ಮೈಸೂರು: ನನ್ನ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿ ದ್ದಾಗ ಮೈಸೂರಿನ ಅಭಿವೃದ್ಧಿಗೆ ಸಾಕಷ್ಟು ಅನುದಾನ ನೀಡಿದ್ದೆ. ಆದರೂ ಮೈಸೂ ರಿನ ಜನತೆ ನಗರ ಪಾಲಿಕೆ ಚುನಾವಣೆಯಲ್ಲಿ ನಮ್ಮ ಪಕ್ಷಕ್ಕೆ ಸ್ಪಷ್ಟ ಬಹುಮತ ನೀಡದಿರು ವುದು ವೈಯಕ್ತಿಕವಾಗಿ ನನಗೆ ನೋವು ತರಿಸಿದೆ ಎಂದು ಮಾಜಿ ಮುಖ್ಯಮಂತ್ರಿ, ಜೆಡಿಎಸ್ ಕಾಂಗ್ರೆಸ್ ಮೈತ್ರಿ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ವಿಷಾದಿಸಿದರು.
ಖಾಸಗಿ ಹೋಟೆಲ್‍ನಲ್ಲಿ ಕಾಂಗ್ರೆಸ್ ಪಕ್ಷ ದಿಂದ ನೂತನವಾಗಿ ಆಯ್ಕೆಯಾಗಿರುವ ಪಾಲಿಕೆ ಸದಸ್ಯರೊಂದಿಗೆ ಆಯೋಜಿಸಿದ್ದ ಔಪಚಾರಿಕ ಸಭೆಯಲ್ಲಿ ಮಾತನಾಡಿದ ಅವರು, ಮೈಸೂರಿನ ಅಭಿವೃದ್ಧಿಗೆ ನನ್ನ ಆಡ ಳಿತಾವಧಿಯಲ್ಲಿ ನೀಡಿರುವ ಅನುದಾನ ಯಾರ ಕಾಲದಲ್ಲೂ ನೀಡಿಲ್ಲ. ಆದರೆ, ಬಿಜೆಪಿ ಸಂಸದ ಪ್ರತಾಪಸಿಂಹ ಜನತೆಗೆ ಸುಳ್ಳು ಹೇಳುತ್ತಿದ್ದಾನೆ ಎಂದು ಏಕವಚನದಲ್ಲಿ ಸಂಬೋಧಿಸಿ ಕಿಡಿಕಾರಿದರು.
ಇತ್ತೀಚೆಗೆ ಬಿಜೆಪಿಯವರು ಜನತೆಗೆ ಸುಳ್ಳು ಹೇಳುವುದನ್ನು ಪರಿಪಾಠ ಮಾಡಿಕೊಂಡಿ ದ್ದಾರೆ. ನಮ್ಮ ಕಾಲದಲ್ಲಿ ನೂತನ ಜಿಲ್ಲಾಧಿ ಕಾರಿಗಳ ಕಚೇರಿ ಕಟ್ಟಡ, ಮೈಸೂರು-ಬೆಂಗ ಳೂರು ಹೈವೇ ಅಗಲೀಕರಣಕ್ಕೆ ಅನುಮೋ ದನೆ, ಜೋಡಿ ರೈಲು ಮಾರ್ಗ, ಮೈಸೂರಿನ ಸಮಗ್ರ ಅಭಿವೃದ್ಧಿಗೆ ಕಾರ್ಯಸೂಚಿ ಹಾಗೂ ಮಹಾರಾಣಿ ಕಾಲೇಜಿಗೆ ನೂತನ ಕಟ್ಟಡ, ಹೆಣ್ಣು ಮಕ್ಕಳಿಗೆ ವಸತಿ ನಿಲಯ, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಅನುಮೋದನೆ, ಜಯ ದೇವ ಆಸ್ಪತ್ರೆ, ಆಯುರ್ವೇದ ಕಾಲೇಜಿಗೆ ನೂತನ ಕಟ್ಟಡ ಸೇರಿದಂತೆ ಹತ್ತು-ಹಲವು ಕಾರ್ಯಕ್ರಮವನ್ನು ಮೈಸೂರಿಗೆ ಕೊಟ್ಟಿ ದ್ದೇನೆ. ಆದರೂ ಮೈಸೂರಿನ ಜನತೆÀ ನಗರ ಪಾಲಿಕೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬಹುಮತ ನೀಡದಿರುವುದು ಬೇಸರದ ಸಂಗತಿ ಎಂದು ವಿಷಾದಿಸಿದರು.
