ಶ್ರೀಸಾಮಾನ್ಯರ ಸಮಸ್ಯೆ ಆಲಿಸಲು ಕಾಲ್ ಸೆಂಟರ್ ಸ್ಥಾಪನೆ: ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ
ಮಂಡ್ಯ

ಶ್ರೀಸಾಮಾನ್ಯರ ಸಮಸ್ಯೆ ಆಲಿಸಲು ಕಾಲ್ ಸೆಂಟರ್ ಸ್ಥಾಪನೆ: ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ

June 17, 2018

ಭಾರತೀನಗರ:  ಕ್ಷೇತ್ರದ ಶ್ರೀಸಾಮಾನ್ಯರ ಸಮಸ್ಯೆಗಳನ್ನು ಆಲಿಸಲು ಮದ್ದೂರು ಪಟ್ಟಣದಲ್ಲಿ ಕಾಲ್ ಸೆಂಟರ್ ಸ್ಥಾಪಿಸಲಾಗುವುದು ಎಂದು ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ತಿಳಿಸಿದರು.

ಇಲ್ಲಿನ ಕಾವೇರಿ ನೀರಾವರಿ ನಿಗಮದ ಆವರಣದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ನಾನು ರಾಜ್ಯ ಸಚಿವನಾಗಿರುವುದರಿಂದ ಕ್ಷೇತ್ರದಲ್ಲಿರಲು ಸಾಧ್ಯವಿಲ್ಲ. ಆದ್ದರಿಂದ ಕ್ಷೇತ್ರದ ಶ್ರೀಸಾಮಾನ್ಯರ ಸಮಸ್ಯೆಗಳನ್ನು ಆಲಿಸಲು ಪಟ್ಟಣದಲ್ಲಿ ಕಾಲ್ ಸೆಂಟರ್ ತೆರೆಯಲಿದ್ದು, ಈ ಕೇಂದ್ರ ಬೆಳಗ್ಗೆ 8 ರಿಂದ ಮಧ್ಯರಾತ್ರಿ 12ರವರೆಗೆ ಕಾರ್ಯ ನಿರ್ವಹಿಸಲಿದೆ. ಇಲ್ಲಿಗೆ ದೂರು ನೀಡಿದರೆ ಶೀಘ್ರವಾಗಿ ಅದನ್ನು ಬಗೆಹರಿಸಲು ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು.

ರಾಜ್ಯದ ಎಲ್ಲಾ ಬಸ್ ನಿಲ್ದಾಣಗಳಿಗೆ ಮೂಲ ಸೌಲಭ್ಯ ಕಲ್ಪಿಸುವುದು ನನ್ನ ಜವಾಬ್ದಾರಿ. ಕೆ.ಎಂ.ದೊಡ್ಡಿ ಬಸ್ ನಿಲ್ದಾಣ ಅಭಿವೃದ್ಧಿಗಾಗಿ ಬೆಸಗರಹಳ್ಳಿ ಬಸ್ ನಿಲ್ದಾಣಕ್ಕೆ ಮಂಜೂರಾಗಿದ್ದ 75 ಲಕ್ಷ ರೂ. ಬಳಸಿಕೊಳ್ಳಲಾಗಿದ್ದು, ಇನ್ನೂ ಒಂದು ಕೋಟಿ ರೂ. ಬಿಡುಗಡೆ ಮಾಡಿ ಅಭಿವೃದ್ಧಿ ಮಾಡಲಾಗುವುದು. ಅಲ್ಲದೆ, ಬೆಸಗರಹಳ್ಳಿಯಲ್ಲೂ ಸಾರಿಗೆ ಬಸ್ ನಿಲ್ದಾಣ ನಿರ್ಮಿಸುವುದಾಗಿ ಹೇಳಿದರು.

