ಕಾರ್ಮಿಕರ ಭದ್ರತೆಗೆ ಉದ್ಯೋಗ ಖಾತರಿ ಯೋಜನೆ  ಹೆಚ್.ಡಿ.ಕೋಟೆಯಲ್ಲಿ ಸ್ಮಾಟ್ ಕಾರ್ಡ್ ವಿತರಿಸಿದ ಸಂಸದ ಧ್ರುವನಾರಾಯಣ್
ಮೈಸೂರು

ಕಾರ್ಮಿಕರ ಭದ್ರತೆಗೆ ಉದ್ಯೋಗ ಖಾತರಿ ಯೋಜನೆ ಹೆಚ್.ಡಿ.ಕೋಟೆಯಲ್ಲಿ ಸ್ಮಾಟ್ ಕಾರ್ಡ್ ವಿತರಿಸಿದ ಸಂಸದ ಧ್ರುವನಾರಾಯಣ್

January 28, 2019

ಹೆಚ್.ಡಿ.ಕೋಟೆ: ಸಂಘಟಿತ ಹಾಗೂ ಅಸಂಘಟಿತ ಕಾರ್ಮಿಕರಿಗೆ ಭದ್ರತೆ ಒದಗಿಸುವ ಉದ್ದೇಶದಿಂದ, ಹಿಂದಿನ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಅವರು ಉದ್ಯೋಗ ಖಾತರಿ ಯೋಜನೆ ಜಾರಿಗೆ ತಂದಿದ್ದರು ಎಂದು ಸಂಸದ ಆರ್.ಧ್ರುವನಾರಾಯಣ್ ತಿಳಿಸಿದರು.

ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನದಲ್ಲಿ ಮೈಸೂರು ಜಿಲ್ಲಾ ಕಾಂಗ್ರೆಸ್ ಸಮಿತಿ, ಕಾರ್ಮಿಕ ವಿಭಾಗ, ಕಾರ್ಮಿಕ ಕಲ್ಯಾಣ ಮಂಡಳಿಯಿಂದ ಸ್ಮಾರ್ಟ್ ಕಾರ್ಡ್ ವಿತರಣೆ ಮತ್ತು ಸರ್ಕಾರಿ ಸವಲತ್ತುಗಳ ಬಗ್ಗೆ ಕಾರ್ಯಾಗಾರ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಹಿಂದಿನಿಂದಲೂ ಎಂದಿಗೂ ಕಾಂಗ್ರೆಸ್ ಪಕ್ಷ ಕಾರ್ಮಿಕರ ಪರವಾಗಿಯೇ ಇದೆ. ನಮ್ಮ ರಾಜ್ಯದಲ್ಲಿ ಶೇ. 75 ರಿಂದ 80 ರಷ್ಟು ಜನ ಕಾರ್ಮಿಕರಿದ್ದಾರೆ. ಅವರಲ್ಲಿ ಸಂಘಟಿತ ಮತ್ತು ಅಸಂಘಟಿತ ಕಾರ್ಮಿಕರು ಎಂದು ಎರಡು ವಿಭಾಗ ಇದೆ. ಅಸಂಘಟಿತ ಕಾರ್ಮಿಕರಿಗೆ ಸರ್ಕಾರದಿಂದ ಸಿಗುವ ಸವಲತ್ತುಗಳ ಬಗ್ಗೆ ಯಾವ ಮಾಹಿತಿಯೂ ಇಲ್ಲ. ಸರ್ಕಾರ ಕೊಡುತ್ತಿರುವ ಈ ಸ್ಮಾರ್ಟ್ ಕಾರ್ಡ್‍ನಿಂದ ಆರೋಗ್ಯ, ಮಕ್ಕಳ ಶಿಕ್ಷಣ ಸೇರಿದಂತೆ ಸುಮಾರು 25ಕ್ಕೂ ಹೆಚ್ಚು ಸೌಲಭ್ಯಗಳು ದೊರಕುತ್ತವೆ. ಅಸಂಘಟಿತ ಕಾರ್ಮಿಕರು ಈ ಯೋಜನೆ ಸದುಪಯೋಗಪಡಿಸಿಕೊಳ್ಳಬೇಕು ಎಂದರು.

ಸ್ವಾತಂತ್ರ ಪೂರ್ವದಲ್ಲೂ ದೇಶಕ್ಕೆ ಸಂವಿಧಾನ ಕೊಟ್ಟ ಡಾ.ಬಿ.ಆರ್.ಅಂಬೇಡ್ಕರ್ ಅವರು ಕಾರ್ಮಿಕ ಖಾತೆ ಸಚಿವರಾಗಿದ್ದಾಗ, ಕಾರ್ಮಿಕರಿಗೆ ಕನಿಷ್ಠ ವೇತನ ಸಿಗಬೇಕು ಎಂದು ಪ್ರತಿಪಾದಿಸಿದ್ದರು ಮತ್ತು ಉದ್ಯೋಗ ಇಲಾಖೆಯಲ್ಲಿ ಹೆಸರು ನೋಂದಾಯಿಸಿಕೊಂಡವರಿಗೆ ಉದ್ಯೋಗ ಎಂದಿದ್ದರು. ಸ್ವಾತಂತ್ರ್ಯಾ ಬಂದ ನಂತರ ದಿ. ಬಾಬು ಜಗಜೀವನರಾಂ ಕಾರ್ಮಿಕ ಇಲಾಖೆಯ ಸಚಿವರಾಗಿದ್ದು, ಕಾರ್ಮಿಕರ ಜೀವನ ಸುಧಾರಣೆಗೆ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದರು. ಇಂದಿನ ಸಂಸದ ಮಲ್ಲಿಕಾರ್ಜುನ ಖರ್ಗೆ ಕೂಡ ಕಾರ್ಮಿಕ ಇಲಾಖೆ ಸಚಿವರಾಗಿದ್ದರು. ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯನವರು ಕೂಡ ಕಾರ್ಮಿಕ ಇಲಾಖೆ ಸಚಿವರಾಗಿ ಅನ್ನಭಾಗ್ಯ, ಕ್ಷೀರಭಾಗ್ಯ, ಸಾಲಮನ್ನಾ, ಅಂಬೇಡ್ಕರ್ ಮತ್ತು ವಾಲ್ಮೀಕಿ ಅಭಿವೃದ್ದಿ ನಿಗಮಗಳ ಮೂಲಕ ಕಾರ್ಮಿಕರಿಗೆ ಅನೇಕ ಸವಲತ್ತುಗಳನ್ನು ಕೊಟ್ಟಿದ್ದಾರೆ ಎಂದು ಸ್ಮರಿಸಿದರು.

