ಕಾಡಾನೆ ದಾಳಿ ತಡೆಯದ ಅರಣ್ಯಾಧಿಕಾರಿಗಳ ವಿರುದ್ಧ ಉತ್ತೇನಹಳ್ಳಿ ಗ್ರಾಮಸ್ಥರ ಆಕ್ರೋಶ
ಮೈಸೂರು

ಕಾಡಾನೆ ದಾಳಿ ತಡೆಯದ ಅರಣ್ಯಾಧಿಕಾರಿಗಳ ವಿರುದ್ಧ ಉತ್ತೇನಹಳ್ಳಿ ಗ್ರಾಮಸ್ಥರ ಆಕ್ರೋಶ

October 30, 2018

ಪಿರಿಯಾಪಟ್ಟಣ:  ಕಾಡಾನೆಗಳ ದಾಳಿ ನಿಯಂತ್ರಿಸದ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ತಾಲೂಕಿನ ಉತ್ತೇನಹಳ್ಳಿ ಗ್ರಾಮದಲ್ಲಿ ಈ ಪರಿಸ್ಥಿತಿ ನಿರ್ಮಾಣವಾಗಿದ್ದು, ಕಳೆದ 10 ವರ್ಷಗಳಿಂದ ಈ ಕಾಡುಪ್ರಾಣಿಗಳ ಹಾವಳಿಯಿಂದ ಜಮೀನಿನಲ್ಲಿ ಬೆಳೆದ ಬೆಳೆ ಕೈ ಸೇರದೆ ಇದ್ದರೂ ಕೇಳುವವರೇ ಇಲ್ಲವಾಗಿದ್ದಾರೆ.

75ಕ್ಕೂ ಹೆಚ್ಚು ಕುಟುಂಬಗಳನ್ನು ಹೊಂದಿ ರುವ ಉತ್ತೇನಹಳ್ಳಿ ಗ್ರಾಮದಲ್ಲಿ 180ಕ್ಕೂ ಹೆಚ್ಚು ಜನಸಂಖ್ಯೆಯನ್ನು ಹೊಂದಿದ್ದು, ಕೃಷಿಯನ್ನೇ ಅವಲಂಬಿಸಿಕೊಂಡು ಜೀವನ ನಡೆಸುತ್ತಿದ್ದಾರೆ. ಅರಣ್ಯದ ಅಂಚಿನಲ್ಲಿರುವ ಈ ಗ್ರಾಮದ ರೈತರಿಗೆ ಕಂದಕದ ಪಕ್ಕದಲ್ಲಿ ಹೆಚ್ಚು ಜಮೀನಿದ್ದು, ತಮ್ಮ ಜಮೀನಿನಲ್ಲಿ ರೈತರು ಬೆಳೆದ ರಾಗಿ, ಭತ್ತ, ಬಾಳೆ, ಅಡಿಕೆ, ತೆಂಗು, ಮುಸುಕಿನ ಜೋಳ ಸೇರಿದಂತೆ ಇನ್ನಿತರ ಬೆಳೆಗಳಿಗೆ ಕಾಡಾನೆಗಳು ಸೇರಿದಂತೆ ಇನ್ನಿತರ ಕಾಡುಪ್ರಾಣಿಗಳು ದಾಳಿ ಮಾಡಿ ನಾಶಪಡಿಸುತ್ತಿವೆ.
ಇವುಗಳನ್ನು ತಡೆಯುವ ದೃಷ್ಟಿಯಿಂದ ಜಮೀನಿಗೆ ಅಳವಡಿಸಿರುವ ಸೋಲಾರ್ ಬೇಲಿಯನ್ನು ತುಳಿದು ಎಲ್ಲವನ್ನೂ ಜಖಂಗೊಳಿಸಿ ಇನ್ನಷ್ಟು ನಷ್ಟ ಮಾಡುತ್ತಿವೆ. ಅಲ್ಲದೆ ಗ್ರಾಮಕ್ಕೂ ಸಹ ಪ್ರವೇಶ ಮಾಡುತ್ತಿದ್ದು, ಜನರು ರಾತ್ರಿ ವೇಳೆಯಲ್ಲಿ ಮನೆಯಿಂದ ಹೊರಗೆ ಬಾರದಂತಾಗಿದೆ.

