ಜು.3ನೇ ವಾರ ಶೈಕ್ಷಣಿಕ ಚಟುವಟಿಕೆ ಆರಂಭ ಪ್ರೊ.ಡಿ.ಶಿವಲಿಂಗಯ್ಯ, ಕೆಎಸ್‍ಓಯು ಆಡಳಿತ ಕಚೇರಿ
ಮೈಸೂರು: ಕರ್ನಾಟಕ ರಾಜ್ಯದೊಳಗೆ ತಾಂತ್ರಿಕೇತರ ಕೋರ್ಸ್‍ಗಳನ್ನು ನಡೆಸಲು ಮೈಸೂರಿನಲ್ಲಿರುವ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯಕ್ಕೆ ಯುಜಿಸಿ ಮಾನ್ಯತೆ ನೀಡುವ ಸಾಧ್ಯತೆ ನಿಚ್ಚಳವಾಗಿದೆ.
2018-19ನೇ ಸಾಲಿನಿಂದ ಎಲ್‍ಎಲ್‍ಎಂ ಹೊರತುಪಡಿಸಿ ಮುಕ್ತ ವಿಶ್ವವಿದ್ಯಾಲಯ ಕೋರಿರುವ ಎಲ್ಲಾ 32 ಕೋರ್ಸ್‍ಗಳನ್ನು ಆರಂಭಿಸಲು ಯುಜಿಸಿ ಅನುಮತಿ ನೀಡಬಹುದೆಂದು ನೀರಿಕ್ಷಿಸಲಾಗಿದ್ದು, ಅದು ಸಾಕಾರಗೊಂಡರೆ ಸುಮಾರು ವರ್ಷಕ್ಕೆ 60,000 ವಿದ್ಯಾರ್ಥಿಗಳು, ಉದ್ಯೋಗಸ್ಥರುಗಳಿಗೆ ಉನ್ನತ ಶಿಕ್ಷಣ ಪಡೆಯಲು ಅನುಕೂಲವಾದಂತಾಗುತ್ತದೆ.
ಈ ಸಂಬಂಧ ಇಂದು ಬೆಳಿಗ್ಗೆ ನವದೆಹಲಿಯ ಬಹದ್ದೂರ್ ಷಾ ಜಾಫರ್ ಮಾರ್ಗದಲ್ಲಿರುವ ವಿಶ್ವವಿದ್ಯಾನಿಲಯಗಳ ಅನುದಾನ ಆಯೋಗ (ಯುಜಿಸಿ)ದ ಕಚೇರಿ ಸಭಾಂಗಣದಲ್ಲಿ ನಡೆದ ತಜ್ಞರ ಸಮಿತಿ ಸಭೆಯಲ್ಲಿ ಭಾಗವಹಿಸಿದ್ದ ಮುಕ್ತ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಡಿ.ಶಿವಲಿಂಗಯ್ಯ ಅವರು ಪವರ್ ಪಾಯಿಂಟ್ ಪ್ರಸೆಂಟೇಷನ್ ಮೂಲಕ ವಿವರಣೆ ನೀಡಿದರು.
ವಿಶ್ವವಿದ್ಯಾನಿಲಯದ ಹಿನ್ನೆಲೆ ಇತಿಹಾಸ, ಒದಗಿಸಿರುವ ಸೌಲಭ್ಯಗಳು, ಖಾಯಂ ಶಿಕ್ಷಕರ ಸಂಖ್ಯೆ, ಕೋರ್ಸ್ ಕೋ-ಆರ್ಡಿನೇಟರ್‍ಗಳ ಸಂಖ್ಯೆ, ಖಾಯಂ ಬೋಧಕೇತರ ಸಂಖ್ಯೆ, ಖಾಯಂ ಬೋಧಕೇತರ ಸಿಬ್ಬಂದಿ, ಪ್ರಾದೇಶಿಕ ಕೇಂದ್ರಗಳು, ಲರ್ನರ್ ಸಪೋರ್ಟ್ ಸೆಂಟರ್‍ಗಳು, ಅಧ್ಯಯನ ಕೇಂದ್ರಗಳು, ಕಳೆದ ಮೂರು ವರ್ಷಗಳಲ್ಲಿ ದಾಖಲಿಸಿಕೊಂಡಿರುವ ವಿದ್ಯಾರ್ಥಿಗಳ ವಿವರ, ಪ್ರಸ್ತಾವನೆಯಲ್ಲಿ ಕೇಳಿರುವ ಪ್ರೋಗ್ರಾಂಗಳು, ಶೈಕ್ಷಣಿಕ ಮತ್ತು ಆಡಳಿತ ಉದ್ದೇಶಕ್ಕೆ ಒದಗಿಸಿರುವ ಸ್ಥಳಾವಕಾಶ, ಪರೀಕ್ಷಾ, ಮೌಲ್ಯಮಾಪನ, ಪದವಿ ನೀಡಲು ಅನುಸರಿಸುತ್ತಿರುವ ವಿಧಾನಗಳು ಸೇರಿದಂತೆ ಯುಜಿಸಿ ಕೇಳಿದ್ದ ಮಾಹಿತಿಯನ್ನು ದಾಖಲಾತಿ ಸಮೇತ ಪ್ರೊ.ಡಿ.ಶಿವಲಿಂಗಯ್ಯ ಅವರು ಸವಿವರವಾಗಿ ವಿವರಿಸಿದರು.
