ಕೆ.ಆರ್.ಕ್ಷೇತ್ರ ಶಾಸಕ ಎಸ್.ಎ.ರಾಮದಾಸ್ ನೇತೃತ್ವದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ವಿಚಾರ-ವಿನಿಮಯ
ಮೈಸೂರು

ಕೆ.ಆರ್.ಕ್ಷೇತ್ರ ಶಾಸಕ ಎಸ್.ಎ.ರಾಮದಾಸ್ ನೇತೃತ್ವದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ವಿಚಾರ-ವಿನಿಮಯ

December 26, 2019

ಮುಸ್ಲಿಮರಲ್ಲಿದ್ದ ಅನುಮಾನ, ಆತಂಕ ದೂರ ಮಾಡುವ ಪ್ರಯತ್ನ

ಮೈಸೂರು,ಡಿ.25(ಆರ್‍ಕೆಬಿ)- ಇತ್ತೀ ಚಿಗೆ ತೀವ್ರ ಚರ್ಚೆಗೆ ಗ್ರಾಸವಾಗಿರುವ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ಮುಸ್ಲಿಮರಲ್ಲಿ ಉಂಟಾಗಿರುವ ಆತಂಕವನ್ನು ದೂರ ಮಾಡುವ ಪ್ರಯತ್ನವನ್ನು ಕೃಷ್ಣರಾಜ ಕ್ಷೇತ್ರದ ಶಾಸಕ ಎಸ್.ಎ.ರಾಮದಾಸ್ ಇಂದು ಮಾಡಿದರು. ಅವರ ನೇತೃತ್ವದಲ್ಲಿ ಮೈಸೂ ರಿನ ಗನ್ ಹೌಸ್ ಬಳಿಯ ವಿದ್ಯಾಶಂಕರ ಕಲ್ಯಾಣ ಮಂಟಪದಲ್ಲಿ ನಡೆದ ವಿಚಾರ ವಿನಿಮಯ ಸಭೆಯಲ್ಲಿ ಪೌರತ್ವ ಕಾಯಿದೆ ಯಿಂದ ಮುಸ್ಲಿಂ ಬಂಧುಗಳಿಗೆ ಯಾವುದೇ ತೊಂದರೆ ಇಲ್ಲ ಎಂಬ ಬಗ್ಗೆ ತಿಳಿವಳಿಕೆ ಮೂಡಿಸಲಾಯಿತು.ವಿಚಾರ ವಿನಿಮಯ ಕಾರ್ಯಕ್ರಮದಲ್ಲಿ ಹಿಂದೂ, ಮುಸ್ಲಿಂ, ಜೈನ ಸೇರಿದಂತೆ ವಿವಿಧ ಧರ್ಮಗಳ ಮುಖಂಡರು, ಸಾರ್ವಜನಿಕರು ಭಾರೀ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಎಸ್.ಎ.ರಾಮದಾಸ್, ಕೃಷ್ಣರಾಜ ಕ್ಷೇತ್ರದಲ್ಲಿ ಇಂದಿನವರೆಗೂ ಹಿಂದೂ ಮತ್ತು ಮುಸ್ಲಿ ಮರು ಸಹೋದರರಂತೆ ಒಗ್ಗಟ್ಟಿನಿಂದ ಬದುಕುತ್ತಿದ್ದಾರೆ. ಮುಂದೆಯೂ ಇದೇ ರೀತಿ ಸರ್ವಧರ್ಮಿಯರು ಒಗ್ಗಟ್ಟಿನಿಂದ ಸಾಮರಸ್ಯದಿಂದ ಬದುಕೋಣ ಎಂಬ ಸಂದೇಶವನ್ನು ನೀಡಿದರು.

