ಕೇಂದ್ರಕ್ಕೆ ರಾಜ್ಯದ ನೀರಿನ ವಾಸ್ತವ ಪರಿಸ್ಥಿತಿ ಮನವರಿಕೆ ಮಾಡಿಕೊಡಲು ತಜ್ಞರ ಮನವಿ
ಮೈಸೂರು

ಕೇಂದ್ರಕ್ಕೆ ರಾಜ್ಯದ ನೀರಿನ ವಾಸ್ತವ ಪರಿಸ್ಥಿತಿ ಮನವರಿಕೆ ಮಾಡಿಕೊಡಲು ತಜ್ಞರ ಮನವಿ

June 26, 2019

ಮೈಸೂರು,ಜೂ.25(ವೈಡಿಎಸ್)-ತುರ್ತಾಗಿ ರಾಜ್ಯದ ಎಲ್ಲಾ ಸಂಸದರನ್ನು ಒಳಗೊಂಡಂತೆ ರಾಜ್ಯ ಸರ್ಕಾರ, ಕೇಂದ್ರ ಜಲ ಸಂರಕ್ಷಣಾ ಸಚಿವರ ಬಳಿ ನಿಯೋಗ ಕರೆದೊಯ್ದು ಇಲ್ಲಿನ ವಾಸ್ತವ ಸ್ಥಿತಿಯನ್ನು ಮನದಟ್ಟು ಮಾಡಿಕೊಡ ಬೇಕೆಂದು ಇನ್‍ಸ್ಟಿಟ್ಯೂಟ್ ಆಫ್ ಇಂಜಿನಿಯರ್ಸ್‍ನ ಕಾವೇರಿ ತಾಂತ್ರಿಕ ಸಲಹಾ ಸಮಿತಿ ಮನವಿ ಮಾಡಿದೆ.

ಜೆಎಲ್‍ಬಿ ರಸ್ತೆಯ ಇಂಜಿನಿಯರುಗಳ ಸಂಸ್ಥೆಯಲ್ಲಿ ಮಂಗಳವಾರ ನಡೆದ ಕಾವೇರಿ ತಾಂತ್ರಿಕ ಸಲಹಾ ಸಮಿತಿ ಸಭೆಯಲ್ಲಿ ಪ್ರಮುಖ ಇಂಜಿನಿಯರುಗಳೊಂದಿಗೆ ಚರ್ಚಿಸಿ, ಮುಖ್ಯ ವಾಗಿ ರಾಜ್ಯ ಸರ್ಕಾರ ರಾಜ್ಯದ ಎಲ್ಲಾ ಸಂಸ ದರನ್ನು ಒಳಗೊಂಡಂತೆ ನಿಯೋಗವನ್ನು ಕೇಂದ್ರ ಜಲಸಂರಕ್ಷಣಾ ಸಚಿವರ ಬಳಿ ಕರೆದುಕೊಂಡು ಹೋಗಿ ವಾಸ್ತವ ಸ್ಥಿತಿ ಮನದಟ್ಟು ಮಾಡಿ ಕೊಡಬೇಕು. ಮುಖ್ಯಮಂತ್ರಿ ಹೆಚ್.ಡಿ.ಕುಮಾರ ಸ್ವಾಮಿ ಮತ್ತು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರು ಕಾವೇರಿ ಕೊಳ್ಳದ 4 ಅಣೆಕಟ್ಟೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಇಂಜಿನಿಯರುಗಳ ತುರ್ತು ಸಭೆ ಕರೆದು ಪ್ರಸ್ತುತವಿರುವ ನೀರಿನ ಬಳಕೆ ಬಗ್ಗೆ ಚರ್ಚಿಸಿ, ಕುಡಿಯಲು ಮಾತ್ರ ಬಳಕೆ ಮಾಡುವುದಾಗಿ ತೀರ್ಮಾನ ಕೈಗೊಳ್ಳಬೇಕು ಹಾಗೂ ಮಂಡ್ಯ ರೈತರು ಬೆಳೆಗಳಿಗೆ ನೀರು ಹರಿಸಬೇಕೆಂದು ಪ್ರತಿಭಟಿಸುತ್ತಿದ್ದು, ಸರ್ಕಾರವು ಪ್ರಸ್ತುತ ಜಲಾಶಯದಲ್ಲಿ ಕುಡಿಯಲು ಮಾತ್ರ ನೀರು ಲಭ್ಯವಿದೆ ಎಂಬುದನ್ನು ಮನದಟ್ಟು ಮಾಡಿಕೊಡಬೇಕು ಎಂಬ ಮೂರು ನಿರ್ಣಯಗಳನ್ನು ಕೈಗೊಳ್ಳಲಾಯಿತು.

