ಹೀಗೂ ರಸ್ತೆ ಅಭಿವೃದ್ಧಿಪಡಿಸಬಹುದೇ… ಅಬ್ಬಾ ರಸ್ತೆಯ ಕಾಮಗಾರಿ ಬಗ್ಗೆ ಸಾರ್ವಜನಿಕರ ಆಕ್ರೋಶ
Uncategorized, ಮೈಸೂರು

ಹೀಗೂ ರಸ್ತೆ ಅಭಿವೃದ್ಧಿಪಡಿಸಬಹುದೇ… ಅಬ್ಬಾ ರಸ್ತೆಯ ಕಾಮಗಾರಿ ಬಗ್ಗೆ ಸಾರ್ವಜನಿಕರ ಆಕ್ರೋಶ

June 26, 2019

ಮೈಸೂರು, ಜೂ.25(ಎಸ್‍ಬಿಡಿ)-ಮೈಸೂರಲ್ಲಿ ವಾಹನ ದಟ್ಟಣೆ ಹೆಚ್ಚುತ್ತಿರುವುದರಿಂದ ರಸ್ತೆ ಅಗಲೀಕರಣ ಅಗತ್ಯ. ಆದರೆ ಕೋಟ್ಯಾಂತರ ರೂ. ವೆಚ್ಚದಲ್ಲಿ ನಗರ ಪಾಲಿಕೆ ವತಿಯಿಂದ ಕೈಗೊಂಡಿರುವ ರಸ್ತೆ ಅಭಿವೃದ್ಧಿ ಕಾಮಗಾರಿಯೊಂದರ ಬಗ್ಗೆ ಸಾರ್ವಜನಿಕ ವಲಯ ದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.

ರಾಜ್ಯ ಹಣಕಾಸು ಆಯೋಗ(ಎಸ್‍ಎಫ್‍ಸಿ)ದ ಅನುದಾನದಲ್ಲಿ ನಗರ ಪಾಲಿಕೆ ವತಿಯಿಂದ ಫೈವ್ ಲೈಟ್ ವೃತ್ತದಿಂದ ಹೈದರಾಲಿ ರಸ್ತೆವರೆಗಿನ ಅಬ್ಬಾ ರಸ್ತೆ ಅಗಲೀಕರಣ ಹಾಗೂ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗಿದೆ. ಇದಕ್ಕಾಗಿ ಸರ್ಕಾರದ ಅನುಮತಿ ಯೊಂದಿಗೆ ಸರ್ಕಾರಿ ಅತಿಥಿ ಗೃಹದ ಜಾಗವನ್ನೂ ಬಳಸಿಕೊಂಡು ಕಾಮಗಾರಿ ನಡೆಸಲಾಗುತ್ತಿದೆ. ಆದರೆ ಫೈವ್‍ಲೈಟ್ ವೃತ್ತದಿಂದ ಕರ್ನಾಟಕ ಪೊಲೀಸ್ ಅಕಾಡೆಮಿ(ಕೆಪಿಎ) ಕಾಂಪೌಂಡ್‍ವರೆಗೆ ಮಾತ್ರ ಕಾಮಗಾರಿ ಕೈಗೊಳ್ಳಲಾಗಿದೆ. ಇದೊಂದು ರೀತಿ ಎಡಬಿಡಂಗಿ ಕಾಮಗಾರಿಯಾಗಿದೆ. ಈ ರಸ್ತೆಯಲ್ಲಿರುವ ಕೆಲ ಹೋಟೆಲ್‍ಗಳಿಗೆ ಬರುವ ಗ್ರಾಹಕರ ವಾಹನಗಳ ಪಾರ್ಕಿಂಗ್‍ಗೆ ಹೀಗೆ ಕೋಟ್ಯಾಂತರ ರೂ. ವೆಚ್ಚದಲ್ಲಿ ರಸ್ತೆ ನಿರ್ಮಿಸಿಕೊಟ್ಟಂತಾಗುತ್ತದೆ. ಇದರಿಂದ ಸಾರ್ವಜನಿಕರಿಗೆ ಕಿಂಚಿತ್ತೂ ಉಪಯೋಗವಿಲ್ಲ ಎಂಬುದು ಜನರ ಬೇಸರದ ಮಾತಾಗಿದೆ.