ಕೃಷ್ಣರಾಜ ಕ್ಷೇತ್ರ ಭಾರತೀಯ ಜನತಾ ಪಾರ್ಟಿ ಆಶ್ರಯದಲ್ಲಿ ನಡೆದ ಕಾರ್ಯ ಕ್ರಮದಲ್ಲಿ  `ಪೌರತ್ವ ತಿದ್ದುಪಡಿ ಮಸೂದೆ ಎಂದರೇನು? ವಿರೋಧವೇಕೆ? ವಿವಾದ ವೇಕೆ? ಎಂಬ ಬಗ್ಗೆ ಶಾಸಕ ರಾಮದಾಸ್ ಪವರ್ ಪಾಯಿಂಟ್ ಮೂಲಕ ಪೌರತ್ವ ತಿದ್ದುಪಡಿ ಕಾಯ್ದೆ ಕುರಿತಂತೆ ಸವಿಸ್ತಾರ ವಾಗಿ ಸಭೆಯಲ್ಲಿ ತಿಳಿಸುವ ಮೂಲಕ ಮುಸ್ಲಿ ಮರು ಯಾವುದೇ ಆತಂಕಕ್ಕೆ ಒಳಗಾಗುವ ಅಗತ್ಯ ವಿಲ್ಲ ಎಂಬ ಬಗ್ಗೆ ತಿಳವಳಿಕೆ ಮೂಡಿಸಿದರು.

ಪೌರತ್ವ (ತಿದ್ದುಪಡಿ) ಮಸೂದೆ:  ಪೌರತ್ವ (ತಿದ್ದುಪಡಿ) ಮಸೂದೆ 2019, 1955ರಲ್ಲಿ ಜಾರಿಗೆ ತರಲಾಗಿದ್ದ ನಾಗರಿಕ ಕಾಯ್ದೆಗೆ ತಿದ್ದುಪಡಿಯಾಗಿದೆ. ಮುಸ್ಲಿಂ ಧರ್ಮೀಯರು ಬಹುಸಂಖ್ಯೆಯಲ್ಲಿರುವ ನಮ್ಮ ನೆರೆಯ ದೇಶಗಳಾದ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಆಫ್ಘಾನಿಸ್ತಾನಗಳ ಮುಸ್ಲಿಮೇತರ ನಿರಾಶ್ರಿತರಿಗೆ, ಅಲ್ಲಿ ಧಾರ್ಮಿಕ ಹಿಂಸೆ ಮತ್ತು ಕಿರುಕುಳಕ್ಕೆ ಒಳಗಾಗಿ ಜೀವನ ನಡೆಸಲು ಸಾಧ್ಯವಾಗದೆ ಭಾರತಕ್ಕೆ ಆಶ್ರಯ ಕಂಡುಕೊಂಡು ಬಂದಿರುವ ನಾಗರಿಕರಿಗೆ ಭಾರತದ ಪೌರತ್ವ ನೀಡುವ ಮಸೂದೆಯಾಗಿದೆ.