ನಿವೃತ್ತ ಮೇಜರ್ ಜನರಲ್ ಎಸ್.ಜಿ. ಒಂಬತ್ಕೆರೆ ಮಾತನಾಡಿ, ಹವಾಮಾನ ಬದ ಲಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ರಾಜ್ಯ ಮತ್ತು ರಾಷ್ಟ್ರೀಯ ಜಲ ನೀತಿ ರೂಪಿಸಬೇಕು. ತಮಿಳುನಾಡಿನ ಬೇಡಿಕೆಗೆ ಅನುಗುಣವಾಗಿ ನೀರನ್ನು ಹರಿಸುವ ಕಡೆಗೆ ಗಮನ ನೀಡು ತ್ತಿದ್ದೇವೆ ಹೊರತು ಬೇಡಿಕೆಗೆ ತಕ್ಕಂತೆ ನಿರ್ವಹಣೆ ಮಾಡುವ ಕಡೆಗೆ ಗಮನ ನೀಡುತ್ತಿಲ್ಲ. ಇದರ ಕಡೆಗೂ ಗಮನ ನೀಡಬೇಕು ಎಂದರು.

ಹವಾಮಾನ ಬದಲಾವಣೆ ಕುರಿತು ತಜ್ಞರ ಸಮಿತಿ ರಚಿಸಿ, ಅವರ ಸಲಹೆಗಳನ್ನು ವಿಧಾನ ಮಂಡಲ ಅಧಿವೇಶನದಲ್ಲಿ ಚರ್ಚಿಸಿ, ಸೂಕ್ತ ತೀರ್ಮಾನ ಕೈಗೊಂಡು ಜಲ ಸಂರಕ್ಷಣೆಗೆ ಬೇಕಾದ ಎಲ್ಲಾ ಕ್ರಮ ಕೈಗೊಳ್ಳಬೇಕು. ಈಗಿನ ಜಲ ನೀತಿಗಳು ಅವೈಜ್ಞಾನಿಕವಾಗಿವೆ ಎಂದು ಹೇಳಿದರು.

ಎಸಿಐಎಂಸಿ ಸಂಚಾಲಕ ಎಂ.ಲಕ್ಷ್ಮಣ್, ತಜ್ಞರಾದ ಎಸ್.ವಿ.ಪ್ರಸನ್ನ, ಡಾ.ಕೆ. ಸುರೇಶ್, ಡಾ.ಜಿ.ಬಿ.ಕೃಷ್ಣಪ್ಪ, ಹೆಚ್.ಪಿ. ಗೋವಿಂದ ರಾಜು, ವಿ.ಶ್ರೀನಾಥ್, ಮುರಳೀಧರ, ಹೆಚ್.ಕೆ.ನಾಗೇಗೌಡ, ಚಂದ್ರಮೋಹನ್, ಮುಡಾ, ನಗರಪಾಲಿಕೆ ಹಾಗೂ ಹಿರಿಯ ಇಂಜಿನಿಯರುಗಳು ಸಭೆಯಲ್ಲಿ ಭಾಗವಹಿಸಿದ್ದರು.

Translate »