ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಆಯ್ಕೆಗಾಗಿ ಎಐಸಿಸಿ ಪ್ರತಿನಿಧಿಗಳಿಂದ ಅಭಿಪ್ರಾಯ ಸಂಗ್ರಹ
ಮೈಸೂರು

ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಆಯ್ಕೆಗಾಗಿ ಎಐಸಿಸಿ ಪ್ರತಿನಿಧಿಗಳಿಂದ ಅಭಿಪ್ರಾಯ ಸಂಗ್ರಹ

February 11, 2019

ಮೈಸೂರು: ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆಗಾಗಿ ಎಐಸಿಸಿ ಉಸ್ತು ವಾರಿಗಳು ಇಂದು ಮೈಸೂರಿನ ರೈಲ್ವೆ ನಿಲ್ದಾಣ ಬಳಿ ಇರುವ ಕಾಂಗ್ರೆಸ್ ಕಚೇರಿ ಯಲ್ಲಿ ಅಭಿಪ್ರಾಯ ಸಂಗ್ರಹಿಸಿದರು.

ಲೋಕಸಭಾ ಚುನಾವಣೆಯ ಕರ್ನಾ ಟಕ ಉಸ್ತುವಾರಿಗಳಾದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಮಾಣಿಕ್ ಠಾಕೂರ್ ಮತ್ತು ಕಾರ್ಯದರ್ಶಿ ವಿಶ್ವನಾಥನ್ ಅವರುಗಳು ಇಂದು ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಪಕ್ಷದ ಎಲ್ಲಾ ಘಟಕ ಗಳ ಪದಾಧಿಕಾರಿಗಳು, ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ಹಿರಿಯ ಮುಖಂ ಡರ ಸಭೆ ಕರೆದು ಅಭ್ಯರ್ಥಿ ಆಯ್ಕೆ ಬಗ್ಗೆ ಅಭಿಪ್ರಾಯಗಳನ್ನು ಸಂಗ್ರಹಿಸಿದರು.
ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದ ರಾಮಯ್ಯ ಅವರೇ ಸ್ಪರ್ಧಿಸಬೇಕು ಎಂದು ಎಐಸಿಸಿ ವರಿಷ್ಠರು ಇಚ್ಛಿಸಿದ್ದಾರೆ ಎಂದು ಹೇಳಲಾಗಿದ್ದು, ಎಐಸಿಸಿ ವರಿಷ್ಠರ ಒತ್ತಡಕ್ಕೆ ಮಣಿದು ಸಿದ್ದರಾಮಯ್ಯ ಅವರೇ ಈ ಕ್ಷೇತ್ರದಲ್ಲಿ ಅನಿವಾರ್ಯವಾಗಿ ಸ್ಪರ್ಧಿಸ ಬೇಕಾಗುತ್ತದೆ ಎಂದು ಹೇಳಲಾಗಿದೆ. ಇದಕ್ಕೆ ಪೂರಕವಾಗಿ ಇತ್ತೀಚೆಗೆ ಸುದ್ದಿಗೋಷ್ಠಿ ನಡೆ ಸಿದ ಮಾಜಿ ಶಾಸಕ ವಾಸು ಅವರು `ಸಿದ್ದ ರಾಮಯ್ಯ ಅವರು ಸ್ಪರ್ಧಿಸದಿದ್ದರೆ ನಾನೂ ಕೂಡ ಈ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಆಕಾಂಕ್ಷಿ’ ಎಂದು ಹೇಳಿದ್ದನ್ನು ಉಲ್ಲೇಖಿಸ ಬಹುದಾಗಿದೆ.