ಉದ್ದೇಶಿತ ಕಾಮಗಾರಿಯನ್ನು ಯೋಜಿತವಾಗಿ, ಏಕಕಾಲದಲ್ಲಿ ಪೂರ್ಣಗೊಳಿಸಿದರೆ ಸಾರ್ವಜನಿಕರಿಗೆ ಉಪಯೋಗವಾಗುತ್ತದೆ. ಆದರೆ ಅಬ್ಬಾ ರಸ್ತೆ ಅಭಿವೃದ್ಧಿ ಕಾಮಗಾರಿಯ ಸದ್ಯದ ಸ್ಥಿತಿ ನೋಡಿದರೆ ಉಪಯೋಗಕ್ಕಿಂತ ಹೆಚ್ಚು ಅಪಾಯವನ್ನೇ ತಂದೊಡ್ಡುವಂತಿದೆ. ಹೈದರಾಲಿ ರಸ್ತೆಯಿಂದ ಫೈವ್‍ಲೈಟ್ ವೃತ್ತದವರೆಗೆ ಅಬ್ಬಾ ರಸ್ತೆಯನ್ನು 6 ಪಥಗಳೊಂದಿಗೆ ಅಭಿವೃದ್ಧಿಪಡಿಸುವ ಕಾಮಗಾರಿ ಕೈಗೆತ್ತಿಕೊಂಡು ವರ್ಷ ಕಳೆದಿದೆ. ಆದರೂ ವ್ಯವಸ್ಥಿತ ವಾಗಿ ಕಾಮಗಾರಿ ನಡೆದಂತಿಲ್ಲ. ಕೆಪಿಎ ಕಾಂಪೌಂಡ್ ವರೆಗೆ ಮಾತ್ರ ರಸ್ತೆ ನಿರ್ಮಿಸಲಾಗಿದೆ. ಸರ್ಕಾರಿ ಅತಿಥಿ ಗೃಹದ ಪಾರಂಪರಿಕ ಆರ್ಚ್ ಹಿಂಭಾಗ ದಲ್ಲೂ ರಸ್ತೆ ಹಾದು ಹೋಗಿದೆ. ಡಾ.ಬಿ.ಆರ್. ಅಂಬೇಡ್ಕರ್ ವೃತ್ತ(ಎಫ್‍ಟಿಎಸ್ ಸರ್ಕಲ್)ದ ಕಡೆಯಿಂದ ಫೈವ್‍ಲೈಟ್ ವೃತ್ತದ ಕಡೆಗೆ ಬರುವ ವಾಹನಗಳು ಆರ್ಚ್ ಬಳಸಿಕೊಂಡು ಸಾಗಲು ಸಾಧ್ಯವಿಲ್ಲ. ಈಗಿರುವಂತೆ ಹಳೇ ರಸ್ತೆಯಲ್ಲೇ ಸಂಚರಿ ಸಬೇಕು. ಪಾರಂಪರಿಕ ಆರ್ಚ್ ಅನ್ನು ಸ್ಥಳಾಂತರಿ ಸುವುದೂ ಕಷ್ಟ. ಹಾಗಾಗಿ ಈ ರಸ್ತೆ ಅಭಿವೃದ್ಧಿಯಿಂದ ಇಲ್ಲಿನ ವಾಹನ ದಟ್ಟಣೆ ಕಿಂಚಿತ್ತೂ ತಗ್ಗುವುದಿಲ್ಲ. ಬದಲಿಗೆ ಮತ್ತಷ್ಟು ಸಮಸ್ಯೆ ಸೃಷ್ಟಿಯಾಗುತ್ತದೆ.

ಇನ್ನು ಹೈದರಾಲಿ ರಸ್ತೆ ಕಡೆಯಿಂದ ಫೈವ್‍ಲೈಟ್ ವೃತ್ತದ ಕಡೆಗೆ ಬರುವ ವಾಹನಗಳು ಕೆಪಿಎ ಕಾಂಪೌಂಡ್ ಪಕ್ಕದಲ್ಲಿ ತಕ್ಷಣ ಎಡಕ್ಕೆ ತಿರುಗಿ ಆರ್ಚ್ ಹಿಂಭಾಗದ ರಸ್ತೆಯಲ್ಲಿ ಸಾಗಬೇಕಾಗುತ್ತದೆ. ಹೀಗೆ ಹಠಾತ್ತನೆ ತಿರುವು ಪಡೆಯುವುದರಿಂದ ಅಪಘಾತ ಸಂಭವಿಸಬಹುದು. ಸಾರ್ವಜನಿಕರಿಗೆ ಯಾವುದೇ ರೀತಿಯಲ್ಲೂ ಅನುಕೂಲವಾಗದಂತೆ ಕಾಮಗಾರಿ ನಡೆಸುತ್ತಿರುವುದು ವಿಷಾದನೀಯ.

ದೂರದೃಷ್ಟಿತ್ವ ಹೊಂದಿದ್ದ ಮಹಾರಾಜರು ಅಂದೇ ವೈಜ್ಞಾನಿಕವಾಗಿ ವಿಸ್ತಾರ ರಸ್ತೆಗಳನ್ನು ನಿರ್ಮಿಸಿದ್ದಾರೆ. ಆದರೆ ಈ ಅಬ್ಬಾ ರಸ್ತೆ ಅಭಿವೃದ್ಧಿ ಕಾಮಗಾರಿ ಅದ್ವಾನವಾಗಿದೆ. ಯಾರಿಗೋ ಅನುಕೂಲ ಮಾಡಿಕೊಡಲು ಈ ಕೆಲಸ ಮಾಡುತ್ತಿದ್ದಾರೇನೋ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Translate »