ಶಾಸಕ ಅನಿಲ್ ಚಿಕ್ಕಮಾದು ಮಾತನಾಡಿ, ಇಂದು ತಾಲೂಕಿನ ಹೆಗ್ಗನೂರು, ಅಣ್ಣೂರು ಮತ್ತು ಬಿ. ಮಟಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 1,500ಕ್ಕೂ ಕಟ್ಟಡ ಕಾರ್ಮಿಕರನ್ನು ಗುರುತಿಸಿ, ಸ್ಮಾರ್ಟ್ ಕಾರ್ಡ್ ವಿತರಿಸುತ್ತಿರುವುದಕ್ಕೆ ಜಿಲ್ಲಾ ಕಾಂಗ್ರೆಸ್ ಕಾರ್ಮಿಕ ವಿಭಾಗದ ತಂಡಕ್ಕೆ ಅಭಿನಂದನೆ ಸಲ್ಲಿಸಬೇಕು. ಇಂದು ಸಾಂಕೇತಿಕವಾಗಿ 10 ಜನರಿಗೆ ಮಾತ್ರ ಸ್ಮಾರ್ಟ್ ಕಾರ್ಡ್ ಕೊಡಲಾಗುತ್ತಿದೆ. ಉಳಿಕೆ ಆಯಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೊಡಲಾಗುತ್ತದೆ ಎಂದರು.

ಜಿಲ್ಲಾ ಕಾಂಗ್ರೆಸ್ ಗ್ರಾಮಾಂತರ ಅಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್ ಮಾತನಾಡಿ, ಮುಂದಿನ ತಿಂಗಳು ಲೋಕಸಭಾ ಚುನಾವಣೆ ದಿನಾಂಕ ನಿಗದಿ ಆಗುತ್ತದೆ. ಪಕ್ಷ ಆರ್.ಧ್ರುವನಾರಾಯಣ್‍ರನ್ನು ಅಧಿಕೃತ ಅಭ್ಯರ್ಥಿ ಎಂದು ಘೋಷಣೆ ಮಾಡಿದೆ. ಅವರ ಎರಡು ಬಾರಿಯ ಸಂಸದರ ಅವಧಿಯಲ್ಲಿ ಹೆಚ್.ಡಿ.ಕೋಟೆ ತಾಲೂಕು ಅಭಿವೃದ್ಧಿಗೆ ಹೆಚ್ಚು ಕೆಲಸ ಮಾಡಿದ್ದಾರೆ ಎಂದರು.

ಕೆಪಿಸಿಸಿ ಕಾರ್ಮಿಕ ವಿಭಾಗದ ರಾಜ್ಯಾಧ್ಯಕ್ಷ ಎಂ.ಎಂ.ಪ್ರಕಾಶಂ, ಕಾರ್ಯಾಧ್ಯಕ್ಷ ಮೋಹನ್ ರಾವ್ ನಲವೆಡೆ, ಪ್ರಧಾನ ಕಾರ್ಯದರ್ಶಿ ಹರಿಣಿಗೌಡ, ಸಂಘಟನಾ ಕಾರ್ಯದರ್ಶಿ ಲಂಕೆ ಸೋಮಶೇಖರ್, ಜಂಟಿ ಕಾರ್ಯದರ್ಶಿ ಎಸ್.ಸುರೇಶ್, ಕಾರ್ಮಿಕ ವಿಭಾಗ ಹೆಚ್.ಡಿ.ಕೋಟೆ ಘಟಕದ ಅಧ್ಯಕ್ಷ ಮಂಜುನಾಥ್, ಸರಗೂರು ಬ್ಲಾಕ್ ಅಧ್ಯಕ್ಷ ಪಿ.ನಂಜುಂಡಸ್ವಾಮಿ, ಜಿಪಂ ಸದಸ್ಯೆ ಶ್ರೀಕೃಷ್ಣ, ಪಕ್ಷದ ಬ್ಲಾಕ್ ಅಧ್ಯಕ್ಷರಾದ ಏಜಾಜ್ ಪಾಷಾ, ಮನುಗನಹಳ್ಳಿ ಮಾದಪ್ಪ, ಪುರಸಭೆ ಸದಸ್ಯರಾದ ರಾಜು, ವೆಂಕಟೇಶ್, ಜಿಪಂ ಮಾಜಿ ಸದಸ್ಯ ಹೆಚ್.ಸಿ.ಶಿವಣ್ಣ, ಪ್ರಕಾಶ್ ಮತ್ತಿತರರು ಹಾಜರಿದ್ದರು.

Translate »