ಕೇದಾರ ಖಂಡದಲ್ಲಿ ಅವಧೂತ ದತ್ತ ಪೀಠದ ಶಾಖಾ ಆಶ್ರಮ ಸ್ಥಾಪನೆ
ಮೈಸೂರು

ಕೇದಾರ ಖಂಡದಲ್ಲಿ ಅವಧೂತ ದತ್ತ ಪೀಠದ ಶಾಖಾ ಆಶ್ರಮ ಸ್ಥಾಪನೆ

November 30, 2019

ಮೈಸೂರು, ನ.29(ಎಂಟಿವೈ)- ಪ್ರಸಿದ್ಧ ಪುಣ್ಯ ಕ್ಷೇತ್ರವಾದ ಕಾಶಿ ಯಲ್ಲಿನ ಕೇದಾರ ಖಂಡದಲ್ಲಿ ಅವಧೂತ ದತ್ತಪೀಠದ 86ನೇ ಶಾಖಾ ಆಶ್ರಮ ಉದ್ಘಾಟಿಸಿ, ವಿವಿಧ ಧಾರ್ಮಿಕ ಕೈಂಕರ್ಯದಲ್ಲಿ ತೊಡಗಿದ್ದ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಕಾಶಿಯಿಂದ ಮೈಸೂರಿಗೆ ಆಗಮಿಸುತ್ತಿದ್ದು, ಡಿ.1ರಂದು ಗಣಪತಿ ಆಶ್ರಮದಲ್ಲಿ ನಡೆಯುವ ಕಾಶಿ ಸಮಾರಾಧನಾ ಕಾರ್ಯಕ್ರಮದಲ್ಲಿ ಭಕ್ತರಿಗೆ ಗಂಗಾಜಲ ಸಂಪ್ರೋಕ್ಷಣೆ ಮಾಡಲಿದ್ದಾರೆ ಎಂದು ದತ್ತಪೀಠದ ಕಾರ್ಯದರ್ಶಿ ಪ್ರಸಾದ್ ತಿಳಿಸಿದ್ದಾರೆ.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನ.10ರಂದು ಕಾಶಿಯಲ್ಲಿ ಅವಧೂತ ದತ್ತಪೀಠದ 86ನೇ ಶಾಖೆಯನ್ನು ಉದ್ಘಾಟಿಸಿದ ಗಣಪತಿ ಸಚ್ಚಿದಾ ನಂದ ಸ್ವಾಮಿಗಳು, ಆಶ್ರಮದಲ್ಲಿ ದತ್ತಾತ್ರೇಯ ಹಾಗೂ ಹನುಮಂತನ ವಿಗ್ರಹಗಳನ್ನು ಪ್ರತಿಷ್ಠಾಪಿಸಿದ್ದಾರೆ. ಆಶ್ರಮದ ಬಳಿಯಿರುವ ಕಾಶಿ ಮಹಾ ರಾಜರ ಮೈದಾನದಲ್ಲಿ ನ.14ರಿಂದ 24ರವರೆಗೆ 11 ದಿನಗಳ ಕಾಲ ಕೃಷ್ಣ ಯಜುರ್ವೇದದಲ್ಲಿನ ಪ್ರಸಿದ್ಧ ರುದ್ರಪ್ರಶ್ನ ವೇದ ಮಂತ್ರಗಳನ್ನು 14321 ಬಾರಿ ಪಠಿಸಿ, 121 ಮಂದಿ ಋತ್ವಿಜರಿಂದ 11 ಹೋಮ ಕುಂಡಗಳಲ್ಲಿ ಹವನ ನೆರವೇರಿಸಿದ್ದಾರೆ. 1 ಲಕ್ಷ ಭಕ್ತರು ಧಾರ್ಮಿಕ ಕಾರ್ಯದಲ್ಲಿ ಪಾಲ್ಗೊಂಡು ಕೃತಾರ್ಥರಾಗಿದ್ದಾರೆ ಎಂದರು.

ಮೈಸೂರಿಗೆ ಆಗಮಿಸುತ್ತಿರುವ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಡಿ.1ರಂದು ಮೈಸೂರಿನ ಆಶ್ರಮದಲ್ಲಿ ಸಚ್ಚಿದಾನಂದೇಶ್ವರ ಶಿವಲಿಂಗಕ್ಕೆ ಗಂಗಾಜಲದಿಂದ ರುದ್ರಾಭಿಷೇಕ, ರುದ್ರ ಹೋಮ ನೆರವೇರಿಸಲಿ ದ್ದಾರೆ. ಆಶ್ರಮಕ್ಕೆ ಬರುವ ಭಕ್ತರಿಗೆ ಪವಿತ್ರ ಗಂಗಾಜಲ ಪ್ರೋಕ್ಷಣೆ ಮಾಡಲಿದ್ದಾರೆ. ಕಾಶಿಯಾತ್ರೆ ಕೈಗೊಳ್ಳಲು ಸಾಧ್ಯವಾಗದೇ ಇರುವವರು ಇದರ ಪ್ರಯೋಜನ ಪಡೆಯಬಹುದಾಗಿದೆ. ನಂತರ ಪ್ರಸಾದ ವಿನಿಯೋಗ, ಅನ್ನ ಸಂತರ್ಪಣೆ ನಡೆಯಲಿದೆ ಎಂದರು. ಗೋಷ್ಠಿಯಲ್ಲಿ ಆಶ್ರಮದ ಮಾಧ್ಯಮ ಸಂಚಾಲಕ ರಮೇಶ್ ಕುಮಾರ್, ಸಾರ್ವಜನಿಕ ಸಂಪರ್ಕಾಧಿಕಾರಿ ಸಿದ್ಧಾರ್ಥ್ ಇದ್ದರು.

Translate »