`ರೈತ ಕ್ರಾಂತಿ ಯಾತ್ರೆ’
ಮೈಸೂರು

`ರೈತ ಕ್ರಾಂತಿ ಯಾತ್ರೆ’

September 18, 2018

ಮೈಸೂರು:  ಪ್ರಧಾನಿ ನರೇಂದ್ರ ಮೋದಿ ಸರ್ಕಾರ ನಾಲ್ಕು ವರ್ಷ ಕಳೆದರೂ ನೀಡಿರುವ ಯಾವ ಭರವಸೆಯನ್ನು ಈಡೇರಿಸಿಲ್ಲ. ರೈತರ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು ನೀಡಿಲ್ಲ. ಇದೆಲ್ಲದರ ಬಗ್ಗೆ ಕೇಂದ್ರದ ಗಮನ ಸೆಳೆಯಲು ಸೆ.23ರಿಂದ ಅ.2ರವರೆಗೆ ಹರಿದ್ವಾರದಿಂದ ನವದೆಹಲಿಯ ಕಿಸಾನ್ ಘಾಟ್‍ವರೆಗೆ ರೈತ ಕ್ರಾಂತಿಯಾತ್ರೆ ನಡೆಸಲು ರೈತ ಸಂಘಟನೆಗಳು ಒಮ್ಮತದಿಂದ ನಿರ್ಧರಿಸಿರುವುದಾಗಿ ಕರ್ನಾಟಕ ರಾಜ್ಯ ರೈತಸಂಘ ಮತ್ತು ಹಸಿರು ಸೇನೆ ರಾಜ್ಯಾಧ್ಯಕ್ಷ ಕೆ.ಟಿ.ಗಂಗಾಧರ್ ಇಂದಿಲ್ಲಿ ತಿಳಿಸಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ರಾಜ್ಯ ರೈತಸಂಘ, ಹರಿಯಾಣ, ತಮಿಳುನಾಡು, ಕೇರಳ, ಆಂಧ್ರಪ್ರದೇಶದ ರೈತ ಸಂಘಟನೆಗಳು ದೊಡ್ಡ ಪ್ರಮಾಣದಲ್ಲಿ ರೈತ ಕ್ರಾಂತಿ ಯಾತ್ರೆ ನಡೆಸಲಿರುವುದಾಗಿ ತಿಳಿಸಿದರು. ಸರ್ಕಾರಗಳ ತಪ್ಪು ನೀತಿಯಿಂದಾಗಿ ರೈತರು ಸಾಲದ ಕೂಪಕ್ಕೆ ಬಿದ್ದಿದ್ದಾರೆಯೆ ಹೊರತು ಯಾವ ಕಾರಣಕ್ಕೂ ರೈತರು ಸಾಲಗಾರರಾಗಲು ಸಾಧ್ಯವಿಲ್ಲ. ಈಗ ಜಾರಿಗೊಳಿಸಿರುವ ಬೆಳೆ ವಿಮೆ ಪದ್ಧತಿಯನ್ನು ಖಾಸಗಿಗೆ ವಹಿಸಿರುವುದರಿಂದಲೇ ವಿಳಂಬಕ್ಕೆ ಕಾರಣವಾಗಿದೆ. ಇದನ್ನು ಸರ್ಕಾರವೇ ಏಜೆನ್ಸಿಯೊಂದರ ಮೂಲಕ ಮಾಡಿಸಬೇಕಿದೆ ಎಂದು ಹೇಳಿದರು.

ಸಿಎಂ ಕುಮಾರಸ್ವಾಮಿ ರೈತರಿಗೆ ನೋಟಿಸ್ ನೀಡದಂತೆ ರಾಷ್ಟ್ರೀಕೃತ ಬ್ಯಾಂಕ್‍ಗಳಿಗೆ ಆದೇಶ ನೀಡಬೇಕು. 3 ದಿನಗಳಿಂದ ಮಂಡ್ಯದಲ್ಲಿಯೆ ಮೂವರು ರೈತರು ನೋಟಿಸ್ ನೀಡಿದ ಬಳಿಕ ಸಾವನ್ನಪ್ಪಿದ್ದಾರೆ. ಇದನ್ನು ಸಿಎಂ ಅರಿತುಕೊಳ್ಳಬೇಕು. ತಾವು ಹೇಳಿರುವುದು ಕೇವಲ ಗಾಳಿ ಮಾತಲ್ಲ ಎಂಬುದನ್ನು ಕಟ್ಟಾಜ್ಞೆ ಮೂಲಕ ತೋರಿಸಬೇಕು ಎಂದು ಒತ್ತಾಯಿಸಿದರು.
ರೈತಸಂಘದ ಮುಖಂಡ ಚಾಮರಸ ಪಾಟೀಲ ಮಾತನಾಡಿ, ರಾಜ್ಯದಲ್ಲಿ ಆಗಿಂದಾಗ್ಗೆ ಜನರನ್ನು ಕಾಡುತ್ತಿರುವ ಬರಗಾಲ, ಪ್ರವಾಹ ಇನ್ನಿತರ ನೈಸರ್ಗಿಕ ವಿಕೋಪ ಸಂದರ್ಭ ದಲ್ಲಿ ತಕ್ಷಣ ಸಂತ್ರಸ್ತರ ನೆರವಿಗೆ ಧಾವಿಸಲು ಅನುಕೂಲವಾಗುವಂತೆ ರಾಷ್ಟ್ರಮಟ್ಟದಲ್ಲಿ ಶಾಶ್ವತ ಪ್ರಕೃತಿ ವಿಕೋಪ ನಿಧಿ ಸ್ಥಾಪಿಸಬೇಕು ಎಂದು ಸರ್ಕಾರಕ್ಕೆ ಸಲಹೆ ನೀಡಿದರು.