ನ್ಯಾಕ್ ಅಧ್ಯಕ್ಷರಾದ ಯುಜಿಸಿ ಮಾಜಿ ಅಧ್ಯಕ್ಷ ಪ್ರೊ. ಚವಾಣ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪ್ರೊ.ಶಿವಲಿಂಗಯ್ಯರೊಂದಿಗೆ ಮುಕ್ತ ವಿಶ್ವವಿದ್ಯಾನಿಲಯದ ಪ್ರಭಾರ ಕುಲಸಚಿವ ಡಾ.ಖಾದರ್ ಪಾಷಾ, ಡೀನ್ (ಶೈಕ್ಷಣಿಕ) ಪ್ರೊ.ಜಗದೀಶ್, ಯುಜಿಸಿ ಸೆಲ್ ಕೋ-ಆರ್ಡಿನೇಟರ್ ಹಾಗೂ ಕುಲಪತಿಗಳ ವಿಶೇಷಾಧಿಕಾರಿ ಡಾ.ಎನ್.ಜಿ.ರಾಜು ಭಾಗವಹಿಸಿದ್ದರು.
2017ರ ಪರಿಷ್ಕøತ ಯುಜಿಸಿ ನಿಯಮಾವಳಿಯಂತೆ 2018-19ನೇ ಸಾಲಿಗೆ ತಾಂತ್ರಿಕೇತರ ಇನ್‍ಹೌಸ್ ಕೋರ್ಸ್‍ಗಳನ್ನು ಕರ್ನಾಟಕ ರಾಜ್ಯದೊಳಗೆ ಮಾತ್ರ ಆರಂಭಿಸಲು ಯುಜಿಸಿ ಕೇಳಿರುವ ಎಲ್ಲಾ ದಾಖಲಾತಿಗಳು ಹಾಗೂ ಮಾಹಿತಿಯನ್ನು 26 ಸ್ಲೈಡ್‍ಗಳಲ್ಲಿ ಪ್ರೊ. ಶಿವಲಿಂಗಯ್ಯ ಸಭೆಯಲ್ಲಿ ಒದಗಿಸಿದರಲ್ಲದೆ, ತ್ರಿಪ್ರತಿಗಳಲ್ಲಿ ಮುದ್ರಿತ ಕಾಪಿಗಳನ್ನು ಸಹ ಯುಜಿಸಿಗೆ ಸಲ್ಲಿಸಿದರು.
ಸಭೆಯ ನಂತರ ನವದೆಹಲಿಯಿಂದ ದೂರವಾಣಿ ಮೂಲಕ ‘ಮೈಸೂರು ಮಿತ್ರ’ನೊಂದಿಗೆ ಮಾತನಾಡಿದ ಅವರು, ಈಗಾಗಲೇ ಎಲ್ಲಾ ದಾಖಲಾತಿಗಳನ್ನು ನೀಡಿರುವುದರಿಂದ 2018-19ನೇ ಸಾಲಿಗೆ ತಾಂತ್ರಿಕೇತರ ಕೋರ್ಸ್‍ಗಳಿಗೆ ಯುಜಿಸಿ ಮಾನ್ಯತೆ ನೀಡಬಹುದೆಂಬ ವಿಶ್ವಾಸವಿದೆ ಎಂದರು.
ಈ ಬಗ್ಗೆ ಇನ್ನೊಂದು ವಾರ ಅಥವಾ 15 ದಿನದೊಳಗಾಗಿ ನಮಗೆ ಯುಜಿಸಿ ಅಧಿಕೃತ ಆದೇಶ ನೀಡುವ ಸಾಧ್ಯತೆ ಇದೆ. ಜುಲೈ 3ನೇ ವಾರ 2017ರ ಯುಜಿಸಿ ಹೊಸ ನಿಯಮಾವಳಿ ಪ್ರಕಾರ ಶೈಕ್ಷಣಿ ಕ ವರ್ಷ (Academic year)ಆರಂಭವಾಗಲಿದೆ ಎಂದು ತಿಳಿಸಿದರು.