ಕುಶಾಲನಗರ: ಸಮೀಪದ ಶಿರಂಗಾಲ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಹಳೆಯ ವಿದ್ಯಾರ್ಥಿಗಳು ಹಾಗೂ ದಾನಿಗಳಿಂದ ನಿರ್ಮಾಣ ಮಾಡಿರುವ ಶಾರದಾ ಮಂದಿರದಲ್ಲಿ ಭಾನುವಾರ ಶ್ರೀ ಶಾರದಾ ಮಾತೆಯ ಪ್ರತಿಮೆಯನ್ನು ಕೊಡ್ಲಿಪೇಟೆ ಕಿರಿಕೊಡ್ಲಿ ಮಠದ ಶ್ರೀ ಸದಾಶಿವ ಸ್ವಾಮೀಜಿ ಪ್ರತಿಷ್ಠಾಪನೆ ನೆರವೇರಿಸಿದರು.
ಕಾಲೇಜು 25 ವರ್ಷಕ್ಕೆ ಕಾಲಿಟ್ಟಿರುವ ಸವಿನೆನಪಿಗಾಗಿ ಶಾಲಾಭಿವೃದ್ಧಿ ಸಮಿತಿ, ಮಂಟಿಗಮ್ಮ ದೇವತಾ ಸಮಿತಿ, ಹಳೆಯ ವಿದ್ಯಾರ್ಥಿಗಳ ಸಂಘ ಹಾಗೂ ಗ್ರಾಮಸ್ಥರ ಸಹಕಾರದಿಂದ ರೂ.16 ಲಕ್ಷ ವೆಚ್ಚದಲ್ಲಿ ಶಾರದಾ ಮಂದಿರ, ಕ್ರೀಡಾ ಗ್ಯಾಲರಿ ಹಾಗೂ ಪ್ರವೇಶ ದ್ವಾರವನ್ನು ಅಭಿವೃದ್ಧಿ ಪಡಿಸಲಾಗಿದೆ. ಬೆಳಿಗ್ಗೆಯಿಂದಲೇ ಶಾರದಾ ಮಂದಿರದಲ್ಲಿ ವಿವಿಧ ಪೂಜಾ ಕೈಂಕರ್ಯ ಗಳನ್ನು ನೆರವೇರಿಸಲಾಯಿತು. ನಂತರ ಎಲ್ಲರಿಗೂ ಪ್ರಸಾದ ವಿನಿಯೋಗ ಮಾಡಲಾಯಿತು.
ಹಬ್ಬದ ಸಂಭ್ರಮ: ಕಾಲೇಜಿನ ಬೆಳ್ಳಿಹಬ್ಬದ ಅಂಗವಾಗಿ ಗ್ರಾಮವನ್ನು ಹಸಿರು ತೋರಣ ಹಾಗೂ ಬಣ್ಣ ಕಾಗದಗಳ ಗಳಿಂದ ಶೃಂಗರಿಸಲಾಗಿತ್ತು.
ಸಂಗೀತ ಕಾರ್ಯಕ್ರಮ: ರಜತ ಮಹೋತ್ಸವ ಅಂಗವಾಗಿ ಭಾನುವಾರ ಏರ್ಪಡಿಸಿದ್ದ ಸುಗಮ ಸಂಗೀತ ಕಾರ್ಯಕ್ರಮ ನೆರೆದಿದ್ದ ಪ್ರೇಕ್ಷಕರ ಮನ ರಂಜಿಸಿತು.ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಗಿರಿಜನ ಉಪಯೋಜನೆಯಡಿ ಪ್ರಾಯೋಜಿತ ಸಾಂಸ್ಕøತಿಕ ಕಾರ್ಯಕ್ರಮ ವನ್ನು ಕಾಲೇಜಿನ ಪ್ರಾಂಶುಪಾಲ ಹಂಡ್ರಂಗಿ ನಾಗರಾಜು ತಬಲ ಬಾರಿಸುವ ಮೂಲಕ ಚಾಲನೆ ನೀಡಿದರು. ಕಲಾವಿದ ಬಿ.ಎಸ್.ಲೋಕೇಶ್ ಸಾಗರ್ ಮತ್ತು ತಂಡದವರಿಂದ ಸುಗಮ ಸಂಗೀತಾ, ಜಾನಪದ ಹಾಗೂ ಭಾವಗೀತೆಗಳನ್ನು ಹಾಡುವ ಮೂಲಕ ಎಲ್ಲರ ಗಮನ ಸೆಳೆದರು. ಒಂದು ತಾಸುಗಳಿಗೂ ಹೆಚ್ಚು ಕಾಲ ನೀಡಿದ ಕಾರ್ಯಕ್ರಮ ಎಲ್ಲರಿಗೂ ಮುದ ನೀಡಿತು. ಈ ಸಂದರ್ಭ ಕನ್ನಡ ಸಂಸ್ಕೃತಿ ಇಲಾಖೆಯ ಮಣಜೂರು ಮಂಜುನಾಥ್, ಕಲಾವಿದರಾದ ಶಶಾಂಕ್, ಶ್ವೇತಾ, ವೆಂಕಟೇಶ್, ರಂಗಪ್ಪ ಇದ್ದರು.