ಶಬ್ದಕ್ಕೆ ತಗಡು ಹಾಕಿದ್ದೇವೆ: ಅರಣ್ಯದಿಂದ ಜಮೀನಿನ ಕಡೆ ಪ್ರಾಣಿಗಳು ಬಾರದಂತೆ ಕಳೆದ 5 ವರ್ಷಗಳ ಹಿಂದೆ ಕಂದಕ ತೋಡಲಾ ಗಿದ್ದರೂ ಅವುಗಳು ಮುಚ್ಚಿ ಹೋಗಿರುವುದ ರಿಂದ ಪ್ರಾಣಿಗಳು ಲೀಲಾಜಾಲವಾಗಿ ಗ್ರಾಮಕ್ಕೆ ಪ್ರವೇಶ ಮಾಡುತ್ತಿದ್ದು ಅವುಗಳು ಬರುವ ದಾರಿಯಲ್ಲಿ ಕೆಲವು ಕಡೆಮರದ ಮೇಲೆ ಗುಡಿಸಲು ನಿರ್ಮಿಸಿಕೊಂಡು ಶಬ್ದ ಬರು ವಂತೆ ತಗಡು ಹಾಕಲಾಗಿದೆ.
ಆದರೂ ಸಹ ತಗಡು ತಾಗಿ ಶಬ್ದವಾದ ಸಮಯಕ್ಕೆ ರೈತರೆಲ್ಲರೂ ಸೇರಿ ಮತ್ತೆ ಆನೆಗಳನ್ನು ಕಾಡಿಗೆ ಓಡಿಸಲು ಮುಂದಾಗುತ್ತೇವೆ. ಆದರೆ ಕೆಲವೊಮ್ಮೆ ಯಾವುದೇ ರೀತಿಯ ಶಬ್ದವಾಗದಂತೆ ಪ್ರವೇಶ ಮಾಡಿ ಫಸಲನ್ನು ನಷ್ಟ ಮಾಡಿ ಹೋಗುತ್ತವೆ ಎಂದು ರೈತ ಪುಟ್ಟಮಹದೇವಪ್ಪ ವಿವರಿಸುತ್ತಾರೆ.

ಸುಮಾರು 5 ಕಿ.ಮೀ.ದೂರದವರೆಗೆ ಈ ಅರಣ್ಯದ ಕಂದಕ ಪಿರಿಯಾಪಟ್ಟಣ ತಾಲೂಕಿನ ಅಳಲೂರು, ಬೆಕ್ಯಾಸೆಡ್, ಆನೆಚೌಕೂರು, ಮಾಲಂಗಿ ಗ್ರಾಮಗಳಿಗೆ ಸೇರಿದರೆ ಇನ್ನುಳಿದ ಅರಣ್ಯ ಪ್ರದೇಶವು ಹುಣಸೂರು ತಾಲೂಕಿನ ನೇರಳಕುಪ್ಪೆ, ಕಡಮನಹಳ್ಳಿ, ಕೊಳವೆ ಗ್ರಾಮಗಳ ವ್ಯಾಪ್ತಿಗೆ ಸೇರಿದ್ದು, ಉತ್ತೇನಹಳ್ಳಿ ಭಾಗವು ಪಿರಿಯಾಪಟ್ಟಣ ಮೀಸಲು ಅರಣ್ಯ ಭಾಗಕ್ಕೆ ಸೇರಿದ್ದು ಕಾಡುಪ್ರಾಣಿಗಳ ನಿಯಂತ್ರಣ ಜವಾಬ್ದಾರಿ ವಲಯ ಅರಣ್ಯಾಧಿಕಾರಿ ಗಿರೀಶ್ ಅವರಿಗೆ ಒಳಪಟ್ಟಿತ್ತು.

