ಗ್ರಾಮೀಣ ಮಕ್ಕಳ ಭವಿಷ್ಯ ರೂಪಿಸಲು ಎಸ್‍ಟಿಜಿ ಸ್ಥಾಪನೆ ನಿರ್ದೇಶಕ ಇಂದ್ರಜಿತ್ ಲಂಕೇಶ್ ಅಭಿಪ್ರಾಯ
ಮಂಡ್ಯ

ಗ್ರಾಮೀಣ ಮಕ್ಕಳ ಭವಿಷ್ಯ ರೂಪಿಸಲು ಎಸ್‍ಟಿಜಿ ಸ್ಥಾಪನೆ ನಿರ್ದೇಶಕ ಇಂದ್ರಜಿತ್ ಲಂಕೇಶ್ ಅಭಿಪ್ರಾಯ

December 23, 2019

ಚಿನಕುರಳಿ, ಡಿ.22(ಸಿ.ಎ.ಲೋಕೇಶ್)- ಗ್ರಾಮೀಣ ಮಕ್ಕಳ ಉಜ್ವಲ ಭವಿಷ್ಯ ರೂಪಿಸಲು ಶಾಸಕ ಸಿ.ಎಸ್.ಪುಟ್ಟರಾಜು ಚಿನಕುರಳಿಯಲ್ಲಿ ಎಸ್‍ಟಿಜಿ ಶಾಲೆ ತೆರೆದಿದ್ದಾರೆ ಎಂದು ನಟ, ನಿರ್ದೇಶಕ ಇಂದ್ರಜಿತ್ ಲಂಕೇಶ್ ಅಭಿಪ್ರಾಯಪಟ್ಟರು.

ಇಲ್ಲಿನ ಎಸ್‍ಟಿಜಿ ವಿದ್ಯಾಸಂಸ್ಥೆಯಲ್ಲಿ 3 ದಿನಗಳ ಕಾಲ ಹಮ್ಮಿಕೊಂಡಿರುವ ಕಲಾವಿಸ್ಮಯ- 2019 ಶಾಲಾ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಭಾರತದಿಂದ ಹೊರ ದೇಶಗಳಿಗೆ ವಿದ್ಯಾಭ್ಯಾಸಕ್ಕೆ ಹೋದ ಬಹಳಷ್ಟು ಮಂದಿ ಅಲ್ಲೇ ಉಳಿದು ಬಿಡುತ್ತಾರೆ. ಆದರೆ, ಶಾಸಕ ಸಿ.ಎಸ್.ಪುಟ್ಟರಾಜು ಅವರ ಪುತ್ರ ಸಿ.ಪಿ.ಶಿವರಾಜು ಅಮೆರಿಕದಲ್ಲಿ ವಿದ್ಯಾಭ್ಯಾಸ ಮುಗಿಸಿದರೂ ಮತ್ತೆ ತಾಯ್ನಾಡಿಗೆ ಬಂದು ಈ ಭಾಗದ ಗ್ರಾಮೀಣ ಮಕ್ಕಳಿಗೆ ಶಿಕ್ಷಣ ಕೊಡುವ ಕೆಲಸ ಮಾಡುತ್ತಿದ್ದಾರೆ. ಸಿ.ಎಸ್.ಪುಟ್ಟರಾಜು ಹಣ ಸಂಪಾದಿಸಲು ಇಂತಹ ವಿದ್ಯಾಸಂಸ್ಥೆ ಕಟ್ಟಿಲ್ಲ. ಬದಲಿಗೆ ಗ್ರಾಮೀಣ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡುವ ಉದ್ದೇಶದಿಂದ ಅಗತ್ಯವಿರುವ ಎಲ್ಲಾ ಮೂಲ ಸೌಕರ್ಯಗಳನ್ನೊಳ ಗೊಂಡ ವಿದ್ಯಾಸಂಸ್ಥೆಯನ್ನು ತಮ್ಮ ತಂದೆ-ತಾಯಿ ಹೆಸರಿನಲ್ಲಿ ಸ್ಥಾಪಿಸಿದ್ದಾರೆ ಎಂದರು.

ಶಾಸಕ ಸಿ.ಎಸ್.ಪುಟ್ಟರಾಜು ಮಾತನಾಡಿ, 2015ರಲ್ಲಿ ನಾನು ಅಮೆರಿಕಾಕ್ಕೆ ಹೋದ ವೇಳೆ ನನಗೆ ನನ್ನ ತಂದೆ-ತಾಯಿ ಹೆಸರಿನಲ್ಲಿ ವಿದ್ಯಾಸಂಸ್ಥೆ ಸ್ಥಾಪಿಸಬೇಕೆಂಬ ಯೋಚನೆ ಬಂತು. ತಕ್ಷಣ ಅಲ್ಲಿಂದಲೇ ನಮ್ಮ ಸ್ನೇಹಿತರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಈ ಸಂಬಂಧ ಚರ್ಚಿಸಿ, ಅದೇ ವರ್ಷ ಎಲ್‍ಕೆಜಿ, ಯುಕೆಜಿಯಿಂದ ವಿದ್ಯಾಸಂಸ್ಥೆ ಆರಂಭಿಸಿದೆ. ಇದೀಗ ಡಿಗ್ರಿವರೆಗೂ ನಮ್ಮ ಸಂಸ್ಥೆ ಬೆಳೆದು ನಿಂತಿದೆ. ನಗರ ಪ್ರದೇಶದ ಮಕ್ಕಳಿಗಿಂತ ಹೆಚ್ಚಾಗಿ ನಮ್ಮ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರೆಯಬೇಕು. ನಮ್ಮ ಗ್ರಾಮೀಣ ಮಕ್ಕಳೂ ಸಹ ದೊಡ್ಡ ದೊಡ್ಡ ಹುದ್ದೆಯನ್ನು ಅಲಂಕರಿಸಬೇಕು ಎಂಬ ಉದ್ದೇಶದಿಂದ ಎಸ್‍ಟಿಜಿ ಶಿಕ್ಷಣ ಸಂಸ್ಥೆ ಆರಂಭಿಸಿದ್ದೇನೆ ಎಂದರು.

ಬಳಿಕ ಶಾಲಾ ಮಕ್ಕಳಿಂದ ನಡೆದ ನೃತ್ಯ ಸೇರಿದಂತೆ ಸಾಂಸ್ಕøತಿಕ ಕಾರ್ಯಕ್ರಮ ನೆರೆದಿದ್ದ ಪೋಷಕರು, ಪ್ರೇಕ್ಷಕರನ್ನು ರಂಜಿಸಿದವು. ಈ ವೇಳೆ ಜಿಪಂ ಸದಸ್ಯ ಸಿ.ಅಶೋಕ್, ತಾಪಂ ಸದಸ್ಯ ಸಿ.ಎಸ್.ಗೋಪಾಲೇಗೌಡ, ಸಿಇಓ ಸಿ.ಪಿ.ಶಿವರಾಜು, ಕಾರ್ಯದರ್ಶಿ ಸಿ.ಹರೀಶ್, ಆಡಳಿತಾಧಿಕಾರಿ ನಿವೇದಿತ, ಮುಖ್ಯಶಿಕ್ಷಕಿ ಮಾಚಮ್ಮ ಸೇರಿದಂತೆ ಹಲವರಿದ್ದರು.

Translate »