ಪಟ್ಟಭದ್ರ ಹಿತಾಸಕ್ತಿಗಳಿಂದ ತೊಂದರೆ: ಭಾರತೀನಗರವನ್ನು ಪಟ್ಟಣ ಪಂಚಾಯಿತಿಯನ್ನಾಗಿ ಪರಿವರ್ತಿಸಲು ಪ್ರಯತ್ನಿಸಿದಾಗ ಪಟ್ಟಭದ್ರ ಹಿತಾಸಕ್ತಿಗಳು ತಮ್ಮ ಪ್ರಭಾವ ಬಳಸಿ ಅದನ್ನು ತಪ್ಪಿಸಿದರು ಎಂದು ಪರೋಕ್ಷವಾಗಿ ಮಾಜಿ ಸಂಸದ ಜಿ.ಮಾದೇಗೌಡ ಹಾಗೂ ಮಧು ಜಿ. ಮಾದೇಗೌಡರ ವಿರುದ್ಧ ಹರಿಹಾಯ್ದ ಸಚಿವರು, ಸ್ಥಳೀಯರು ಭಾರತೀನಗರವನ್ನು ಪಟ್ಟಣ ಪಂಚಾಯಿತಿಯನ್ನಾಗಿ ಮಾಡುವಂತೆ ಮನವಿ ಸಲ್ಲಿಸಿದರೇ ಅದನ್ನು ಮಾಡಲು ಬದ್ಧನಾಗಿರುವುದಾಗಿ ತಿಳಿಸಿದ ಅವರು, ಸರ್ಕಾರ ಇರಲಿ, ಇರದೇ ಇರಲಿ ಮದ್ದೂರು ಕ್ಷೇತ್ರದ ಅಭಿವೃದ್ಧಿ ಹಾಗೂ ಜನರ ಸಮಸ್ಯೆಗೆ ಸ್ಪಂದಿಸಿದ್ದೇನೆ. ಮುಂದೆಯೂ ಸ್ಪಂದಿಸುತ್ತೇನೆ ಎಂದರು.

ಬಾಕಿ ಹಣ ಪಾವತಿಗೆ ಕ್ರಮ: ಚಾಂಷುಗರ್ ಆಡಳಿತ ಮಂಡಳಿ ಕಬ್ಬು ಬೆಳೆಗಾರರಿಗೆ ನೀಡಬೇಕಿರುವ ಬಾಕಿ ಹಣ ಸಂಬಂಧ ಈಗಾಗಲೇ ಕಾರ್ಖಾನೆ ಆಡಳಿತ ಮಂಡಳಿ ಜೊತೆ ಚರ್ಚಿಸಿದ್ದು, ಶೀಘ್ರದಲ್ಲೇ ಬಾಕಿ ಪಾವತಿಸುವುದಾಗಿ ಭರವಸೆ ನೀಡಿದ್ದಾರೆ. ಒಂದು ವೇಳೆ ಪಾವತಿಸದಿದ್ದಲ್ಲಿ ಕಠಿಣ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ವೇದಿಕೆಯಲ್ಲಿ ಮಾಜಿ ಶಾಸಕಿ ಕಲ್ಪನಾ ಸಿದ್ದರಾಜು, ಸಂತೋಷ್ ತಮ್ಮಣ್ಣ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿ.ಕೆ.ಸ್ವಾಮಿಗೌಡ, ಡಿಸಿಸಿ ಬ್ಯಾಂಕ್ ನಿರ್ದೇಶಕ ಹೊನ್ನೇಗೌಡ, ಜಿಪಂ ಸದಸ್ಯ ಮರಿಹೆಗಡೆ, ಮಾಜಿ ಸದಸ್ಯ ಎ.ಟಿ.ಬಲ್ಲೇಗೌಡ, ಮುಖಂಡರಾದ ಹನುಮಂತು, ನವೀನ್, ಕಾರ್ತಿಕ್ ಸಿದ್ದರಾಜು, ಜಿ.ಟಿ.ರವೀಂದ್ರ ಕುಮಾರ್, ಎ.ಎಸ್.ಬೋರೇಗೌಡ, ಅರವಿಂದ್ ಇತರರಿದ್ದರು.

Translate »