ಆನೆಗಳು ಜಮೀನಿಗೆ ದಾಳಿ ಮಾಡುವ ಸಂದರ್ಭದಲ್ಲಿ ಕರ್ತವ್ಯದಲ್ಲಿದ್ದ ಗಿರೀಶ್ ಅವರಿಗೆ ಫೋನ್ ಮಾಡಿದರೆ ಫೋನನ್ನು ರಿಸೀವ್ ಮಾಡುವುದಿಲ್ಲ. ಖುದ್ದು ಭೇಟಿ ಮಾಡಿ ಆಗುತ್ತಿರುವ ತೊಂದರೆಯ ಬಗ್ಗೆ ಮನವರಿಕೆ ಮಾಡಿದರೆ ತಮಗೆ ಸಂಬಂಧವೇ ಇಲ್ಲದಂತೆ ಉತ್ತರಿಸುತ್ತಿದ್ದರು. ಬೇಕಾದರೆ ಹಿರಿಯ ಅಧಿಕಾರಿಗಳ ಬಳಿ ಹೋಗಿ ದೂರು ಕೊಡಿ ಎಂದು ಜಾರಿಕೊಳ್ಳುತ್ತಿದ್ದಾರೆ ಎಂದು ರೈತರಾದ ಪುಟ್ಟಮಹದೇವಪ್ಪ ಮತ್ತು ಚನ್ನಬಸಪ್ಪ, ಸುರೇಂದ್ರ, ನಾಗಣ್ಣ, ಸಾಕಮ್ಮ, ಸೇರಿದಂತೆ ಇತರರು ತಮ್ಮಅಸಹಾಯಕತೆ ವ್ಯಕ್ತಪಡಿಸುತ್ತಿದ್ದಾರೆ. ಕೆಲವು ದಿನಗಳ ಹಿಂದೆ ಗಿರೀಶ್ ಬೇರೆಡೆಗೆ ವರ್ಗವಾಗಿದ್ದು ನೂತನ ವಲಯ ಅರಣ್ಯಾಧಿಕಾರಿ ನೇಮಕವಾಗಬೇಕಾಗಿದೆ.

ಪರಿಹಾರಕ್ಕಿಂತ ವಂತಿಕೆ ಮಾಡುತ್ತೇವೆ: ಬೆಳೆ ನಷ್ಟಕ್ಕಾಗಿ ಅರಣ್ಯ ಇಲಾಖೆಯಿಂದ ಪರಿಹಾರ ನೀಡುತ್ತಿದ್ದಾರೆ. ಆದರೆ ಅರ್ಜಿ ಸಲ್ಲಿಸಿ ಪರಿಹಾರ ದೊರೆಯುವಷ್ಟರಲ್ಲಿ ವರ್ಷ ಕಳೆಯುವುದಲ್ಲದೆ ಅಲೆದಾಡಲು ಅಷ್ಟೇ ಹಣ ಖರ್ಚಾಗುತ್ತದೆ. ಎಕರೆಗೆ 500 ರೂ. ದೊರೆಯುವುದೂ ಕಷ್ಟ. ರೈಲ್ವೆ ಕಂಬಿಗಳ ಗೇಟ್ ಮತ್ತು ಮುಳ್ಳುಬೇಲಿ, ತಡೆಗೋಡೆ, ಹಾಗೂ ಕಂದಕ ತೋಡುತ್ತೇವೆ ಎಂದು ಹೇಳಿದ ಅರಣ್ಯ ಇಲಾಖಾಧಿಕಾರಿಗಳು ಹಲವಾರು ವರ್ಷ ವಾದರೂ ಕಾಮಗಾರಿಗಳನ್ನು ಕೈಗೆತ್ತಿಕೊಂಡಿಲ್ಲ.