ಒಂದು ಬಾರಿ ಈ ತಿದ್ದುಪಡಿ ವಿಧೇ ಯಕ ಜಾರಿಗೆ ಬಂದರೆ ಈ ಮೂರೂ ದೇಶಗಳ ಹಿಂದೂ, ಸಿಖ್, ಕ್ರೈಸ್ತ, ಬೌದ್ಧ, ಜೈನ ಮತ್ತು ಪಾರ್ಸಿ ಸಮುದಾಯದ ವಲಸಿಗರಿಗೆ ಭಾರತದ ಪೌರತ್ವ ಸಿಗುತ್ತದೆ. ನಂತರ ಅವರನ್ನು ಅಕ್ರಮ ವಲಸಿಗರೆಂದು ಪರಿಗಣಿಸಲಾಗುವುದಿಲ್ಲ. ಭಾರತದ ಪೌರತ್ವ ಸಹಜವಾಗಿ ಪಡೆಯಲು ಈ ಮೂರು  ದೇಶಗಳ 6 ಧರ್ಮಗಳ ವಲಸಿಗರು ಅರ್ಹರಾಗಿರುತ್ತಾರೆ.  ಸಹಜವಾಗಿ ಭಾರತದ ಪೌರತ್ವ ಗಳಿಸಲು ಬೇಕಾದ ಮುಖ್ಯ ಅರ್ಹತೆಯೆಂದರೆ ವಲಸಿಗ ಕಳೆದ 12 ತಿಂಗಳಿನಿಂದ ಭಾರತದಲ್ಲಿ ನೆಲೆಸಿರಬೇಕು. ಈ ಹಿಂದಿನ 14 ವರ್ಷಗಳಲ್ಲಿ ಅವರು ಭಾರತದಲ್ಲಿ 11 ವರ್ಷ ನೆಲೆಸಿರಬೇಕಾಗು ತ್ತದೆ. ತಿದ್ದುಪಡಿ ಮಸೂದೆ ಜಾರಿಗೆ ಬಂದರೆ ಈ ಮೂರು ದೇಶಗಳ ಆರು ಧರ್ಮೀ ಯರಿಗೆ ಮಾತ್ರ 11 ವರ್ಷಗಳ ಬದಲು 6 ವರ್ಷಗಳ ಕಾಲ ಭಾರತದಲ್ಲಿ ನೆಲೆಸಿ ದ್ದರೆ ಇಲ್ಲಿನ ಪೌರತ್ವ ಸಿಗುತ್ತದೆ. ಆ ದೇಶ ಗಳಿಂದ ಗಡಿಪಾರಿಗೆ ಒಳಗಾಗಿರಬಾರದು, 1946ರ ವಿದೇಶಿ ಕಾಯ್ದೆ ಮತ್ತು 1920ರ ಪಾಸ್ ಪೆÇೀರ್ಟ್ ಕಾಯ್ದೆ (ಭಾರತಕ್ಕೆ ಪ್ರವೇಶ)ಯಡಿ ಜೈಲಿಗೆ ಹೋಗಿ ಬಂದಿರ ಬಾರದು. 2014ರ ಡಿ.31ರ ಮೊದಲು ಈ ಮೂರು ದೇಶಗಳಿಂದ ಭಾರತಕ್ಕೆ ಬಂದ 6 ಧರ್ಮಗಳ ಜನರು ಭಾರತದ ಪೌರತ್ವಕ್ಕೆ ಅರ್ಹರಾಗಿರುತ್ತಾರೆ.

ಅಕ್ರಮ ವಲಸಿಗರು ಯಾರ್ಯಾರು?:  1955ರ ಪೌರತ್ವ ಕಾಯ್ದೆ ಪ್ರಕಾರ, ಭಾರತ ದಲ್ಲಿ ಅಕ್ರಮ ವಲಸಿಗರಿಗೆ ಪೌರತ್ವ ಸಿಗುವು ದಿಲ್ಲ. ಪ್ರಯಾಣದ ವೇಳೆ ಸರಿಯಾದ ದಾಖಲೆಗಳಿಲ್ಲದೆ ಅಂದರೆ ಪಾಸ್‍ಪೆÇೀರ್ಟ್, ವೀಸಾ ಮತ್ತು ಇತರ ದಾಖಲೆಗಳನ್ನು ಹೊಂದಿಲ್ಲದೆ ಭಾರತಕ್ಕೆ ಬಂದು ನಿಗದಿತ ಅವಧಿಗಿಂತ ಹೆಚ್ಚು ಸಮಯ ಭಾರತದಲ್ಲಿ ನೆಲೆಸಿದ್ದರೆ ಅವರನ್ನು ಅಕ್ರಮ ವಲಸಿಗರು ಎಂದು ಪರಿಗಣಿಸಲಾಗುತ್ತದೆ.

