ಭತ್ತ ಮಾರಾಟಕ್ಕೆ ರೈತರ ನೋದಣಿಗೆ ಮತ್ತಷ್ಟು ಕಾಲಾವಕಾಶ ಕಲ್ಪಿಸಲು ಆಗ್ರಹ
ಮೈಸೂರು

ಭತ್ತ ಮಾರಾಟಕ್ಕೆ ರೈತರ ನೋದಣಿಗೆ ಮತ್ತಷ್ಟು ಕಾಲಾವಕಾಶ ಕಲ್ಪಿಸಲು ಆಗ್ರಹ

December 14, 2018

ತಿ.ನರಸೀಪುರ:  ಭತ್ತ ಖರೀದಿ ಕೇಂದ್ರದಲ್ಲಿ ಭತ್ತ ಮಾರಾಟ ಮಾಡುವ ಮುನ್ನಾ ರೈತರು ನೋಂದಣಿ ಮಾಡಿಸಲು ದಿನಾಂಕ ವಿಸ್ತರಣೆ ಮಾಡಿ ರೈತರಿಗೆ ಅಗತ್ಯ ಸವಲತ್ತು ನೀಡುವಂತೆ ರೈತರು ಆಗ್ರಹಿಸಿದ್ದಾರೆ.

ಕರ್ನಾಟಕ ರಾಜ್ಯ ಉಗ್ರಾಣ ನಿಗಮದಿಂದ 2018-19ನೇ ಸಾಲಿನಲ್ಲಿ ರೈತರು ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿಸಲು ಮೈಸೂರು ಜಿಲ್ಲಾಧಿಕಾರಿಗಳ ಸಭೆಯಲ್ಲಿ ನಿರ್ಧರಿಸಲಾಗಿದ್ದು, ಅದರಂತೆ ಭತ್ತ ಮಾರಾಟ ಮಾಡಲು ರೈತರು ನಿಗಮದಲ್ಲಿ ನೊಂದಣಿ ಮಾಡಿಸಬೇಕಿತ್ತು, ಡಿ.5ರಿಂದ 15ರವರೆಗೆ ನೊಂದಣಿಗೆ ಅವಕಾಶವಿತ್ತು. ಆದರೆ ರೈತರು ನೊಂದಣಿಗೆ ಹೋದ ಸಂದರ್ಭದಲ್ಲಿ ಕಂಪ್ಯೂಟರ್ ಸರ್ವರ್ ಬಹಳ ನಿಧಾನಗತಿಯಲ್ಲಿರುವುದರಿಂದ ಇದುವರೆವಿಗೂ 50 ರೈತರು ಮಾತ್ರ ನೊಂದಾಯಿಸಲು ಸಾಧ್ಯವಾಗಿದೆ. ಜತೆಗೆ ನೊಂದಣಿಗೆ ಉಗ್ರಾಣ ನಿಗಮದಿಂದ ಒಂದು ಕಂಪ್ಯೂಟರ್ ನೀಡಲಾಗಿದೆ. ಇದರಿಂದಾಗಿ ರೈತರು ಗಂಟೆ ಗಟ್ಟಲೇ ಕಾಯಬೇಕಿದೆ. ಜತೆಗೆ ಹೆಚ್ಚಿನ ರೈತರು ನಿಗದಿತ ಅವಧಿಯಲ್ಲಿ ನೊಂದಣಿ ಮಾಡಿಸಲು ಸಾಧ್ಯವಾಗುತ್ತಿಲ್ಲ.

ಉಗ್ರಾಣ ನಿಗಮದಿಂದ ರೇಣುಕಾಸ್ವಾಮಿ ಎಂಬ ಅಧಿಕಾರಿಯನ್ನು ನಿಯೋಜಿಸಲಾಗಿದೆ. ಬನ್ನೂರು ಮತ್ತು ಪಟ್ಟಣದಲ್ಲಿ ನೊಂದಣಿ ಕಾರ್ಯ ಆರಂಭಗೊಂಡಿದೆ. ನೋಂದಣಿ ಕಾರ್ಯವನ್ನು ಖಾಸಗಿಯವರಿಗೆ ನೀಡಿದ್ದು, ಅವರಿಗೆ ಇದರ ಬಗ್ಗೆ ಸೂಕ್ತ ಮಾಹಿತಿ ಇಲ್ಲದ ಕಾರಣ ರೈತರು ಗುರುವಾರ ನೋಂದಣಿಯಾಗದ ಹಿನ್ನಲೆಯಲ್ಲಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಬಳಿಕ ತಹಶೀಲ್ದಾರ್ ಕಚೇರಿಗೆ ತೆರಳಿದ ರೈತರು ತಹಶೀಲ್ದಾರ್ ಪರಮೇಶ್ ಅವರನ್ನು ಭೇಟಿ ಮಾಡಿ, ತಮ್ಮ ಅಳಲನ್ನು ತೋಡಿಕೊಂಡರು ಇದಕ್ಕೆ ಪ್ರತಿಕ್ರಿಯಿಸಿದ ತಹಶೀಲ್ದಾರ್ ಅವರು ಆಹಾರ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

ದಲ್ಲಾಳಿಗಳ ಹಾವಳಿ : ರೈತರು ತಮ್ಮ ಜಮೀನಿನಲ್ಲಿ ಬೆಳೆದ ಭತ್ತವನ್ನು ಸಂಗ್ರಹಿಸಿಕೊಳ್ಳಲು ಸ್ಥಳವಿಲ್ಲದ ಕಾರಣ ದಪ್ಪ ಭತ್ತ (1001, 1010, ಜಯ ತಳಿಗಳು)ಜಮೀನಿನಿಂದಲೇ ನೇರವಾಗಿ ದಲ್ಲಾಳಿಗಳಿಗೆ ಮಾರುತ್ತಿದ್ದಾರೆ. ದಲ್ಲಾಳಿಗಳು ರೈತರಿಂದ ಕಡಿಮೆ ಬೆಲೆಗೆ ಪಡೆದು ಬೆಂಬಲ ಯೋಜನೆಯಡಿ ಹೆಚ್ಚು ಹಣಕ್ಕೆ ಮಾರಾಟಕ್ಕೆ ಮುಂದಾಗಿರುವುದು ಕಂಡು ಬರುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.

ತಾ.ಪಂ ಮಾಜಿ ಅಧ್ಯಕ್ಷ ದೊಡ್ಡೇಬಾಗಿಲು ಮಲ್ಲಿಕಾರ್ಜುನಸ್ವಾಮಿ ಎಪಿಎಂಸಿ ಉಪಾಧ್ಯಕ್ಷ ಮಹದೇವಯ್ಯ, ಕೆಬ್ಬೆಹುಂಡಿ ಶಿವಕುಮಾರ್, ಮಲ್ಲೇಗೌಡ, ರೈತ ಸಂಘದ ಅಧ್ಯಕ್ಷ ಕುಮಾರಸ್ವಾಮಿ ಈ ಬಗ್ಗೆ ದೂರಿದ್ದಾರೆ.

Translate »