ಪಿರಿಯಾಪಟ್ಟಣ ಮೀಸಲು ಅರಣ್ಯಾಧಿ ಕಾರಿಗಳ ಮೇಲೆ ವನ್ಯಜೀವಿ ವಿಭಾಗದ ರಾಜೀವ್ ಗಾಂಧಿ ರಾಷ್ಟ್ರೀಯ ಉದ್ಯಾನವನ ಸೇರಿದ್ದು ಎಂದು ಒಬ್ಬರ ಮೇಲೊಬ್ಬರು ಹೇಳಿಕೊಂಡು ದಿನ ಕಳೆಯುತ್ತಿದ್ದಾರೆ. ಯಾರೇ ಆಗಲಿ ಆನೆಗಳ ತಡೆಗೆ ಕಾಮಗಾರಿಯನ್ನು ಕೈಗೆತ್ತಿ ಕೊಳ್ಳುವುದಾದರೆ ಗ್ರಾಮದಿಂದ ಪ್ರತಿ ಕುಟುಂಬವೂ 10 ಸಾವಿರ ವಂತಿಕೆ ಹಣವನ್ನು ಕೊಡುತ್ತೇವೆ, ನಮಗೆ ಶಾಶ್ವತ ಪರಿಹಾರ ಆಗಬೇಕಿದೆ ಎಂದು ಮಾರ್ಮಿಕವಾಗಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.ಸ್ಥಳೀಯ ಶಾಸಕರಾದ ಕೆ.ಮಹದೇವ್ ಅವರಿಗೆನೊಂದ ರೈತರೆಲ್ಲರೂ ಭೇಟಿ ಮಾಡಿ ತಮ್ಮ ಅಸಹಾಯಕತೆಯನ್ನು ವ್ಯಕ್ತಪಡಿಸಿದಾಗ ಸಂಬಂಧಪಟ್ಟ ಅರಣ್ಯ ಅಧಿಕಾರಿಗಳಿಗೆ ಸೂಕ್ತ ಕ್ರಮಕೈಗೊಂಡು ಕಂದಕಗಳನ್ನು ಪುನರ್ ನಿರ್ಮಾಣ ಮಾಡಿ ಆನೆ ಹಾವಳಿಯನ್ನು ತಡೆಗಟ್ಟುವಂತೆ ಸೂಚಿಸಿರುವುದಾಗಿ ಸ್ಪಷ್ಟಪಡಿಸಿದ್ದಾರೆ.

ಸ್ಪಷ್ಟನೆ: ರೈತರ ಹೊಲದಲ್ಲಿನ ಬೆಳೆ ನಷ್ಟದ ಬಗ್ಗೆ ಸ್ಥಳ ಪರಿಶೀಲಿಸಿ ವರದಿ ಮೇರೆಗೆ ಸೂಕ್ತ ಪರಿಹಾರದ ಹಣ ಕೊಡುವ ಜವಾಬ್ದಾರಿ ಮಾತ್ರ ವನ್ಯಜೀವಿ ಅರಣ್ಯ ವಿಭಾಗಕ್ಕೆ ಸೇರಿದ್ದು ಉಳಿದ ಎಲ್ಲಾ ಜವಾಬ್ದಾರಿ ಪಿರಿಯಾಪಟ್ಟಣ ಮೀಸಲು ಅರಣ್ಯ ವಿಭಾಗಕ್ಕೆ ಸೇರಿದೆ ಎಂದು ರಾಜೀವ್ ಗಾಂಧಿ ರಾಷ್ಟ್ರೀಯ ಉದ್ಯಾನ ವನದ ವನ್ಯಜೀವಿ ಅರಣ್ಯ ವಿಭಾಗದ ವಲಯ ಅರಣ್ಯಾಧಿಕಾರಿ ಕೆ.ಸುಂದರ್ ಸ್ಪಷ್ಟಪಡಿಸಿದ್ದಾರೆ.