ಇದೇ ತಿಂಗಳು ನ.17 ರಂದು ನಡೆಯುವ ಮೇಯರ್, ಉಪ ಮೇಯರ್ ಚುನಾವಣೆ ಯಲ್ಲಿ ಬೇರೆ ಪಕ್ಷದವರ ಜೊತೆ ಹೆಚ್ಚು ಮಾತನಾಡಬೇಡಿ, ಅದರಲ್ಲೂ ಬಿಜೆಪಿ ಪಕ್ಷದ ಗಿರಾಕಿಗಳೊಂದಿಗೆ ಹೆಚ್ಚು ಮಾತನಾಡಲೇ ಬೇಡಿ ಎಂದು ಖಡಕ್ ಸೂಚನೆ ನೀಡಿದ ಸಿದ್ದರಾಮಯ್ಯ, ಈ ವಿಷಯದ ಬಗ್ಗೆ ದೋಸ್ತಿ ಪಕ್ಷದ ಮುಖಂಡರ ಜೊತೆ ಮಾತುಕತೆ ಪೂರ್ಣಗೊಂಡ ನಂತರ ಅಂತಿಮ ನಿರ್ಧಾ ರಕ್ಕೆ ಬರುತ್ತೇವೆ. ಇದಕ್ಕೆ ಎಲ್ಲಾ ಸದಸ್ಯರು ಬದ್ಧರಾಗಿರಬೇಕು. ಅಲ್ಲದೆ, ಹಿಂದಿನ ಮೇಯರ್ ಚುನಾವಣೆಯಲ್ಲಿ ಪಕ್ಷದ ಆದೇಶದ ವಿರುದ್ಧ ಮಾಜಿ ಮೇಯರ್ ಭಾಗ್ಯವತಿ ಮಾಡಿದ್ದಂತೆ, ಅಧಿಕಾರಕ್ಕಾಗಿ ನೀವು ಅಡ್ಡದಾರಿ ಹಿಡಿಯ ಬೇಡಿ ಎಂದು ನೂತನ ಸದಸ್ಯರಿಗೆ ಕಿವಿಮಾತು ಹೇಳಿದರು.
ಸ್ಥಳೀಯ ಮುಖಂಡರಿಗೆ ಜವಬ್ದಾರಿ: ಮೈಸೂರು ಮಹಾನಗರ ಪಾಲಿಕೆಯ ಮೇಯರ್, ಉಪ ಮೇಯರ್ ಚುನಾವಣೆ ಸಂಬಂಧ ಪ್ರವಾಸೋದ್ಯಮ ಸಚಿವ ಸಾ.ರಾ. ಮಹೇಶ್ ಸೇರಿದಂತೆ ಇತರೆ ಜೆಡಿಎಸ್ ಮುಖಂಡರ ಜೊತೆ ಮಾತುಕತೆ ನಡೆಸಲು, ಮಾಜಿ ಸಚಿವ ತನ್ವೀರ್‍ಸೇಠ್, ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ಸೇರಿದಂತೆ ಇತರೆ ಮುಖಂಡರಿಗೆ ಸೂಚಿಸಲಾಗಿದೆ. ಜೆಡಿಎಸ್ ಮುಖಂಡರೊಂದಿಗೆ ಒಂದು ಸುತ್ತಿನ ಮಾತುಕತೆ ನಡೆಸಿದ ನಂತರ ಇನ್ನೆರಡು ದಿನದಲ್ಲಿ ಅಂತಿಮ ನಿರ್ಧಾರಕ್ಕೆ ಬರಲಾಗುವುದು ಎಂದರು.
ಮೇಯರ್ ಸ್ಥಾನ ನಾವೇ ಪಡೆಯು ತ್ತೇವೆ: ಕಳೆದ ಐದು ವರ್ಷಗಳಿಂದ ಮೈಸೂ ರಿನ ಮೇಯರ್ ಸ್ಥಾನ ಕಾಂಗ್ರೆಸ್ ಪಕ್ಷಕ್ಕೆ ಬಂದಿಲ್ಲ. ಇದು ವೈಯುಕ್ತಿಕವಾಗಿ ನನಗೆ ನೋವಿನ ವಿಚಾರ. ಆದ್ದರಿಂದ ಈ ಬಾರಿ ರಾಜ್ಯದಲ್ಲಿ 38 ಸ್ಥಾನ ಗಳಿಸಿರುವ ಜೆಡಿಎಸ್‍ಗೆ, 80 ಸ್ಥಾನ ಗಳಿಸಿರುವ ನಾವು, ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಟ್ಟಿದ್ದೇವೆ. ಹಾಗಾಗಿ ಮೈಸೂರಿನ ಮೇಯರ್ ಸ್ಥಾನ ನಮ್ಮ ಪಕ್ಷಕ್ಕೆ ಉಳಿಸಿಕೊಂಡು ಜೆಡಿಎಸ್ ನೊಂದಿಗೆ ಮಾತುಕತೆ ನಡೆಸುವಂತೆ ನಮ್ಮ ಮುಖಂಡರಿಗೆ ಸೂಚಿಸಿದ್ದೇನೆ. ಅಲ್ಲಿಯ ವರೆವಿಗೂ ನಮ್ಮ ಪಕ್ಷದ ನಗರ ಪಾಲಿಕೆ ಸದಸ್ಯರು, ಯಾವ ಪಕ್ಷದ ಸದಸ್ಯರೊಂದಿಗೆ ಹೆಚ್ಚು ಮಾತನಾಡಬಾರದು ಎಂದು ತಾಕೀತು ಮಾಡಿದರು.
