ಸ್ಟಾರ್ ಆಫ್ ಮೈಸೂರ್ ಶೈಕ್ಷಣಿಕ ಮೇಳಕ್ಕೆ ಅದ್ಧೂರಿ ತೆರೆ
ಮೈಸೂರು

ಸ್ಟಾರ್ ಆಫ್ ಮೈಸೂರ್ ಶೈಕ್ಷಣಿಕ ಮೇಳಕ್ಕೆ ಅದ್ಧೂರಿ ತೆರೆ

February 11, 2019

ಮೈಸೂರು:ಮೈಸೂರು ವಿಶ್ವವಿದ್ಯಾ ನಿಲಯ ಸ್ಥಾಪನೆಯೊಂದಿಗೆ ರಾಜ್ಯದಲ್ಲಿ ಶೈಕ್ಷಣಿಕ ಕ್ರಾಂತಿ ಆರಂಭವಾದ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಇದೇ ಮೊದಲ ಬಾರಿ ಆಯೋಜಿಸಲಾಗಿದ್ದ `ಶೈಕ್ಷಣಿಕ ಉತ್ಸವ’ಕ್ಕೆ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಯಿತು.

ಇಲ್ಲಿನ ಮಹಾರಾಜ ಕಾಲೇಜು ಮೈದಾನದಲ್ಲಿ ಏರ್ಪ ಡಿಸಲಾಗಿದ್ದ `ಸ್ಟಾರ್ ಆಫ್ ಮೈಸೂರ್ ಶೈಕ್ಷಣಿಕ ಮೇಳ’ಕ್ಕೆ ಭಾನುವಾರ ಅದ್ಧೂರಿ ತೆರೆಬಿದ್ದಿತು. ಮೈಸೂರು ಹಾಗೂ ಸುತ್ತಮುತ್ತಲಿನ ಹಲವಾರು ಶಿಕ್ಷಣ ಸಂಸ್ಥೆಗಳ ಮಳಿಗೆ ಯಲ್ಲಿ ಶಿಶುವಿಹಾರದಿಂದ ಸ್ನಾತಕೋತ್ತರ ಪದವಿ ಉನ್ನತ ಶಿಕ್ಷಣ(ಕೆಜಿ-ಪಿಜಿ)ದವರೆಗೂ ಭರಪೂರ ಶೈಕ್ಷಣಿಕ ಮಾಹಿತಿ ನೀಡಲಾಯಿತು. ಶಿಕ್ಷಣ ಸಂಸ್ಥೆಗಳಲ್ಲಿರುವ ಸೌಲಭ್ಯ, ಕೋರ್ಸ್‍ಗಳು, ಬೋಧನಾವರ್ಗ, ಪಠ್ಯೇತರ ಚಟುವಟಿಕೆ ಗಳು, ಶುಲ್ಕ ಸೇರಿದಂತೆ ಎಲ್ಲಾ ವಿವರವನ್ನು ಸಂಸ್ಥೆಗಳ ಪ್ರತಿ ನಿಧಿಗಳು ಬಿತ್ತರಿಸಿದರು. ಕರಪತ್ರ ನೀಡುವುದಷ್ಟೇ ಅಲ್ಲದೆ ಮಳಿಗೆಗೆ ಆಹ್ವಾನಿಸಿ, ವೈಯಕ್ತಿಕವಾಗಿ ತಿಳಿಸಿಕೊಟ್ಟರು. ಶೈಕ್ಷ ಣಿಕ ಮಾಹಿತಿಯಷ್ಟೇ ಅಲ್ಲದೆ, ವಿಭಿನ್ನ ಚಟುವಟಿಕೆಗಳು, ಸಾಂಸ್ಕೃತಿಕ ಕಾರ್ಯಕ್ರಮಗಳ ಹೂರಣವನ್ನೂ ಈ ಮೇಳ ಒಳಗೊಂಡಿತ್ತು. ಮೂರು ದಿನಗಳಲ್ಲೂ ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು ಸೇರಿದಂತೆ ಸಹಸ್ರಾರು ಮಂದಿ ಭೇಟಿ ನೀಡಿ, ಪ್ರಯೋಜನ ಪಡೆಯುವ ಮೂಲಕ ಶೈಕ್ಷಣಿಕ ಮೇಳದ ಪ್ರಥಮ ಪ್ರಯತ್ನದ ಯಶಸ್ಸಿಗೆ ಕಾರಣರಾದರು.

