರಕಾಶ್ ಮನೆ ಕೊಟ್ಟಿಗೆಯಲ್ಲಿ ಕಟ್ಟಿದ್ದ ಹಸುವಿನ ಮೇಲೆ ದಾಳಿ ನಡೆಸಿ ದಂತದಿಂದ ತಿವಿದಿದೆ. ಇದರಿಂದ ಕರುಳು ದೇಹದ ಹೊರ ಬಂದಿದ್ದು, ತೀವ್ರ ರಕ್ತಸ್ರಾವವಾಗಿದೆ.

ಹಸುವಿನ ಆರ್ತನಾದ ಕೇಳಿ ಸುತ್ತಮುತ್ತಲಿನ ಜನ ಜಮಾಯಿಸಿದರು. ಜನರ ಕೂಗಾಟಕ್ಕೆ ಸಲಗ ಕಾಡಿನ ಕಡೆ ಓಡಿಹೋಗಿದೆ. ಸ್ಥಳಕ್ಕೆ ಮುದ್ದನಹಳ್ಳಿ ಅರಣ್ಯ ಶ್ರೇಣಿಯ ವನಪಾಲಕ ಸಿದ್ದರಾಜ್ ಮತ್ತು ಸಿಬ್ಬಂದಿ ಭೇಟಿ ನೀಡಿ ಪರಿಶೀಲಿದರು.

ರೈತರ ಆಕ್ರೋಶ: ಈ ಭಾಗದಲ್ಲಿ ಪದೇ ಪದೆ ಕಾಡಾನೆಗಳ ಉಪಟಳ ಹೆಚ್ಚುತ್ತಲೇ ಇದ್ದು, ಅರಣ್ಯ ಇಲಾಖೆ ನಿಯಂತ್ರಿಸುವಲ್ಲಿ ಸಂಪೂರ್ಣ ವಿಫಲವಾಗಿದೆ. ಇತ್ತೀಚೆಗಷ್ಟೆ ಹೆಬ್ಬಾಳ ಗ್ರಾಮದಲ್ಲಿ ಸಲಗದ ದಾಳಿ ನಡೆದು ಹಸು ಸಾವನ್ನಪ್ಪಿದ್ದರೂ ಇಲಾಖೆ ಅಧಿಕಾರಿಗಳು ಎಚ್ಚೆತ್ತಿಲ್ಲ. ಅಲ್ಲದೆ ನಷ್ಟಕ್ಕೆ ತಕ್ಕಂತೆ ಪರಿಹಾರವನ್ನೂ ನೀಡುತ್ತಿಲ್ಲ ಎಂದು ರೈತರು ಆರೋಪಿಸಿದ್ದಾರೆ. ಶಾಶ್ವತ ಪರಿಹಾರಕ್ಕೆ  ಆಗ್ರಹಿಸಿದ್ದಾರೆ.

 

 

 

 

Translate »