ಸಾಮಾಜಿಕ ಜಾಲ ತಾಣದಲ್ಲಿ ಮೈಸೂರಿನ ಜನತೆಗೆ ದಿನನಿತ್ಯ ಸುಳ್ಳು ಹೇಳುತ್ತಿರುವ ಹಾಗೂ ಕಾಂಗ್ರೆಸ್ ಪಕ್ಷದ ಬಗ್ಗೆ ಅಪಪ್ರಚಾರ ಮಾಡುತ್ತಿರುವ ಸಂಸದ ರಾದ ಪ್ರತಾಪ ಸಿಂಹ, ನಳಿನ್‍ಕುಮಾರ್ ಕಟಿಲ್, ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಈ ಬಾರಿ ಚುನಾವಣೆಯಲ್ಲಿ ಸೋಲಲೇಬೇಕು. ನಳಿನ್ ಕುಮಾರ್ ಕಟಿಲ್ ನನ್ನನ್ನು `ಮತಾಂಧ’ ಎಂದು ಸಾರ್ವಜನಿಕವಾಗಿ ಸಂಬೋಧಿಸುತ್ತಾನೆ. ಇದರ ಬಗ್ಗೆ ನಮ್ಮ ಕಾರ್ಯಕರ್ತರು ಮಾತನಾಡದಿರುವುದಕ್ಕೆ ಸಿದ್ದರಾಮಯ್ಯ ಬೇಸರ ವ್ಯಕ್ತಪಡಿಸಿದರು.
ಟಿಪ್ಪುವಿನ ಬಗ್ಗೆ ಮುಸ್ಲಿಮರಿಗಿಂತ ಹಿಂದೂಗಳು ಹೆಚ್ಚು ಅಧ್ಯಯನ ಮಾಡ ಬೇಕು. ಆತ ಉತ್ತಮ ಆಡಳಿತಗಾರ, ಅಭಿವೃದ್ಧಿಯ ಹರಿಕಾರ ಆದ್ದರಿಂದ ಆತನ ಆಚರಣೆ ಮಾಡಲು ನಮ್ಮ ಸರ್ಕಾರ ತೀರ್ಮಾನಿಸಿದ್ದು, ಆದರೆ, ಕೋಮು ವಾದಿಗಳು ಇದರ ವಿರುದ್ಧ ಸುಳ್ಳು ಹೇಳಿ, ಜನರ ದಾರಿ ತಪ್ಪಿಸುತ್ತಿದ್ದಾರೆ ಎಂದು ಸಿದ್ದರಾಮಯ್ಯ ಕಿಡಿಕಾರಿದರು.
ಕೋಮುವಾದಿಗಳು ಎಂದರೆ ಯಾರು?: ಕೋಮುವಾದಿಗಳು ಎಂದರೆ ಯಾರು ಗೊತ್ತ, ಎಂದು ನಗರಪಾಲಿಕೆ ಸದಸ್ಯರನ್ನು ಪ್ರಶ್ನಿಸುತ್ತ, ಯಾರು ಇನ್ನೊಂದು ಧರ್ಮ ವನ್ನು ದ್ವೇಷಿಸುತ್ತಾರೋ ಅವರೇ ಕೋಮು ವಾದಿಗಳು, ಈ ಕೆಲಸವನ್ನು ಬಿಜೆಪಿ ಯವರು ಮಾಡುತ್ತಿದ್ದಾರೆ. ಆದರೆ, ಎಲ್ಲ ರನ್ನು ಪ್ರೀತಿಸುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ ಎಂದು ಕೋಮುವಾದ ಪದದ ವಿವರಣೆ ನೀಡಿದರು.
ವೇದಿಕೆಯಲ್ಲಿ ಮಾಜಿ ಸಚಿವ ತನ್ವೀರ್ ಸೇಠ್, ಸಂಸದ ಧ್ರುವನಾರಾಯಣ್, ಶಾಸಕ ಅನಿಲ್‍ಚಿಕ್ಕಮಾದು, ನಗರಾಧ್ಯಕ್ಷ ಆರ್.ಮೂರ್ತಿ, ಗ್ರಾಮಾಂತರ ಅಧ್ಯಕ್ಷ ಡಾ.ಬಿ.ಜೆ.ವಿಜಯ್‍ಕುಮಾರ್, ಮಾಜಿ ಸಚಿವ ಡಾ.ಮಹದೇವಪ್ಪ, ಮಾಜಿ ಶಾಸಕ ರಾದ ಎಂ.ಕೆ.ಸೋಮಶೇಖರ್, ಹೆಚ್.ಪಿ. ಮಂಜುನಾಥ್ ಸೇರಿದಂತೆ ಮೊದಲಾ ದವರು ಉಪಸ್ಥಿತರಿದ್ದರು.