ಭಾನುವಾರ ಸಂಜೆ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಸಂಸದ ಪ್ರತಾಪ್‍ಸಿಂಹ, ನಗರ ಮತ್ತು ಸುತ್ತಲ ಜಿಲ್ಲೆಗಳ ಪ್ರತಿಷ್ಠಿತ ಶೈಕ್ಷಣಿಕ ಸಂಸ್ಥೆ ಗಳನ್ನು ಒಂದೇ ಸೂರಿನಡಿ ತಂದು ಸಮಗ್ರ ಶೈಕ್ಷಣಿಕ ಮಾಹಿತಿಯನ್ನು ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ಒದಗಿ ಸಿದ ಕಾರ್ಯ ಶ್ಲಾಘನೀಯ. ಎಲ್ಲಾ ಶಾಲಾ-ಕಾಲೇಜು ಗಳಲ್ಲಿ ಗುಣಮಟ್ಟದ ಶಿಕ್ಷಣ ಸಿಗಬೇಕು. ಸಾಂಸ್ಕೃತಿಕ ನಗರಿ, ಯೋಗಾ ನಗರಿ ಮೈಸೂರು, ಜ್ಞಾನ ನಗರವಾಗಿಯೂ ಬೆಳೆಯಬೇಕು. ಮಕ್ಕಳಿಗೆ ಶಿಕ್ಷಣದ ಜೊತೆಗೆ ಸಂಸ್ಕಾರ ವನ್ನೂ ಕಲಿಸುವ ನಿಟ್ಟಿನಲ್ಲಿ ಶಿಕ್ಷಕರು, ಪೋಷಕರು ಮುಂದಾಗಬೇಕೆಂದು ಹೇಳಿದರು.

ನಾನು ಸಂಸದನಾಗಿ ಬಂದ ಸಂದರ್ಭದಲ್ಲಿ ಮೈಸೂರಿನಲ್ಲಿ 12 ಇಂಜಿನಿಯರಿಂಗ್, 85 ಪದವಿ ಕಾಲೇಜುಗಳಿವೆ. ಆದರೆ ಉದ್ಯೋಗಾವಕಾಶ ಹಾಗೂ ಸಾಫ್ಟ್‍ವೇರ್ ಕಂಪನಿಗಳ ಸ್ಥಾಪನೆಯಲ್ಲಿ ಪ್ರಗತಿಯಾಗಿಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು. ಮೈಸೂರಿನ ಪಕ್ಕದಲ್ಲಿ 2 ನದಿಗಳಿವೆ, 2 ರಾಷ್ಟ್ರೀಯ ಉದ್ಯಾನಗಳಿವೆ. ಇಷ್ಟೊಂದು ಸುಂದರವಾದ ವಾತಾವರಣವಿದೆ. ಸುಸಜ್ಜಿತ, ಯೋಜಿತ ನಗರ ಇದಾಗಿದೆ. ಆದರೂ ವಾಣಿಜ್ಯ ಕ್ಷೇತ್ರದ ಅಭಿವೃದ್ಧಿ ನಿರೀಕ್ಷಿತ ಮಟ್ಟದಲ್ಲಿಲ್ಲವೇಕೆಂಬ ಪ್ರಶ್ನೆ ಎದುರಾಗಿತ್ತು. ಇದಕ್ಕೆ ಸಂಪರ್ಕ ಕೊರತೆಯೇ ಕಾರಣ ಎಂಬುದನ್ನು ತಿಳಿದ ನಂತರದಲ್ಲಿ ವಿಮಾನಯಾನ ಹಾಗೂ ರಸ್ತೆ ಅಭಿವೃದ್ಧಿಗೆ ಆದ್ಯತೆ ನೀಡಲಾಯಿತು. ಮೈಸೂರು-ಬೆಂಗಳೂರು ದಶಪಥ ರಸ್ತೆ ನಿರ್ಮಾಣ ಕಾಮಗಾರಿ ಕೇಂದ್ರದ 6,400 ಕೋಟಿ ರೂ. ಅನುದಾನದಲ್ಲಿ ಪ್ರಗತಿ ಯಲ್ಲಿದೆ. ರಿಂಗ್‍ರಸ್ತೆ ಪೂರ್ಣಗೊಳಿಸಲಾಗಿದೆ. ಫ್ಲೈಓವರ್ ನಿರ್ಮಾಣವಾಗಿದೆ. ಪಾರ್ಸ್‍ಪೋರ್ಟ್ ಸೇವಾಕೇಂದ್ರ ಸ್ಥಾಪನೆಯಾಗಿದೆ. ಮೈಸೂರಿನಿಂದ ಚೆನ್ನೈಗೆ ನಿತ್ಯ ವಿಮಾನ ಸಂಚಾರವಿದೆ. ಇನ್ನೂ 6 ವಿಮಾನಗಳ ಸಂಚಾರ ಶೀಘ್ರದಲ್ಲೇ ಆರಂಭವಾಗಲಿದೆ. ಇದರಿಂದ ಪ್ರವಾಸೋದ್ಯಮ, ವಾಣಿಜ್ಯ, ಶೈಕ್ಷಣಿಕ ಅಭಿವೃದ್ಧಿ ಯಾಗಲಿದೆ. ನಾನು ಪ್ರಾಮಾಣಿಕ ಸಂಸದನಾಗಿ ಕೆಲಸ ಮಾಡಿದ್ದೇನೆ. ಮುಂದಿನ ದಿನಗಳಲ್ಲೂ ನಾವೆಲ್ಲಾ ಒಟ್ಟಾಗಿ ಕೆಲಸ ಮಾಡೋಣ ಎಂದರು.