ಒಟ್ಟಾರೆ ಹಲವಾರು ಅಡ್ಡಿ ಆತಂಕಗಳಿಂದ ಅಲ್ಪ ಸ್ವಲ್ಪ ಪ್ರಮಾಣದಲ್ಲಿ ಕಾಡಂಚಿನ ರೈತರು ತಮ್ಮ ಜೀವನೋಪಾಯಕ್ಕೆ ಬೆಳೆದುಕೊಂಡ ಬೆಳೆಗೆ ಕಾಡು ಪ್ರಾಣಿಗಳಿಂದ ರಕ್ಷಣೆ ಇಲ್ಲ ದಂತಾಗಿದೆ. ಸರ್ಕಾರ ಮಧ್ಯ ಪ್ರವೇಶಿಸಿ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಪರಿಸರ ಹೋರಾಟ ಗಾರ ಕೆ.ಎನ್.ಸೋಮಶೇಖರ್ ಮನವಿ ಮಾಡಿಕೊಂಡಿದ್ದಾರೆ.

ಕಳೆದ 2 ವರ್ಷಗಳಿಂದ ಕೆಲವು ಅರಣ್ಯ ಪ್ರದೇಶವನ್ನು ವನ್ಯಜೀವಿ ವಿಭಾಗದಿಂದ ಮೀಸಲು ಅರಣ್ಯ ವಿಭಾಗಕ್ಕೆ ನೀಡಿದ್ದು ರೈತರ ಬೆಳೆನಷ್ಟ ಪರಿಹಾರವನ್ನು ತುಂಬು ವುದನ್ನು ಹೊರತುಪಡಿಸಿ ಉಳಿದ ಎಲ್ಲಾ ನಿವಾರಣೆಯನ್ನು ನಾವೇ ನೋಡಬೇಕಾಗಿದೆ.
ರೈಲ್ವೆ ಕಂಬಿ ಗೇಟ್ ಮತ್ತು ಕಂದಕ, ಆನೆ ತಡೆಗೋಡೆ, ಸೇರಿದಂತೆ ಈ ಎಲ್ಲಾ ಕಾಮಗಾರಿಯನ್ನು ಮಾಡಲು ಮತ್ತು ಕಾರ್ಯ ನಿರ್ವಹಿಸಲು ಸಿಬ್ಬಂದಿಗಳು ಹಾಗೂ ಹಣದ ಅವಶ್ಯಕತೆ ಇರುವುದರಿಂದ ಅನೇಕ ಬಾರಿ ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗಿದ್ದರೂ ಯಾವುದೇ ಪ್ರಯೋಜನವಾಗಿಲ್ಲ, ಕಾರ್ಯ ನಿರ್ವಹಿಸಲು ಕಷ್ಟವಾಗಿರುತ್ತದೆ. ವಾಪಸ್ ತಮ್ಮ ವ್ಯಾಪ್ತಿಗೆ ಪಡೆಯುವಂತೆ ವನ್ಯಜೀವಿ ವಿಭಾಗಕ್ಕೆ ಪತ್ರ ಬರೆಯಲಾಗಿದೆ, ಈಗ ನಮ್ಮ ಕಾರ್ಯ ವ್ಯಾಪ್ತಿಯಲ್ಲಿ ಆನೆ ಹಾವಳಿ ತಡೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದೆಂದು ಮೀಸಲು ಅರಣ್ಯ ವಿಭಾಗದ ಹುಣಸೂರು ಉಪ ಅರಣ್ಯ ಸಹಾಯಕ ಸಂರಕ್ಷಣಾಧಿಕಾರಿ ಸೋಮಪ್ಪ ವಿವರಿಸಿದರು.

Translate »