ಇನ್ನುಳಿದಂತೆ ಮಾಜಿ ಶಾಸಕ ವಾಸು, ಮಾಜಿ ಸಂಸದ ಸಿ.ಹೆಚ್.ವಿಜಯಶಂಕರ್, ಎಐಸಿಸಿ ವಕ್ತಾರರೂ ಆದ ಸುಪ್ರೀಂಕೋರ್ಟ್ ಹಿರಿಯ ನ್ಯಾಯವಾದಿ ಬ್ರಿಜೇಶ್ ಕಾಳಪ್ಪ, ಎಐಸಿಸಿ ಮಾಜಿ ಕಾರ್ಯದರ್ಶಿಗಳೂ ಆದ ಕೆಪಿಸಿಸಿ ಶಕ್ತಿ ಕೇಂದ್ರದ ಅಧ್ಯಕ್ಷ ಸೂರಜ್ ಹೆಗ್ಡೆ, ಕಾಡಾ ಮಾಜಿ ಅಧ್ಯಕ್ಷ ಸಿ.ದಾಸೇಗೌಡ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಿ.ಜೆ. ವಿಜಯಕುಮಾರ್, ಹೈಕೋರ್ಟ್ ವಕೀಲ ಚಂದ್ರಮೌಳಿ ಅವರುಗಳು ಪ್ರಬಲ ಆಕಾಂಕ್ಷಿಗಳಾಗಿದ್ದಾರೆ. ಇಂದು ನಡೆದ ಅಭಿಪ್ರಾಯ ಸಂಗ್ರಹ ಸಭೆಯಲ್ಲಿ ಮಾಜಿ ಶಾಸಕ ವಾಸು ಅವರ ಪರವಾಗಿ ಮೈಸೂರು ಭಾಗದ ಕಾಂಗ್ರೆಸ್ ಪದಾಧಿಕಾರಿಗಳು ಮಾತ್ರ ವಲ್ಲದೇ, ಕೊಡಗಿನ ಕಾಂಗ್ರೆಸ್ ಪದಾಧಿಕಾರಿಗಳೂ ಕೂಡ ಬೆಂಬಲ ವ್ಯಕ್ತಪಡಿಸಿದ್ದು ವಿಶೇಷವಾಗಿತ್ತು. ಎಐಸಿಸಿ ಮಾಜಿ ಕಾರ್ಯದರ್ಶಿ ಸೂರಜ್ ಹೆಗ್ಡೆ ಪರವಾಗಿಯೂ ಸಹ ಹೆಚ್ಚಿನ ಮುಖಂಡರುಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಎಐಸಿಸಿ ವಕ್ತಾರ ಬ್ರಿಜೇಶ್ ಕಾಳಪ್ಪ ಪರವಾಗಿಯೂ ಹೆಚ್ಚಿನ ಅಭಿಪ್ರಾಯಗಳು ಸಂಗ್ರಹವಾಗಿವೆ ಎಂದು ಮೂಲಗಳು ತಿಳಿಸಿವೆ. ಮಾಜಿ ಸಂಸದ ಸಿ.ಹೆಚ್.ವಿಜಯಶಂಕರ್ ಪರ ವಾಗಿಯೂ ಕೊಡಗು ಹಾಗೂ ಮೈಸೂರು ಭಾಗದಿಂದ ಅಭಿಪ್ರಾಯಗಳು ಕೇಳಿಬಂದಿವೆ. ಕಾಡಾ ಮಾಜಿ ಅಧ್ಯಕ್ಷ ಸಿ.ದಾಸೇಗೌಡ ಪರವಾಗಿ ಮೈಸೂರು ನಗರ ಮತ್ತು ಜಿಲ್ಲೆಯ ಅನೇಕ ಮುಖಂಡರು ಅಭಿಪ್ರಾಯ ತಿಳಿಸಿದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಿ.ಜೆ. ವಿಜಯಕುಮಾರ್ ಪರವಾಗಿ ಜಿಲ್ಲಾ ಕಾಂಗ್ರೆಸ್ ಮುಖಂಡರು ಅಭಿಪ್ರಾಯ ತಿಳಿಸಿದ್ದಾರೆ ಎಂದು ಹೇಳಲಾಗಿದೆ. ಆಕಾಂಕ್ಷಿಗಳೂ ಸೇರಿದಂತೆ ಎಲ್ಲಾ ಮುಖಂಡರು ಪಕ್ಷದ ಹೈಕಮಾಂಡ್ ಯಾರನ್ನೇ ಅಭ್ಯರ್ಥಿ ಮಾಡಿದರೂ, ಅವರ ಗೆಲುವಿಗಾಗಿ ಪ್ರಾಮಾಣಿಕ ವಾಗಿ ಶ್ರಮಿಸುವ ವಾಗ್ದಾನವನ್ನು ವರಿಷ್ಠರಿಗೆ ನೀಡಿದರು ಎಂದು ಮೂಲಗಳು ಹೇಳಿವೆ.

Translate »