`ಮೈಸೂರು ಮಿತ್ರ’ ಹಾಗೂ `ಸ್ಟಾರ್ ಆಫ್ ಮೈಸೂರ್’ ಪ್ರಧಾನ ಸಂಪಾದಕರಾದ ಕೆ.ಬಿ.ಗಣಪತಿ ಅವರು ಮಾತನಾಡಿ, ಸ್ವಾಮಿ ವಿವೇಕಾನಂದರು `ನಿನ್ನ ಬಾಳಿನ ಶಿಲ್ಪಿ ನೀನೆ’ ಎಂದಿದ್ದಾರೆ. ಆದರೆ ಭವಿಷ್ಯ ರೂಪಿಸಿಕೊಳ್ಳಲು ಶಿಕ್ಷಣ ಎಂಬ ಮಾರ್ಗ ಬಹಳ ಮುಖ್ಯ. ಈ ನಿಟ್ಟಿನಲ್ಲಿ ಒಂದು ಪತ್ರಿಕೆಯಾಗಿ ಸಮುದಾಯಕ್ಕೆ ಹೇಗೆ ಸಹಕಾರ ನೀಡ ಬಹುದೆಂದು ಚಿಂತನೆ ಮಾಡಿ, ಈ ಶೈಕ್ಷಣಿಕ ಮೇಳ ಆಯೋಜಿಸಲು ನಿರ್ಧರಿಸಿದೆವು. ಒಂದೇ ಸೂರಿನಡಿ ಶಿಕ್ಷಣ ಸಂಸ್ಥೆಗಳನ್ನು ಒಗ್ಗೂಡಿಸಿ, ಅಲ್ಲಿನ ಶೈಕ್ಷಣಿಕ ಗುಣಮಟ್ಟ, ದೃಷ್ಟಿಕೋನ, ಸವಲತ್ತುಗಳು ಇನ್ನಿತರ ವಿಚಾರಗಳನ್ನು ಮಕ್ಕಳು ಹಾಗೂ ಪೋಷಕರಿಗೆ ತಿಳಿಸುವ ಪ್ರಯತ್ನ ಇದಾಗಿತ್ತು. ಇದರೊಂದಿಗೆ ಪೋಷಕರು ಹಾಗೂ ಮಕ್ಕಳು ಆಶಿಸುವ ಶಿಕ್ಷಣ ಯಾವುದು?, ತಮ್ಮನ್ನು ತಾವು ಹೇಗೆ ತಿದ್ದಿಕೊಳ್ಳಬೇಕೆಂಬುದು ಶಿಕ್ಷಣ ಸಂಸ್ಥೆ ಗಳಿಗೂ ಮನವರಿಕೆಯಾಗಿದೆ. ಈಗಾಗಲೇ ಯಾವ ಶಾಲೆ-ಕಾಲೇಜಿಗೆ ಸೇರಿಕೊಳ್ಳ ಬೇಕೆಂದು ನಿರ್ಧರಿಸಿರುವ ಬಗ್ಗೆ ಕೆಲ ವಿದ್ಯಾರ್ಥಿಗಳು ಹೇಳಿದ್ದಾರೆ. ಮೇಳದ ಉದ್ದೇಶ ಈಡೇರಿದೆ. ಖಂಡಿತ ಮುಂದಿನ ವರ್ಷ ಇನ್ನೂ ಹೆಚ್ಚಿನ ಶಿಕ್ಷಣ ಸಂಸ್ಥೆಗಳು, ಸಾರ್ವಜನಿಕರು ಭಾಗಿಯಾಗುತ್ತಾರೆಂಬ ವಿಶ್ವಾಸವಿದೆ ಎಂದು ಹೇಳಿದರು.

ಪ್ರತಾಪ್ ಸಿಂಹ ಕ್ರಿಯಾಶೀಲ, ಡೈನಮಿಕ್ ಸಂಸದರಾಗಿದ್ದಾರೆ. ಆರಂಭದಿಂದಲೂ ಉತ್ತಮ ವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಒಳ್ಳೆಯ ಕೆಲಸ ಮಾಡುತ್ತಿರುವ ಇವರ ಕಾರ್ಯದಕ್ಷತೆ ಹೀಗೆಯೇ ಮುಂದುವರೆಯಲಿ. ಪ್ರತಾಪ್ ಸಿಂಹ ಅವರ ಮೇಲೆ ನಿಮ್ಮಂತೆ ನಮಗೂ ತುಂಬಾ ಪ್ರೀತಿಯಿದೆ. ಅವರೇ ಹೇಳಿದಂತೆ ಸಿಂಹಾವಲೋಕನ ಮಾಡಿದಾಗ ನಾವು ಹಾಗೂ ನಮ್ಮ ಪತ್ರಿಕೆ ಆಶೀರ್ವಾದದಿಂದ ಅವರಿಗೆ ಅನುಕೂಲವಾಗಿದೆ ಎಂದರು.

Translate »