ರಾಜ್ಯ ಸರ್ಕಾರ 86 ತಾಲೂಕುಗಳನ್ನು ಬರಗಾಲ ಎಂದು ಘೋಷಿಸಿದೆ. ಆದರೆ ಇನ್ನೂ ಅನೇಕ ಕಡೆಗಳಲ್ಲಿ ಭೀಕರ ಬರಗಾಲವಿದೆ. ಜನ-ಜಾನುವಾರುಗಳಿಗೆ ಕುಡಿಯಲು ನೀರಿಲ್ಲ. ಕೃಷಿ ಕಾರ್ಮಿಕರಿಗೆ ನೌಕರಿ ಕೊಡಿಸುವ ಯಾವ ಕಾರ್ಯವನ್ನು ಸರ್ಕಾರ ಮಾಡುತ್ತಿಲ್ಲ ಎಂದರು.

ರಾಜ್ಯ ರೈತ ಸಂಘ ಮತ್ತು ಹಸಿರುಸೇನೆ ರಾಜ್ಯ ಪ್ರಧಾನ ಕಾರ್ಯದರ್ಶಿ ಬಡಗಲಪುರ ನಾಗೇಂದ್ರ ಮಾತನಾಡಿ, ರಾಜ್ಯದಲ್ಲಿ ನಡೆಯುತ್ತಿರುವ ರಾಜಕೀಯ ದೊಂಬರಾಟ ನಿಲ್ಲಬೇಕು. ರಾಜ್ಯದ ಅಭಿವೃದ್ಧಿಯಲ್ಲಿ ಆಡಳಿತ ಹಾಗೂ ವಿರೋಧ ಪಕ್ಷಗಳ ಪಾತ್ರ ಪ್ರಮುಖವಾಗಿವೆ. ಆದರೆ ಇತ್ತೀಚಿನ ರಾಜಕೀಯ ಬೆಳವಣಿಗೆಯಲ್ಲಿ ನಡೆಯುತ್ತಿರುವ ದೊಂಬರಾಟವನ್ನು ಆಡಳಿತ ಹಾಗೂ ವಿರೋಧ ಪಕ್ಷಗಳೆರಡು ನಿಲ್ಲಿಸಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಬೀದಿಗಳಲ್ಲೇ ಜನರು ನಿಮ್ಮ ನಾಟಕಕ್ಕೆ ಉತ್ತರ ನೀಡಲಿದ್ದು, ರೈತರು ಸಹ ಹೋರಾಟ ನಡೆಸಬೇಕಾಗುತ್ತದೆ ಎಂದರು.

ರಾಜ್ಯರೈತ ಸಂಘ ಕೊಡಗಿನ ಸಂತ್ರಸ್ತರ ಪರವಾಗಿ ನಿಲ್ಲಲಿದ್ದು, ಅವರಿಗೆ ಮರು ಮನೆ, ಶೆಡ್ ನಿರ್ಮಿಸಲು ನಮ್ಮ ಕಾರ್ಯಕರ್ತರೇ ನೇರವಾಗಿ ಅಲ್ಲಿಗೆ ಹೋಗಿ ಶ್ರಮದಾನ ಮಾಡಲು ನಿರ್ಧರಿಸಿದ್ದಾರೆ ಎಂದರು. ಸುದ್ದಿಗೋಷ್ಠಿಯಲ್ಲಿ ರಾಜ್ಯರೈತ ಸಂಘದ ಉಪಾಧ್ಯಕ್ಷ ಜಿ.ಪಿ.ರಾಮಸ್ವಾಮಿ, ಮಂಜುನಾಥ್ ಮುಡಿಗೇರಿ, ಕಾರ್ಯಾಧ್ಯಕ್ಷ ಶಾಂತಸ್ವಾಮಿ ಮಠ, ಕಾರ್ಯಕಾರಿ ಸಮಿತಿ ಸದಸ್ಯರಾದ ಎಂ.ಎಸ್.ಅಶ್ವಥ್‍ನಾರಾಯಣ, ಲೋಕೇಶ್ ರಾಜ ಅರಸ್, ತಾಲೂಕು ಅಧ್ಯಕ್ಷ ಪಿ.ಮರಂಕಯ್ಯ, ಶಿವಪ್ಪ ಇನ್ನಿತರರು ಇದ್ದರು.

Translate »