ಬಾಕಿ ವೇತನ ಪಾವತಿ ಸೇರಿ ವಿವಿಧ ಬೇಡಿಕೆ ಈಡೇರಿಕೆಗಾಗಿ ಗ್ರಾಪಂ ನೌಕರರ ಪ್ರತಿಭಟನೆ
ಮೈಸೂರು

ಬಾಕಿ ವೇತನ ಪಾವತಿ ಸೇರಿ ವಿವಿಧ ಬೇಡಿಕೆ ಈಡೇರಿಕೆಗಾಗಿ ಗ್ರಾಪಂ ನೌಕರರ ಪ್ರತಿಭಟನೆ

August 1, 2019

ಮೈಸೂರು: ಬಾಕಿ ಉಳಿಸಿಕೊಂಡಿ ರುವ ಗ್ರಾಪಂ ನೌಕರರ ವೇತನ ಪಾವತಿಸುವುದೂ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘದ (ಸಿಐಟಿಯು) ಮೈಸೂರು ಜಿಲ್ಲಾ ಸಮಿತಿ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

ಸಂಘದ ರಾಜ್ಯಾಧ್ಯಕ್ಷ ಮಾರುತಿ ಮಾನ್ಪಡೆ ನೇತೃತ್ವ ದಲ್ಲಿ ಗನ್‍ಹೌಸ್ ವೃತ್ತದಲ್ಲಿ ಜಮಾಯಿಸಿದ ಪ್ರತಿಭಟನಾ ಕಾರರು, ಚಾಮರಾಜ ಜೋಡಿ ರಸ್ತೆಯಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ, ರಾಮಸ್ವಾಮಿ ವೃತ್ತದ ಮೂಲಕ ಸಾಗಿ ಬಂದು ಜಿಲ್ಲಾ ಪಂಚಾಯಿತಿ ಕಾರ್ಯಾಲಯದ ಎದುರು ಸಮಾವೇಶಗೊಂಡು ಪ್ರತಿಭಟನೆ ನಡೆಸಿದರು.

ಬಾಕಿ ಉಳಿಸಿಕೊಂಡಿರುವ ಗ್ರಾಪಂ ನೌಕರರ ವೇತನ ವನ್ನು ಕೂಡಲೇ ಬಿಡುಗಡೆ ಮಾಡಬೇಕು. ಗ್ರಾಪಂನ 61 ಸಾವಿರ ನೌಕರರಿಗೆ ಈಗಿನ ಕನಿಷ್ಠ ಕೂಲಿ ಮತ್ತು ತುಟ್ಟಿಭತ್ಯೆ ಸೇರಿ ವೇತನ ನೀಡಲು 830 ಕೋಟಿ ರೂ. ಅಗತ್ಯವಿದೆ. ಆದರೆ ಗ್ರಾಪಂ ನೌಕರರ ವೇತನಕ್ಕಾಗಿ ಕಳೆದ ವರ್ಷ ನಿಗದಿಯಾಗಿದ್ದ ಹಣವನ್ನೇ ಸರ್ಕಾರ ನೀಡಿಲ್ಲ. ವೇತನಕ್ಕಾಗಿ ಬೇಕಾಗಿರುವ ಹೆಚ್ಚುವರಿ ಹಣ ಕ್ಕಾಗಿ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಪ್ರಧಾನ ಕಾರ್ಯದರ್ಶಿಗಳು ಹಣ ಕಾಸು ಇಲಾಖೆಗೆ ಪತ್ರ ಬರೆದಿದ್ದಾರೆ. ಆದರೂ ಹೆಚ್ಚುವರಿ ಹಣ ಬಿಡುಗಡೆಯಾಗಿಲ್ಲ ಎಂದು ಕಿಡಿಕಾರಿದರು.

ಬಾಕಿಯಾಗಿರುವ ವೇತನವನ್ನು ಗ್ರಾಪಂಗಳ ತೆರಿಗೆ ವಸೂಲಾತಿಯ ಆದಾಯದಲ್ಲಿ ಪಾವತಿಸಲು ಸರ್ಕಾರ ಅವಕಾಶ ನೀಡಿದ್ದರೂ ಅಧಿಕಾರಿಗಳು ಕ್ರಮ ಕೈಗೊಳ್ಳು ತ್ತಿಲ್ಲ. ಗ್ರಾಪಂ ಆಡಳಿತ ನೌಕರರ ಬಗ್ಗೆ ಮಲತಾಯಿ ಧೋರಣೆ ತಾಳಿದೆ. ಜಿಲ್ಲೆಯಲ್ಲಿ 800ಕ್ಕೂ ಹೆಚ್ಚು ನೌಕರರನ್ನು ಇಎಫ್‍ಎಂಎಸ್‍ಗೆ (ಎಲೆಕ್ಟ್ರಾನಿಕ್ ಫಂಡ್ಸ್ ಮ್ಯಾನೇಜ್‍ಮೆಂಟ್ ಸಿಸ್ಟಮ್ಸ್‍ಗೆ) ಸೇರ್ಪಡೆ ಮಾಡದ ಹಿನ್ನೆಲೆಯಲ್ಲಿ ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗಬೇಕಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಳಿಕ ಸ್ಥಳಕ್ಕೆ ಬಂದ ಜಿಪಂ ಸಿಇಓ ಕೆ.ಜ್ಯೋತಿ ಅವರಿಗೆ ಬೇಡಿಕೆಗಳನ್ನು ಈಡೇರಿಸುವ ಸಂಬಂಧ ಮನವಿ ಸಲ್ಲಿಸಿ ಪ್ರತಿಭಟನೆ ಅಂತ್ಯಗೊಳಿಸಲಾಯಿತು. ಸಂಘಟನೆಯ ಜಿಲ್ಲಾ ಸಮಿತಿ ಅಧ್ಯಕ್ಷ ಕೆ.ಬಸವ ರಾಜು, ಪ್ರಧಾನ ಕಾರ್ಯದರ್ಶಿ ಟಿ.ಎಸ್.ದಿನೇಶ್, ಖಜಾಂಚಿ ಲೋಕೇಶ್ ಕಿರುಜಾಜಿ ಸೇರಿದಂತೆ ಜಿಲ್ಲೆಯ ವಿವಿಧ ಗ್ರಾಪಂಗಳ ನೌಕರರು ನೂರಾರು ಸಂಖ್ಯೆಯಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Translate »