ವಿವಾದ ಆಗಿದ್ದೇಕೆ?:  ತಿದ್ದುಪಡಿ ಮಸೂದೆ ಯನ್ನು ವಿರೋಧಿಸುವವರು ಹೇಳುವ ಪ್ರಕಾರ ಇದು ಧರ್ಮದ ಆಧಾರದ ಮೇಲೆ ತಾರತಮ್ಯ ಮಾಡುತ್ತದೆ. ಭಾರತ ಸಂವಿ ಧಾನದ ಜಾತ್ಯತೀತತೆಯ ಮೂಲ ಆಶಯ ಮತ್ತು ತತ್ವಗಳಿಗೆ ವಿರುದ್ಧವಾಗಿದೆ. ಕಾನೂನಿನ ಮುಂದೆ ಎಲ್ಲರೂ ಸಮಾನರು ಹಾಗೂ ಸಂವಿಧಾನದ 14ನೇ ವಿಧಿಯನ್ನು ಈ ಮಸೂದೆ ಉಲ್ಲಂಘಿಸುತ್ತದೆ ಎಂಬುದು ಕೆಲವು ಬುದ್ಧಿಜೀವಿಗಳ ಹಾಗೂ ಅರ್ಬನ್ ನಕ್ಸಲರ ವಾದ.

ಕೇಂದ್ರ ಸರ್ಕಾರ ಈ ತಿದ್ದುಪಡಿ ವಿಧೇ ಯಕ ತರಲು ಮುಂದಾಗಿರುವುದೇಕೆ:  ಬಿಜೆಪಿ ಅಧಿಕಾರಕ್ಕೆ ಬಂದರೆ ಪೌರತ್ವ ತಿದ್ದುಪಡಿ ವಿಧೇಯಕ ಜಾರಿಗೆ ತರುವು ದಾಗಿ ಚುನಾವಣಾ ಪ್ರಣಾಳಿಕೆಯಲ್ಲಿ ಭರವಸೆ ನೀಡಿತ್ತು. ಹೀಗಾಗಿ ಎನ್‍ಡಿಎ ಸರ್ಕಾರದ ಮಹತ್ವಾಕಾಂಕ್ಷೆಯ ವಿಧೇ ಯಕವಿದು. ಭಾರತದ ನೆರೆಯ ದೇಶ ಗಳಲ್ಲಿನ ಧಾರ್ಮಿಕ ಅಲ್ಪಸಂಖ್ಯಾತರು ಅಲ್ಲಿ ನಿರಂತರವಾಗಿ ಕಿರುಕುಳಕ್ಕೆ ಒಳಗಾಗಿ ಜೀವನ ನಡೆಸಲು ಸಾಧ್ಯವಾಗದೆ ಭಾರತಕ್ಕೆ ಆಶ್ರಯ ಪಡೆಯಲು ಬರುತ್ತಿದ್ದಾರೆ. ‘ಸರ್ವ ಧರ್ಮ ಸಮಾನ’ ಎಂಬ ಮೋದಿ ಸರ್ಕಾರದ ಆಶೋತ್ತರವನ್ನು ಈಡೇರಿ ಸಲು ಈ ಪೌರತ್ವ ತಿದ್ದುಪಡಿ ವಿಧೇಯಕ ಎನ್‍ಡಿಎ ಸರ್ಕಾರಕ್ಕೆ ಬಹಳ ಮುಖ್ಯವಾಗಿದೆ.

ಸಿಎಎ, ಎನ್‍ಆರ್‍ಸಿಗೆ ಸಂಬಂಧ ವಿದೆಯೇ?:  ರಾಷ್ಟ್ರೀಯ  ನಾಗರಿಕರ ದಾಖಲಾತಿ (ಎನ್‍ಆರ್‍ಸಿ) ಜಾರಿಗೆ ತಂದ ಅಸ್ಸಾಂ ರಾಜ್ಯ ಅಕ್ರಮ ವಲಸಿಗರ ಮೇಲೆ ಮಾತ್ರ ಗುರಿಯಾಗಿಟ್ಟುಕೊಂಡಿತ್ತು. ಪೌರತ್ವ ತಿದ್ದುಪಡಿ ಮಸೂದೆ ಧರ್ಮ, ನಂಬಿಕೆಯ ಆಧಾರವಾಗಿಟ್ಟುಕೊಂಡಿದ್ದರೆ, ರಾಷ್ಟ್ರೀಯ ನಾಗರಿಕ ದಾಖಲಾತಿಯಡಿ ತಾವು ಅಥವಾ ತಮ್ಮ ಪೂರ್ವಜರು ಅಸ್ಸಾಂನಲ್ಲಿ 1971ರ ಮಾ.24ರ ಮೊದಲು ನೆಲೆಸಿದ್ದರು ಎಂದು ಸಾಬೀತುಪಡಿಸಬೇಕು. `ಕೇವಲ ಅಸ್ಸಾಂ ರಾಜ್ಯಕ್ಕೆ ಮಾತ್ರ ಎನ್‍ಆರ್‍ಸಿ ಅನ್ವಯವಾ ಗುತ್ತದೆಯೇ ಹೊರತು ದೇಶದ ಇನ್ಯಾ ವುದೇ ರಾಜ್ಯಗಳಿಗೆ ಅನ್ವಯವಾಗುವುದಿಲ್ಲ’.

ಇದೆಲ್ಲವನ್ನು ತಿಳಿಸಿದ ಬಳಿಕ ಸಂವಾದ ಕಾರ್ಯಕ್ರಮದಲ್ಲಿ ಹಲವು ಮುಸ್ಲಿಂ ಮುಖಂಡರು, ಸಾರ್ವಜನಿಕರು ಈ ಸಂಬಂಧ ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿ ಅವರ ಮನಸ್ಸಿನಲ್ಲಿದ್ದ ಆತಂಕವನ್ನು ದೂರ ಮಾಡಿದರು. ಈ ವಿಷಯವನ್ನು ಮುಂದಿಟ್ಟುಕೊಂಡು ಪ್ರತಿಪಕ್ಷಗಳು ಪ್ರಚೋದನೆ ಉಂಟು ಮಾಡಿ ರಾಜ ಕೀಯವಾಗಿ ಲಾಭ ಪಡೆಯುವ ಪ್ರಯತ್ನ ವಾಗಿ ಗಲಭೆ ಸೃಷ್ಟಿಸಲು ಯತ್ನಿಸುತ್ತಿದ್ದಾರೆ. ಇಂತಹ ಪ್ರಚೋದನಾತ್ಮಕ ಹೇಳಿಕೆಗಳಿಗೆ ಕಿವಿಗೊಡದೆ ಎಲ್ಲರೂ ಭಾವೈಕ್ಯತೆ ಮತ್ತು ಸಹೋದರತೆಯಿಂದ ಬದುಕುವುದು ಅಗತ್ಯವಿದೆ ಎಂಬ ಸಂದೇಶ ಸಾರಿದರು.

ಮೈಸೂರಿನ ಹಿರಿಯ ಮುಸ್ಲಿಂ ಮುಖಂಡ ನೂರುಲ್ಲಾ ಷರೀಫ್, ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ನೂರ್ ಫಾತಿಮಾ, ನಗರಪಾಲಿಕೆ ವಿಪಕ್ಷ ನಾಯಕ ಬಿ.ವಿ.ಮಂಜುನಾಥ್, ಮಾಜಿ ಶಾಸಕ ಮಾರುತಿರಾವ್ ಪವಾರ್, ಕೆ.ಆರ್.ಕ್ಷೇತ್ರ ಬಿಜೆಪಿ ಅಧ್ಯಕ್ಷ ವಡಿವೇಲು ಇನ್ನಿತರರು ಉಪಸ್ಥಿತರಿದ್ದರು.

 

 

Translate »